ETV Bharat / state

ಬೆಂಗಳೂರು: ರೌಡಿಶೀಟರ್ ಹತ್ಯೆ ಪ್ರಕರಣದ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಪವನ್ ಹತ್ಯೆ ಪ್ರಕರಣದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

POLICE SHOOT AT ACCUSED  BENGALURU  ರೌಡಿಶೀಟರ್ ಹತ್ಯೆ  ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು
ಗುಂಡೇಟಿನ ಬಳಿಕ ಆಸ್ಪತ್ರೆಯಲ್ಲಿರುಬ ಆರೋಪಿ ಮತ್ತು ಹಲ್ಲೆಯಿಂದ ಗಾಯಗೊಂಡ ಪೊಲೀಸ್ ಅಧಿಕಾರಿ (ETV Bharat)
author img

By ETV Bharat Karnataka Team

Published : February 28, 2026 at 12:06 PM IST

2 Min Read
Choose ETV Bharat

ಬೆಂಗಳೂರು: ರೌಡಿಶೀಟರ್ ಪವನ್‌ ಕುಮಾರ್‌ ಬರ್ಬರ ಹತ್ಯೆ ಪ್ರಕರಣದ ಆರೋಪಿ ರಂಜನ್ ಕಾಲಿಗೆ ಗುಂಡು ಹಾರಿಸುವ‌ ಮೂಲಕ ಸಂಪಿಗೆಹಳ್ಳಿ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಬಾಗಲೂರು ಸಮೀಪದ ನಿರ್ಜನ ಪ್ರದೇಶವೊಂದರಲ್ಲಿದ್ದ ರಂಜನ್‌ನನ್ನು ವಶಕ್ಕೆ ಪಡೆಯಲು ಇಂದು‌ ಬೆಳಗ್ಗೆ ಸಂಪಿಗೆಹಳ್ಳಿ ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿ ಮಾರಕಾಸ್ತ್ರ ಬಳಸಿ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ್ದ. ತಕ್ಷಣ ಎಚ್ಚೆತ್ತ ಇನ್ಸ್‌ಪೆಕ್ಟರ್ ವೆಂಕಟೇಶ್, ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಿಂದ ರಂಜನ್‌ನನ್ನು ಕೂಡಲೇ ವಶಕ್ಕೆ ಪಡೆಯಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಫೆಬ್ರವರಿ 25ರಂದು ರಾತ್ರಿ ಥಣಿಸಂದ್ರ ಸಮೀಪದ ಅಮರಜ್ಯೋತಿ ಲೇಔಟ್‌ನಲ್ಲಿ ಪವನ್ ಕುಮಾರ್‌ (28)ನನ್ನ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹೆಲ್ಮೆಟ್ ಧರಿಸಿ ಮೂರು ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಆರು ಮಂದಿ ದುಷ್ಕರ್ಮಿಗಳು, ಪವನ್ ಕುಮಾರ್‌ನನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ಡಿ.ಜೆ ಹಳ್ಳಿ ಠಾಣೆ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ ಪವನ್ ಕುಮಾರ್, ಮೂರು ವರ್ಷಗಳ ಹಿಂದೆ ನಡೆದಿದ್ದ ರೌಡಿಶೀಟರ್ ಕಪಿಲ್ ಹತ್ಯೆ ಪ್ರರಣದಲ್ಲಿ ಬಂಧಿತನಾಗಿದ್ದ. ಕಳೆದ ಮೇ ತಿಂಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿ, ಒಂದೂವರೆ ತಿಂಗಳ ಹಿಂದಷ್ಟೇ ಬೇಕರಿಯನ್ನ ಆರಂಭಿಸಿದ್ದ. ಆದರೆ ಕಪಿಲ್‌ನ ಹತ್ಯೆಯಾದ ಮಾದರಿಯಲ್ಲೇ ಹೆಲ್ಮೆಟ್ ಧರಿಸಿದ್ದ ತಂಡ ಪವನ್ ಕುಮಾರ್‌ನನ್ನ ಸಹ ಹತ್ಯೆಗೈದು ಪರಾರಿಯಾಗಿತ್ತು.

ಇದನ್ನೂ ಓದಿ: ಬೆಂಗಳೂರು: ತಾಯಿಯ‌ ಮುಂದೆಯೇ ರೌಡಿಶೀಟರ್ ಬರ್ಬರ ಹತ್ಯೆ; ಹೆಲ್ಮೆಟ್ ಧರಿಸಿದ ದುಷ್ಕರ್ಮಿಗಳಿಂದ ಕೃತ್ಯ

ತಾಯಿಯ ಕಣ್ಣ ಮುಂದೆಯೇ ಮಗನ ಹತ್ಯೆ: ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ನನ್ನ ಮಗ 8 ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ. ಒಂದೂವರೆ ತಿಂಗಳ ಹಿಂದೆಯಷ್ಟೇ ಬೇಕರಿ ಆರಂಭಿಸಿದ್ದ. ರಾತ್ರಿ ಬೇಕರಿ ಬಂದ್ ಮಾಡಿ ಬರ್ತಾ ಇದ್ದೇನೆ ಎಂದು ಫೋನ್​​ನಲ್ಲಿ ನನಗೆ ಹೇಳಿದ್ದ. ಬೈಕ್​ನಲ್ಲಿ ಚೇಜ್ ಮಾಡಿಕೊಂಡು ಬಂದು ಗೇಟ್​ ಮುಂದೆನೇ ಚುಚ್ಚಿಚುಚ್ಚಿ ಕೊಂದಿದ್ದಾರೆ. ನನ್ನ ಕಣ್ಣ ಮುಂದೆಯೇ ನನ್ನ ಮಗನನ್ನು ಹೊಡೆದುಹಾಕಿದ್ರು, ನನಗೆ ಕಾಪಾಡಲು ಆಗಲಿಲ್ಲ. ಮೂರು ಬೈಕ್​ನಲ್ಲಿ ಆರು ಜನ ಹೆಲ್ಮೆಟ್ ಹಾಕಿಕೊಂಡು ಬಂದು ಹತ್ಯೆ ಮಾಡಿದ್ದಾರೆ. ಹಳೆಯ ದ್ವೇಷ ಇಟ್ಟುಕೊಂಡು ಈ ಕೃತ್ಯ ಎಸಗಿದ್ದಾರೆ. ಪ್ರೇಮ್​ ಎಂಬಾತ ನನ್ನ ಮೇಲೆ ದಾಳಿ ಮಾಡಿಸುತ್ತಿದ್ದಾನೆ ಎಂದು ನನ್ನ ಮಗ ಹೇಳುತ್ತಿದ್ದ, ಅದಕ್ಕಾಗಿ ಕೆಲ ತಿಂಗಳು ಬೇರೆ ಊರಲ್ಲಿನ ಸಂಬಂಧಿಕರ ಮನೆಯಲ್ಲಿ ಇಟ್ಟಿದ್ದೆ. ಇತ್ತೀಚೆಗಷ್ಟೇ ಕರೆದುಕೊಂಡು ಬಂದಿದ್ದೆ ಎಂದು ಪವನ್ ಕುಮಾರ್ ತಾಯಿ ಕೋಮಲ ಮಾಧ್ಯಮಗಳಿಗೆ ಹೇಳಿದ್ದರು.