ಬೆಳಗಾವಿಯಲ್ಲಿ ಗಮನ ಸೆಳೆದ ಪೊಲೀಸ್ ಶ್ವಾನಗಳ ಸ್ಪರ್ಧೆ: ಆರು ಜಿಲ್ಲೆಗಳ 18ಕ್ಕೂ ಅಧಿಕ ಶ್ವಾನಗಳು ಭಾಗಿ
ಬೆಳಗಾವಿಯಲ್ಲಿ ಸೋಮವಾರ ನಡೆದ ಪೊಲೀಸ್ ಶ್ವಾನಗಳ ಸ್ಪರ್ಧೆಯಲ್ಲಿ ಆರು ಜಿಲ್ಲೆಗಳ 18ಕ್ಕೂ ಅಧಿಕ ಶ್ವಾನಗಳು ಭಾಗಿಯಾಗಿ ತಮ್ಮ ತರಬೇತಿ ಸಾಮರ್ಥ್ಯವನ್ನು ಪ್ರದರ್ಶಿಸಿದವು.

Published : September 1, 2026 at 7:30 AM IST
ಬೆಳಗಾವಿ: ಅಪರಾಧ ಪ್ರಕರಣಗಳ ತನಿಖೆ ಹಾಗೂ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸುವ ಪೊಲೀಸ್ ಶ್ವಾನಗಳ ತರಬೇತಿ ಸಾಮರ್ಥ್ಯ ಪರೀಕ್ಷಿಸಲು ಕುಂದಾ ನಗರಿಯಲ್ಲಿ ಸೋಮವಾರ ನಡೆದ ಸ್ಪರ್ಧೆ ಗಮನ ಸೆಳೆಯಿತು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಈ ತರಬೇತಿ ಸಾಮರ್ಥ್ಯ ಪರೀಕ್ಷೆಯ ವಿಶೇಷ ಸ್ಪರ್ಧೆಯಲ್ಲಿ ಉತ್ತರ ವಲಯ ವ್ಯಾಪ್ತಿಯ ಆರು ಜಿಲ್ಲೆಗಳ ಪೊಲೀಸ್ ಶ್ವಾನಗಳು ಭಾಗವಹಿಸಿದ್ದವು.
ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಹುಬ್ಬಳ್ಳಿ-ಧಾರವಾಡ ಹಾಗೂ ಗದಗ ಜಿಲ್ಲೆಗಳಿಂದ 18ಕ್ಕೂ ಹೆಚ್ಚು ಪೊಲೀಸ್ ಶ್ವಾನಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಮುಧೋಳ, ಜರ್ಮನ್ ಶೆಫರ್ಡ್, ಲ್ಯಾಬ್ರಡಾರ್, ಬೆಲ್ಜಿಯನ್ ಮೆಲಿನಾಯಿಸ್ ಸೇರಿದಂತೆ ವಿವಿಧ ತಳಿಯ ಪೊಲೀಸ್ ಶ್ವಾನಗಳು ತಮ್ಮ ತರಬೇತಿ ಸಾಮರ್ಥ್ಯವನ್ನು ಪ್ರದರ್ಶಿಸಿದವು.
ಪೊಲೀಸ್ ಶ್ವಾನಗಳ ತರಬೇತಿಯ ಗುಣಮಟ್ಟ ಹಾಗೂ ಅಪರಾಧ ಪತ್ತೆ ಕಾರ್ಯದಲ್ಲಿ ಅವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ವಿವಿಧ ವಿಭಾಗಗಳಲ್ಲಿ ಕಠಿಣ ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು. ಓಬಿಡಿಯನ್ಸ್, ವಾಸನೆ ಪತ್ತೆ, ಬಾಡಿ ಸರ್ಚಿಂಗ್, ನಾರ್ಕೋಟಿಕ್ಸ್ ಪತ್ತೆ, ಟ್ರ್ಯಾಕಿಂಗ್ ಹಾಗೂ ಗ್ರೌಂಡ್ ಸರ್ಚಿಂಗ್ ವಿಭಾಗಗಳಲ್ಲಿ ಶ್ವಾನಗಳು ಸ್ಪರ್ಧಿಸಿದವು.
ತರಬೇತುದಾರರ ಸೂಚನೆಗಳನ್ನು ಎಷ್ಟರ ಮಟ್ಟಿಗೆ ನಿಖರವಾಗಿ ಪಾಲಿಸುತ್ತವೆ, ಅಪರಾಧಕ್ಕೆ ಸಂಬಂಧಿಸಿದ ವಸ್ತು ಅಥವಾ ವ್ಯಕ್ತಿಯನ್ನು ವಾಸನೆಯ ಮೂಲಕ ಪತ್ತೆಹಚ್ಚುವ ಸಾಮರ್ಥ್ಯ, ಮಾದಕ ವಸ್ತುಗಳ ಪತ್ತೆ ಹಾಗೂ ಘಟನೆ ನಡೆದ ಸ್ಥಳದಲ್ಲಿ ಸುಳಿವುಗಳನ್ನು ಹುಡುಕುವ ಕೌಶಲ್ಯ ಸೇರಿದಂತೆ ಹಲವು ಅಂಶಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲಿಸಿದರು.
ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪೊಲೀಸ್ ಶ್ವಾನಗಳು ಹಾಗೂ ಅವುಗಳ ತರಬೇತುದಾರರಿಗೆ ಬಹುಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಪರಾಧ ಪ್ರಕರಣಗಳ ಪತ್ತೆ, ಮಾದಕ ವಸ್ತುಗಳ ಸಾಗಾಟ ಪತ್ತೆ ಹಾಗೂ ವಿವಿಧ ತನಿಖೆಗಳಲ್ಲಿ ಪೊಲೀಸ್ ಶ್ವಾನಗಳ ಮಹತ್ವ ಎಷ್ಟಿದೆ ಎಂಬುದನ್ನು ಈ ಸ್ಪರ್ಧೆ ಮತ್ತೊಮ್ಮೆ ತೋರಿಸಿಕೊಟ್ಟಿತು. ಅಪರಾಧ ಪತ್ತೆಯಲ್ಲಿ ಪೊಲೀಸರ ಜೊತೆ ಹೆಜ್ಜೆ ಹಾಕುವ ಶ್ವಾನಗಳ ಸಾಮರ್ಥ್ಯ ಮತ್ತು ಅವರ ಸೂಚನೆಯನ್ನು ಚಾಚು ತಪ್ಪದೇ ಪಾಲಿಸುತ್ತಿದ್ದ ವಿಶೇಷ ಗುಣ ಪೊಲೀಸ್ ಹಿರಿಯ ಅಧಿಕಾರಿಗಳ ಗಮನ ಸೆಳೆಯಿತು.
ಇದನ್ನೂ ಓದಿ: ಅನ್ನಿ, ಟೈನಿ, ಕಾಳಿ, ಅಕಿರಾ, ಮಾರ್ವೆಲ್ ಮತ್ತು ಸುಭಾ: ಉತ್ತರ ಕನ್ನಡ ಪೊಲೀಸರಿಗೆ 6 'ಮೂಕ ಯೋಧ'ರ ಸಾಥ್! ಇವರ ಸಾಧನೆ ಗೊತ್ತೇ?

