ETV Bharat / state

ಕಲಬುರಗಿ: ಡ್ಯೂಟಿಯಲ್ಲಿದ್ದ​​ ಕಾನ್ಸ್‌ಟೇಬಲ್ ಪೊಲೀಸ್ ವಾಹನದಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಕರ್ತವ್ಯದಲ್ಲಿದ್ದ​​ ಪೊಲೀಸ್​​ ಕಾನ್ಸ್‌ಟೇಬಲ್ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.

KALABURAGI  CONSTABLE SHOOTS HIMSELF  ಪೊಲೀಸ್​​ ಕಾನ್ಸ್‌ಟೇಬಲ್ ಸಾವು  ಆತ್ಮಹತ್ಯೆ
ಮೃತ ಪೊಲೀಸ್​​ ಕಾನ್ಸ್‌ಟೇಬಲ್ ಶಿವಕುಮಾರ ನರಿಬೋಳ (ETV Bharat)
author img

By ETV Bharat Karnataka Team

Published : July 8, 2026 at 10:47 AM IST

2 Min Read
Choose ETV Bharat

ಕಲಬುರಗಿ: ನಗರದ ಜಗತ್​ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಸಶಸ್ತ್ರ ಮೀಸಲು ಪೊಲೀಸ್​​ ಪಡೆಯ ಪೊಲೀಸ್​​ ಕಾನ್ಸ್‌ಟೇಬಲ್ ತಮ್ಮ ಸೇವಾ ರೈಫಲ್‌ನಿಂದಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಜೇವರ್ಗಿ ತಾಲೂಕಿನ ಮಾವನೂರ ಗ್ರಾಮದ ಶಿವಕುಮಾರ ನರಿಬೋಳ (32) ಮೃತ ಕಾನ್ಸ್‌ಟೇಬಲ್ ಎಂದು ಗುರುತಿಸಲಾಗಿದೆ. ಮಂಗಳವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಜಗತ್ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಕುಮಾರ, ಪೊಲೀಸ್ ವಾಹನದಲ್ಲಿ ಕುಳಿತಿದ್ದ ವೇಳೆ ತಮ್ಮ ಬಳಿಯಿದ್ದ ಸರ್ಕಾರಿ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ.

ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಮಾಹಿತಿ. (ETV Bharat)

ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ., ಡಿಸಿಪಿಗಳಾದ ಶಾಲೂ ಹಾಗೂ ಪ್ರವೀಣ ನಾಯಕ, ಎಸಿಪಿ ಶರಣಬಸಪ್ಪ ಸುಬೇದಾರ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಕೋ, ವಿಧಿವಿಜ್ಞಾನ ಮತ್ತು ಬ್ಯಾಲಿಸ್ಟಿಕ್ ತಂಡಗಳು ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಿಸಿವೆ.

2016ರಲ್ಲಿ ಪೊಲೀಸ್​ ಇಲಾಖೆಗೆ ಸೇರ್ಪಡೆಯಾಗಿದ್ದ ಶಿವಕುಮಾರ ಅವರು ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಜಿಲ್ಲಾ ವರ್ಗಾವಣೆಯ ಮೂಲಕ 2026ರ ಫೆಬ್ರುವರಿಯಲ್ಲಿ ಕಲಬುರಗಿ ನಗರ ಪೊಲೀಸ್ ಕಮಿಷನರೇಟ್‌ಗೆ ವರ್ಗಾವಣೆಯಾಗಿದ್ದರು.

ಪೊಲೀಸ್ ಆಯುಕ್ತರ ಹೇಳಿಕೆ: ಈ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ., "ಸಿಎಆರ್ ಕಾನ್ಸ್‌ಟೇಬಲ್ ಶಿವಕುಮಾರ ಅವರು ತಮ್ಮ ಸೇವಾ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಳೆದ ಕೆಲವು ದಿನಗಳಿಂದ ವೈಯಕ್ತಿಕ ಕಾರಣಗಳಿಂದ ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದುಬಂದಿದೆ. ಕುಟುಂಬದವರು ನೀಡುವ ದೂರು ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಸ್ನೇಹಿತನಿಗೆ ಮೆಸೇಜ್ ಕಳಿಸಿ ​ಸ್ಯಾಂಕಿ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಮೆಸ್ಸೇಜ್​ ಕಳುಹಿಸಿ ವಿದ್ಯಾರ್ಥಿನಿ ಆತ್ಮಹತ್ಯೆ: ಜುಲೈ 6 ಈ ಘಟನೆ ನಡೆದಿತ್ತು. ಬೆಂಗಳೂರಿನ ಚಿಕ್ಕಬಾಣವಾರದ ನಿವಾಸಿ ವಿದ್ಯಾರ್ಥಿನಿ ತೇಜಸ್ವಿನಿ ಮೃತದೇಹ ಸ್ಯಾಂಕಿ ಕೆರೆಯಲ್ಲಿ ಪತ್ತೆಯಾಗಿತ್ತು. ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಡಿಗ್ರಿ ವ್ಯಾಸಂಗ ಮಾಡುತ್ತಿದ್ದ ಮೃತಳು ಸೋಮವಾರ ಮಧ್ಯಾಹ್ನ ಕಾಲೇಜಿನಿಂದ ಹೊರಟಿದ್ದಳು. ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ತನ್ನ ಸ್ನೇಹಿತನಿಗೆ ತಾನು ಸದಾಶಿವನಗರದ ಸ್ಯಾಂಕಿ ಕೆರೆ ಬಳಿ ಹೋಗುತ್ತಿದ್ದು, ಸಾಯುವುದಾಗಿ ಮೆಸ್ಸೇಜ್ ಮಾಡಿದ್ದಳು. ಆತ ತಕ್ಷಣ ತೇಜಸ್ವಿನಿಯ ತಾಯಿಗೆ ಮೆಸ್ಸೇಜ್ ಫಾರ್ವರ್ಡ್ ಮಾಡಿ ವಿಷಯ ತಿಳಿಸಿದ್ದನು. ಕೂಡಲೇ ತಾಯಿ ಸದಾಶಿವನಗರ ಪೊಲೀಸರಿಗೆ ಮಾಹಿತಿ ನೀಡಿ, ಪೊಲೀಸರು ಹಾಗೂ ಕುಟುಂಬಸ್ಥರು ತಡರಾತ್ರಿಯವರೆಗೆ ಹುಡುಕಾಟ ನಡೆಸಿದ್ದರು. ಬಳಿಕ ಮಂಗಳವಾರ ಬೆಳಗ್ಗೆ ಸ್ಯಾಂಕಿ ಕೆರೆಯಲ್ಲಿ ತೇಜಸ್ವಿನಿಯ ಮೃತದೇಹ ಪತ್ತೆಯಾಗಿತ್ತು.