ಪೋಕ್ಸೋ ಪ್ರಕರಣ: ಮಾಜಿ ಸಿಎಂ ಯಡಿಯೂರಪ್ಪ ಖುದ್ದು ಹಾಜರಿಗೆ ಸಮನ್ಸ್ ಜಾರಿ ಮಾಡಿದ ವಿಶೇಷ ನ್ಯಾಯಾಲಯ
ಪ್ರಕರಣದ ಮೊದಲ ಆರೋಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇತರೆ ಆರೋಪಿಗಳಾದ ಅರುಣ್, ಮರಿಸ್ವಾಮಿ ಹಾಗೂ ರುದ್ರೇಶ್ ಅವರಿಗೂ ಸಮನ್ಸ್ ಜಾರಿ ಮಾಡಲಾಗಿದೆ.

Published : November 18, 2025 at 9:31 PM IST
ಬೆಂಗಳೂರು : ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ನಜ್ಯ ಎಸಗಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ನಾಲ್ವರು ಆರೋಪಿಗಳಿಗೆ ಡಿಸೆಂಬರ್ 2 ರಂದು ಖುದ್ದು ಹಾಜರಾಗುವಂತೆ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ) ಪ್ರಕರಣದಲ್ಲಿ ತಮ್ಮ ವಿರುದ್ದ ಕಾಗ್ನಿಜೆನ್ಸ್ ತೆಗೆದುಕೊಂಡಿರುವ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಯಡಿಯೂರಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತ್ತು. ಅಲ್ಲದೆ, ಅರ್ಜಿದಾರರು ಖುದ್ದು ಹಾಜರಿಗೆ ಸಕಾರಣಗಳನ್ನು ನೀಡಿ ವಿನಾಯ್ತಿ ಕೋರಿ ಅರ್ಜಿ ಸಲ್ಲಿಸಿದಲ್ಲಿ ಅದನ್ನು ಕಾನೂನು ರೀತಿ ಪರಿಗಣಿಸಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು.
ಇದರ ಬೆನ್ನಲ್ಲೇ, ಯಡಿಯೂರಪ್ಪ ಅವರನ್ನು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ವಿಶೇಷ ಅಭಿಯೋಜಕರು ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಗಣಿಸಿರುವ ನ್ಯಾಯಪೀಠ, ಪ್ರಕರಣದ ಮೊದಲ ಆರೋಪಿ ಯಡಿಯೂರಪ್ಪ, ಇತರೆ ಆರೋಪಿಗಳಾದ ಅರುಣ್, ಮರಿಸ್ವಾಮಿ ಹಾಗೂ ರುದ್ರೇಶ್ ಅವರಿಗೂ ಸಮನ್ಸ್ ಜಾರಿ ಮಾಡಲಾಗಿದೆ.
ಬಂಧನ ಇಲ್ಲ : ಇದೇ ಪ್ರಕರಣ ಸಂಬಂಧ ಹೈಕೋರ್ಟ್ ಈ ಹಿಂದೆ ನಡೆಸಿದ್ದ ವಿಚಾರಣೆ ವೇಳೆ ಆರೋಪಿತ ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆದ್ದರಿಂದ ನ್ಯಾಯಾಲಯಕ್ಕೆ ಖುದ್ದು ಹಾಜರಾದರೂ, ಅವರನ್ನು ಬಂಧನ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಅರ್ಜಿದಾರರ ಪರ ವಕೀಲರು ಈಟಿವಿ ಭಾರತ್ ಗೆ ಮಾಹಿತಿ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ? ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಸಂಬಂಧ ಸಂತ್ರಸ್ತೆಯ ತಾಯಿ 2024ರ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಆ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ನಂತರ ಸಿಐಡಿಗೆ ತನಿಖೆ ವರ್ಗಾವಣೆಯಾಗಿತ್ತು. ಸಿಐಡಿ ಪೊಲೀಸರು ಯಡಿಯೂರಪ್ಪ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಆನಂತರ ವಿಚಾರಣಾಧೀನ ನ್ಯಾಯಾಲಯವು ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಹೊಸದಾಗಿ ಕಾಗ್ನಿಜೆನ್ಸ್ ಪಡೆದುಕೊಳ್ಳಲು ನಿರ್ದೇಶನ ನೀಡಿತ್ತು. ಇದೀಗ ಎರಡನೇ ಬಾರಿಗೆ ಯಡಿಯೂರಪ್ಪ ಮತ್ತಿತರರು ಮತ್ತೆ ಸಂಜ್ಞೆ ಪರಿಗಣಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದರು. ಈ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಸಮನ್ಸ್ ಜಾರಿ ಮಾಡಲಾಗಿದೆ.
ಇದನ್ನೂ ಓದಿ: ಪೊಕ್ಸೊ ಕೇಸ್: ಬಿಎಸ್ವೈ ಸಲ್ಲಿಸಿದ್ದ ಅರ್ಜಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

