ETV Bharat / state

ಮಂಗಳೂರು ಪಾಲಿಕೆ ಚುನಾವಣೆಗೆ ನಿರ್ದೇಶನ ಕೋರಿ ಅರ್ಜಿ: ಸರ್ಕಾರ, ಚುನಾವಣಾ ಆಯೋಗಕ್ಕೆ ಹೈಕೋರ್ಟ್​ ನೋಟಿಸ್

ಅವಧಿ ಮುಗಿದ ಮಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ನಿರ್ದೇಶನ ನೀಡುವಂತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.

petition-filed-in-high-court-seeking-directions-to-hold-elections-for-the-mangaluru-city-corporation
ಹೈಕೋರ್ಟ್ (ETV Bharat)
author img

By ETV Bharat Karnataka Team

Published : June 2, 2026 at 7:20 AM IST

2 Min Read
Choose ETV Bharat

ಬೆಂಗಳೂರು: ಅವಧಿ ಮುಗಿದು 15 ತಿಂಗಳು ಕಳೆದಿರುವ ಮಂಗಳೂರು ಮಹಾನಗರ ಪಾಲಿಕೆಗೆ ತಕ್ಷಣ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಲು ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರದ ಅತ್ತಾವರ ನಿವಾಸಿ ಪತ್ರಕರ್ತ ರಹಿಮಾನ್ ಖಾನ್ ಲೊಹಾನಿ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ನೋಟಿಸ್ ಜಾರಿಗೊಳಿಸಿತು. ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿ ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿತು.

ಸಂವಿಧಾನದ 243 - ಯು ವಿಧಿ ಪ್ರಕಾರ ಸ್ಥಳೀಯ ಸಂಸ್ಥೆಗಳಿಗೆ ಅವುಗಳ ಅವಧಿ ಮುಗಿಯುವ ಆರು ತಿಂಗಳು ಮುಂಚಿತವಾಗಿ ಮುಂದಿನ ಅವಧಿಗೆ ಚುನಾವಣೆ ನಡೆಸಬೇಕು. ಆದರೆ, ಮಂಗಳೂರು ಮಹಾನಗರ ಪಾಲಿಕೆಗೆ ಕೊನೆಯ ಬಾರಿ ಚುನಾವಣೆ ನಡೆದದ್ದು 2019ರ ನವೆಂಬರ್ 12ಕ್ಕೆ ಪಾಲಿಕೆಗೆ ಐದು ವರ್ಷದ ಅವಧಿ 2025ರ ಫೆಬ್ರವರಿ 27ಕ್ಕೆ ಮುಗಿದಿದೆ. ಅವಧಿ ಮುಗಿದು 15 ತಿಂಗಳು ಕಳೆದಿದ್ದು, ಚುನಾವಣೆ ನಡೆದಿಲ್ಲ. ಸದ್ಯ ಪಾಲಿಕೆಯು ಆಡಳಿತಾಧಿಕಾರಿಯ ಆಡಳಿತದಲ್ಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಪ್ರಸ್ತುತ ಪಾಲಿಕೆಯು ಸರ್ಕಾರದ ನಿಯುಕ್ತ ಆಡಳಿತಾಧಿಕಾರಿಯ ಅಡಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಸ್ಥಳೀಯ ಜನರಿಗೆ ಪ್ರಜಾಸತ್ತಾತ್ಮಕ ಪ್ರಾತಿನಿಧ್ಯ ಸಿಗುತ್ತಿಲ್ಲ ಹಾಗೂ ನಗರದ ವಾರ್ಡ್​​‌ಗಳ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಚುನಾವಣೆ ವಿಳಂಬದ ಕುರಿತು ಅರ್ಜಿದಾರರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದಾಗ, ಸರ್ಕಾರದ ಕಡೆಯಿಂದ ಈವರೆಗೆ ಯಾವುದೇ ಅಧಿಕೃತ ಆದೇಶ ಅಥವಾ ಸ್ಪಷ್ಟನೆ ಬಂದಿಲ್ಲ ಎಂಬ ಬೇಜವಾಬ್ದಾರಿಯುತ ಉತ್ತರ ನೀಡಲಾಗಿದೆ.

ಆದ್ದರಿಂದ ಹೈಕೋರ್ಟ್ ತಕ್ಷಣವೇ ಮಧ್ಯ ಪ್ರವೇಶಿಸಿ, ವಾರ್ಡ್‌ಗಳ ಮೀಸಲಾತಿಯನ್ನು ಅಂತಿಮಗೊಳಿಸಿ, ಮಂಗಳೂರು ಮಹಾನಗರ ಪಾಲಿಕೆಗೆ ಕೂಡಲೇ ಸಾರ್ವತ್ರಿಕ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಆದೇಶ ಹೊರಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಚುನಾವಣೆ ವಿಳಂಬ ಆಗಿರುವುದರಿಂದ ಪಾಲಿಕೆಗೆ ಚುನಾಯಿತ ಜನಪ್ರತಿನಿಧಿಗಳು ಇಲ್ಲದಂತಾಗಿದೆ. ಇದರಿಂದ ಮಂಗಳೂರು ನಗರದ ನಾಗರಿಕರಿಗೆ ಉತ್ತಮ ಆಡಳಿತ ಸಿಗದಂತಾಗಿದೆ. ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಆದ್ದರಿಂದ ತಕ್ಷಣ ಪಾಲಿಕೆಗೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರ ಹಾಗೂ ರಾ‍ಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಭ್ರೂಣದ ನರಮಂಡಲದಲ್ಲಿ ದೋಷ; 32 ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಿದ ಹೈಕೋರ್ಟ್