ETV Bharat / state

'ಗುಜರಿ ಅಂಗಡಿಯಂತೆ ಕಾಣುವ ಬ್ರಹ್ಮರಕೂಟ್ಲು ಹೆದ್ದಾರಿ ಟೋಲ್ ಗೇಟ್​ ತೆರವುಗೊಳಿಸಿ': ಜನರ ಆಗ್ರಹ

ಬ್ರಹ್ಮರಕೂಟ್ಲು ಟೋಲ್​ಗೇಟ್​ ಅವೈಜ್ಞಾನಿಕವಾಗಿದ್ದು, ಮೂಲಸೌಕರ್ಯಗಳಿಂದ ವಂಚಿತವಾಗಿದೆ ಎಂದು ಸಮಾನ ಮನಸ್ಕ ಸಮನ್ವಯ ಸಮಿತಿ ಹಾಗೂ ಟೋಲ್ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಧರಣಿ ನಡೆಸಿದರು.

PROTEST AGAINST TOLL GATE
ಬ್ರಹ್ಮರಕೂಟ್ಲು ಟೋಲ್​ಗೇಟ್​ (ETV Bharat)
author img

By ETV Bharat Karnataka Team

Published : March 3, 2026 at 9:41 PM IST

4 Min Read
Choose ETV Bharat

ಮಂಗಳೂರು: ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಬಿ.ಸಿ. ರೋಡ್ ಸಮೀಪ ಬ್ರಹ್ಮರಕೂಟ್ಲು ಎಂಬಲ್ಲಿ 2013ರಲ್ಲಿ ನಿರ್ಮಿಸಲಾದ ಟೋಲ್ ಅವೈಜ್ಞಾನಿಕವಾಗಿದ್ದು, ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಇದುವರೆಗೆ ಶುಲ್ಕ ಸಂಗ್ರಹಿಸಿದ್ದು ಸಾಕು, ಇನ್ನು ಟೋಲ್ ಮುಚ್ಚಿಬಿಡಿ ಎಂದು ಸಮಾನ ಮನಸ್ಕ ಸಮನ್ವಯ ಸಮಿತಿ ಹಾಗೂ ಟೋಲ್ ವಿರೋಧಿ ಹೋರಾಟ ಸಮಿತಿಯ ಸದಸ್ಯರು, ಟೋಲ್ ವಿರೋಧಿಸುವ ಸಾರ್ವಜನಿಕರು ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಂಭಾಗ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕುಳಿತು ಧರಣಿ ನಡೆಸಿದರು.

ಈ ಕುರಿತು ಮನವಿ ಪತ್ರವನ್ನೂ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ದ.ಕ. ಜಿಲ್ಲಾಧಿಕಾರಿ ಡಾ. ಹೆಚ್.ವಿ. ದರ್ಶನ್ ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ನೀಡಿದ್ದಾರೆ.

ಬ್ರಹ್ಮರಕೂಟ್ಲು ಟೋಲ್​ಗೇಟ್ ವಿರೋಧಿಸಿ ನಡೆದ ಧರಣಿ (ETV Bharat)

ಮಾಜಿ ಸಚಿವ ಬಿ.ರಮಾನಾಥ ರೈ, ಹೋರಾಟಗಾರ ಮುನೀರ್ ಕಾಟಿಪಳ್ಳ, ಎಂ.ಜಿ. ಹೆಗಡೆ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದ ಪ್ರತಿಭಟನೆಯಲ್ಲಿ ನೂರಾರು ಸಾರ್ವಜನಿಕರು ಸೇರಿಕೊಂಡು ಘೋಷಣೆಗಳನ್ನು ಮೊಳಗಿಸಿ, ಟೋಲ್ ನಿಂದ ಯಾಕೆ ಸಮಸ್ಯೆಯಾಗುತ್ತಿದೆ ಎಂಬುದನ್ನು ವಿವರಿಸಿದರು.

ಪ್ರತಿಭಟನಾಕಾರರ ಮನವಿ ಏನು? ಬೈಪಾಸ್, ಮೇಲ್ಸೇತುವೆ, ಅಂಡರ್ ಪಾಸ್​ಗಳಿಲ್ಲದ, ಸರಿಯಾದ ಸರ್ವೀಸ್ ರಸ್ತೆಗಳನ್ನು ಹೊಂದಿರದ, ಗುಣಮಟ್ಟದ ನಿರ್ವಹಣೆ ಇಲ್ಲದ ಸಾಮಾನ್ಯ ರಸ್ತೆಗೆ ದೀರ್ಘ ಕಾಲ ಟೋಲ್ ಸಂಗ್ರಹಿಸಿಯೂ ಹೂಡಿದ ಹಣ ಮರು ಸಂಗ್ರಹ ಆಗಿಲ್ಲ ಎಂದರೆ ನಂಬಲು ಸಾಧ್ಯವಿಲ್ಲ ಎಂದು ಮನವಿಯಲ್ಲಿ ತಿಳಿಸಿರುವ ಪ್ರತಿಭಟನಾಕಾರರು, ಬ್ರಹ್ಮರಕೂಟ್ಟು ಟೋಲ್ ಗೇಟ್​​ಗೆ 32 ಕಿ.ಮೀ ದೂರದ ತಲಪಾಡಿ, 44 ಕಿ.ಮೀ ದೂರದ ಹೆಜಮಾಡಿಯಲ್ಲಿ ಏಳೆಂಟು ವರ್ಷಗಳ ಈಚೆಗೆ ಹೊಸ ಟೋಲ್ ಸಂಗ್ರಹ ಕೇಂದ್ರಗಳು ಕಾರ್ಯನಿರ್ವಹಿಸತೊಡಗಿವೆ. ಇದು ಎರಡು ಟೋಲ್​​ಗೇಟ್​ಗಳ ನಡುವೆ ಇರಬೇಕಾದ ಕನಿಷ್ಠ ಅಂತರವಾದ 60 ಕಿ.ಮೀ ನಿಯಮದ ನೇರ ಉಲ್ಲಂಘನೆ ಆಗಿದೆ ಎಂದು ದೂರಿದ್ದಾರೆ.

ಬ್ರಹ್ಮರಕೂಟ್ಲು ಟೋಲ್​​ಗೇಟ್​​ನಿಂದ ಬೆಂಗಳೂರು ಕಡೆಗೆ 31 ಕಿ.ಮೀ ದೂರದ ಉಪ್ಪಿನಂಗಡಿಯ ವಳಾಲು ಎಂಬಲ್ಲಿ ಹಾಗೂ ಚಿಕ್ಕಮಗಳೂರು ಕಡೆಗಿನ ಹೆದ್ದಾರಿಯಲ್ಲಿ ಬೆಳ್ತಂಗಡಿ ತಾಲೂಕಿನ ಪಣಕಜೆ ಎಂಬಲ್ಲಿ 28 ಕಿ.ಮೀ. ದೂರದಲ್ಲಿ, ಸಾಣೂರು ಬಿಕರ್ನಕಟ್ಟೆ ಹೆದ್ದಾರಿಯಲ್ಲಿ ಗಂಜಿಮಠ ಎಂಬಲ್ಲಿ 32 ಕಿ.ಮೀ. ದೂರದಲ್ಲಿ ಹೀಗೆ ಹೊಸದಾಗಿ ಮೂರು ಟೋಲ್ ಸಂಗ್ರಹ ಕೇಂದ್ರಗಳು ನಿರ್ಮಾಣ ಹಂತದಲ್ಲಿವೆ. ಇದೆಲ್ಲವೂ ಅಂತರದ ನಿಯಮಗಳ ಉಲ್ಲಂಘನೆ ಮಾತ್ರ ಅಲ್ಲದೆ, ಈ ಭಾಗದಲ್ಲಿ ಹೆದ್ದಾರಿ ಪ್ರಯಾಣವೇ ದುಬಾರಿಯಾಗಿ ಅಸಹನೀಯ ಸಂದರ್ಭ ಸೃಷ್ಟಿಯಾಗಲಿದೆ. ಇಂತಹ ಸಂದರ್ಭದಲ್ಲಿ ಬ್ರಹ್ಮರಕೂಟ್ಲು ಟೋಲ್​​ಗೇಟ್​​ನಲ್ಲಿ ಸುಂಕ ಸಂಗ್ರಹ ಮುಂದುವರಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯ ಅಲ್ಲ ಎಂದು ತಿಳಿಸಿದ್ದಾರೆ.

ಬಳಕೆದಾರರಲ್ಲಿ ಅತೃಪ್ತಿಗೆ ಕಾರಣ: ನಿಯಮಗಳನ್ನು ಉಲ್ಲಂಘಿಸಿ ಜಿಲ್ಲೆಯ ಹೆದ್ದಾರಿಗಳಲ್ಲಿ ಹಲವಾರು ಟೋಲ್​​ಗೇಟ್ ಗಳನ್ನು ಸ್ಥಾಪಿಸುತ್ತಿರುವುದು ಹೆದ್ದಾರಿ ಬಳಕೆದಾರರಲ್ಲಿ ತೀವ್ರ ಅತೃಪ್ತಿ, ಆಕ್ಷೇಪಗಳಿಗೆ ಕಾರಣವಾಗುತ್ತಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪುನರ್ ಪರಿಶೀಲನೆ ನಡೆಸಬೇಕು. ನಿಯಮಗಳನ್ನು ನ್ಯಾಯಯುತವಾಗಿ ಅನುಷ್ಠಾನಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು. ಈ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಬ್ರಹ್ಮರಕೂಟ್ಲು ಟೋಲ್​​ಗೇಟ್ ಮುಚ್ಚಲು ಕ್ರಮ ಜರುಗಿಸಬೇಕು ಎಂಬ ಬೇಡಿಕೆಯನ್ನು ಸಾಮೂಹಿಕ ಧರಣಿಯ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ವಿನಂತಿಸುತ್ತಿದ್ದೇವೆ. ಬ್ರಹ್ಮರಕೂಟ್ಲು ಟೋಲ್​ಗೇಟ್ ಮುಚ್ಚಲು ತೀರ್ಮಾನಿಸದಿದ್ದಲ್ಲಿ ಮುಂದಕ್ಕೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಈ ಮೂಲಕ ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಇದು ಸುಲಿಗೆಯ ಕೇಂದ್ರವಾಗಿದೆ - ರಮಾನಾಥ ರೈ: ಪ್ರತಿಭಟನೆಯಲ್ಲಿ ಈ ಕುರಿತು ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ಇದು ಸುಲಿಗೆಯ ಕೇಂದ್ರವಾಗಿದೆ ಎಂದು ದೂರಿದರು. ಕಾನೂನುಬಾಹಿರವಾಗಿ ಇದನ್ನು ಕಾರ್ಯಾಚರಿಸುತ್ತಿದ್ದಾರೆ. ಬ್ರಹ್ಮರಕೂಟ್ಲು ಟೋಲ್​​ಗೇಟ್ ಅನ್ನು ತೆರವುಮಾಡಬೇಕಾದದ್ದು ನ್ಯಾಯಯುತವಾಗಿದೆ. ನಮ್ಮ ಹೋರಾಟ ಪೂರ್ಣ ಪ್ರಮಾಣದಲ್ಲಿ ನ್ಯಾಯಯುತವಾಗಿದೆ ಎಂದರು.

ಜನರು ರೋಸಿಹೋಗಿದ್ದಾರೆ - ಮೋಹನ ಶೆಟ್ಟಿ: ಬ್ರಹ್ಮರಕೂಟ್ಲು ಟೋಲ್ ತೆರವು ಸಮಿತಿ ಸಂಚಾಲಕ ಹಾಗೂ ಸಮಾನ ಮನಸ್ಕ ಸಮನ್ವಯ ಸಂಘಟನೆಯ ಅಧ್ಯಕ್ಷ ಮೋಹನ್ ಕುಮಾರ್ ಶೆಟ್ಟಿ ಮಾತನಾಡಿ, ಜನರು ಅವ್ಯವಸ್ಥೆಯಿಂದ ರೋಸಿಹೋಗಿದ್ದಾರೆ. ಟೋಲ್ ಗೇಟ್​ಗೆ ಯಾವ ಸವಲತ್ತುಗಳು ಬೇಕೋ ಅವುಗಳು ಇಲ್ಲ. ಜನರ ಒತ್ತಡ ಇರುವ ಕಾರಣ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕು, ಟೋಲ್ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ತೆರವು ಮಾಡಿಯೇ ಸಿದ್ಧ - ಕಾಟಿಪಳ್ಳ: ಡಿವೈಎಫ್​ಐ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, ಈ ಹಿಂದೆ ಸುರತ್ಕಲ್ ನಲ್ಲಿ ಇಂಥದ್ದೇ ಟೋಲ್ ಇರುವುದನ್ನು ತೆರವುಗೊಳಿಸಲು ಸಂಘಟಿತ ಹೋರಾಟ ಮಾಡಿದ್ದನ್ನು ನೆನಪಿಸಿ, ನಾವು ಹೋರಾಟದಲ್ಲಿ ಗೆಲ್ಲುತ್ತೇವೆ. ಬ್ರಹ್ಮರಕೂಟ್ಲು ಟೋಲ್ ತೆರವು ಮಾಡಿಯೇ ಮಾಡುತ್ತೇವೆ ಎಂದು ಗುಡುಗಿದರು.

ಈ ಟೋಲ್​​ನಿಂದ ಎಲ್ಲರಿಗೂ ಸಮಸ್ಯೆ. ತುರ್ತು ಸ್ಥಿತಿ ಬಂದರೂ ತುಂಬ ಕಷ್ಟವಾಗುತ್ತದೆ. ಕ್ಯೂ ನಿಲ್ಲುವ ಪರಿಸ್ಥಿತಿ. ನಾವು ಹಾಕುವ ಪ್ರತಿಯೊಂದು ಲೀಟರ್ ಪೆಟ್ರೋಲ್, ಡೀಸೆಲ್​​ನಲ್ಲೂ ಎರಡೂವರೆ ರೂಪಾಯಿ ರೋಡ್ ಟ್ಯಾಕ್ಸ್​ಗೆ ಕಟ್ ಆಗುತ್ತದೆ. ಹೀಗಾಗಿ ಈ ಟೋಲ್ ಅನ್ನು ತೆರವುಗೊಳಿಸಬೇಕು ಎಂದು ಟೂರಿಸ್ಟ್ ವಾಹನ ಚಾಲಕ, ಮಾಲೀಕರ ಸಂಘದ ಅಧ್ಯಕ್ಷ ರಾಘವೇಂದ್ರ ರಾವ್ ಹೇಳಿದರು.

2013ರಲ್ಲಿ ಸ್ಥಾಪನೆಯಾಗಿತ್ತು: ಸುರತ್ಕಲ್ ಬಿ.ಸಿ.ರೋಡ್ ಚತುಷ್ಪಥ ರಸ್ತೆ ಸಂದರ್ಭ ಬ್ರಹ್ಮರಕೂಟ್ಲುವಿನಲ್ಲಿ ಟೋಲ್ ಸಂಗ್ರಹ ವ್ಯವಸ್ಥೆ 2013ರಲ್ಲಿ ಆರಂಭಗೊಂಡಿತ್ತು. ಈ ಜಾಗವೇ ಸರಿಯಾದುದಲ್ಲ ಎಂದು ಆ ಸಂದರ್ಭವೇ ಮಾಧ್ಯಮಗಳ ಸಹಿತ ಹಲವರು ಎಚ್ಚರಿಸಿದ್ದರೂ ಪ್ರಬಲ ಜನಹೋರಾಟ ನಡೆದಿರಲಿಲ್ಲ. ತುರ್ತುಪರಿಸ್ಥಿತಿಯಲ್ಲಿ ಸಂಚರಿಸುವ ಆಂಬ್ಯುಲೆನ್ಸ್ ನಂಥ ವಾಹನಗಳು ಸಾಗಲು ಪ್ರತ್ಯೇಕ ವ್ಯವಸ್ಥೆಯನ್ನೇ ಕಲ್ಪಿಸದೆ, ಸರಿಯಾಗಿ ಶೌಚಗೃಹ ಸಹಿತ ಯಾವುದೇ ಮೂಲಸೌಕರ್ಯ ಕಲ್ಪಿಸದೆ, ಕೇವಲ ಕಲೆಕ್ಷನ್ ಗಷ್ಟೇ ಸೀಮಿತ ಎಂಬಂತಿದ್ದ ಟೋಲ್ ಗೇಟ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿತ್ತು. ಆಗಾಗ್ಗೆ ಪ್ರಯಾಣಿಕರು ಮತ್ತು ಸಿಬ್ಬಂದಿ ಮಧ್ಯೆ ನಡೆಯುತ್ತಿದ್ದ ವಾಗ್ಯುದ್ಧಗಳು ಪೊಲೀಸ್ ಠಾಣೆ ಮೆಟ್ಟಲೇರುತ್ತಿದ್ದವು.

ರಾತ್ರಿ ಹೊತ್ತು ಬೆಳಕಿಲ್ಲದಿರುವುದು, ಸುರಕ್ಷತೆಗೂ ಕ್ರಮ ಇಲ್ಲದೇ ಇರುವಂಥದ್ದನ್ನು ಪ್ರಯಾಣಿಕರು ಬೊಟ್ಟು ಮಾಡುತ್ತಿದ್ದರು. ಸಣ್ಣಪುಟ್ಟ ಪ್ರತಿಭಟನೆಗಳು ನಡೆದಿದ್ದರೂ ಪರಿಣಾಮಕಾರಿಯಾಗಿರಲಿಲ್ಲ. ಕೇರಳದ ಆರಿಕ್ಕಾಡಿಯಲ್ಲಿ ಕಳೆದ ತಿಂಗಳು ನಡೆದ ಹೋರಾಟ ಯಶಸ್ವಿಯಾಗಿ ಟೋಲ್ ತೆರವು ಮಾಡಿದ್ದನ್ನು ಗಮನಿಸಿ ಮತ್ತೊಮ್ಮೆ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡತೊಡಗಿದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಮಂಗಳವಾರ ನಡೆದಿದೆ. ಆದರೆ ಇದು ಆರಂಭವಷ್ಟೇ ಇನ್ನು ಹಲವು ರೀತಿಯ ಪ್ರತಿಭಟನೆಗಳು ಮುಂದೆ ಕಾದಿವೆ ಎಂದು ಹೋರಾಟಗಾರ ಸುಹೈಲ್ ಕಂದಕ್ ತಿಳಿಸಿದ್ದಾರೆ.

ಇವುಗಳನ್ನೂ ಓದಿ: