ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಕ್ರೌರ್ಯ ನಿಲ್ಲಿಸಲು ತಕ್ಷಣ ಕ್ರಮ ವಹಿಸಿ: ಪ್ರಧಾನಿಗೆ ಪೇಜಾವರ ಶ್ರೀ ಪತ್ರ
ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ಕ್ರೌರ್ಯ ನಿಲ್ಲಿಸಲು ಕ್ರಮ ವಹಿಸುವಂತೆ ಪ್ರಧಾನಿ ಮೋದಿ ಅವರಿಗೆ ಪೇಜಾವರ ಶ್ರೀಗಳು ಪತ್ರ ಬರೆದಿದ್ದಾರೆ.

Published : January 8, 2026 at 9:25 AM IST
ಉಡುಪಿ: ಬಾಂಗ್ಲಾದೇಶದಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ಭೀಕರ ಕ್ರೌರ್ಯದ ಸರಣಿ ಕಂಡು ತೀವ್ರ ಆಘಾತವಾಗುತ್ತಿದೆ. ಕೇಂದ್ರ ಸರ್ಕಾರ ಕಿಂಚಿತ್ತೂ ತಡಮಾಡದೇ ಈ ಸಂಬಂಧ ಕಾರ್ಯಪ್ರವೃತ್ತರಾಗಿ ಈ ಭೀಭತ್ಸ ಕೃತ್ಯಗಳನ್ನು ನಿಲ್ಲಿಸಲು ಕ್ರಮ ವಹಿಸಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಶ್ರೀಗಳಿಂದ ಪತ್ರ: ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಶ್ರೀಗಳು ಪತ್ರ ಬರೆದಿದ್ದಾರೆ.
"ಜಗತ್ತಿನ ಸಮಸ್ತರ ಒಳಿತಿಗಾಗಿ ಹಿಂದೂ ಸಮಾಜ ನಿರಂತರ ಸ್ಪಂದಿಸಿದೆ. ತಾನೇ ತಾನಾಗಿ ಇನ್ನೊಬ್ಬರ ಮೇಲೆ ಪಾರಮ್ಯ ಸಾಧಿಸಲು ಹಿಂಸೆಯನ್ನು ಹಿಂದೂ ಸಮಾಜ ಯಾವತ್ತೂ ಅಸ್ತ್ರವಾಗಿ ಮಾಡಿಕೊಂಡದ್ದೇ ಇಲ್ಲ. ಶಾಂತಿ ಸಹಬಾಳ್ವೆಯ ತತ್ವಗಳನ್ನು ನಮ್ಮ ಎಲ್ಲೆ ಮೀರಿ ಅನುಷ್ಠಾನಿಸಿದ್ದೇವೆ. ಆದರೆ ನಮ್ಮದೇ ನೆರೆಯ ದೇಶವೊಂದರಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಪೈಶಾಚಿಕ ಹಾಗೂ ಅಮಾನವೀಯ ದಾಳಿಗಳು ಹಿಂಸೆ, ಕೊಲೆ ಅತ್ಯಾಚಾರಗಳನ್ನು ಕಂಡು ಭಾರತದ ಹಿಂದೂಗಳು ತೀವ್ರ ದುಃಖಿತರಾಗಿದ್ದಾರೆ.
ಒಂದು ಕಡೆ ಅಲ್ಲಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದ ದೇಶ ಬಿಟ್ಟು ಓಡಿ ಬಂದ ಮಾಜಿ ಪ್ರಧಾನಿ ಶೇಖ್ ಹಸೀನಾರಿಗೆ ಎಳ್ಳಷ್ಟೂ ಹಾನಿಯಾಗದಂತೆ ರಾಜಾಶ್ರಯ ಕೊಟ್ಟು ಭಾರತ ರಕ್ಷಣೆ ಕೊಟ್ಟಿದೆ. ಇದು ನಮ್ಮ ದೇಶದ ಔದಾರ್ಯವೇ ಆಗಿದೆ. ಆದರೆ ಆ ನಂತರದ ವಿದ್ಯಮಾನಗಳಲ್ಲಿ ಅಲ್ಲಿನ ಹಿಂದೂಗಳು ಅನುಭವಿಸುತ್ತಿರುವ ನೋವು ಸಂಕಟಗಳು ಮಾತ್ರ ತೀರಾ ವಿಷಾದನೀಯ. ಆದ್ದರಿಂದ ಕೇಂದ್ರ ಸರ್ಕಾರ ತಕ್ಷಣ ಸಾಧ್ಯವಿರುವ ಎಲ್ಲ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡು ಬಾಂಗ್ಲಾ ದೇಶದಲ್ಲಿ ಹಿಂದೂಗಳ ರಕ್ಷಣೆ ಮತ್ತು ನೆಮ್ಮದಿಗೆ ಸೂಕ್ತ ವ್ಯವಸ್ಥೆ ಆಗುವಂತೆ ನೋಡಿಕೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಮಂಡಳಿ ಸದಸ್ಯರೂ ಆಗಿರುವ ಶ್ರೀಗಳು ಒತ್ತಾಯಿಸಿದ್ದಾರೆ.
ಜನವರಿ 10 ಕ್ಕೆ ದೀಪ ಬೆಳಗಿಸಿ ಪ್ರಾರ್ಥಿಸಿ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಮಾರಣಾಂತಿಕ ದೌರ್ಜನ್ಯಗಳ ಅಂತ್ಯ, ಘಟನೆಗಳಲ್ಲಿ ಮೃತರಾದವರಿಗೆ ಸದ್ಗತಿ ಹಾಗೂ ಸಂತ್ರಸ್ತ ಹಿಂದೂಗಳಿಗೆ ಶೀಘ್ರ ರಕ್ಷಣೆ ಮತ್ತು ಇಡೀ ಜಗತ್ತಿನಲ್ಲಿ ಶಾಂತಿ ನೆಮ್ಮದಿ ನೆಲೆಸಲು ಇದೇ ಬರುವ ಜನವರಿ 10 ಶನಿವಾರದಂದು ದೇಶದ ಪ್ರತಿ ಹಿಂದೂಗಳು ತಮ್ಮ ಮನೆ ಮಠ ಮಂದಿರಗಳಲ್ಲಿ ದೇವರಿಗೆ ನಿತ್ಯ ಬೆಳಗುವ ದೀಪದ ಜೊತೆಗೆ ಪ್ರತ್ಯೇಕ ದೀಪ ಒಂದನ್ನು ಬೆಳಗಿ ಪ್ರಾರ್ಥಿಸುವಂತೆ ಶ್ರೀಗಳು ಕರೆ ನೀಡಿದ್ದಾರೆ.
ಇದನ್ನೂ ಓದಿ: ಬಿಕ್ಕಟ್ಟಿದ್ದರೂ ಬಾಂಗ್ಲಾ ಮಹಿಳೆಗೆ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ನೀಡಿದ ಭಾರತ
ಬಾಂಗ್ಲಾದೇಶದಲ್ಲಿ ಮುಂದುವರೆದ ಕಿಡಿಗೇಡಿಗಳ ಅಟ್ಟಹಾಸ; ಹಿಂದೂ ಉದ್ಯಮಿ, ದಿನಸಿ ವ್ಯಾಪಾರಿಯ ಹತ್ಯೆ

