ಶಿವಮೊಗ್ಗ: ಚೀಲದಲ್ಲಿ ಹಾಲಿನ ಬಾಟಲ್ ಜೊತೆ ನವಜಾತ ಶಿಶು ಪತ್ತೆ! ಬಸ್ ನಿಲ್ದಾಣದಲ್ಲಿ ಘಟನೆ
ಹೊಸನಗರ ತಾಲೂಕಿನ ಗವಟೂರು ಹೊಳೆ ಬಸ್ ನಿಲ್ದಾಣದಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ.

Published : July 6, 2026 at 10:59 AM IST
ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬಿಟ್ಟು ಹೋದ ಘಟನೆ ಹೊಸನಗರ ತಾಲೂಕಿನ ಗವಟೂರು ಹೊಳೆ ಬಳಿ ನಡೆದಿದೆ.
ಸುಮಾರು 10 ರಿಂದ 15 ದಿನಗಳ ಹೆಣ್ಣು ಮಗುವನ್ನು ಕೈಚೀಲವೊಂದರಲ್ಲಿ ಬಿಳಿ ಬಟ್ಟೆಯಲ್ಲಿ ಸುತ್ತಿ ಬಸ್ ನಿಲ್ದಾಣದಲ್ಲಿ ನೇತು ಹಾಕಿ ಹೋಗಿದ್ದಾರೆ. ಗವಟೂರು ಗ್ರಾಮದ ರಸ್ತೆ ಪಕ್ಕದ ಸಣ್ಣದೂಂದು ಬಸ್ ನಿಲ್ದಾಣದಲ್ಲಿ ಯಾರು ಇಲ್ಲದ ವೇಳೆ ಚೀಲವನ್ನು ಬಿಟ್ಟು ಪರಾರಿಯಾಗಿದ್ದಾರೆ.
ನಿನ್ನೆ ರಾತ್ರಿ ಸುಮಾರು 9 ಗಂಟೆಯ ಸಮಯದಲ್ಲಿ ಬಸ್ ನಿಲ್ದಾಣದ ಹಿಂಭಾಗದ ನಿವಾಸಿಯೊಬ್ಬರಿಗೆ ಮಗುವಿನ ಅಳುವ ಶಬ್ದ ಕೇಳಿಸಿದ್ದು, ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಅವರು ರಿಪ್ಪನ್‌ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತಯೇ ಸ್ಥಳಕ್ಕೆ ಧಾವಿಸಿದ ರಿಪ್ಪನ್‌ಪೇಟೆ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಹಾಗೂ ಸಿಬ್ಬಂದಿ, ಮಗುವನ್ನು ನೋಡಿದ್ದಾರೆ. ನಂತರ ಮಗುವನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಮಗುವಿನ ಆರೋಗ್ಯ ಪರೀಕ್ಷಿಸಿದ್ದು, ಮಗು 1.6 ಕೆ.ಜಿ ತೂಕವಿದ್ದು, ಆರೋಗ್ಯವಾಗಿದೆ. ಮಗುವಿನ ರಕ್ಷಣೆಗಾಗಿ ಮಗುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸದ್ಯ ಮಗು ಶಿಶು ಆರೈಕೆ ಕೇಂದ್ರದಲ್ಲಿದೆ.
ನಮಗೆ ಮಾಹಿತಿ ಬರುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಚೀಲದಲ್ಲಿ ಮಗು ಇರುವುದು ತಿಳಿದು ಬಂದಿತು. ಸದ್ಯ ಮಗು ಆರೋಗ್ಯವಾಗಿದೆ. ಮಗುವಿನ ಪೋಷಕರ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಅವರು ಈಟಿವಿ ಭಾರತ್ಗೆ ದೂರವಾಣಿಯಲ್ಲಿ ತಿಳಿಸಿದ್ದಾರೆ.

