ETV Bharat / state

ಮಂಗಳೂರು: ಮಧ್ಯರಾತ್ರಿ ಅಪಾರ್ಟ್‌ಮೆಂಟ್ ಲಿಫ್ಟ್‌ನಲ್ಲಿ ಸಿಲುಕಿದ್ದ ಯುವಕನ ರಕ್ಷಿಸಿದ ಪಾಂಡೇಶ್ವರ ಅಗ್ನಿಶಾಮಕ ದಳ

ಪಾಂಡೇಶ್ವರ ಅಗ್ನಿಶಾಮಕ ದಳ ತ್ವರಿತ ಕಾರ್ಯಾಚರಣೆ ಮೂಲಕ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಅಸ್ಸಾಂ ಮೂಲದ ಯುವಕನನ್ನು ರಕ್ಷಿಸಿದೆ.

DAKSHINA KANNADA  ಪಾಂಡೇಶ್ವರ ಅಗ್ನಿಶಾಮಕ ದಳ  STUCK IN ELEVATOR  ಲಿಫ್ಟ್
ಹೈಡ್ರಾಲಿಕ್ ಸ್ಪ್ರೆಡರ್ ಉಪಕರಣ ಬಳಸಿ ಲಿಫ್ಟ್‌ನಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ. (ETV Bharat)
author img

By ETV Bharat Karnataka Team

Published : August 31, 2026 at 9:53 AM IST

2 Min Read
Choose ETV Bharat

ಮಂಗಳೂರು: ನಗರದ ಪಾಂಡೇಶ್ವರದ ಶ್ರೀನಿವಾಸ ಕಾಲೇಜು ಎದುರಿನ ರೈಲ್ವೆ ಟ್ರ್ಯಾಕ್​ ಸಮೀಪವಿರುವ ಮಿಜಾರ್​​​ ಅಪಾರ್ಟ್‌ಮೆಂಟ್‌ನಲ್ಲಿ ತಡರಾತ್ರಿ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ಅಸ್ಸೋಂ ಮೂಲದ ಯುವಕನೊಬ್ಬನನ್ನು ಪಾಂಡೇಶ್ವರ ಅಗ್ನಿಶಾಮಕ ಠಾಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಅಸ್ಸೋಂನ ಕೇಶವ್ (33) ಎಂಬಾತ ರಕ್ಷಣೆಗೊಳಗಾದ ಯುವಕ.

ಘಟನೆಯ ವಿವರ: ಸೋಮವಾರ ನಸುಕಿನ ಜಾವ ಸುಮಾರು 2 ಗಂಟೆಯ ವೇಳೆಗೆ ಮಿಜಾರ್ ಅಪಾರ್ಟ್‌ಮೆಂಟ್‌ನ ಗ್ರೌಂಡ್ ಫ್ಲೋರ್‌ನಲ್ಲಿ ಲಿಫ್ಟ್ ತಾಂತ್ರಿಕ ದೋಷದಿಂದ ಏಕಾಏಕಿ ಸ್ಥಗಿತಗೊಂಡು ಕೇಶವ್ ಒಳಗೆ ಸಿಲುಕಿಕೊಂಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಪಾಂಡೇಶ್ವರ ಅಗ್ನಿಶಾಮಕ ಠಾಣಾ ಸಿಬ್ಬಂದಿ ತುರ್ತಾಗಿ ಸ್ಥಳಕ್ಕೆ ಧಾವಿಸಿದರು. ಹಳೆಯ ಮಾದರಿಯ ಲಿಫ್ಟ್​​ ಆಗಿದ್ದರಿಂದ ಕೀ ಮೂಲಕ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ತಕ್ಷಣವೇ ಹೈಡ್ರಾಲಿಕ್ ಸ್ಪ್ರೆಡರ್ (Hydraulic Spreader) ಉಪಕರಣವನ್ನು ಬಳಸಿ ಲಿಫ್ಟ್‌ನ ಬಾಗಿಲನ್ನು ತೆರೆದು, ಒಳಗೆ ಸಿಲುಕಿದ್ದ ಯುವಕನನ್ನು ಯಾವುದೇ ಅಪಾಯವಿಲ್ಲದೆ ರಕ್ಷಣೆ ಮಾಡಲಾಯಿತು.

ಲಿಫ್ಟ್​ನಿಂದ ಯುವಕನ ರಕ್ಷಣಾಕಾರ್ಯ. (ETV Bharat)

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ (ASO) ಹರೀಶ್ಚಂದ್ರ, ಲೀಡಿಂಗ್ ಫೈರ್‌ಮ್ಯಾನ್ (LF) ಚಂದ್ರ, ಚಾಲಕ ಕಿರಣ್ ಹಾಗೂ ಸಿಬ್ಬಂದಿಗಳಾದ ರಮೇಶ್ ಮತ್ತು ಲಾಲ್ ಅಹಮದ್ ಭಾಗವಹಿಸಿದ್ದರು.

ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಪ್ರವೀಣ್ ಕೆ.ಎನ್ ಅವರು, " ಶ್ರೀನಿವಾಸ ಕಾಲೇಜು ಎದುರಿನ ರೈಲ್ವೆ ಟ್ರ್ಯಾಕ್ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ರಾತ್ರಿ ಸುಮಾರು 2 ಗಂಟೆಗೆ ಲಿಫ್ಟ್ ಜಾಮ್ ಆಗಿರುವ ಬಗ್ಗೆ ಕರೆ ಬಂದಿತ್ತು. ಲಿಫ್ಟ್ ಹಳೆಯದಾಗಿದ್ದರಿಂದ ಕೀ ಮೂಲಕ ತೆರೆಯಲು ಸಾಧ್ಯವಾಗಲಿಲ್ಲ. ತಕ್ಷಣ ನಮ್ಮಲ್ಲಿದ್ದ ಹೈಡ್ರಾಲಿಕ್ ಸ್ಪ್ರೆಡರ್ ಬಳಸಿ ಲಿಫ್ಟ್ ಬಾಗಿಲು ತೆರೆದು ಗ್ರೌಂಡ್ ಫ್ಲೋರ್‌ನಲ್ಲಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಹೊರತರಲಾಯಿತು" ಎಂದು ತಿಳಿಸಿದರು.

ಇನ್ನು ಇತ್ತೀಚೆಗೆ ಮಂಗಳೂರು ನಗರದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಎದುರು ಭಾಗದಲ್ಲಿರುವ ಮೋತಿಶ್ಯಾಮ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ವೊಂದರಲ್ಲಿ ಒಳಭಾಗದಿಂದ ಲಾಕ್ ಆಗಿ, ಅಸ್ವಸ್ಥಗೊಂಡು, ವಿವಸ್ತ್ರವಾಗಿ ನೆಲದ ಮೇಲೆ ಬಿದ್ದಿದ್ದ 75 ವರ್ಷದ ವೃದ್ಧರೊಬ್ಬರನ್ನು ಅಗ್ನಿಶಾಮಕ ಠಾಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ರಕ್ಷಿಸಿದ್ದರು. ನಾಲ್ವರು ಅಗ್ನಿಶಾಮಕ ಸಿಬ್ಬಂದಿಯ ತಂಡವು ಏಣಿ ಬಳಸಿ ಹಿಂಭಾಗದಿಂದ ಮನೆಯೊಳಗೆ ಪ್ರವೇಶಿಸಲು ಯತ್ನಿಸಿ, ಬಳಿಕ ಮನೆಯ ಮುಂಭಾಗದ ಮುಖ್ಯ ಬಾಗಿಲಿನ ಲಾಕ್ ಅನ್ನು ಒಡೆದು ಒಳನುಗ್ಗಿ ಅಸ್ವಸ್ಥಗೊಂಡಿದ್ದ ವೃದ್ಧನನ್ನು ರಕ್ಷಿಸಿ, 108 ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದರು.

ಇದನ್ನೂ ಓದಿ: ಮಂಗಳೂರು: 2 ದಿನದಿಂದ ಅಸ್ವಸ್ಥಗೊಂಡು ಮನೆಯಲ್ಲೇ ಸಿಲುಕಿದ್ದ 75 ವರ್ಷದ ವ್ಯಕ್ತಿಯ ರಕ್ಷಣೆ