ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ
ಆಕ್ಸಿಜನ್ ಸಿಲಿಂಡರ್ ಸ್ಫೋಟದ ಪರಿಣಾಮ ಆಪರೇಷನ್ ಥಿಯೇಟರ್ ಸುತ್ತಮುತ್ತಲಿನ ಇತರೆ ಕೊಠಡಿಗಳು ಕೂಡ ಹಾಳಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ.

Published : June 30, 2026 at 10:46 AM IST
ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ. ಏಕಾಏಕಿ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿದ್ದು, ಆಪರೇಷನ್ ಥಿಯೇಟರ್ನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವೈದ್ಯಕೀಯ ಸಲಕರಣೆಗಳು ಸುಟ್ಟು ಕರಕಲಾಗಿವೆ.
ಆಪರೇಷನ್ ಥಿಯೇಟರ್ ಸುತ್ತಮುತ್ತಲಿನ ಇತರೆ ಕೊಠಡಿಗಳು ಕೂಡ ಹಾಳಾಗಿವೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅರೋಗ್ಯ ಇಲಾಖೆ ಸಿಬ್ಬಂದಿ ಹೊರ ಓಡಿ ಬಂದಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಆತಂಕ ವ್ಯಕ್ತಪಡಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ: ಘಟನೆ ನಡೆದಾಗ ಏಳೆಂಟು ಜನ ಸಿಬ್ಬಂದಿ ಮಾತ್ರ ಇದ್ದೆವು. ಏಕಾಏಕಿ ಸ್ಪಾರ್ಕ್ ಕಾಣಿಸಿಕೊಂಡಿತು. ಕೂಡಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಡವು. ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ಕೂಡ ನೀಡಿದೆವು. ಅದೃಷ್ಟವಶಾತ್ ಯಾವುದೇ ರೋಗಿ ಆಪರೇಷನ್ ಥಿಯೇಟರ್ನಲ್ಲಿ ಇರಲಿಲ್ಲ. ಹಾಗಾಗಿ ಅವಘಡವೊಂದು ತಪ್ಪಿದೆ. ಕೂಡಲೇ ನಾವು ಹೊರಬಂದೆವು. ನಿಜಕ್ಕೂ ಮರುಜೀವ ಪಡೆಯುವಂತಾಗಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ಡಿಎಸ್ ಡಾ. ನಾಗೇಂದ್ರಪ್ಪ ಮಾತನಾಡಿ "ಇಂದು ಬೆಳಗ್ಗೆ 8:30ಕ್ಕೆ ಆಪರೇಷನ್ಗೆ ತಯಾರಿ ಮಾಡಿಕೊಳ್ಳುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಆಪರೇಷನ್ ಥಿಯೇಟರ್ನಲ್ಲಿರುವ ವರ್ಕ್ ಸ್ಟೇಷನ್ಗೆ ಪುಟ್ಟ ಕಿಡಿ ಹೊತ್ತಿಕೊಂಡು ಈ ಅಗ್ನಿ ಅವಘಡ ನಡೆದಿದೆ. ತಕ್ಷಣ ಮಾಹಿತಿ ಗೊತ್ತಾಗಿ ಬಹುದೊಡ್ಡ ಅನಾಹುತ ತಪ್ಪಿಸಲಾಗಿದೆ. ಇಎನ್ಟಿ ಆಪರೇಷನ್ ಘಟಕ ಇದಾಗಿತ್ತು. ಕಿವಿ, ಮೂಗು, ಗಂಟಲು ಸಂಬಂಧಿಸಿದ ಆಪರೇಷನ್ಗಳನ್ನು ಇಲ್ಲಿ ನಡೆಸಲಾಗುತ್ತಿದೆ. ಘಟನೆಗೆ ಕಾರಣ ಏನಿರಬಹುದು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತನಿಖೆ ಬಳಿಕ ಕಾರಣ ತಿಳಿಯಲಿದೆ. ಘಟನೆಯಿಂದ ಆಪರೇಷನ್ ಥಿಯೇಟರ್ನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವೈದ್ಯಕೀಯ ಸಲಕರಣೆಗಳು ಸುಟ್ಟು ಕರಕಲಾಗಿವೆ. ಎಷ್ಟು ಲಾಸ್ ಆಗಿದೆ ಅನ್ನೋದನ್ನು ನೋಡಬೇಕಾಗಿದೆ. ಆರೇಳು ಜನ ಅಲ್ಲಿದ್ದರು. ಯಾರಿಗೂ ಏನೂ ಆಗಿಲ್ಲ. ಆಕ್ಸಿಜನ್ ಹಾಗೂ ನೈಟ್ರೊಜನ್ಗಳಿರುವ ಕಾರಣ ಬೆಂಕಿ ಹೊತ್ತಿಕೊಂಡಿರಬಹುದು. ನೋಡೊಣ ನಮ್ಮ ಇಂಜಿನಿಯರ್ಗಳು ತನಿಖೆ ಮಾಡಲಿದ್ದಾರೆ" ಎಂದು ತಿಳಿಸಿದರು.

ಅರವಳಿಕೆ ಮದ್ದು ನೀಡಿದ್ರೆ ಸಂಭವಿಸುತ್ತಿತ್ತು ಅನಾಹುತ! ಇಎನ್ಟಿಸಿ ಆಪರೇಷನ್ ವಿಭಾಗದ ಅರಿವಳಿಕೆ ತಜ್ಞೆ ಡಾ. ಶಿಲ್ಪಾಶ್ರೀ ಮಾತನಾಡಿ "9 ಗಂಟೆಗೆ ಆಪರೇಷನ್ ಆರಂಭಿಸಲಾಗುತ್ತದೆ. ಆದರೆ, 8:45ಕ್ಕೆ ಆಪರೇಷನ್ ಥಿಯೇಟರ್ಗೆ ಆಗಮಿಸಿ ಮಿಷನ್ ಸೇರಿ ಎಲ್ಲ ಉಪಕರಣಗಳು ಸರಿ ಇರುವ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಆಕ್ಸಿಜನ್ ಪರಿಶೀಲನೆ ಮಾಡುವ ವೇಳೆ ಅಲ್ಲಿ ಬೆಂಕಿ ಅವಘಡ ಆಗಿತ್ತು. ಬೆಂಕಿ ಕಂಡು ವೈದ್ಯರು ಓಡಿ ಹೊರ ಬಂದಿದ್ದಾರೆ. ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಎರಡು ಆಕ್ಸಿಜನ್ ಸಿಲಿಂಡರ್ ಸ್ಫೋಟ ಆಗಿದೆ. ಬೆಂಕಿ ಹೊತ್ತಿಕೊಂಡ ತಕ್ಷಣ ನಮ್ಮ ಸಿಬ್ಬಂದಿ ಹೊರಹೋಗಿ ಪ್ರಾಣ ಉಳಿಸಿಕೊಂಡಿದ್ದು ದೊಡ್ಡ ವಿಚಾರ. ಯಾವುದೇ ಪ್ರಾಣಹಾನಿಯಾಗಿಲ್ಲ. ರೋಗಿಗಳಿಗೆ ಅರಿವಳಿಕೆ ಮದ್ದು ನೀಡಿದ್ದ ಭಾರಿ ಅನಾಹುತ ಸಂಭವಿಸುತ್ತಿತ್ತು. ಸದ್ಯ ಆಪರೇಷನ್ ಥಿಯೇಟರ್ ಬಳಿ ಒಂದು ಸಿದ್ಧತೆ ಮಾಡಿಕೊಳ್ಳುವ ಕೋಣೆ ಇರಲಿದ್ದು, ಅಲ್ಲಿ ರೋಗಿಗಳನ್ನು ತಯಾರು ಮಾಡುತ್ತಿದ್ದೆವು. ಆಪರೇಷನ್ ಟೇಬಲ್ಗಳಿಗೆ ರೋಗಿಗಳು ಬಂದಿರಲಿಲ್ಲ. ಹಾಗಾಗಿ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದೆ" ಎಂದು ತಿಳಿಸಿದರು.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಘಟನೆಗೆ ನಿಖರವಾದ ಕಾರಣಗಳ ಕುರಿತು ರಾಜ್ಯಮಟ್ಟದ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ ರಾಜ್ಯಮಟ್ಟದ ಉನ್ನತ ಅಧಿಕಾರಿಗಳ ತನಿಖಾ ತಂಡ ರಚಿಸಿ, ಕೂಲಂಕುಶವಾಗಿ ತನಿಖೆ ನಡೆಸಲು ಆದೇಶಿಸಿರುತ್ತಾರೆ. ಜೊತೆಗೆ, ಸ್ಥಳೀಯ ಮಟ್ಟದಲ್ಲಿಯೂ ಸಹ ಜಿಲ್ಲಾಧಿಕಾರಿಗಳ (DC) ನೇತೃತ್ವದಲ್ಲಿ ಪ್ರತ್ಯೇಕ ತನಿಖೆ ನಡೆಯಲಿದ್ದು, ಈ ಎರಡೂ ವರದಿಗಳು ಬಂದ ನಂತರ ಇಲಾಖೆಯು ಪರಿಶೀಲಿಸಿ ನಿಯಮಾನುಸಾರ ಕ್ರಮವಹಿಸಲಾಗುವುದು - ಆರೋಗ್ಯ ಸಚಿವ ಯು.ಟಿ.ಖಾದರ್
ಇದನ್ನೂ ಓದಿ: ಮೈಸೂರು: ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಬೆಂಕಿ ಅವಘಡ; ಇಬ್ಬರು ಸಾವು, 6 ಮಂದಿಗೆ ಗಂಭೀರ ಗಾಯ

