ಅಂಗನವಾಡಿಯಲ್ಲಿ ಕುಟುಂಬಸ್ಥರಿಗೆ ನೌಕರಿ ಕೊಟ್ಟಿಲ್ಲವೆಂದು ಕಟ್ಟಡಕ್ಕೆ ಬೀಗ ಜಡಿದ ಮಾಲೀಕ
ಅಂಗನವಾಡಿಯಲ್ಲಿ ತಮ್ಮ ಕುಟುಂಬದವರಿಗೆ ಕೆಲಸ ಕೊಟ್ಟಿಲ್ಲ ಎಂದು ಜಾಗದ ಮಾಲೀಕ ಕಟ್ಟಡಕ್ಕೆ ಬೀಗ ಹಾಕಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.

Published : January 8, 2026 at 3:59 PM IST
|Updated : January 8, 2026 at 4:34 PM IST
ಚಿಕ್ಕೋಡಿ(ಬೆಳಗಾವಿ): ಅಂಗನವಾಡಿಯಲ್ಲಿ ತಮ್ಮ ಕುಟುಂಬಸ್ಥರಿಗೆ ಕೆಲಸ ನೀಡದ ಕೋಪದಲ್ಲಿ ಜಾಗದ ಮಾಲೀಕ ಕಟ್ಟಡಕ್ಕೆ ಬೀಗ ಹಾಕಿರುವ ಘಟನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಜಿಲ್ಲೆಯಲ್ಲಿ ನಡೆದಿದೆ.
ರಾಯಭಾಗ ತಾಲೂಕಿನ ನಂದಿಕುರಳಿ ಗ್ರಾಮದ ವಂಜೇರಿ ತೋಟದ ಅಂಗನವಾಡಿ ಕೇಂದ್ರಕ್ಕೆ ಕಳೆದ ನಾಲ್ಕು ದಿನಗಳಿಂದ ಬಾಬುರಾವ್ ವಂಜೇರಿ ಎಂಬವರು ಬೀಗ ಹಾಕಿದ್ದಾರೆ. ಇದರಿಂದಾಗಿ ಮಕ್ಕಳು ಅಂಗನವಾಡಿಯ ಆವರಣದಲ್ಲಿಯೇ ಕುಳಿತು ಆಟವಾಡುತ್ತಿದ್ದಾರೆ.
"ಕಟ್ಟಡ ಕಟ್ಟಿ 20ರಿಂದ 22 ವರ್ಷ ಆಯ್ತು. 2000ನೇ ಇಸವಿಯಲ್ಲಿ ಈ ಜಾಗ ಕೊಟ್ಟಿದ್ದೇವೆ. ಅಂದಿನ ಅಧಿಕಾರಿಗಳು ಸ್ಥಳ ಪಡೆಯುವಾಗ ನಿಮ್ಮ ಕುಟುಂಬಕ್ಕೆ ಈ ಶಾಲೆಯಲ್ಲಿ ನೌಕರಿ ಕೊಡಲಾಗುವುದು ಎಂದು ಭರವಸೆ ನೀಡಿದ್ದರು. ಇದುವರೆಗೂ ನಮಗೆ ನೌಕರಿ ಕೊಟ್ಟಿಲ್ಲ. ನಮ್ಮ ಬದಲು ಬೇರೆಯವರಿಗೆ ಕೊಟ್ಟಿದ್ದಾರೆ. ಸಹಾಯಕರ ಕೆಲಸ ಬಂದಿತ್ತು. ಆಗ ಡಿಸಿಯವರಿಗೆ ಅರ್ಜಿ ಕೊಟ್ಟಿದ್ದೆವು. ಅಧಿಕಾರಿಗಳಲ್ಲಿ ನೌಕರಿ ಕೇಳಿದರೆ ಅವರು ನಿಮಗೆ ಕೊಡುತ್ತೇವೆ, ಅರ್ಜಿ ಸಲ್ಲಿಸಿ ಎಂದು ಹೇಳುತ್ತಾರೆ. ಅಧಿಕಾರಿಗಳು ಬಂದು ನೋಡಿಕೊಂಡೂ ಹೋಗಿದ್ದಾರೆ. ಸಿಡಿಪಿ ಮೇಡಂ ಇಲ್ಲಿಗೆ ಬರುತ್ತೇನೆ ಎಂದು ಹೇಳಿದ್ದಾರೆ. ಇದುವರೆಗೂ ಬಂದಿಲ್ಲ. ನಮಗೊಂದು ನೌಕರಿ ಕೊಟ್ಟರೆ ನಾವು ಬಾಗಿಲು ತೆಗೆಯುತ್ತೇವೆ" ಎಂದು ಶಾಲೆಗೆ ಸ್ಥಳ ಕೊಟ್ಟಿರುವ ಬಾಬುರಾವ್ ವಂಜೇರಿ ಹೇಳಿದರು.
ಅಂಗನವಾಡಿ ಶಿಕ್ಷಕಿ ಮಾಲತಿ ಮಠಪತಿ ಅವರು ಮಾತನಾಡಿ, "ಈ ಅಂಗನವಾಡಿಯಲ್ಲಿ ವಂಜೇರಿ ಅವರಿಗೆ ಹೆಲ್ಪರ್ ಕೆಲಸ ಬೇಕಾಗಿದೆ. ಅವರ ಜಮೀನಿನಲ್ಲಿಯೇ ಅಂಗನವಾಡಿ ಇರುವುದರಿಂದ ಬೀಗ ಹಾಕಿದ್ದಾರೆ. ಈಗ ನಾವು ಎಲ್ಲಿಗೆ ಹೋಗುವುದು?. ನಮ್ಮ ಮಕ್ಕಳು ನಾಲ್ಕು ದಿನದಿಂದ ಹೊರಗೆ ಕುಳಿತಿದ್ದಾರೆ. ಸೂಪರ್‌ವೈಸರ್ ಇಲ್ಲಿಗೆ ಬಂದಿದ್ದರು. ಆಗ ಅವರು ನನಗೆ ಆಫೀಸ್ಗೆ ಬರುವಂತೆ ಹೇಳಿದರು. ನಾನು ಹೋಗಿದ್ದೆ. ಆಗ ಅವರು ನಾನು ನಾಳೆ ಬರುತ್ತೇನೆ ಎಂದಿದ್ದರು. ನಿನ್ನೆ ಸಂಜೆಯವರೆಗೆ ಕಾದೆ, ಅವರು ಬರಲೇ ಇಲ್ಲ. ಈ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನಾಳೆ ಬರುತ್ತೇನೆ ಎಂದಿದ್ದಾರೆ. ಸಿಡಿಪಿ ಮೇಡಂ ಬಂದಿಲ್ಲ. ನಾನು ಓರ್ವ ಅಂಗನವಾಡಿ ಶಿಕ್ಷಕಿ. ಈ ಬಗ್ಗೆ ಏನೂ ಹೇಳಲು ಬರುವುದಿಲ್ಲ" ಎಂದರು.
ರಾಯಭಾಗ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಭಾರತಿ ಕಾಂಬಳೆ ಅವರು ಈಟಿವಿ ಭಾರತದೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ, "ಹಿಂದಿನ ಅಧಿಕಾರಿ ಜೊತೆ ಏನು ಮಾತುಕತೆ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ಹೇಳುವುದು ಲಿಖಿತ ರೂಪದಲ್ಲಿಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ಶಾಲೆ ನಡೆದುಕೊಂಡು ಬಂದಿದೆ. ಬೀಗ ತೆಗೆಯುವಂತೆ ಅವರಿಗೆ ಮನವಿ ಮಾಡಲಾಗಿದೆ. ಅದು ಸಾಧ್ಯವಾಗಲಿಲ್ಲ. ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದಷ್ಟು ಬೇಗನೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು" ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು: ಹೊರಮಾವು ಅಗರದಲ್ಲಿ ಅನಧಿಕೃತ ಕಟ್ಟಡಗಳ ತೆರವಿಗೆ ಆದೇಶ

