ಬರ ಪರಿಹಾರದ ಬಗ್ಗೆ ವರದಿ ಸಲ್ಲಿಸುವುದು ನಮ್ಮ ಕೆಲಸ: ಘೋಷಣೆ ಮಾಡುವುದು ಕೇಂದ್ರಕ್ಕೆ ಬಿಟ್ಟಿದ್ದು: ಸಚಿವ ಪ್ರಿಯಾಂಕ್ ಖರ್ಗೆ
ಬಿತ್ತೆನೆ ಕಾರ್ಯ, ಜಾನುವಾರುಗಳಿಗೆ ಮೇವಿನ ಕೊರತೆ ಸೇರಿದಂತೆ ಎಲ್ಲ ಕಡೆಯಿಂದ ಪೂರ್ಣ ಮಾಹಿತಿ ಪಡೆದುಕೊಂಡು ಕ್ರೋಡಿಕರಿಸಿ ಸಮಗ್ರ ವರದಿಯನ್ನ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Published : July 8, 2026 at 7:13 PM IST
ಬೆಂಗಳೂರು: ಮಳೆ ಕೊರತೆಯಿಂದ ರಾಜ್ಯದಲ್ಲಿ ಬರ ಎದುರಾಗಿದ್ದು, ಕೇಂದ್ರದ ಮಾನದಂಡದ ಅನ್ವಯ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗುವುದು. ವರದಿ ನೀಡುವುದು ನಮ್ಮ ಕೆಲಸವಾಗಿದ್ದು, ಘೋಷಣೆ ಮಾಡುವುದು ಕೇಂದ್ರಕ್ಕೆ ಬಿಟ್ಟಿದ್ದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸದಾಶಿವನಗರದ ನಿವಾಸ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಎಲ್ಲಾ ಜಿಲ್ಲಾ - ತಾಲೂಕು ಕೇಂದ್ರಗಳಿಂದ ಮಾಹಿತಿ ತರಿಸಿಕೊಂಡು ಪರಿಶೀಲಿಸಿ ಬಳಿಕ ಬರ ಘೋಷಣೆ ಬಗ್ಗೆ ನಿರ್ಧರಿಸುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿರುವುದ ಸರಿಯಿದೆ. ಕೇಂದ್ರ ಸರ್ಕಾರ ಮಾನದಂಡ ಪ್ರಕಾರವೇ ವರದಿ ಸಲ್ಲಿಸಬೇಕಿದೆ. ರಾಜ್ಯದ ಕೆಲವೆಡೆ ಬಿತ್ತನೆ ಕಾರ್ಯವಾದರೆ ಇನ್ನು ಕೆಲವೆಡೆ ಆಗಿಲ್ಲ. ಇದಕ್ಕೆ ಹವಾಮಾನದಲ್ಲಿ ಏರುಪೇರು ಹಾಗೂ ತೇವಾಂಶದ ಕೊರತೆ ಕಾರಣವಾಗಿರಬಹುದು. ಬಿತ್ತೆನೆ ಕಾರ್ಯ, ಜಾನುವಾರುಗಳಿಗೆ ಮೇವಿನ ಕೊರತೆ ಸೇರಿದಂತೆ ಎಲ್ಲ ಕಡೆಯಿಂದ ಪೂರ್ಣ ಮಾಹಿತಿ ಪಡೆದುಕೊಂಡು ಕ್ರೋಡಿಕರಿಸಿ ಸಮಗ್ರ ವರದಿಯನ್ನ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದರು.
ಬರ ಸಂಬಂಧ ಇಲಾಖೆಯು ಆಂತರಿಕವಾಗಿ ಮೌಲ್ಯಮಾಪನ ನಡೆಸಿದಾಗ 10 ಸಾವಿರ ಕೋಟಿ ಬರ ಪರಿಹಾರಕ್ಕೆ ಬೇಕಾಗಬಹುದು ಎಂದು ಅಂದಾಜಿಸಿದೆ. ಸದ್ಯ ವರದಿ ಸಲ್ಲಿಸುವುದು ನಮ್ಮ ಜವಾಬ್ದಾರಿ. ಬರ ಘೋಷಣೆ ಮಾಡುವುದು ಕೇಂದ್ರಕ್ಕೆ ಬಿಟ್ಟದ್ದು, ವರದಿ ಸಲ್ಲಿಸಿದ ಕೇಂದ್ರದ ತಂಡವು ರಾಜ್ಯಕ್ಕೆ ಬಂದು ಅಧ್ಯಯನ ನಡೆಸುತ್ತದೆ. ಇದಕ್ಕೂ ಮುನ್ನ ವರದಿ ಸಲ್ಲಿಸುವ ಪ್ರಕ್ರಿಯೆ ಸರಿಯಾಗಿ ಮಾಡಬೇಕಿದೆ ಎಂದರು.
ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆ: ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ-ಜೆಡಿಎಸ್ ನಿಯೋಗ ಕೇಂದ್ರ ಚುನಾವಣಾ ಆಯೋಗಕ್ಕೆ ದೂರಿಗೆ ಪ್ರತಿಕ್ರಿಯಿಸಿದ ಖರ್ಗೆ, ಈ ವಿಚಾರ ಇಟ್ಟುಕೊಂಡು ದೂರು ನೀಡಲು ಮುಂದಾಗಿದ್ದೆ. ದೆಹಲಿಗೆ ತೆರಳಿ ಆಯೋಗದ ಅಧ್ಯಕ್ಷರ ಭೇಟಿಗೆ ಕಾಲಾವಕಾಶ ಕೇಳಿದ್ದರೂ ಕೊಟ್ಟಿರಲಿಲ್ಲ. ಇದೀಗ ಬಿಜೆಪಿ ನೀಡಿದ ದೂರಿಗೆ ಆಯೋಗ ತ್ವರಿತವಾಗಿ ಸ್ಪಂದಿಸಿದೆ. ಈ ಮೂಲಕ ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಿಂದ ಎಸ್ಐಆರ್ ದುರ್ಬಳಕೆಯಾಗುತ್ತಿದೆ ಎಂದು ಮೈತ್ರಿ ಪಕ್ಷಗಳು ದೂರು ನೀಡಿವೆ. ದುರ್ಬಳಕೆ ಹೇಗೆ ಆಗುತ್ತಿದೆ ಸ್ಪಷ್ಟಪಡಿಸಿಲ್ಲ. ಎಸ್ಐಆರ್ ಸಂಬಂಧ ಮತದಾರರ ಹಕ್ಕು ರಕ್ಷಣೆ ಸಂಬಂಧ ಈ ಹಿಂದೆ ಕಾಂಗ್ರೆಸ್ 12 ವಿಚಾರಗಳ ಬಗ್ಗೆ ಆಯೋಗದ ಗಮನಕ್ಕೆ ತಂದಿದ್ದರೂ ಆಯೋಗ ಸ್ಪಂದಿಸಿಲ್ಲ ಎಂದು ದೂರಿದರು.
ಬೆಳಗಾವಿಯಲ್ಲಿ ಆರ್ಎಸ್ಎಸ್ ಕಾರ್ಯಕ್ರಮಕ್ಕೆ ಅನುಮತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ಬೇಕಾಗಿಲ್ಲ. ಬೀದಿಗಿಳಿದರೆ ಅನುಮತಿ ಕಡ್ಡಾಯವಾಗಲಿದೆ. ಮೆರವಣಿಗೆ ಮಾಡಿದರೆ ಪರ್ಮಿಷನ್ಗಾಗಿ ಕೇಳುತ್ತಾರೆ. ಸ್ಥಳೀಯ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದರೆ ಅನುಮತಿ ಕೊಡುತ್ತೇವೆ. ಇಲ್ಲದಿದ್ದರೆ ಮುಂದೂಡಿ ಎಂದು ಹೇಳುತ್ತೇವೆ ಎಂದರು.
ಇದನ್ನು ಓದಿ:
SIR ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲ: ಪರಮೇಶ್ವರ್ ಸ್ಪಷ್ಟನೆ
ಭಾರಿ ಮಳೆಯಿಂದ ಉಕ್ಕಡಗಾತ್ರಿ ತೀರದಲ್ಲಿ ಪ್ರವಾಹ ಪರಿಸ್ಥಿತಿ: ಅಂಗಡಿ, ಜವಳಘಟ್ಟ, ಸ್ನಾನಘಟ್ಟ ಮುಳುಗಡೆ
ವಸತಿ ಶಾಲೆಯಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು; ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರ ಅಕ್ರೋಶ

