ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದೆ ಬರುವವರಿಗೆ ನಮ್ಮ ಸರಕಾರ ಸಹಕಾರ ನೀಡಲಿದೆ: ಸಿಎಂ ಸಿದ್ದರಾಮಯ್ಯ
ಕರ್ನಾಟಕದಲ್ಲಿ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು 2024ರಲ್ಲಿ 5 ವರ್ಷಗಳ ನೀತಿಯನ್ನು ಘೋಷಣೆ ಮಾಡಿ ಜಾರಿಗೆ ತರುವ ಕೆಲಸ ಮಾಡಿದ್ದೇವೆ. ಇದರಲ್ಲಿ ಸರಕಾರ ಅನೇಕ ಸೌಕರ್ಯ, ಬೆಂಬಲ, ಸಹಕಾರ ನೀಡಿದೆ ಎಂದು ಸಿಎಂ ಹೇಳಿದರು.


Published : January 10, 2026 at 10:46 PM IST
ಮಂಗಳೂರು: ಕರಾವಳಿಯಲ್ಲಿ ಬಂಡವಾಳ ಹೂಡಲು ಹಲವರು ಮುಂದೆ ಬಂದಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಯಾರೆಲ್ಲಾ ಮುಂದೆ ಬರುತ್ತಾರೋ ಅವರಿಗೆ ನಮ್ಮ ಸರಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ. ಪ್ರವಾಸೋದ್ಯಮಕ್ಕೆ ನಮ್ಮ ಸರಕಾರ ಬೆಂಬಲ ಕೊಟ್ಟೇ ಕೊಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಮಂಗಳೂರು ಅತ್ತಾವರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಹೆಚ್ಚು ಪೂರಕವಾಗಿರುವ ಜಿಲ್ಲೆಗಳು. ಕರ್ನಾಟಕದಲ್ಲಿ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು 2024ರಲ್ಲಿ 5 ವರ್ಷಗಳ ನೀತಿಯನ್ನು ಘೋಷಣೆ ಮಾಡಿ ಜಾರಿಗೆ ತರುವ ಕೆಲಸ ಮಾಡಿದ್ದೇವೆ. ಇದರಲ್ಲಿ ಸರಕಾರ ಅನೇಕ ಸೌಕರ್ಯ, ಬೆಂಬಲ, ಸಹಕಾರ ನೀಡಿದೆ ಎಂದರು.

ತೆರಿಗೆ ಕಟ್ಟುವಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ: 320ಕಿಮೀ ಉದ್ದದ ಕರಾವಳಿ ಪ್ರದೇಶದಲ್ಲಿ ಈವರೆಗೆ ಪ್ರವಾಸೋದ್ಯಮ ಅಭಿವೃದ್ಧಿ ಆಗಿರಲಿಲ್ಲ. ಯಾವ ಸರಕಾರವೂ ಅಭಿವೃದ್ಧಿ ಮಾಡಲು ಮುಂದೆ ಬಂದಿಲ್ಲ. ಇದೀಗ ಡಿಕೆಶಿ ಹಾಗೂ ಎಚ್.ಕೆ.ಪಾಟೀಲ್ ಅವರ ವಿಶೇಷ ಕಾಳಜಿಯಿಂದ ಅಭಿವೃದ್ಧಿ ಆಗಲಿದೆ. ಶಿಕ್ಷಣ, ಬ್ಯಾಂಕ್ ಆರೋಗ್ಯಕ್ಕೆ ಕರಾವಳಿಯಲ್ಲಿ ವಿಶೇಷ ಆದ್ಯತೆಯಿದೆ. ಇಲ್ಲಿ ರಾಜ್ಯದಲ್ಲಿಯೇ ಅಧಿಕ ಮಂದಿ ಸುಶಿಕ್ಷಿತರು ಇದ್ದಾರೆ. ತೆರಿಗೆ ಕೊಡುವುದರಲ್ಲಿ ಕರಾವಳಿಗರು ಮುಂದಿದ್ದಾರೆ. ತೆರಿಗೆ ಸಂಗ್ರಹದಲ್ಲಿ ದೇಶದಲ್ಲಿಯೇ ಮಹಾರಾಷ್ಟ್ರ ಹೊರತುಪಡಿಸಿ ಕರ್ನಾಟಕ ನಂಬರ್ ಎರಡನೆ ಸ್ಥಾನದಲ್ಲಿದೆ. ಇದರಲ್ಲಿ ರಾಜ್ಯದಲ್ಲಿಯೇ ಬೆಂಗಳೂರು ಬಿಟ್ಟರೆ ಮಂಗಳೂರಿನ ಪಾತ್ರ ಹೆಚ್ಚಿದೆ. ಆದ್ದರಿಂದ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಿದರೆ ಮಹಾರಾಷ್ಟ್ರವನ್ನು ಹಿಂದಕ್ಕಿ ರಾಜ್ಯ ಮುಂದೆ ಹೋಗಲಿದೆ ಎಂದರು.

ಇಲ್ಲೆ ಉದ್ಯಮ ಸ್ಥಾಪಿಸಿ, ಕರಾವಳಿ ಯುವಕರಿಗೆ ಸಿಎಂ ಕರೆ: ವಿಷಾದವೆಂದರೆ ದೇಶ - ವಿದೇಶಿಗರು ಉನ್ನತ ಶಿಕ್ಷಣಕ್ಕೆ ಕರಾವಳಿಗೆ ಬರುತ್ತಾರೆ. ಆದರೆ ಇಲ್ಲಿನ ಸ್ಥಳೀಯ ಯುವಕರು ಕೆಲಸ ಹುಡುಕಿಕೊಂಡು ಬೆಂಗಳೂರು, ವಿದೇಶಕ್ಕೆ ಹೋಗುತ್ತಾರೆ. ಆದ್ದರಿಂದ ಇಲ್ಲೇ ಇರಲು ಪ್ರಯತ್ನ ಅತ್ಯಂತ ಅವಶ್ಯಕ. ಇಲ್ಲೇ ಉದ್ದಿಮೆ ಮಾಡಿದರೆ ಇನ್ನೊಬ್ಬರಿಗೆ ಕೆಲಸ ಕೊಡಲು ಸಾಧ್ಯ. ಇಷ್ಟೆಲ್ಲಾ ಬೆಳವಣಿಗೆ ಆದರೂ ಇಲ್ಲೊಂದು ಫೈವ್ ಸ್ಟಾರ್ ಹೊಟೇಲ್ ಇಲ್ಲ. ಇದೀಗ ಮುಂದೆ ಬಂದಿದ್ದಾರೆ. ಇಲ್ಲಿನ ಸ್ಥಳೀಯರು ಸಾಹಸ ಸ್ವರೂಪಿಗಳು. ದುಬೈ, ಪೂನಾ,ಲಂಡನ್ ಗೆ ಹೋಗಿ ಉದ್ದಿಮೆ ಸ್ಥಾಪನೆ ಮಾಡಿದವರು. ಅಲ್ಲಿ ಮಾಡುವ ಉದ್ದಿಮೆಯನ್ನು ಇಲ್ಲಿಯೇ ಮಾಡಿ ಎಂದರು.

0ಪ್ರವಾಸೋದ್ಯಮ ಬೆಳೆಯಬೇಕಾದರೆ ಕಾನೂನು ಸುವ್ಯವಸ್ಥೆ ಚೆನ್ನಾಗಿರಬೇಕು. ಸದ್ಯ ಈಗ ಶಾಂತ ವಾತಾವರಣ ಇರುವುದು ಅತ್ಯಂತ ಸ್ವಾಗತಾರ್ಹ. ಇದೇ ರೀತಿ ಮುಂದುವರಿಯಬೇಕು. ಕಾನೂನು ಕೈಗೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಸಮಾಜ ಒಡೆಯುವ ಕೆಲಸ ಮಾಡಬಾರದು. ದೇಶಭಕ್ತಿ ಸಮಾಜ ಒಡೆಯುವುದರಿಂದ, ಇನ್ನೊಂದು ಧರ್ಮದವರಿಗೆ ತೊಂದರೆ ಕೊಡುವುದರಿಂದ ಬರುವುದಿಲ್ಲ. ಎಲ್ಲಾ ಧರ್ಮಗಳು ದ್ವೇಷ ಬಿತ್ತುವ ಕೆಲಸ ಮಾಡಲ್ಲ ಎಂದರು.

ಇವುಗಳನ್ನು ಓದಿ: ಬಂಡವಾಳ ಆಕರ್ಷಣೆ, ಉದ್ಯೋಗ ಸೃಷ್ಟಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ: ಡಿ ಕೆ ಶಿವಕುಮಾರ್
ಡಿಕೆಶಿ ನೇತೃತ್ವದಲ್ಲಿ ಮಹಾರಾಷ್ಟ್ರ ಸಿಎಂ ಭೇಟಿ ಮಾಡಲಿದೆ ಕರ್ನಾಟಕ ನಿಯೋಗ: ಶಾಸಕ ಲಕ್ಷ್ಮಣ್ ಸವದಿ
ಮೈಸೂರು: 15 ವರ್ಷಗಳಿಂದ ವಾಸವಾಗಿದ್ದೀವಿ ಸೂರು ಕೊಡಿ, ಅಲೆಮಾರಿಗಳ ಅಳಲು

