ETV Bharat / state

ನಮ್ಮ ತಂದೆಯವರು ಹಾಗೂ ನಾನು ಈ ಆರೋಪದಿಂದ ಮುಕ್ತರಾಗುತ್ತೇವೆ: ಚಿದಾನಂದ ಸವದಿ

ಶಾಸಕ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಅವರು ತಮ್ಮ ವಿರುದ್ದ ದಾಖಲಾಗಿರುವ ಎಫ್​ಐಆರ್ ಕುರಿತು ಪ್ರತಿಕ್ರಿಯಿಸಿದ್ದಾರೆ.

chidananda-savadi
ಶಾಸಕ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ (ETV Bharat)
author img

By ETV Bharat Karnataka Team

Published : January 5, 2026 at 6:32 PM IST

2 Min Read
Choose ETV Bharat

ಚಿಕ್ಕೋಡಿ (ಬೆಳಗಾವಿ) : ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಷಡ್ಯಂತ್ರದ ವಿರುದ್ಧ ಅಥಣಿ ಮತಕ್ಷೇತ್ರದ ರೈತಬಾಂಧವರು ಹಾಗೂ ತಾಲೂಕಿನ ಅಭಿಮಾನಿಗಳು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಅವರೆಲ್ಲರಿಗೂ ನಮ್ಮ ಕುಟುಂಬದ ಪರವಾಗಿ ತುಂಬು ಹೃದಯದ ಧನ್ಯವಾದ ಸಲ್ಲಿಸಲು ಬಯಸುತ್ತೇನೆ ಎಂದು ಶಾಸಕ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಅವರು ಹೇಳಿದ್ದಾರೆ.

ಜಿಲ್ಲೆಯ ಅಥಣಿ ಪಟ್ಟಣದ ಅವರ ನಿವಾಸದಲ್ಲಿ ಮಾತನಾಡಿದರು. ನಿಮ್ಮ ತಂದೆಯ ವಿರುದ್ಧ ಹಾಗೂ ನಿಮ್ಮ ವಿರುದ್ಧ ಎಫ್​ಐಆರ್ ದಾಖಲಾಗಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಸುದ್ದಿ ಬಂತು. ಈ ಬಗ್ಗೆ ನನಗೆ ಎಫ್​ಐಆರ್ ಕಾಪಿಯಾಗಲಿ, ನೋಟಿಸ್ ಆಗಲಿ ಬಂದಿಲ್ಲ. ಇವತ್ತು ಅಥವಾ ನಾಳೆ ಬಂದರೆ ನಾವು ಕಾನೂನಿಗೆ ಗೌರವ ಕೊಡುತ್ತೇವೆ. ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ನಡೆದಿರುವ ಘಟನೆಯ ಹಿಂದೆ ಯಾರಿದ್ದಾರೆ. ಯಾರು ಅವರಿಗೆ ಪ್ರಚೋದನೆ ನೀಡಿ ಅವರನ್ನು ನಮ್ಮ ಮನೆಗೆ ಕಳುಹಿಸಿದ್ದರು. ಘಟನೆ ಆಗುವುದಕ್ಕೆ ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ತನಿಖೆಯಲ್ಲಿ ಬಹಿರಂಗವಾಗಬೇಕು. ನಂತರ ನಿಮ್ಮೆಲ್ಲರನ್ನು ಕರೆದು ಅವರ ಹೆಸರನ್ನು ಪ್ರಸ್ತಾಪ ಮಾಡುವಂತಹ ಕೆಲಸ ಮಾಡುತ್ತೇವೆ. ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ನಮ್ಮ ಮೇಲೆ ಆರೋಪ ಬಂದಿದೆ. ಖಂಡಿತಾ ನನಗೆ ವಿಶ್ವಾಸವಿದೆ. ನಮ್ಮ ತಂದೆಯವರು ಹಾಗೂ ನಾನು ಈ ಆರೋಪದಿಂದ ಮುಕ್ತರಾಗುತ್ತೇವೆ ಎಂದಿದ್ದಾರೆ.

ಶಾಸಕ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಎಫ್​ಐಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ (ETV Bharat)

25 ರಿಂದ 30 ವರ್ಷದ ರಾಜಕೀಯ ಇತಿಹಾಸದಲ್ಲಿ ಈ ತರದ ಆರೋಪ ನಮ್ಮ ಮೇಲೆ ಬಂದಿರಲಿಲ್ಲ. ಷಡ್ಯಂತ್ರ ರೂಪಿಸಿ ನಮ್ಮ ವಿರುದ್ದ ರಾಜಕೀಯ ಆರೋಪ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ನಿಂಗರಾಜ ಕರೆಣ್ಣವರನ್ನು ಬೆಳೆಸಿದ್ದು ನೀವೇ, ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದೂ ನೀವೇ. ಹೀಗಿದ್ದರೂ ಈ ಘಟನೆ ಏಕೆ ನಡೆಯಿತು? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ನಿಂಗರಾಜ ಕರೆಣ್ಣವರ್ ಮೂಲತಃ ಶಿರಹಟ್ಟಿ ಮೂಲದವರು. ಅವರಿಂದ ಒಂದು ರೂಪಾಯಿ ಪಡೆಯದೇ ನಮ್ಮ ತಂದೆಯವರು ಡಿಸಿಸಿ ಬ್ಯಾಂಕ್​ನಲ್ಲಿ ಕೆಲಸ ಕೊಡಿಸಿದ್ದರು. ಅವರು ರಾಯಭಾಗದಲ್ಲಿಯೂ ಕೆಲಸ ಮಾಡುವುದು ಗೊತ್ತಿದೆ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಅಥಣಿಯಲ್ಲಿ ಏನು ಕೆಲಸ?. ಏಕೆಂದರೆ, ಅವರು ಶನಿವಾರದಂದು ರಜೆ ಹಾಕಿರಲಿಲ್ಲ ಎಂದಿದ್ದಾರೆ.

ಅಥಣಿ ಡಿಸಿಸಿ ಬ್ಯಾಂಕ್​​ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಬೆಳಗ್ಗೆ 11:30ರ ಸಮಯದಲ್ಲಿ ಕೆಲವೊಂದು ಸಮಸ್ಯೆಗಳನ್ನು ನಮ್ಮ ತಂದೆಯ ಗಮನಕ್ಕೆ ತರುವುದಕ್ಕೆ ನಮ್ಮ ಮನೆಗೆ ಬಂದಿದ್ದರು. ಇವನನ್ನು ನಾವು ಕರೆಸಿರಲಿಲ್ಲ. ನಾವು ಬಾ ಎಂದೂ ಹೇಳಿರಲಿಲ್ಲ. ಸ್ವಯಂ ಪ್ರೇರಿತವಾಗಿ ತಾನೇ ಬಂದ, ನಂತರ ನಮ್ಮ ತಂದೆಗೆ ಏಕವಚನದಲ್ಲಿ ಮಾತನಾಡಿದ. ಆಗ ನಮ್ಮ ಕಾರ್ಯಕರ್ತರು ಕೋಪಗೊಂಡು ಅವನನ್ನು ನೂಕಾಡಿದ್ದಾರೆ. ಆಗ ಕೆಳಗಡೆ ಕಾಲು ಜಾರಿ ಬಿದ್ದಿದ್ದಾರೆ. ಆಗ ಅವರ ತಲೆಗೆ ಟೇಬಲ್ ತಾಗಿದ್ದರಿಂದಾಗಿ ಗಾಯವಾಗಿದೆ. ಆದರೆ, ಇವತ್ತು ರಾಜಕೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳುವಂತಹ ಕೆಲಸ ಮಾಡುತ್ತಿದ್ದಾರೆ. ನಮಗೂ ರಾಜಕಾರಣ ಮಾಡುವುದು ಗೊತ್ತಿದೆ ಎಂದು ಹೇಳಿದ್ದಾರೆ.

ಅಥಣಿಯನ್ನು ಬಿಹಾರ ಮಾಡಲು ಹೊರಟಿದ್ದಾರೆ ಎಂಬ ಮಹೇಶ್ ಕುಮಟಳ್ಳಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಅಥಣಿಯಲ್ಲಿ ಅಬಕಾರಿ ಅಧಿಕಾರಿ ಲಕ್ಷ್ಮಣ್ ಐಗಳಿ ಎಂಬುವವರ ಕೊಲೆಯಾಯಿತು. ಅವರ ಕೊಲೆ, ಸಾವು ಹೇಗಾಯ್ತು ಎಂಬ ಇತಿಹಾಸವನ್ನು ನಮ್ಮಂತಹ ಯುವಕರಿಗೆ ತಿಳಿಸಿಕೊಡುವ ಕೆಲಸವನ್ನು ಕುಮಟಳ್ಳಿಯವರು ಮಾಡುತ್ತಾರಾ?. ಗೊತ್ತಿಲ್ಲದಿದ್ದರೆ ಗುರುಗಳ ಬಳಿ ತಿಳಿದುಕೊಂಡು ಬಂದು ಮಾತನಾಡಲಿ ಎಂದಿದ್ದಾರೆ.

ಅಥಣಿ ಡಿಸಿಸಿ ಬ್ಯಾಂಕ್ ನೌಕರ ಶಂಕರ್ ನಂದೆಶ್ವರ ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಮಾವ ಡಿಸಿಸಿ ಬ್ಯಾಂಕ್ ನೌಕರ. ಅವರು ಎಲ್ಲಿಯೇ ಆದರೂ ಕೆಲಸ ಮಾಡಬೇಕು. ಇದೊಂದು ರಾಜಕೀಯ ಷಡ್ಯಂತ್ರ. ಯಾರೂ ಕೂಡಾ ಎದೆಗುಂದುವ ಕೆಲಸ ಮಾಡಬಾರದು. ನಿಮ್ಮೊಂದಿಗೆ ನಾವು ಇರುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷನಿಗೆ ಹಲ್ಲೆ ಆರೋಪ: ಶಾಸಕ ಲಕ್ಷ್ಮಣ್ ಸವದಿ, ಪುತ್ರನ ವಿರುದ್ಧ FIR