ಬೆಳಗಾವಿ: ಜಾಗದ ಮಾಲೀಕನ ಮನವೊಲಿಸಿ ಅಂಗನವಾಡಿ ಕಟ್ಟಡದ ಬೀಗ ತೆಗಿಸಿದ ಅಧಿಕಾರಿಗಳು
ಬೆಳಗಾವಿಯ ರಾಯಭಾಗ ತಾಲೂಕಿನ ನಂದಿಕುರಳಿ ಗ್ರಾಮದ ಅಂಗನವಾಡಿ ಕಟ್ಟಡಕ್ಕೆ ಹಾಕಿದ್ದ ಬೀಗವನ್ನು ಮಾಲೀಕ ತೆಗೆದಿದ್ದಾರೆ. ಮಕ್ಕಳು ಆಟ, ಪಾಠದಲ್ಲಿ ನಿರತರಾಗಿದ್ದಾರೆ.

Published : January 9, 2026 at 2:32 PM IST
ಚಿಕ್ಕೋಡಿ(ಬೆಳಗಾವಿ): ಅಂಗನವಾಡಿಯಲ್ಲಿ ತಮ್ಮ ಕುಟುಂಬಸ್ಥರಿಗೆ ಕೆಲಸ ನೀಡದ ಕೋಪದಲ್ಲಿ ಜಾಗದ ಮಾಲೀಕ ಕಟ್ಟಡಕ್ಕೆ ಬೀಗ ಹಾಕಿದ ಘಟನೆ ಜಿಲ್ಲೆಯ ರಾಯಭಾಗ ತಾಲೂಕಿನ ನಂದಿಕುರಳಿ ಗ್ರಾಮದಲ್ಲಿ ಈಚೆಗೆ ನಡೆದಿತ್ತು. ಈ ಕುರಿತು ಈಟಿವಿ ಭಾರತ್ 'ಅಂಗನವಾಡಿಯಲ್ಲಿ ಕುಟುಂಬಸ್ಥರಿಗೆ ನೌಕರಿ ಕೊಟ್ಟಿಲ್ಲವೆಂದು ಕಟ್ಟಡಕ್ಕೆ ಬೀಗ ಜಡಿದ ಮಾಲೀಕ' ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಕಟಿಸಿತ್ತು. ಈ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಅಂಗನವಾಡಿ ಬೀಗ ತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂಗನವಾಡಿ ಕಟ್ಟಡ ಕಟ್ಟಿ 20ರಿಂದ 22 ವರ್ಷ ಆಯ್ತು. 2000ನೇ ಇಸವಿಯಲ್ಲಿ ಈ ಜಾಗ ಕೊಟ್ಟಿದ್ದೆವು. ಅಂದಿನ ಅಧಿಕಾರಿಗಳು ಸ್ಥಳ ಪಡೆಯುವಾಗ ನಿಮ್ಮ ಕುಟುಂಬಕ್ಕೆ ಈ ಶಾಲೆಯಲ್ಲಿ ನೌಕರಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಇದುವರೆಗೂ ನಮಗೆ ನೌಕರಿ ಕೊಟ್ಟಿಲ್ಲ. ನಮ್ಮ ಬದಲು ಬೇರೆಯವರಿಗೆ ಕೊಟ್ಟಿದ್ದಾರೆ. ಸಹಾಯಕರ ಕೆಲಸ ಬಂದಿತ್ತು. ಆಗ ಡಿಸಿಯವರಿಗೆ ಅರ್ಜಿ ಕೊಟ್ಟಿದ್ದೆವು. ಅಧಿಕಾರಿಗಳಲ್ಲಿ ನೌಕರಿ ಕೇಳಿದರೆ ಅವರು ನಿಮಗೆ ಕೊಡುತ್ತೇವೆ, ಅರ್ಜಿ ಸಲ್ಲಿಸಿ ಎಂದು ಹೇಳುತ್ತಾರೆ. ಅಧಿಕಾರಿಗಳು ಬಂದು ನೋಡಿಕೊಂಡೂ ಹೋಗಿದ್ದಾರೆ. ಸಿಡಿಪಿ ಮೇಡಂ ಇಲ್ಲಿಗೆ ಬರುತ್ತೇನೆ ಎಂದು ಹೇಳಿದ್ದಾರೆ. ಇದುವರೆಗೂ ಬಂದಿಲ್ಲ. ನಮಗೊಂದು ನೌಕರಿ ಕೊಟ್ಟರೆ ನಾವು ಬಾಗಿಲು ತೆಗೆಯುತ್ತೇವೆ ಎಂದು ಅಂಗನವಾಡಿಗೆ ಸ್ಥಳ ಕೊಟ್ಟಿರುವ ಬಾಬುರಾವ್ ವಂಜೇರಿ ಅವರು ಆಕ್ರೋಶಗೊಂಡು ಕಟ್ಟಡಕ್ಕೆ ಬೀಗ ಹಾಕಿದ್ದರು.
ಹೀಗಾಗಿ, ಶಾಲೆಯ ಪುಟ್ಟ ಮಕ್ಕಳು ಶಾಲೆಯ ಹೊರಗಿನ ಆವರಣದಲ್ಲಿಯೇ ಕುಳಿತುಕೊಂಡು ಆಟ-ಪಾಠ ಮಾಡಿಕೊಂಡು ಹೋಗುತ್ತಿದ್ದರು. ಈ ಕುರಿತು ಈಟಿವಿ ಭಾರತ ವರದಿ ಪ್ರಕಟಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಈ ಸುದ್ದಿ ನೋಡಿ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸಿ ವಂಜೇರಿ ಕುಟುಂಬಸ್ಥರ ಮನವೊಲಿಸಿ ಕಟ್ಟಡಕ್ಕೆ ಹಾಕಿದ್ದ ಬೀಗ ತೆಗೆಸಿದ್ದಾರೆ.
ರಾಯಭಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಭಾರತಿ ಈಟಿವಿ ಭಾರತದ ಜೊತೆ ದೂರವಾಣಿ ಮುಖಾಂತರ ಮಾತನಾಡಿ, "ಇಂದು ಮುಂಜಾನೆ ನಮ್ಮ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ಜೊತೆೆಯಲ್ಲಿ ಶಾಲೆಗೆ ಭೇಟಿ ನೀಡಿದ್ದೆವು. ವಂಜೇರಿ ಕುಟುಂಬಸ್ಥರೊಂದಿಗೆ ಮಾತನಾಡಿ ಅವರನ್ನು ಮನವೊಲಿಸಿ ನಾವು ಬೀಗ ತೆಗೆಸಿದ್ದೇವೆ. ಅವರಿಗೆ ಅಂಗನವಾಡಿಯಲ್ಲಿ ಕೆಲಸ ಬೇಕಾದರೆ ಇಲಾಖೆಯ ಮಾರ್ಗಸೂಚಿ ಪ್ರಕಾರವೇ ನೌಕರಿ ಗಿಟ್ಟಿಸಿಕೊಳ್ಳಬೇಕು. ಈ ಕುರಿತು ಇಲಾಖೆಗೆ ಬಂದು ಮನವಿ ಕೊಡುವಂತೆ ತಿಳಿಸಲಾಗಿದೆ. ಸದ್ಯಕ್ಕೆ ಮಕ್ಕಳು ಶಾಲೆಯಲ್ಲಿ ಆಟದ ಜೊತೆಗೆ ಪಾಠ ಕಲಿಯುತ್ತಿದ್ದಾರೆ" ಎಂದು ಹೇಳಿದರು.
ಇದನ್ನೂ ಓದಿ: ಅಂಗನವಾಡಿಯಲ್ಲಿ ಕುಟುಂಬಸ್ಥರಿಗೆ ನೌಕರಿ ಕೊಟ್ಟಿಲ್ಲವೆಂದು ಕಟ್ಟಡಕ್ಕೆ ಬೀಗ ಜಡಿದ ಮಾಲೀಕ

