ಗಂಗಾವತಿ: 138ಕ್ಕೂ ಹೆಚ್ಚು ರೆಸಾರ್ಟ್ಗಳ ಮೇಲೆ ದಾಳಿ, ಗಂಗಾವತಿಯ 40 ರೆಸಾರ್ಟ್ಗಳಿಗೆ ಬೀಗ
ಕೊಪ್ಪಳ ಜಿಲ್ಲೆಯ 138ಕ್ಕೂ ಅಧಿಕ ರೆಸಾರ್ಟ್ಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ, ಪತ್ತೆಯಾದ ಅನಧಿಕೃತ ರೆಸಾರ್ಟ್ಗಳನ್ನು ಬಂದ್ ಮಾಡಲಾಗಿದೆ.

Published : February 26, 2026 at 9:09 AM IST
ಗಂಗಾವತಿ (ಕೊಪ್ಪಳ): ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ ಅನಧಿಕೃತ ರೆಸಾರ್ಟ್ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಖಡಕ್ ಆದೇಶ ಮಾಡಿದ ಬೆನ್ನಲ್ಲೇ ಅಲರ್ಟ್ ಆದ ಅಧಿಕಾರಿಗಳು ಬುಧವಾರ ಬಸಾಪುರ, ಆನೆಗೊಂದಿ, ಸಣಾಪುರ ಭಾಗದಲ್ಲಿನ ರೆಸಾರ್ಟ್ಗಳ ಮೇಲೆ ದಾಳಿ ಮಾಡಿದ್ದಾರೆ.
ಜೆಸ್ಕಾಂ, ಕಂದಾಯ, ಪಂಚಾಯತ್ ರಾಜ್, ಅಬಕಾರಿ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳ ನೇತೃತ್ವದ ತಂಡಗಳು, ಕೊಪ್ಪಳ ತಾಲೂಕಿನ ಬಸಾಪುರ, ಗಂಗಾವತಿ ತಾಲೂಕಿನ ಆನೆಗೊಂದಿ, ಸಣಾಪುರ ಭಾಗದಲ್ಲಿನ ಅನಧಿಕೃತ ರೆಸಾರ್ಟ್ಗಳ ಮೇಲೆ ದಾಳಿ ಮಾಡಿದ್ದಾರೆ.
ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ಕೆಲವೆಡೆ ಯಾವುದೇ ಇಲಾಖೆಯ ಅನುಮತಿ ಪಡೆಯದೆ, ಕೃಷಿ ಭೂಮಿಯನ್ನು ವಾಣಿಜ್ಯಕರಣಕ್ಕೆ ಪರಿವರ್ತನೆ ಮಾಡದೇ ಅನಧಿಕೃತವಾಗಿ ರೆಸಾರ್ಟ್ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅಧಿಕಾರಿಗಳು, ನಿಯಮ ಉಲ್ಲಂಘಿಸಿದ ರೆಸಾರ್ಟ್ಗಳ ಡೋರ್ ಲಾಕ್ ಮಾಡಿದ್ದಾರೆ.
ಜೆಸ್ಕಾಂ ಇಲಾಖೆಯ ಸಿಬ್ಬಂದಿ ವಿದ್ಯುತ್ ಸಂಪರ್ಕ ಸ್ಥಗಿತ ಮಾಡಿ ಮೀಟರ್ ಕಿತ್ತುಕೊಂಡರೆ, ಪಂಚಾಯಿತಿಯ ವಾಟರ್ಮನ್ಗಳು ನೀರಿನ ಸಂಪರ್ಕ ಕಡಿತ ಮಾಡಿದ್ದಾರೆ. ಕಂದಾಯ ಅಧಿಕಾರಿಗಳು ರೆಸಾರ್ಟ್ಗಳಿಗೆ ಬೀಗ ಜಡಿದಿದ್ದಾರೆ.
98 ಅನಧಿಕೃತ ರೆಸಾರ್ಟ್: ಬಸಾಪುರ ಭಾಗದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಸುಮಾರು 150ಕ್ಕೂ ಹೆಚ್ಚು ರೆಸಾರ್ಟ್ಗಳ ಪೈಕಿ 98ಕ್ಕೂ ಹೆಚ್ಚು ಅನಧಿಕೃತವಾಗಿದ್ದರೆ, ಗಂಗಾವತಿ ತಾಲೂಕಿನ 50ರ ಪೈಕಿ 40 ಅನಧಿಕೃತ ಎಂದು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
40 ರೆಸಾರ್ಟ್ ಬಂದ್: ಗಂಗಾವತಿ ತಾಲೂಕಿನಲ್ಲಿರುವ ಅನಧಿಕೃತ ರೆಸಾರ್ಟ್ಗಳ ಮೇಲೆ ತಹಶೀಲ್ದಾರ್ ವಿಶ್ವನಾಥ ಮುರಡಿ ನೇತೃತ್ವದಲ್ಲಿನ ಸಿಬ್ಬಂದಿ ಸಣಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿ ಆನೆಗೊಂದಿ ಪಂಚಾಯಿತಿಯ ವ್ಯಾಪ್ತಿಯಲ್ಲಿ ದಾಳಿ ಮಾಡಿದ್ದಾರೆ.
ಆನೆಗೊಂದಿ ಭಾಗದಲ್ಲಿರುವ ಒಟ್ಟು 50 ರೆಸಾರ್ಟ್ಗಳ ಪೈಕಿ 40 ಅನಧಿಕೃತ. ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆ ಆನೆಗೊಂದಿ, ಸಣಾಪುರ, ಮಲ್ಲಾಪುರ, ಸಂಗಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿನ 40 ರೆಸಾರ್ಟ್ಗಳಿಗೆ ಬೀಗ ಹಾಕಲಾಗಿದೆ ಎಂದು ದಾಳಿಯ ನೇತೃತ್ವ ವಹಿಸಿದ್ದ ತಾಲೂಕು ಪಂಚಾಯಿತಿ ಇಒ ರಾಮರೆಡ್ಡಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
40ರ ಪೈಕಿ ಆನೆಗೊಂದಿಯಲ್ಲಿ ಹತ್ತು, ಹನುಮನಹಳ್ಳಿಯಲ್ಲಿ ಐದು, ಅಂಜನಹಳ್ಳಿಯಲ್ಲಿ ಮೂರು, ಸಂಗಾಪುರದಲ್ಲಿ ಹತ್ತು, ಚಿಕ್ಕರಾಂಪುರ, ಮಲ್ಲಾಪುರಸೇರಿದಂತೆ ಇತರ ಗ್ರಾಮಗಳಲ್ಲಿ 12 ರೆಸಾರ್ಟ್ಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಉಡುಪಿ: ರೆಸಾರ್ಟ್ನಲ್ಲಿ ಅಕ್ರಮ ವಿದೇಶಿ ವಲಸಿಗರಿಗೆ ಕೆಲಸ ನೀಡಿರುವ ಆರೋಪ: ಪ್ರಕರಣ ದಾಖಲು

