ನ್ಯಾಮತಿ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣ: ವರ್ಷದ ಬಳಿಕ ವಾರಸುದಾರರ ಸಮ್ಮುಖದಲ್ಲಿ ಬ್ಯಾಂಕ್ ತಿಜೋರಿ ಸೇರಿದ ಚಿನ್ನಾಭರಣ
ಇಡೀ ಇಲಾಖೆಗೆ ಸವಾಲಾಗಿದ್ದ ಬ್ಯಾಂಕ್ ದರೋಡೆ ಪ್ರಕರಣವನ್ನು ಭೇದಿಸಿದ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದ ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಅಭಿನಂದಿಸಿ, ಸನ್ಮಾನಿಸಲಾಯಿತು.

Published : October 18, 2025 at 3:53 PM IST
ದಾವಣಗೆರೆ: ಕಳೆದ ವರ್ಷ ನ್ಯಾಮತಿ ಪಟ್ಟಣದ ಎಸ್ಬಿಐ ಬ್ಯಾಂಕ್ ದರೋಡೆಯಲ್ಲಿ ಕಳ್ಳತನವಾಗಿದ್ದ ಚಿನ್ನಾಭರಣ, ಸರಿಯಾಗಿ ಒಂದು ವರ್ಷದ ಬಳಿಕ ದೀಪಾವಳಿ ಸಮಯಕ್ಕೆ ಗ್ರಾಹಕರ ಕೈಸೇರಿದೆ. ಕಳ್ಳರಿಂದ ವಶಪಡಿಸಿಕೊಂಡಿದ್ದ ಸಂಪೂರ್ಣ ಬಂಗಾರವನ್ನು, ಕಾನೂನು ಪ್ರಕ್ರಿಯೆ ಮುಗಿದ ಹಿನ್ನೆಲೆ, ಪೊಲೀಸ್ ಇಲಾಖೆ ಗ್ರಾಹಕರ ಸಮ್ಮುಖದಲ್ಲಿ ಬ್ಯಾಂಕ್ಗೆ ಹಸ್ತಾಂತರ ಮಾಡಿದೆ.
ನ್ಯಾಮತಿ ಸಮೀಪದ ಸುರಹೊನ್ನೆಯ ಶ್ರೀಬನಶಂಕರಿ ಸಮುದಾಯ ಭವನದಲ್ಲಿ ಚಿನ್ನಾಭರಣವನ್ನು ಗ್ರಾಹಕರಿಗೆ ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು. ಇಡೀ ಇಲಾಖೆಗೆ ಸವಾಲಾಗಿದ್ದ ಬ್ಯಾಂಕ್ ದರೋಡೆ ಪ್ರಕರಣವನ್ನು ಭೇದಿಸಿದ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದ ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಅಭಿನಂದಿಸಿ, ಸನ್ಮಾನ ಮಾಡಲಾಯಿತು. ಗ್ರಾಹಕರೆಲ್ಲ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು.
ಪ್ರಕರಣದ ಹಿನ್ನೆಲೆ: ಕಳೆದ ವರ್ಷ ದೀಪಾವಳಿ ಹಬ್ಬಕ್ಕೂ ಮುನ್ನಾದಿನ, ಅ. 28ರಂದು ಸಿನಿಮೀಯ ರೀತಿಯಲ್ಲಿ ನ್ಯಾಮತಿಯ ಎಸ್ಬಿಐ ಬ್ಯಾಂಕ್ನಲ್ಲಿ ದರೋಡೆ ಮಾಡಲಾಗಿತ್ತು. ಸಾವಿರಾರು ಗ್ರಾಹಕರು ಹೊಟ್ಟೆ ಬಟ್ಟೆ ಕಟ್ಟಿ ಕೂಡಿಟ್ಟ ಹಣದಲ್ಲಿ ಖರೀದಿಸಿದ್ದ ಬಂಗಾರ ದರೋಡೆಕೋರರ ಪಾಲಾಗಿತ್ತು. ಬರೋಬ್ಬರಿ 12.95 ಕೋಟಿ ಮೌಲ್ಯದ 509 ಜನ ಗ್ರಾಹಕರ, 17 ಕೆಜಿಗೂ ಅಧಿಕ ಚಿನ್ನಾಭರಣ ಕದ್ದು ಕಳ್ಳರು ಕಾಲ್ಕಿತ್ತಿದ್ದರು. ಹೊರಡುವ ಮುನ್ನ ಖತರ್ನಾಕ್ ಕಳ್ಳರು ಬ್ಯಾಂಕ್ನಲ್ಲಿ ಪ್ರಮುಖ ಸಾಕ್ಷಿಯಾಗಬಲ್ಲ ಸಿಸಿ ಟಿವಿ ಕ್ಯಾಮೆರಾದ ಡಿವಿಆರ್ ತೆಗೆದುಕೊಂಡು, ಸಾಕ್ಷಿ ಸಿಗದಂತೆ ಬ್ಯಾಂಕ್ ತುಂಬೆಲ್ಲಾ ಖಾರದ ಪುಡಿ ಎಸೆದಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ರಾಜ್ಯ ರಾಜ್ಯಗಳಲ್ಲಿ ಎರಡೆರಡು ತಿಂಗಳ ಕಾಲ ಠಿಕಾಣಿ ಹೂಡಿ ಹುಡುಕಿದ್ದರೂ, ಕಳ್ಳರ ಪತ್ತೆಯಾಗಿರಲಿಲ್ಲ. ಆದರೆ ಒಂದು ಸಿಲಿಂಡರ್ನಿಂದ ಬರೋಬ್ಬರಿ ಆರೇಳು ತಿಂಗಳ ಬಳಿಕ ಪೊಲೀಸರು ಪ್ರಕರಣ ಭೇದಿಸಿದ್ದರು. ಬಾವಿಯಲ್ಲಿ ಗಂಟುಕಟ್ಟಿ ಬಚ್ಚಿಟ್ಟಿದ್ದ ಕೆಜಿಗಟ್ಟಲೆ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಭರ್ಜರಿ ಕಾರ್ಯಾಚರಣೆಯಲ್ಲಿ ಕಳ್ಳರನ್ನು ಪೊಲೀಸರು ಬಂಧಿಸಿದ್ದರು. 2025ರ ಮಾರ್ಚ್- ಏಪ್ರಿಲ್ ಅವಧಿಯಲ್ಲಿ ಕಳ್ಳತನವಾಗಿದ್ದ ಸಂಪೂರ್ಣ ಬಂಗಾರ ವಶಪಡಿಸಿಕೊಳ್ಳಲಾಗಿತ್ತು.
ಈ ಪ್ರಕರಣದಲ್ಲಿ ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದರು. ಬೇಕರಿ ಉದ್ಯಮವನ್ನು ಅಭಿವೃದ್ಧಿ ಪಡಿಸಲು ಪ್ಲ್ಯಾನ್ ಮಾಡಿ ಬಂಧಿತ ಆರೋಪಿಗಳು ಸಾಲಕ್ಕಾಗಿ ಬ್ಯಾಂಕ್ಗೆ ಅರ್ಜಿ ಹಾಕಿದ್ದರು. ಬ್ಯಾಂಕ್ ಸಿಬ್ಬಂದಿ ಮಾತ್ರ ಸಾಲ ನೀಡಲು ಹಿಂದೇಟು ಹಾಕಿದ್ದರು. ಸಾಲ ಕೊಡಲಿಲ್ಲ ಎಂದು ಆರೋಪಿಗಳಾದ ವಿಜಯ ಕುಮಾರ್, ಅಜಯ್ ಕುಮಾರ್, ಪರಮಾನಂದ, ಹೊನ್ನಾಳಿ ನ್ಯಾಮತಿ ಪಟ್ಟಣದ ಅಭಿಷೇಕ್, ಮಂಜುನಾಥ್ ಸೇರಿ ದರೋಡೆ ಮಾಡಿದ್ದರು.
ದರೋಡೆ ಮಾಡಲು ಆರೋಪಿಗಳು ಬರೋಬ್ಬರಿ ಆರು ತಿಂಗಳು ಕಾಲ ತರಬೇತಿ ಪಡೆದಿದ್ದರು. ಇದಲ್ಲದೇ ಕದ್ದ ಚಿನ್ನವನ್ನು ಆರೋಪಿಗಳು ತಮಿಳುನಾಡಿನ ಮಧುರೈ ಬಳಿಯ ಒಂದು ನಿರ್ಜನ ಪ್ರದೇಶದಲ್ಲಿರುವ ಬಾವಿಯಲ್ಲಿ ಬಚ್ಚಿಟ್ಟಿದ್ದರು. ಅಲ್ಲದೇ ಕೃತ್ಯಕ್ಕೆ ಬಳಕೆ ಮಾಡಿದ್ದ ವಸ್ತುಗಳನ್ನು ಕೆರೆಗೆ ಎಸೆದಿದ್ದರು. ದರೋಡೆ ಮಾಡಲು ಓಟಿಟಿಯಲ್ಲಿ ಕೆಲ ದೃಶ್ಯದ ತುಣುಕುಗಳನ್ನು ವೀಕ್ಷಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ದರೋಡೆಕೋರರೊಂದಿಗೆ ಹೋರಾಡಿ ಹಿಮ್ಮೆಟ್ಟಿಸಿದ ದಾವಣಗೆರೆಯ ಧೀರ ಮಹಿಳೆ ಇವರು!

