ETV Bharat / state

NWKRTC 28ನೇ ಸಂಸ್ಥಾಪನಾ‌ ದಿನಾಚರಣೆ; ಕಿತ್ತೂರು ರಾಣಿ ಚನ್ನಮ್ಮ ಹೆಸರಿಡಲು ಕ್ರಮ: ಸಚಿವ ರಾಮಲಿಂಗಾರೆಡ್ಡಿ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 28ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನೂತನ ಬಸ್​​ಗಳ ಲೋಕಾರ್ಪಣೆ ಹಾಗೂ ವಿಶೇಷ ಸೇವೆ ಸಲ್ಲಿಸಿದ ಚಾಲನಾ ಸಿಬ್ಬಂದಿಗೆ ಬೆಳ್ಳಿ ಪದಕ ವಿತರಣೆ ಕಾರ್ಯಕ್ರಮ ನಡೆಯಿತು.

nwkrtc-28th-foundation-day-celebration-in-belagavi
NWKRTC 28ನೇ ಸಂಸ್ಥಾಪನಾ‌ ದಿನಾಚರಣೆ ಕಾರ್ಯಕ್ರಮ ಹಾಗೂ ನೂತನ ಬಸ್​ಗಳು (ETV Bharat)
author img

By ETV Bharat Karnataka Team

Published : February 28, 2026 at 3:00 PM IST

5 Min Read
Choose ETV Bharat

ಬೆಳಗಾವಿ: ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 10 ಸಾವಿರ ನೇಮಕಾತಿ ಮಾಡಿದ್ದೇವೆ. ಜೊತೆಗೆ ಆದಷ್ಟು ಬೇಗನೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮ ಅವರ ಹೆಸರಿಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 28ನೇ ಸಂಸ್ಥಾಪನಾ ದಿನಾಚರಣೆ, ನೂತನ ಬಸ್​​ಗಳ ಲೋಕಾರ್ಪಣೆ, ಬೆಳಗಾವಿ-1ನೇ ಘಟಕದ ನವೀಕರಣ ಕಾಮಗಾರಿಯ ಶಂಕುಸ್ಥಾಪನೆ, ಹೊಸದಾಗಿ ನೇಮಕಾತಿ ಹೊಂದಿದ ಸಿಬ್ಬಂದಿಗೆ ನೇಮಕಾತಿ ಆದೇಶ ವಿತರಣೆ, ಅಪಘಾತ/ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲನಾ ಸಿಬ್ಬಂದಿಗೆ ಬೆಳ್ಳಿ ಪದಕ ವಿತರಣೆ ಹಾಗೂ ನೂತನ ತಂತ್ರಾಂಶಗಳ ಬಿಡುಗಡೆ ಸಮಾರಂಭ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

nwkrtc 28th Foundation Day Celebration in belagavi
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಸನ್ಮಾನ (ETV Bharat)

ಕಳೆದ ಬಜೆಟ್​​ನಲ್ಲಿ ಘೋಷಿಸಿದಂತೆ 2 ಸಾವಿರ ಹೊಸ ಬಸ್​​ಗಳ ಖರೀದಿ‌ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ವಾ.ಕ.ರ.ಸಾ. ಸಂಸ್ಥೆಗೆ 700 ವಾಹನಗಳ ಪೈಕಿ ಇಂದು 250 ಬಸ್​​ಗಳನ್ನು ಲೋಕಾರ್ಪಣೆಗೊಳಿಸಲಾಗಿದೆ. ಬೆಳಗಾವಿ ಒಂದನೇ ಘಟಕದ ನವೀಕರಣ ಕಾಮಗಾರಿಗೆ ಅಂದಾಜು 1 ಕೋಟಿ ಕಾಮಗಾರಿಗೆ ಇಂದು ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಪಿಎಂ ಇ-ಬಸ್ ಸೇವಾ ಯೋಜನೆ ಅಡಿ ಬೆಳಗಾವಿ‌ ನಗರಕ್ಕೆ 100 ವಿದ್ಯುತ್ ಚಾಲಿತ ವಾಹನಗಳು ಮಂಜೂರಾಗಿದ್ದು, ಕೇಂದ್ರ ಸರ್ಕಾರ ಟೆಂಡರ್ ಕರೆಯಬೇಕಿದೆ. ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ₹5 ಕೋಟಿ ವೆಚ್ಚದಲ್ಲಿ 11 ನಗರ ಸಾರಿಗೆ ಹೊಸ ವಾಹನಗಳನ್ನು ಖರೀದಿಸಿ ಸಾರ್ವಜನಿಕ ಪ್ರಯಾಣಕ್ಕಾಗಿ ಬಳಕೆ ಮಾಡಲಾಗುತ್ತಿದೆ. ಅಂದಾಜು 8 ಕೋಟಿ ರೂ. ವೆಚ್ಚದಲ್ಲಿ 14 ಹವಾನಿಯಂತ್ರಿತ ಸ್ಲೀಪರ್ ಕೋಚ್ ಹಾಗೂ ಅಂದಾಜು 4 ಕೋಟಿ ವೆಚ್ಚದಲ್ಲಿ 10 ಹವಾನಿಯಂತ್ರಣ ರಹಿತ ಸ್ಲೀಪರ್ ಕೋಚ್ ಸೇರಿ ಒಟ್ಟು 24 ವಾಹನಗಳ‌ ಖರೀದಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸಚಿವ ರಾಮಲಿಂಗಾರೆಡ್ಡಿ‌ ವಿವರಿಸಿದರು.

nwkrtc-28th-foundation-day-celebration-in-belagavi
NWKRTC 28ನೇ ಸಂಸ್ಥಾಪನಾ‌ ದಿನಾಚರಣೆ ಕಾರ್ಯಕ್ರಮ (ETV Bharat)

ಮತ್ತೆ 86 ಬಸ್ ಕೊಡುತ್ತೇವೆ: 2019ರಿಂದ 23ರವರೆಗೆ ಬಸ್ ಖರೀದಿ ಮಾಡಿಲ್ಲ. ಹೀಗಾಗಿ ಬಸ್​​ಗಳು ಹಳೆಯದಾಗಿವೆ. 136 ಬಸ್​ಗಳು ಬೆಳಗಾವಿ ನಗರಕ್ಕೆ ಈಗಾಗಲೇ ಕೊಟ್ಟಿದ್ದೇವೆ. ಈ ವರ್ಷ ಮತ್ತೆ 86 ಬಸ್ ಕೊಡುತ್ತೇವೆ. ಎಲ್ಲೆಲ್ಲಿ ಅವಶ್ಯಕತೆ ಇದೆ ಅಲ್ಲಿಗೆ ಬಸ್​​ಗಳನ್ನು ಬಿಡಲು ಸೂಚಿಸುತ್ತೇನೆ. ಹಿಂದೆ ನಾನು ಸಚಿವನಾಗಿದ್ದಾಗ 16 ಸಾವಿರ ನೇಮಕಾತಿ ಮಾಡಿದ್ದೆ. ಕಿತ್ತೂರು ಡಿಪೋ ಕೂಡ ಶೀಘ್ರವೇ ಉದ್ಘಾಟಿಸಲಾಗುತ್ತದೆ. ಅದೇ ರೀತಿ ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲೆಲ್ಲಿ ಅವಶ್ಯಕತೆ ಇದೆ. ಅಲ್ಲಿ ಪಕ್ಷಾತೀತವಾಗಿ ಕೆಲಸ ಮಾಡುತ್ತೇವೆ. ಕಿತ್ತೂರು ಕರ್ನಾಟಕದಲ್ಲಿ ಅತಿಹೆಚ್ಚು ಬಸ್ ನೀಡಿದ್ದೇನೆ. ಅನುಕಂಪ ಆಧಾರ ಸೇರಿ ಒಟ್ಟು 10 ಸಾವಿರ ನೇಮಕಾತಿ ನನ್ನ ಅವಧಿಯಲ್ಲೇ ಮಾಡಿದ್ದೇನೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮ ಹೆಸರು ಇಡಬೇಕೆಂದು ಮನವಿ ಬಂದಿದೆ. ಮಂಡಳಿಯಿಂದ ಪ್ರಸ್ತಾವನೆ ಬಂದಿದೆ. ಆದಷ್ಟು ಬೇಗ ಕಿತ್ತೂರು ರಾಣಿ ಚನ್ನಮ್ಮ ಹೆಸರು ಮರುನಾಮಕರಣ ಮಾಡುವ ಬಗ್ಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗುತ್ತದೆ. ಕಾರ್ಯನಿರ್ವಹಣೆ ಅವಧಿಯಲ್ಲಿ ಮೃತಪಟ್ಟ ಸಾರಿಗೆ ನೌಕರರಿಗೆ ಒಂದು‌ ಕೋಟಿ ರೂ. ಪರಿಹಾರ‌ ಮೊತ್ತ ನೀಡುತ್ತಿರುವುದು ಸಂಸ್ಥೆಯ‌ ಹೆಗ್ಗಳಿಕೆಯಾಗಿದೆ ಎಂದು ಸಚಿವರು ತಿಳಿಸಿದರು.

nwkrtc 28th Foundation Day Celebration in belagavi
ಲೋಕಾರ್ಪಣೆಗೊಂಡ ಹೊಸ ಬಸ್​ಗಳು (ETV Bharat)

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ನಮ್ಮ ಭಾಗಕ್ಕೆ ಹೊಸ ಬಸ್​​ಗಳು ಬೇಕೆಂದು ಸಾಕಷ್ಟು ಬಾರಿ ಮನವಿ ಮಾಡಿದ್ದೆವು. ಅದಕ್ಕೆ ಅನುಗುಣವಾಗಿ ರಾಮಲಿಂಗಾರೆಡ್ಡಿ ಅವರು 250 ಬಸ್ ನೀಡಿದ್ದಾರೆ. ಬಹುದಿನಗಳ ಕನಸು ನನಸು ನೆರವೇರಿಸಿದ್ದಕ್ಕೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇನ್ನೂ ಹೆಚ್ಚಿನ ಬಸ್ ಗಳ ಅವಶ್ಯಕತೆ ಇದೆ‌. ಅವುಗಳನ್ನು ಆದಷ್ಟು ಬೇಗನೇ ಬಿಡುಗಡೆ ಮಾಡಬೇಕು. ಈಗ ಮತ್ತೆ 800 ಬಸ್ ಖರೀದಿ, 9 ಸಾವಿರ ಸಿಬ್ಬಂದಿ ನೇಮಕಾತಿ ಮಾಡಿರುವುದು ದಾಖಲೆಯೇ ಸರಿ. ಆದರೆ, ಹಿಂದಿನ‌ ಸರ್ಕಾರದಲ್ಲಿ ಒಂದೇ ಒಂದು ಬಸ್ ಖರೀದಿ ಮಾಡಿರಲಿಲ್ಲ. ಈಗಲೂ ಸಾರಿಗೆ ಸಂಸ್ಥೆ ಅನೇಕ‌ ಸಮಸ್ಯೆ ಸಂಸ್ಥೆ ಎದುರಿಸುತ್ತಿದೆ. ಅದಕ್ಕೂ ರಾಮಲಿಂಗಾರೆಡ್ಡಿ ಕಾಯಕಲ್ಪ ಕೊಡುವ ಕೆಲಸ ಮಾಡುವ ವಿಶ್ವಾಸವಿದೆ ಎಂದರು.

ಬಿಜೆಪಿಯವರು ಒಂದು ಬಸ್ ಖರೀದಿಸಲಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಸಾರಿಗೆ ಸಂಸ್ಥೆಯ ಸಿಬ್ಬಂದಿ ಬಿಸಿಲು, ಮಳೆ ಲೆಕ್ಕಿಸದೇ ಸಲ್ಲಿಸುತ್ತಿರುವುದು ದೇವರ ಸೇವೆ. ಹಗಲು ರಾತ್ರಿ ತಾವು ಶ್ರಮಿಸುತ್ತಿದ್ದೀರಿ. ಸುರಕ್ಷಿತವಾಗಿ ಪ್ರಯಾಣಿಕರನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತಲುಪಿಸುತ್ತಿದ್ದಾರೆ. ಧಾರವಾಡದಲ್ಲಿ ಯುವಕರ ದಿಕ್ಕು ತಪ್ಪಿಸಲು, ರಾಜಕಾರಣ ಮಾಡಲು ಹೋಗಿ ಬಿಜೆಪಿಯವರು ಮುಖಕ್ಕೆ ಮಂಗಳಾರತಿ‌ ಮಾಡಿಸಿಕೊಂಡಿದ್ದಾರೆ. ಅವರ ಅಧಿಕಾರದಲ್ಲಿ ಒಂದು ಬಸ್ ಖರೀದಿಸಿರಲಿಲ್ಲ. ಒಬ್ಬರಿಗೆ ನೌಕರಿ ನೀಡಿಲ್ಲ. ಈಗ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ 7800 ಹೊಸ ಬಸ್ ಖರೀದಿಸಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಕೊಟ್ಟು, ಸಾರಿಗೆ ಸಂಸ್ಥೆಗೆ 7800 ಬಸ್​ಗಳನ್ನು ನಾವು ಕೊಟ್ಟಿದ್ದೇವೆ. 10 ಸಾವಿರ ನೇಮಕಾತಿ ಆಗಿರುವುದಕ್ಕೆ ಎಲ್ಲರೂ ಹೆಮ್ಮೆಪಡಬೇಕು. ರಾಮಲಿಂಗಾರೆಡ್ಡಿ ಅವರು ತಮಗೆ ವಹಿಸಿದ ಇಲಾಖೆಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. 1200 ಬಸ್ ನಮ್ಮ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ನೀಡಿದ್ದಾರೆ.‌ ಈ ಸಂಸ್ಥೆಗೆ ರಾಣಿ ಚನ್ನಮ್ಮನ ಹೆಸರಿಡುವ ಬಗ್ಗೆ ರಾಮಲಿಂಗಾರೆಡ್ಡಿ ಅವರು ಘೋಷಣೆ ಮಾಡಬೇಕು‌ ಎಂದು ಮನವಿ ಮಾಡಿದರು.

nwkrtc 28th Foundation Day Celebration in belagavi
ಲೋಕಾರ್ಪಣೆಗೊಂಡ ಹೊಸ ಬಸ್​ಗಳು (ETV Bharat)

ಬೆಳಗಾವಿಯನ್ನು ದತ್ತು ಪುತ್ರನಂತೆ ನೋಡಬೇಡಿ: ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಮಾತನಾಡಿ, ಕಳೆದ ಆರು ತಿಂಗಳ ಹಿಂದೆಯೇ 100 ವಿದ್ಯುತ್ ಚಾಲಿತ ಬಸ್ ಬರುತ್ತವೆ ಎಂದಿದ್ದರು. ಆದರೆ ಈವರೆಗೂ ಬಸ್ ಬಂದಿಲ್ಲ. ನಗರದಲ್ಲಿ ಶಾಲಾ-ಕಾಲೇಜು ಮಕ್ಕಳಿಗೆ ಬಸ್ ಕೊರತೆಯಿಂದ ತೊಂದರೆ ಆಗುತ್ತಿದೆ. ಬೆಳಗಾವಿಯನ್ನು ಎಲ್ಲರೂ ಎರಡನೇ ರಾಜಧಾನಿ ಅಂತಾರೆ. ಆದರೆ, ವಾಸ್ತವದಲ್ಲಿ ನಮ್ಮ ಸಿಟಿಯನ್ನು ದತ್ತು ಪುತ್ರನಂತೆ ನೋಡುತ್ತಿದ್ದಾರೆ. ಸಿಟಿಗೆ ಏನು ಅವಶ್ಯಕತೆ ಇದೆ,
ಅಭಿವೃದ್ಧಿಗೆ ಏನು ಬೇಕಿದೆ ಅದನ್ನು ಮಾಡಿಕೊಡಬೇಕು. ಆದರೆ ಬಹಳಷ್ಟು ಸಚಿವರು ಅದನ್ನು ಮಾಡುತ್ತಿಲ್ಲ. ಸಿಎಂ, ಡಿಸಿಎಂ ದಕ್ಷಿಣ ಕರ್ನಾಟಕದವರು. ಕಂದಾಯ, ಅಲ್ಪಸಂಖ್ಯಾತ, ಆರೋಗ್ಯ, ಸಮಾಜಕಲ್ಯಾಣ, ಗೃಹ ಇಲಾಖೆ ಸೇರಿ ಪ್ರಮುಖ ಖಾತೆಗಳ ಸಚಿವರು ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕ ಭಾಗದವರು. ರಾಮಲಿಂಗಾರೆಡ್ಡಿ ಅವರನ್ನು ಹೊರತುಪಡಿಸಿ ಬಹುತೇಕ ಶಾಸಕರು ಕಿತ್ತೂರು ಕರ್ನಾಟಕ ಮತ್ತು ಬೆಳಗಾವಿಯನ್ನು ಮರೆತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮದು ಏನು ಹಕ್ಕಿದೆ ಅದನ್ನು ಕೊಡಲಿ. ಇಲ್ಲವಾದರೆ ಮುಂದಿನ ಕಾಲದಲ್ಲಿ ಎಂದು ಹೋರಾಟ ಅನಿವಾರ್ಯ ಎನ್ನುವ ದಾಟಿಯಲ್ಲಿ ಆಸೀಫ್ ಸೇಠ್ ಮಾತನಾಡಿದರು. ಮುಂದುವರೆದು, ಮುಖ್ಯಮಂತ್ರಿ ಅರ್ಹತೆ ಇರುವ ಸತೀಶ ಜಾರಕಿಹೊಳಿ‌ ಇದ್ದಾರೆ, ಉಪ‌ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹತೆ ಇರುವ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಇದ್ದಾರೆ. ಅವರಿಗೆ ನಾನು ವಿನಂತಿ ಮಾಡುತ್ತೇನೆ ಎಂದು ಆಸೀಫ್ ಸೇಠ್ ಹೇಳಿದರು.

ಇದೇ ಸಂದರ್ಭದಲ್ಲಿ ಅಪಘಾತ ರಹಿತ 68 ಚಾಲಕರಿಗೆ ಬೆಳ್ಳಿ‌ ಪದಕ, 1 ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ಹಾಗೂ ಅಪಘಾತ, ಗುಂಪು ಜೀವ ವಿಮಾ, ಕುಟುಂಬ ಕಲ್ಯಾಣ ನಿಧಿ ಯೋಜನೆಯ ಪರಿಹಾರ ಚೆಕ್‌‌ ಫಲಾನುಭವಿಗಳಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಾ.ಕ.ರ.ಸಾ. ಸಂಸ್ಥೆ ಅಧ್ಯಕ್ಷ ರಾಜು ಕಾಗೆ, ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಠಲ್ ಹಲಗೇಕರ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ವಾ.ಕ.ರ.ಸಾ. ಸಂಸ್ಥೆ ಉಪಾಧ್ಯಕ್ಷ ಸುನೀಲ ಹಣಮನ್ನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ‌ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ವಿನಯ್​ ನಾವಲಗಟ್ಟಿ, ಪೊಲೀಸ್ ಆಯುಕ್ತ ಭೂಷಣ ಬೊರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಪಂ ಸಿಇಒ ರಾಹುಲ್ ಶಿಂಧೆ, ವಾ.ಕ.ರ.ಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಸೇರಿ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಖಾಲಿ ನಿವೇಶನ ಹರಾಜಿನ ಮೂಲಕ 1,000 ಕೋಟಿ ಸಂಪನ್ಮೂಲ ಕ್ರೂಢೀಕರಣಕ್ಕೆ ಎಂಡಿಎ ಪ್ಲಾನ್: ಅದು ಹೇಗೆ ?