ETV Bharat / state

ಪುರಾಣ ಪ್ರಸಿದ್ಧ ರಾಮನೂರಿಗೆ ಬಾರದ ಜಟಾಯು!; ಚಳಿಗಾಲದಲ್ಲಿ ಸಂತಾನೋತ್ಪತ್ತಿಗಾಗಿ ರಾಮದೇವರ ಬೆಟ್ಟಕ್ಕೆ ಬರುತ್ತಿದ್ದ ರಣಹದ್ದುಗಳು ಈಗ ಎಲ್ಲಿವೆ?

ವಾತಾವರಣದ ಕಾರಣದಿಂದ ಉತ್ತರದಿಂದ ದಕ್ಷಿಣದ ಕಡೆಗೆ ಬರುವ ಹಿಮಾಲಯನ್ ಹಾಗೂ ಹಿರೋಷಿನ್ ಜಾತಿಯ ರಹಣದ್ದುಗಳು ಈ ಬೆಟ್ಟದಲ್ಲಿ ಕೆಲವು ದಿನಗಳ ಕಾಲ ತಂಗುತ್ತವೆ.

North Indian vultures not coming to Ramdevara Hill! Bird lovers disappointed
ರಾಮದೇವರ ಬೆಟ್ಟದಲ್ಲಿ ಕಂಡುಬಂದ ರಣಹದ್ದುಗಳು (ETV Bharat)
author img

By ETV Bharat Karnataka Team

Published : January 8, 2026 at 2:42 PM IST

4 Min Read
Choose ETV Bharat

ರಾಮನಗರ: ಚಳಿಗಾಲದ ಅತಿಥಿಗಳ ಆಗಮನದ ನಿರೀಕ್ಷೆಯಲ್ಲಿದ್ದ ಪರಿಸರ ಹಾಗೂ ಪಕ್ಷಿ ಪ್ರೇಮಿಗಳಿಗೆ ಈ ಭಾರಿಯೂ ನಿರಾಸೆ ಉಂಟಾಗಿದೆ. ಈ ವೇಳೆಗಾಗಲೇ ಇಲ್ಲಿನ ಪುರಾಣ ಪ್ರಸಿದ್ಧ ರಾಮದೇವರ ಬೆಟ್ಟಕ್ಕೆ ಆಗಮಿಸಬೇಕಿದ್ದ ಉತ್ತರ ಭಾರತದ ರಣಹದ್ದುಗಳು ಈ ತನಕ ಆಗಮಿಸಿಲ್ಲ.

ರಣಹದ್ದುಗಳು ಯಾವಾಗ ಬರುತ್ತವೆ?: ಅಕ್ಟೋಬರ್‌ ತಿಂಗಳಿನಿಂದ ಮಾರ್ಚ್ ತಿಂಗಳ ತನಕ ಇಲ್ಲಿಗೆ ವಲಸೆ ಬರುವ ರಣಹದ್ದುಗಳು ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿ ಮಾಡುತ್ತವೆ. ಇದನ್ನು ಸಂತಾನೋತ್ಪತ್ತಿಯ ಕಾಲ ಎಂದು ಸಹ ಕರೆಯಲಾಗುತ್ತದೆ. ಈ ಬೆಟ್ಟದ ಪ್ರದೇಶ ಭಾಗಶಃ ಪ್ರಶಾಂತವಾದ ಸ್ಥಳವಾಗಿದ್ದರಿಂದ ಸಂತಾನೋತ್ಪತ್ತಿಯ ಕ್ರಿಯೆಗಾಗಿ ಇಲ್ಲಿಗೆ ಬರುವುದುಂಟು. ಉತ್ತರ ಭಾರತದ 'ಹಿಮಾಲಯನ್ ಗ್ರೀಫನ್' ಹಾಗೂ 'ಹಿರೋಷಿನ್ ಗ್ರೀಫನ್' ಜಾತಿಯ ಎರಡು ರಣಹದ್ದುಗಳು ಚಳಿಗಾಲದ ಅವಧಿಯಲ್ಲಿ ಉತ್ತರ ಭಾರತದಿಂದ ದಕ್ಷಿಣ ಭಾರತ, ಅದರಲ್ಲೂ ದೇಶದ ಮೊದಲ ರಣಹದ್ದು ವನ್ಯಜೀವಿಧಾಮವಾಗಿರುವ ರಾಮನಗರದ ಈ ರಾಮದೇವರ ಬೆಟ್ಟಕ್ಕೆ ಆಗಮಿಸುವುದುಂಟು.

ರಾಮದೇವರ ಬೆಟ್ಟ ಹಾಗೂ ರಣಹದ್ದುಗಳ ಕುರಿತು ಪರಿಸರ ಪ್ರೇಮಿ ಮರಸಪ್ಪ ರವಿ ಅವರಿಂದ ಮಾಹಿತಿ (ETV Bharat)

ಉತ್ತರ ಭಾರತದಿಂದ ಬರುವ ರಣಹದ್ದುಗಳು, ಕೆಲವು ದಿನಗಳ ಕಾಲ ಇಲ್ಲಿಯೇ ಉಳಿದು ಈ ಪೈಕಿ ಮತ್ತೆ ತನ್ನ ಮೂಲ ಸ್ಥಾನಕ್ಕೆ ಹಿಂತಿರುಗುತ್ತವೆ. ಹಾಗಾಗಿಯೇ ಇದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪಕ್ಷಿ ಪ್ರಿಯರು ಚಳಿಗಾಲದ ಅತಿಥಿಗಳೆಂದೇ ಸಂಬೋಧಿಸುತ್ತಾರೆ. ಆದರೆ, ಈ ವೇಳೆಗಾಗಲೇ ಆಗಮಿಸಿದ್ದ ಅತಿಥಿಗಳ ಸುಳಿವೂ ಸಿಕ್ಕಿಲ್ಲ, ಬರಬೇಕಿದ್ದ ಅತಿಥಿಗಳು ಕೂಡ ಬಂದಿಲ್ಲ. ಹಾಗಾಗಿ ಈ ವರ್ಷವೂ ಉತ್ತರದ ಹಿಮಾಲಯನ್ ಗ್ರೀಫನ್ ಹಾಗೂ ಹಿರೋಷಿಯನ್ ಗ್ರೀಫನ್ ಜಾತಿಯ ರಣಹದ್ದುಗಳ ಆಗಮನ ಬಹುತೇಕ ಅನುಮಾನವೇ ಎನ್ನಲಾಗುತ್ತಿದೆ.

ಏನಿದು ಗೊತ್ತಾ ರಣಹದ್ದುಗಳ ಸಂಚಾರ?: ವಾತಾವರಣದ ಕಾರಣದಿಂದ ಉತ್ತರದಿಂದ ದಕ್ಷಿಣದ ಕಡೆಗೆ ಬರುವ ಹಿಮಾಲಯನ್ ಹಾಗೂ ಹಿರೋಷಿನ್ ಜಾತಿಯ ರಹಣದ್ದುಗಳು ಈ ಬೆಟ್ಟದಲ್ಲಿ ಕೆಲವು ದಿನಗಳ ಕಾಲ ತಂಗುತ್ತವೆ. ಇದಾದ ನಂತರ ಬಂಡೀಪುರ ಹಾಗೂ ನಾಗರಹೊಳೆ ಕಾಡುಗಳಿಗೆ ತೆರಳುತ್ತದೆ. ಉತ್ತರದಲ್ಲಿ ಚಳಿಗಾಲದಲ್ಲಿ ಚಳಿ ಹೆಚ್ಚು. ಹಾಗಾಗಿ ಇವು ದಕ್ಷಿಣಕ್ಕೆ ಆಗಮಿಸುತ್ತದೆ ಎಂಬ ಮಾತಿದೆ.

ಭಾರತದಲ್ಲಿ ಅಳಿವಿನ ಅಂಚಿನಲ್ಲಿರುವ 9 ಜಾತಿಯ ರಣಹದ್ದುಗಳಿವೆ. ಇದರಲ್ಲಿ ದೇಶದ ಮೊದಲ ರಣಹದ್ದು ವನ್ಯಜೀವಿಧಾಮ ರಾಮದೇವರ ಬೆಟ್ಟದಲ್ಲಿ ಎರಡು ಜಾತಿಯ ರಣಹದ್ದುಗಳು ಕಾಣಸಿಗುತ್ತವೆ. ಉದ್ದಕೊಕ್ಕಿನ ರಣಹದ್ದು ಹಾಗೂ ಈಜಿಪ್ಟಿಯನ್ ರಣಹದ್ದುಗಳು ಇಲ್ಲಿವೆ. ಇದರಲ್ಲಿ ಉದ್ದಕೊಕ್ಕಿನ ರಣಹದ್ದು 4 ಜೋಡಿಗಳಿವೆ. ಇನ್ನು ಈಜಿಫಿಯನ್ ರಣಹದ್ದು ಒಟ್ಟು 30ಕ್ಕೂ ಹೆಚ್ಚಿವೆ ಎನ್ನಲಾಗುತ್ತಿದೆ.

North Indian vultures not coming to Ramdevara Hill! Bird lovers disappointed
ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ (ETV Bharat)

ರಾಮನಗರ ರಾಮಗಿರಿ ಕ್ಷೇತ್ರ: ಅಳಿವಿನ ಅಂಚಿನಲ್ಲಿರುವ ರಣಹದ್ದುಗಳನ್ನು ಸಂರಕ್ಷಣೆ ಮಾಡುವ ಸಂಬಂಧ ಸರ್ಕಾರ ಕಳೆದ 10 ವರ್ಷದ ಹಿಂದೆಯೇ ರಾಮನಗರದ ಶ್ರೀರಾಮದೇವರ ಬೆಟ್ಟವನ್ನು 'ರಣಹದ್ದು ವನ್ಯಜೀವಿಧಾಮ' ಎಂಬುದಾಗಿ ಘೋಷಣೆ ಮಾಡಿದೆ. ಇದರ ವಿಸ್ತೀರ್ಣ ಒಟ್ಟು 856 ಎಕರೆ ಪ್ರದೇಶವನ್ನು ವಿಸ್ತರಿಸಿಕೊಂಡಿದೆ. ಜೊತೆಗೆ, ರಾಮಗಿರಿ ಕ್ಷೇತ್ರದಲ್ಲಿ ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಯ ಹಲವು ಸಿನಿಮಾಗಳ ಚಿತ್ರೀಕರಣ ಕೂಡ ಇಲ್ಲಿ ನಡೆದಿದೆ. ಅದರಲ್ಲೂ 70ರ ದಶಕದ ಅಮಿತಾಭ್ ಬಚ್ಚನ್ ಹಾಗೂ ಧರ್ಮೇಂದ್ರ ನಟನೆಯ ಪ್ರಸಿದ್ಧ 'ಶೋಲೆ' ಚಿತ್ರ ಇಲ್ಲಿಯೇ ಚಿತ್ರೀಕರಣಗೊಂಡಿರುವುದು ಈಗ ಇತಿಹಾಸ. ಈ ಬೆಟ್ಟ ರಾಜ್ಯದಲ್ಲೇ ಏಕೈಕ, ಅಪರೂಪದ ರಣಹದ್ದಿನ ತಾಣವೂ ಹೌದು. ಪುರಾಣ ಪ್ರಸಿದ್ಧವಾಗಿರುವ ಈ ಬೆಟ್ಟ 'ಶೋಲೆ' ಚಿತ್ರದ ನಂತರ ಶೋಲೆ ಬೆಟ್ಟ ಎಂದೇ ಖ್ಯಾತಿ ಪಡೆದಿದೆ. ಬೃಹತ್‌ ಬಂಡೆಗಳಿಂದ ಕೂಡಿರುವ ಈ ಬೆಟ್ಟ, ಇಲ್ಲಿರುವ ಪ್ರಕೃತಿ ಸೌಂದರ್ಯ ಕಾಣಲೆಂದು ಪ್ರತಿ ವರ್ಷ ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸಿರುವುದರ ಜತೆಗೆ, ದೇಶ ಹಾಗೂ ವಿದೇಶೀಗರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಕಳೆದ ಆರು ವರ್ಷದ ಹಿಂದೆ ಚಳಿಗಾಲದ ಅತಿಥಿಗಳಾಗಿ ಉತ್ತರದಿಂದ ಎರಡು ರಣಹದ್ದುಗಳು ಇಲ್ಲಿಗೆ ಆಗಮಿಸಿದ್ದವು. ಎರಡರಿಂದ ಮೂರು ದಿನಗಳ ಕಾಲ ಬೆಟ್ಟದಲ್ಲಿ ಇವು ತಂಗಿದ್ದು, ನಂತರ ಹೊರಟು ಹೋಗಿದ್ದವು. ಆದರೆ, ಇದಾದ ನಂತರ ಈ ತನಕ ಚಳಿಗಾಲದ ಅತಿಥಿಗಳ ಆಗಮನವಾಗಿಲ್ಲ. ರಾಮದೇವರ ಅರಣ್ಯ ಪ್ರದೇಶದ ವ್ಯಾಪ್ತಿಯ ಸುತ್ತಮುತ್ತಲು ಬೆಟ್ಟಗಳೇ ಹೆಚ್ಚಾಗಿರುವುದರಿಂದ ಗೂಡು ನಿರ್ಮಾಣ ಮಾಡಲು ಹಾಗೂ ಸಂತಾನೋತ್ಪತ್ತಿ ಮಾಡಲು ಪ್ರದೇಶ ಸೂಕ್ತ ಪ್ರದೇಶ. ಹಾಗಾಗಿಯೇ ರಣಹದ್ದುಗಳು ಈ ಪ್ರದೇಶವನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವುದುಂಟು.

ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿನ ರಾಮದೇವರ ಬೆಟ್ಟವು 800 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿಕೊಂಡಿದ್ದು, ಈ ಪ್ರದೇಶವನ್ನು ಸರ್ಕಾರ 'ರಣಹದ್ದು ವನ್ಯಜೀವಿಧಾಮ' ಎಂದು ಘೋಷಣೆ ಮಾಡಿದೆ. ಈ ವನ್ಯಜೀವಿ ಅರಣ್ಯದಲ್ಲಿ ಹಲವಾರು ಪಕ್ಷಿ - ಪ್ರಾಣಿಗಳಿವೆ. ಅದರಲ್ಲೂ ವಿಶೇಷವಾಗಿ ರಣಹದ್ದುಗಳು. ಈ ರಣಹದ್ದುಗಳ ಬಗ್ಗೆ ನಾನು ಅಧಿಕಾರಿಗಳಿಂದ ಮಾಹಿತಿ ಪಡೆದಿರುವೆ. ಅವರು ಹೇಳುವಂತೆ ಈಗಾಗಲೇ ಒಂದು ಹದ್ದು ಮೊಟ್ಟೆ ಇಟ್ಟಿದ್ದು, ಕಳೆದ 10 -12 ದಿನಗಳಿಂದ ಕಾವು ಸಹ ನೀಡುತ್ತಿದೆ. ಕೆಲವು ದಿನಗಳಲ್ಲಿಯೇ ಹದ್ದಿನ ಮರಿ ಬರಲಿದೆ ಅಂತ ನನಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ಕೇಳಿ ಪರಿಸರ ಹಾಗೂ ಪಕ್ಷಿ ಪ್ರೇಮಿಯಾದ ನನಗೆ ಬಹಳ ಖುಷಿ ಅನ್ನಿಸಿತು. ಅರಣ್ಯ ಇಲಾಖೆಯ ಡಿಎಫ್​ಒ ರಾಮಕೃಷ್ಣ ಅವರು ಇಲಾಖೆಯಿಂದ ಅವುಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಪ್ರತಿಯೊಂದು ಪಕ್ಷಿ ತನ್ನದೇ ಆದ ಮಹತ್ವವನ್ನು ಹೊಂದಿರುತ್ತವೆ. ಅದರಲ್ಲಿ ರಣಹದ್ದು ಕೂಡ. ಕಾಡಿನಲ್ಲಿ ಸತ್ತ ಪ್ರಾಣಿಗಳನ್ನು ತಿನ್ನುವ ಮೂಲಕ ರಣಹದ್ದುಗಳು ಇತರರಿಗೆ ರೋಗ ಹರಡದಂತೆ ತಡೆಯುತ್ತವೆ. ಅಂತಹ ರಣಹದ್ದುಗಳನ್ನು ಇಲ್ಲಿ ರಕ್ಷಣೆ ಮಾಡಲಾಗುತ್ತದೆ. ಅರಣ್ಯ ಇಲಾಖೆಗೆ ನನ್ನ ಧನ್ಯವಾದ ತಿಳಿಸುವೆ ಎಂದು ಪರಿಸರ ಪ್ರೇಮಿ ಮರಸಪ್ಪ ರವಿ ಹೇಳುತ್ತಾರೆ.

ಬೆಟ್ಟದ ವೈಶಿಷ್ಟ್ಯತೆ: ಸಿಲಿಖಾನ್ ಸಿಟಿ ಬೆಂಗಳೂರಿನಿಂದ ಸುಮಾರು 50 ಕಿ.ಮಿ ದೂರ ಇರುವುದೇ ರಾಮನಗರ. ಇಲ್ಲಿರುವ ರಾಮದೇವರ ಬೆಟ್ಟ ತನ್ನದೇ ವೈಶಿಷ್ಟ್ಯತೆ ಹೊಂದಿದೆ. ಶ್ರೀರಾಮ ದೇವರು ವನವಾಸ ಕೈಗೊಂಡ ಪ್ರವಿತ್ರ ಸ್ಥಳವೆಂದು ಸಹ ಇನ್ನು ಕರೆಯುತ್ತಾರೆ. ಶ್ರೀರಾಮದೇವರ ವನವಾಸ ಸ್ಥಳ ಸಪ್ತಗಿರಿ ಬೆಟ್ಟದ ಸಾಲಿನ ಮಧ್ಯ ಇರುವ ಸ್ಥಳ ಇಲ್ಲಿನ ಪ್ರಮುಖ ಆಕರ್ಷಣೆ. ಈ ಕ್ಷೇತ್ರದಲ್ಲಿ ಜಟಾಯು ಕೂಡ ವಾಸವಿದ್ದ ಎಂಬುದು ತಿಳಿದು ಬರುತ್ತದೆ. ಜಟಾಯು ಜಾತಿಯ ಪಕ್ಷಿ ಸಂಕುಲವೇ ರಣರದ್ದು. ಪುರಾಣ ಕಾಲದಿಂದ ಹಿಡಿದು ಈಗಲೂ ಸಹ ಇಲ್ಲಿ ರಣಹದ್ದುಗಳಿವೆ.

ಬರದೇ ಇರುವುದಕ್ಕೆ ಕಾರಣ: ಗ್ರೀಫನ್ ಹಾಗೂ ಹಿರೋಷಿನ್ ಗ್ರೀಫನ್ ಜಾತಿಯ ಎರಡು ರಣ ರದ್ದುಗಳು ಚಳಿಗಾಲದ ವೇಳೆ ಈ ಗುಡ್ಡಕ್ಕೆ ಆಗಮಿಸುತ್ತಿದ್ದವು. ಈ ರಣಹದ್ದುಗಳು ಸಂಚಾರ ಮಾಡುತ್ತಲೆ ಇರುತ್ತವೆ. ಸಂಚಾರ ಮಾಡುವ ವೇಳೆಯಲ್ಲಿ ಹದ್ದುಗಳಿಗೆ ಸುಸ್ತಾದ ವೇಳೆ ಈ ಗುಡ್ಡಗಳಲ್ಲಿ ಹೆಚ್ಚಾಗಿ ಕಾಣ ಸಿಗುತ್ತಿದ್ದವು. ಆದರೆ, ಈ ಭಾರಿ ಈ ರಣಹದ್ದುಗಳು ಕಂಡಿಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳೇನು ಕೂಡ ಇರುವುದಿಲ್ಲ. ನಮ್ಮ ಈ ರಾಮದೇವರ ಬೆಟ್ಟದಲ್ಲೂ ಕೂಡ ಐದಾರು ಬಿಳಿ ಉದ್ದಕೊಕ್ಕಿನ ರಣಹದ್ದುಗಳು ಇದ್ದು, ಇವುಗಳು ಇಲ್ಲೇ ಮೊಟ್ಟೆ ಇಟ್ಟು ಮರಿ ಮಾಡುತ್ತಿದೆ. ಇನ್ನೊಂದು ತಿಂಗಳಲ್ಲಿ ಮರಿಗಳನ್ನ ಕೂಡ ಕಾಣಬಹುದು ಎಂದು ಜಿಲ್ಲಾ ಅರಣ್ಯ ರಕ್ಷಕಾರದ ಮನ್ಸೂರ್ ಖಾನ್ ಹೇಳುತ್ತಾರೆ.

ಇದನ್ನೂ ಓದಿ: