ETV Bharat / state

ಸಾಲಗಾರನಲ್ಲದ ಬಾಡಿಗೆದಾರ 'ಸರ್ಫೇಸಿ ಕಾಯ್ದೆ'ಯಡಿ ಮೇಲ್ಮನವಿ ಸಲ್ಲಿಸಲು ಪೂರ್ವ ಠೇವಣಿ ಇಡುವುದು ಕಡ್ಡಾಯವಲ್ಲ: ಹೈಕೋರ್ಟ್

ಕಟ್ಟಡದಲ್ಲಿರುವ ಬಾಡಿಗೆದಾರರನ್ನು ಯಾವುದೇ ಕಾರಣಕ್ಕೂ ಸಾಲಗಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Karnataka High Court
ಕರ್ನಾಟಕ ಹೈಕೋರ್ಟ್​ (ETV Bharat)
author img

By ETV Bharat Karnataka Team

Published : May 27, 2026 at 5:18 PM IST

3 Min Read
Choose ETV Bharat

ಬೆಂಗಳೂರು: ಬ್ಯಾಂಕುಗಳಿಂದ ಸಾಲ ಪಡೆದ ಮಾಲೀಕರು ಸುಸ್ತಿದಾರರಾದಾಗ, ಆ ಆಸ್ತಿಯಲ್ಲಿ ವಾಸವಿರುವ, ಕಚೇರಿ ಹೊಂದಿರುವ ಬಾಡಿಗೆದಾರರು (ಸಾಲಗಾರರಲ್ಲದ ಮೂರನೇ ವ್ಯಕ್ತಿ) ಸಾಲ ವಸೂಲಾತಿ ನ್ಯಾಯಮಂಡಳಿ (ಡಿಆರ್​ಟಿ) ನೀಡಿದ ಆದೇಶವನ್ನು ಮೇಲ್ಮನವಿ ಸಲ್ಲಿಸುವುದಕ್ಕಾಗಿ ಸಾಲದ ಮೊತ್ತದ ಶೇ. 50 ರಷ್ಟನ್ನು ಠೇವಣಿ ಇಡಬೇಕು ಎನ್ನುವುರು ಕಡ್ಡಾಯವಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಕಟ್ಟಡದಲ್ಲಿರುವ ಬಾಡಿಗೆದಾರರನ್ನು ಯಾವುದೇ ಕಾರಣಕ್ಕೂ ಸಾಲಗಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ, ಸಾಲದ ಹೊಣೆಗಾರಿಕೆಯನ್ನು ಅವರ ಮೇಲೆ ಹೇರಲು ಬರುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಡಿಆರ್​ಟಿ ಆದೇಶವನ್ನು ಮೇಲ್ಮನವಿ ಸಲ್ಲಿಸಲು ಸಾಲದ ಪ್ರಮಾಣದ ಶೇ. 50ರಷ್ಟು ಠೇವಣಿ ಇಡಬೇಕು ಎಂದು ತಿಳಿಸಿದ್ದ ಮೇಲ್ಮನವಿ ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಇಟ್ಟಿಯಂ ಸಿಸ್ಟಮ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮತ್ತು ನ್ಯಾಯಮೂರ್ತಿ ಡಾ.ಕೆ.ಮನ್ಮಥ ರಾವ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಅಲ್ಲದೇ, ಹಣಕಾಸು ಆಸ್ತಿಗಳ ಸಕ್ಯುರಿಟೈಸೇಶನ್ ಮತ್ತು ಪುನರ್ನಿರ್ಮಾಣ ಮತ್ತು ಭದ್ರತಾ ಆಸಕ್ತಿ ಕಾಯ್ದೆ ಜಾರಿ(ಸರ್ಫೇಸಿ) ಕಾಯ್ದೆಯ ಸೆಕ್ಷನ್ 18ರಲ್ಲಿ 'ಸಾಲಗಾರ' ಮತ್ತು 'ಸಾಲಗಾರನಲ್ಲದ ಇತರ ವ್ಯಕ್ತಿ' ಎಂದು ಇಬ್ಬರನ್ನೂ ಪ್ರತ್ಯೇಕವಾಗಿ ಉಲ್ಲೇಖಿಸಲಾಗಿದೆ. ಆದರೆ, ಎರಡನೇ ನಿಬಂಧನೆಯಲ್ಲಿ ಕೇವಲ 'ಸಾಲಗಾರ' ಮಾತ್ರ ಶೇ. 50ರಷ್ಟು ಪೂರ್ವ ಠೇವಣಿ ಇಡಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಶಾಸನ ಸಭೆಯು ಕಾಯಿದೆ ರಚನೆ ವೇಳೆ ಉದ್ದೇಶಪೂರ್ವಕವಾಗಿಯೇ ಈ ವ್ಯತ್ಯಾಸ ಮಾಡಲಾಗಿದೆ.

ಶಾಸಕಾಂಗವು ಕಾಯ್ದೆಯಿಂದ ಹೊರಗಿಟ್ಟಿರುವ ಪದಗಳನ್ನು, ನ್ಯಾಯಾಲಯಗಳು ತನ್ನ ವ್ಯಾಖ್ಯಾನದ ಮೂಲಕ ಸೇರಿಸುವ ಮೂಲಕ ಹೊಸ ನಿಯಮ ಜಾರಿ ಮಾಡುವುದಕ್ಕೆ ಅವಕಾಶವಿಲ್ಲ. ಸಾಲಗಾರನಲ್ಲದ ಮೂರನೇ ವ್ಯಕ್ತಿಯ ಮೇಲೆ ಸಾಲದ ಹೊರೆ ಹೊರಿಸುವುದು ತಾರತಮ್ಯ ಮತ್ತು ಅನ್ಯಾಯವಾಗಲಿದೆ ಎಂದು ಪೀಠ ಹೇಳಿದೆ.

ಕಂಪನಿಯ ಬಾಡಿಗೆ ಒಪ್ಪಂದ ನೋಂದಣಿಯಾಗಿದೆಯೇ ಅಥವಾ ಇಲ್ಲವೇ, ಅದು ಚಾಲ್ತಿಯಲ್ಲಿದೆಯೇ ಎಂಬ ವಿಷಯಗಳು ಮೇಲ್ಮನವಿಯ ಅರ್ಹತೆಯ ಆಧಾರದ ಮೇಲೆ ತೀರ್ಮಾನವಾಗಬೇಕಾದ ವಿಷಯಗಳಾಗಿವೆ. ಅದನ್ನು ಡಿಆರ್‌ಎಟಿ ಅಂತಿಮ ವಿಚಾರಣೆ ವೇಳೆ ನಿರ್ಧರಿಸಲಿದೆ. ಆದರೆ, ಪೂರ್ವ ಠೇವಣಿ ಇಡದ ಕಾರಣಕ್ಕೆ ಮೇಲ್ಮನವಿಯನ್ನೇ ತಿರಸ್ಕರಿಸುವಂತಿಲ್ಲ ಎಂದು ಪೀಠ ತಿಳಿಸಿದೆ.

ಅಲ್ಲದೆ, ಚೆನ್ನೈನ ಡಿಆರ್ ಟಿ ನೀಡಿದ್ದ ಆದೇಶ ರದ್ದುಗೊಳಿಸಿರುವ ನ್ಯಾಯಪೀಠ, ಇಟ್ಟಿಯಂ ಸಿಸ್ಟಮ್ಸ್ ಕಂಪನಿಯಿಂದ ಯಾವುದೇ ಪೂರ್ವ ಠೇವಣಿ ಬಯಸದೇ ಅವರ ಅರ್ಜಿಯನ್ನು ಮೆರಿಟ್ ಆಧಾರದ ಮೇಲೆ ಆದಷ್ಟು ಬೇಗ ಇತ್ಯರ್ಥಪಡಿಸಬೇಕು ಎಂದು ಸೂಚನೆ ನೀಡಿದೆ.

ಪ್ರಕರಣದ ಹಿನ್ನೆಲೆ: ಹಿರೋ ಉತ್ತಮ್ ಚಂದಾನಿ ಎಂಬುವರ ಮಾಲೀಕತ್ವದ ಬೆಂಗಳೂರಿನ ರಿಚ್‌ಮಂಡ್ ರಸ್ತೆಯಲ್ಲಿರುವ 'ಕನ್ಸುಲೇಟ್-1' ಕಟ್ಟಡದ ನಾಲ್ಕನೇ ಮಹಡಿಯಲ್ಲಿ 7045 ಚದರಡಿಯಲ್ಲಿ ಇಟ್ಟಿಯಂ ಸಿಸ್ಟಮ್ಸ್ ಪ್ರೈವೆಟ್ ಲಿಮಿಟೆಡ್ ಎಂಬ ಕಂಪನಿಯು 2001 ರಿಂದ ಬಾಡಿಗೆದಾರನಾಗಿದೆ.
ಈ ಕಟ್ಟಡದ ಮಾಲೀಕ ಹಿರೋ ಉತ್ತಮ್ ಚಂದಾನಿ ಎಂಬುವವರು ಮುಂಬೈನ ಭಾರತ್ ಕೋ - ಆಪರೇಟಿವ್ ಬ್ಯಾಂಕ್​ನಿಂದ ಸಾಲ ಪಡೆದಿದ್ದರು. ಆದರೆ, ಸಾಲ ಮರುಪಾವತಿಸಲು ವಿಫಲರಾದಾಗ ಬ್ಯಾಂಕ್ ಸರ್ಫೇಸಿ ಕಾಯ್ದೆಯ ಸೆಕ್ಷನ್ 13(2)ರ ಅಡಿ ಡಿಮ್ಯಾಂಡ್‌ ನೋಟಿಸ್‌ ನೀಡಿತ್ತು. ಬಳಿಕ ಸೆಕ್ಷನ್‌ 14ರ ಅಡಿಯಲ್ಲಿ ಕಟ್ಟಡದ ಭೌತಿಕ ಸ್ವಾಧೀನಕ್ಕೆ ಪ್ರಕ್ರಿಯೆಯನ್ನು ಆರಂಭಿಸಿತು.

ಈ ನಡುವೆ ಭಾರತ್ ಕೋ-ಆಪರೇಟಿವ್ ಬ್ಯಾಂಕ್​ನಿಂದ ಇಟ್ಟಿಯಂ ಸಿಸ್ಟಮ್ಸ್ ಕಂಪನಿ ಕಚೇರಿ ತೆರವುಗೊಳಿಸಲು ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಇಟ್ಟಿಯಂ ಸಿಸ್ಟಮ್ಸ್ ಕಂಪನಿಯು ಸಾಲ ವಸೂಲಾತಿ ನ್ಯಾಯಾಧೀಕರಣ(ಡಿಆರ್‌ ಟಿ)ದ ಮೊರೆ ಹೋಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಡಿಆರ್​ಟಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಇಟ್ಟಿಯಂ ಸಿಸ್ಟಮ್ಸ್ ಕಂಪನಿಯು ಚೆನ್ನೈನ ಸಾಲ ವಸೂಲಾತಿ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಮೇಲ್ಮನವಿ ಸಲ್ಲಿಸಿತು. ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕಾದರೆ ನಿಯಮಾವಳಿಗಳ ಪ್ರಕಾರ ಪೂರ್ವ ಠೇವಣಿ ಇಡಬೇಕು ಎಂದು ಡಿಆರ್‌ಎಟಿ ಆದೇಶಿಸಿ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆ ವೇಳೆ ಅರ್ಜಿದಾರ ಕಂಪನಿಯ ಪರ ವಕೀಲರು, ಕಂಪನಿಯು ಕೇವಲ ಬಾಡಿಗೆದಾರನಾಗಿದ್ದು, ಬ್ಯಾಂಕ್ ಮತ್ತು ಮಾಲೀಕರ ನಡುವಿನ ಆರ್ಥಿಕ ವಹಿವಾಟಿಗೆ ಯಾವುದೇ ಸಂಬಂಧ ಹೊಂದಿಲ್ಲ. ಕಂಪನಿಯು ಸಾಲಗಾರನೂ ಅಲ್ಲ, ಶ್ಯೂರಿಟಿದಾರನೂ ಅಲ್ಲ. ಸರ್ಫೇಸಿ ಕಾಯ್ದೆಯ ಸೆಕ್ಷನ್ 18ರ ಅನ್ವಯ ಸಾಲಗಾರನಿಗೆ ಮಾತ್ರ ಠೇವಣಿ ಕಡ್ಡಾಯವಾಗಿದ್ದು, ಬಾಡಿಗೆದಾರನಿಗೆ ಇದನ್ನು ವಿಸ್ತರಿಸಲು ಬರುವುದಿಲ್ಲ ಎಂದು ಪೀಠಕ್ಕೆ ವಿವರಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬ್ಯಾಂಕ್‌ನ ಪರ ವಕೀಲರು, ಕಂಪನಿಯು ಹೊಂದಿರುವ ಬಾಡಿಗೆ ಒಪ್ಪಂದವು ನೋಂದಣಿಯಾಗಿಲ್ಲ. ಅದರ ಅವಧಿಯೂ ಮುಗಿದಿದೆ. ಕಾನೂನುಬದ್ಧ ಬಾಡಿಗೆದಾರರಲ್ಲದ ಕಾರಣ ಅವರಿಗೆ ಇಂತಹ ವಿನಾಯಿತಿ ನೀಡಬಾರದು ಎಂದು ಎಂದು ಪೀಠಕ್ಕೆ ಮನವಿ ಮಾಡಿದರು.

ಇದನ್ನೂ ಓದಿ: ಕರ್ನಾಟಕದ ಶಾಸಕರು, ಎಂಎಲ್​ಸಿಗಳಿಗೆ ಕ್ಯಾಬಿನೆಟ್ ದರ್ಜೆ ಪ್ರಶ್ನಿಸಿ ಅರ್ಜಿ: ವಿಚಾರಣೆಗೆ ಸುಪ್ರೀಂ ನಕಾರ