ETV Bharat / state

ಮಾಲಿನ್ಯ ನಿಯಂತ್ರಣ ಕುರಿತಂತೆ ಬಿಗ್​ಬಾಸ್ ಆಯೋಜಕರಿಂದ ಮನವಿ ಬಂದಿಲ್ಲ: ಪರಿಸರ ಸಚಿವ ರಾಮಲಿಂಗಾರೆಡ್ಡಿ

ಕಳೆದ ವರ್ಷ ನೋಟಿಸ್​ ಜಾರಿ ಮಾಡಲಾಗಿತ್ತು. ಆದರೆ, ಈ ವರ್ಷ ಪರಿಸರ ಇಲಾಖೆಯಿಂದ ಅನುಮತಿ ಕೋರಿ ಈವರೆಗೂ ಮನವಿ ಸಲ್ಲಿಸಿಲ್ಲ ಎಂದು ಪರಿಸರ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Bigg Boss House
ಬಿಗ್​ಬಾಸ್ ಮನೆ (Special arrangement)
author img

By ETV Bharat Karnataka Team

Published : August 31, 2026 at 8:20 PM IST

2 Min Read
Choose ETV Bharat

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ನ 13ನೇ ಸೀಸನ್​ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಉಳಿದಿದ್ದು, ಈವರೆಗೂ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಲಾಖೆಗೆ ಮನವಿ ಸಲ್ಲಿಸಿಲ್ಲ ಎಂದು ಅರಣ್ಯ ಮತ್ತು ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ರಾಜ್ಯದಲ್ಲಿನ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಗ್​ ಬಾಸ್​ ನಡೆಯುವ ಸ್ಥಳದಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕ(ಎಸ್​ಟಿಪಿ) ನಿರ್ಮಾಣದ ಸಂಬಂಧ ಕಳೆದ ವರ್ಷ ನೋಟಿಸ್​ ಜಾರಿ ಮಾಡಲಾಗಿತ್ತು. ಆದರೆ, ಪ್ರಸಕ್ತ ವರ್ಷದಲ್ಲಿ ಪರಿಸರ ಇಲಾಖೆಯಿಂದ ಅನುಮತಿ ಕೋರಿ ಈವರೆಗೂ ಮನವಿ ಸಲ್ಲಿಸಿಲ್ಲ ಎಂದು ತಿಳಿಸಿದರು.

ಅಲ್ಲದೆ, ಬಿಗ್​ ಬಾಸ್​ ಆಯೋಜಕರು ಅನುಮತಿ ಕೋರಿ ಮನವಿ ಸಲ್ಲಿಸಿದಲ್ಲಿ, ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಉಲ್ಲಂಘನೆ ಆಗಿದ್ದಲ್ಲಿ ನಿಗದಿತ ದಂಡ ವಿಧಿಸಿ ಕಾನೂನು ಪ್ರಕಾರದಲ್ಲಿ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

ಕೇರಳಂ ಮಾದರಿ ಕ್ರಮ: ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಕಸ್ತೂರಿ ರಂಗನ್​ ಅವರ ವರದಿಯ ಜಾರಿಗೆ ಸಂಬಂಧಿಸಿದಂತೆ ಈವರೆಗೂ ಹೊರಡಿಸಿದ್ದ ಆರು ಅಧಿಸೂಚನೆಗಳನ್ನು ತಿರಸ್ಕರಿಸಲಾಗಿದೆ. ಅದೇ ರೀತಿಯಲ್ಲಿ ಏಳನೇ ಅಧಿಸೂಚನೆಯನ್ನು ತಿರಸ್ಕರಿಸಲಾಗುವುದು ಎಂದು ತಿಳಿಸಿದರು.

ಕಸ್ತೂರಿ ರಂಗನ್ ವರದಿ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಜನನಿಬಿಡ ಮತ್ತು ಕೃಷಿ ಪ್ರದೇಶಗಳನ್ನು ಪರಿಸರಸೂಕ್ಷ್ಮ ಪ್ರದೇಶದಲ್ಲಿ ಎಂಬುದಾಗಿ ಸೇರ್ಪಡೆ ಮಾಡುವುದಕ್ಕೆ ಕೇರಳಂ ಸರ್ಕಾರ ನಿರಾಕರಿಸಿದೆ. ಇದೇ ರೀತಿಯ ತೀರ್ಮಾನವನ್ನು ರಾಜ್ಯದಲ್ಲಿಯೂ ಕೈಗೊಳ್ಳಲಾಗುವುದು. ಅದಕ್ಕೂ ಮುನ್ನ ಮುನ್ನ ಸರ್ವಪಕ್ಷಗಳ ಅಭಿಪ್ರಾಯ ಪಡೆಯಲಾಗುವುದು. ಜತೆಗೆ, ವಿಶೇಷ ಅಧಿವೇಶನ ನಡೆಸಿದ ಸುಧೀರ್ಘವಾಗಿ ಚರ್ಚಿಸಿ ಸೂಕ್ತ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಹೇಳಿದರು.

ಬಿಗ್​ ಬಾಸ್​ ಆರಂಭಕ್ಕೆ ಕೆಲವೇ ದಿನ ಬಾಕಿ: ಬಿಗ್ ಬಾಸ್ ಕನ್ನಡ 13ನೇ ಆವೃತ್ತಿ ಶುರುವಾಗುವುದಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಈ ಬಾರಿ ಸ್ಪರ್ಧಿಗಳನ್ನು ಆಯ್ಕೆ ಮಾಡಲು ಸಾಮಾನ್ಯ ಜನರಿಗಾಗಿ 'ಅಗ್ನಿಪರೀಕ್ಷೆ' ಎಂಬ ಟಾಸ್ಕ್ ನಡೆಯುತ್ತಿದೆ. ಸಾಮಾನ್ಯ ಜನರ ನಡುವೆ ಸ್ಪರ್ಧೆಗಳು ನಡೆಯುತ್ತಿದ್ದು, ಇದರಲ್ಲಿ ಆಯ್ಕೆಯಾದ ಮೂರು ಮಂದಿ ಈ ಬಾರಿ ಬಿಗ್​ಬಾಸ್ ಮನೆಯೊಳಗೆ ಕಾಲಿಡಲಿದ್ದಾರೆ.

13ನೇ ಸೀಸನ್ ‘Flight’ ಎಂಬ ವಿಭಿನ್ನ ಥೀಮ್‌ನೊಂದಿಗೆ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಸೆಲೆಬ್ರಿಟಿ ಸ್ಪರ್ಧಿಗಳ ಜೊತೆಗೆ ಸಾಮಾನ್ಯ ಜನರನ್ನೂ ಒಂದೇ ವೇದಿಕೆಗೆ ಕರೆತರುವ ಮೂಲಕ, ಪ್ರತಿಯೊಬ್ಬ ಸ್ಪರ್ಧಿಯೂ ತನ್ನದೇ ಆದ ಕಥೆಯನ್ನು ಹೊಂದಿರುವ ಹಾಗೂ ಪ್ರತಿ ಕ್ಷಣವೂ ಆಟದ ದಿಕ್ಕು ಬದಲಾಯಿಸಬಹುದಾದ ಸೀಸನ್ ಇದಾಗಲಿದೆ ಎಂದು ಹೇಳಲಾಗುತ್ತಿದೆ.​

ಇದನ್ನೂ ಓದಿ: ಬಿಗ್ ಬಾಸ್ ಶೋಗೆ ಕ್ರೆಡಿಬಿಲಿಟಿ ಇದೆ‌, ಗಲಾಟೆ ಮಾಡಿದರೆ TRP ಬರುತ್ತೆ ಎಂಬುದು ಸುಳ್ಳು: ಸುದೀಪ್