ಬೇಡ್ತಿ-ವರದಾ ನದಿ ಜೋಡಣೆಯಿಂದ ಯಾರಿಗೂ ತೊಂದರೆಯಿಲ್ಲ, ಎಲ್ಲರೂ ಸಹಕರಿಸಿ: ಬೊಮ್ಮಾಯಿ
ಬೇಡ್ತಿ-ವರದಾ ನದಿ ಜೋಡಣೆ ಯೋಜನೆ, ಕಾಂಗ್ರೆಸ್ನ 'ವೋಟ್ ಚೋರಿ, ಗದ್ದಿ ಛೋಡ್' ಅಭಿಯಾನದ ಕುರಿತಂತೆ ಸಂಸದ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದರು.

Published : December 14, 2025 at 6:42 PM IST
ಹಾವೇರಿ: ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಕುರಿತಂತೆ ಆ ಭಾಗದ ಜನರು ಹಾಗೂ ಸೋಂದಾ ಮಠದ ಗುರುಗಳ ಭಾವನೆಯನ್ನು ಗೌರವಿಸುತ್ತೇವೆ. ಆದರೆ ತಪ್ಪು ಕಲ್ಪನೆಯಿಂದ ವಿರೋಧ ಮಾಡುವುದು ಬೇಡ. ಈ ಯೋಜನೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹಾವೇರಿಯಲ್ಲಿಂದು ಮಾತನಾಡಿದ ಅವರು, ಯೋಜನೆ ಕುರಿತಂತೆ ಶನಿವಾರ ಸೋಂದಾ ಶ್ರೀಗಳ ಸಾನಿಧ್ಯದಲ್ಲಿ ಚರ್ಚೆ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿ, ಈ ಯೋಜನೆಯನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಳ್ಳಲಾಗುತ್ತಿದೆ. ಯೋಜನೆ ಘೋಷಣೆಯಾದಾಗ ಈಗಿರುವ ರಾಜಕಾರಣಿಗಳು ಯಾರೂ ರಾಜಕಾರಣದಲ್ಲಿ ಇರಲಿಲ್ಲ. ಇದೊಂದು ನೀರಿನ ಸದ್ಬಳಕೆಗೆ ಮಾಡುತ್ತಿರುವ ಯೋಜನೆಯಾಗಿದೆ ಎಂದರು.
ಪರಿಸರಕ್ಕೆ ಹಾನಿಯಾಗುವುದಿಲ್ಲ: ಅಲ್ಲದೆ, ಈ ಹಿಂದೆ ತೀರ್ಮಾನಿಸಲಾಗಿದ್ದ ಯೋಜನೆಯು ಈಗ ಪರಿಷ್ಕರಣೆಗೊಂಡಿದೆ. ಯಾವುದೇ ದೊಡ್ಡ ಡ್ಯಾಂ ನಿರ್ಮಾಣ ಮಾಡುವುದಿಲ್ಲ. ಸಣ್ಣ ಬ್ಯಾರೇಜ್ ನಿರ್ಮಿಸಿ, ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಯಾವುದೇ ಜಾಗದ ಮುಳುಗಡೆ ಹಾಗೂ ಪರಿಸರಕ್ಕೂ ಹಾನಿಯಾಗುವುದಿಲ್ಲ. ನದಿಯ ಒಟ್ಟು ಹರಿವು ವಿಚಾರದಲ್ಲಿ ಯಾವುದೇ ತೊಂದರೆ ಇಲ್ಲ. ಬೇಡ್ತಿ ನದಿಯ ಕೇವಲ 10% ನೀರನ್ನು ಮಾತ್ರ ತಗೆದುಕೊಳ್ಳಲಾಗುತ್ತಿದೆ. ಅಲ್ಲದೆ, ಅದು ಮಳೆಗಾಲದಲ್ಲಿ ಮಾತ್ರ. ಅದಲ್ಲದೆ, ಇನ್ನೂ ಕೂಡ ಡಿಪಿಆರ್ ಆಗಬೇಕಿದೆ. ಎಲ್ಲ ಸಾಧಕ-ಬಾಧಕಗಳನ್ನು ಪರಿಶೀಲಿಸಲಾಗುತ್ತಿದೆ. ಹೀಗಾಗಿ, ಶ್ರೀಗಳು ಹಾಗೂ ಆ ಭಾಗದ ಜನರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹಾವೇರಿ ಸೇರಿದಂತೆ ಈ ಭಾಗದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಇದೆ. ಸಂಗ್ರಹಿಸಲಾಗುವ ಬೇಡ್ತಿ ನದಿಯ ನೀರನ್ನು ಬೇಸಿಗೆಯಲ್ಲಿ ಉಪಯೋಗಿಸುತ್ತೇವೆ. ನಮ್ಮದು ಬರಪೀಡಿತ ಪ್ರದೇಶ ಆಗಿರುವುದರಿಂದ ಯೋಜನೆಯಿಂದ ಅನುಕೂಲವಾಗಲಿದೆ. ನೀರಿನ ಸದ್ಬಳಕೆ ಆಗಬೇಕಿದೆ, ಒಬ್ಬರಿಗೊಬ್ಬರು ಸಹಕರಿಸಬೇಕು ಎಂದು ಬೊಮ್ಮಾಯಿ ತಿಳಿಸಿದರು.
ಕೇವಲ ಪ್ರತಿಷ್ಠೆಗಾಗಿ ಕಾಂಗ್ರೆಸ್ ಅಭಿಯಾನ: ಕಾಂಗ್ರೆಸ್ನ 'ವೋಟ್ ಚೋರಿ, ಗದ್ದಿ ಛೋಡ್' ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ವೋಟ್ ಚೋರಿ ಎಂದು ದೇಶದಲ್ಲಿ ಸುಳ್ಳನ್ನು ಸಾವಿರ ಬಾರಿ ಹೇಳಿ, ಸತ್ಯ ಮಾಡಲು ರಾಹುಲ್ ಗಾಂಧಿ ಹೊರಟಿದ್ದಾರೆ. ಆದರೆ ಕಾಂಗ್ರೆಸ್ನವರಿಗೇ ಈ ಅಭಿಯಾನದ ಮೇಲೆ ನಂಬಿಕೆ ಇಲ್ಲ. ಕೇವಲ ಪ್ರತಿಷ್ಠೆಗಾಗಿ ಮಾಡುತ್ತಿದ್ದಾರೆ, ಇದರಿಂದ ಏನೂ ಆಗಲ್ಲ. ಬಿಹಾರದಲ್ಲಿ ಇದನ್ನೇ ಮುಂದಿಟ್ಟುಕೊಂಡು ಚುನಾವಣೆ ಮಾಡಿದರು. ಅಲ್ಲಿ ಕಾಂಗ್ರೆಸ್ ಅತ್ಯಂತ ಕಡಿಮೆ ಸ್ಥಾನ ಪಡೆಯಿತು ಎಂದು ಟೀಕಿಸಿದರು.
ಆಳಂದ ಕ್ಷೇತ್ರದ ಮತಕಳ್ಳತನದ ಎಸ್ಐಟಿ ಚಾರ್ಜ್ಶೀಟ್ ಸಲ್ಲಿಕೆ ಬಗ್ಗೆ, ಚಾರ್ಜ್ಶೀಟ್ ಸಲ್ಲಿಸಿದ ತಕ್ಷಣ ಏನೂ ಆಗಲ್ಲ. ಎಸ್ಐಟಿ ಯಾವ ರೀತಿ ತನಿಖೆ ಮಾಡಿದೆ? ಕೋರ್ಟ್ನಲ್ಲಿ ಎಲ್ಲವೂ ಸಾಬೀತಾಗಬೇಕಿದೆ, ಸತ್ಯ ಹೊರಬರುತ್ತೆ ಎಂದು ತಿಳಿಸಿದರು.
ಬೀದಿಗಳಲ್ಲಿ ಮೆರವಣಿಗೆ ಮಾಡಿರುವುದು ಅನಾಗರಿಕತೆ: ಸವಣೂರು ಮೆರವಣಿಗೆ ಪ್ರಕರಣ ಸಂಬಂಧ ಮಾತನಾಡಿ, ಕಾನೂನು ಕೈಗೆತ್ತಿಕೊಂಡಿದ್ದಾರೆ. ತಪ್ಪು ಮಾಡಿದರೆ ಶಿಕ್ಷೆ ಆಗಬೇಕು. ಅದಕ್ಕಿಂತ ಮುಂಚೆ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿರುವುದು ಅನಾಗರಿಕತೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶ ಇಲ್ಲ. ಪೊಲೀಸರು ನಿಷ್ಕ್ರಿಯರಾಗಿದ್ದು, ಅವರ ನಿರ್ಲಕ್ಷ್ಯದಿಂದ ಈ ರೀತಿಯಾಗಿದೆ. ಸರ್ಕಾರವು ಒಂದು ವರ್ಗವನ್ನು ಓಲೈಸುತ್ತಿರುವ ಪರಿಣಾಮ ಇದಾಗಿದೆ ಎಂದು ಬೊಮ್ಮಾಯಿ ಆರೋಪಿಸಿದರು.
ಇದನ್ನೂ ಓದಿ: ಸ್ವಯಂಕೃತವಾಗಿ ಮತಕಳ್ಳತನ ಮಾಡುವವರ ಮೇಲೆ ಪ್ರಧಾನಿ ಮೋದಿ ಅಂಕುಶ: ಕೇಂದ್ರ ಸಚಿವ ಸಿಂಧಿಯಾ

