ETV Bharat / state

ಚಾಲನಾ ಪರವಾನಗಿಯಲ್ಲಿ ಜನನ ದಿನಾಂಕ, ಪೋಷಕರ ಹೆಸರು ತಿದ್ದುಪಡಿಗಿಲ್ಲ ಅವಕಾಶ: ನಿಯಮ ಸರಳಗೊಳಿಸಲು ಸಾರ್ವಜನಿಕರ ಒತ್ತಾಯ

ಅರ್ಜಿದಾರರು ಜನನ ಪ್ರಮಾಣಪತ್ರ, ಶಾಲಾ ದಾಖಲಾತಿ ಅಥವಾ ಆಧಾರ್ ಕಾರ್ಡ್ ಮುಂತಾದ ದಾಖಲೆಗಳನ್ನು ಸಲ್ಲಿಸಿದರೂ ಚಾಲನ ಪರವಾನಗಿಯಲ್ಲಿ ತಿದ್ದುಪಡಿಗೆ ಅವಕಾಶ ಇಲ್ಲ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat Graphics)
author img

By ETV Bharat Karnataka Team

Published : January 8, 2026 at 8:21 AM IST

3 Min Read
Choose ETV Bharat

ವಿಶೇಷ ವರದಿ: ಪ್ರಕಾಶ್ ಜಿ. ಕೋಡಿಂಬಾಳ

ಕಡಬ/ದ.ಕ: ಚಾಲನಾ ಪರವಾನಗಿ (Driving Licence) ಎನ್ನುವುದು ಕೇವಲ ವಾಹನ ಚಾಲನೆಗೆ ಮಾತ್ರವಲ್ಲ, ನಾಗರಿಕರ ಗುರುತಿನ ಪ್ರಮುಖ ದಾಖಲೆಗಳಲ್ಲೊಂದು. ಆದರೆ ಇಂತಹ ಮಹತ್ವದ ದಾಖಲೆಗಳಲ್ಲಿ ಸಂಭವಿಸಿರುವ ಪೋಷಕರ ಹೆಸರು ತಿದ್ದುಪಡಿ ಮತ್ತು ಜನನ ದಿನಾಂಕದ ತಪ್ಪುಗಳನ್ನು ತಿದ್ದುಪಡಿ ಮಾಡಲು ಅವಕಾಶವೇ ಇಲ್ಲ ಎನ್ನುವ ಕಠಿಣ ನಿಯಮ ಸಾರ್ವಜನಿಕರನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ.

ರಾಜ್ಯಾದ್ಯಂತ ಅನೇಕರು, ತಮ್ಮ ಚಾಲನಾ ಪರವಾನಗಿಯಲ್ಲಿ ಪೊಷಕರ ಹೆಸರಿನ ಅಕ್ಷರದ ತಪ್ಪುಗಳು, ಜನನ ವರ್ಷ ಅಥವಾ ದಿನಾಂಕದ ಲಘು ವ್ಯತ್ಯಾಸ ಕಂಡುಬಂದರೂ, ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯವಾಗದೇ ಆರ್‌ಟಿಓ ಕಚೇರಿಗಳ ಮೆಟ್ಟಿಲು ಹತ್ತಿ ಹತ್ತಿ ಬೇಸತ್ತಿದ್ದಾರೆ.

ಕಾನೂನು ಏನು ಹೇಳುತ್ತದೆ?: ಮೋಟಾರ್ ವಾಹನ ಕಾಯ್ದೆ ಹಾಗೂ ಸಾರಿಗೆ ಇಲಾಖೆಯ ಪ್ರಚಲಿತ ಮಾರ್ಗಸೂಚಿಗಳ ಪ್ರಕಾರ, ಒಮ್ಮೆ ದಾಖಲಾಗಿರುವ ಜನನ ದಿನಾಂಕವನ್ನು ಮತ್ತು ಪೊಷಕರ ಹೆಸರು ತಿದ್ದುಪಡಿ ಮಾಡಲು ಅವಕಾಶ ಇಲ್ಲ. ಅರ್ಜಿದಾರರು ಜನನ ಪ್ರಮಾಣಪತ್ರ, ಶಾಲಾ ದಾಖಲಾತಿ ಅಥವಾ ಆಧಾರ್ ಕಾರ್ಡ್ ಮುಂತಾದ ದಾಖಲೆಗಳನ್ನು ಸಲ್ಲಿಸಿದರೂ ಸಹ, ನಿಯಮ ಅವಕಾಶ ನೀಡುವುದಿಲ್ಲ ಎನ್ನುವ ಒಂದೇ ಉತ್ತರ ದೊರೆಯುತ್ತಿದೆ.

ಸಾಮಾನ್ಯ ಜನರ ಸಂಕಷ್ಟಗಳು:

  • ಉದ್ಯೋಗ ಅರ್ಜಿ ಸಲ್ಲಿಸುವಾಗ ದಾಖಲೆಗಳ ನಡುವೆ ವ್ಯತ್ಯಾಸ ಬ್ಯಾಂಕ್, ವಿಮಾ ಹಾಗೂ ಪಿಂಚಣಿ ಪ್ರಕ್ರಿಯೆಗಳಲ್ಲಿ ಅಡಚಣೆ
  • ಪಾಸ್‌ಪೋರ್ಟ್, ಸರ್ಕಾರಿ ಯೋಜನೆಗಳಲ್ಲಿ ಸಮಸ್ಯೆ, ವಯೋಮಿತಿ ಆಧಾರಿತ ಸೌಲಭ್ಯ ಕಳೆದುಕೊಳ್ಳುವ ಆತಂಕ
  • ಇದೆಲ್ಲದರ ಪರಿಣಾಮವಾಗಿ, ಸಾಮಾನ್ಯ ನಾಗರಿಕರು ತಪ್ಪು ತಮ್ಮದಲ್ಲದಿದ್ದರೂ ಅದರ ಬೆಲೆ ಕಟ್ಟುವಂತಾಗಿದೆ.

ಜನರ ಆಕ್ರೋಶ: ಆಧುನಿಕ ಯುಗದಲ್ಲಿ ಆಧಾರ್, ಪಾಸ್‌ಪೋರ್ಟ್‌ನಲ್ಲಿ ತಿದ್ದುಪಡಿ ಸಾಧ್ಯವಾಗುವಾಗ, ಚಾಲನಾ ಪರವಾನಗಿಯಲ್ಲಿ ಯಾಕೆ ಇಲ್ಲ? ಎಂಬ ಪ್ರಶ್ನೆ ಜನರಿಂದ ಕೇಳಿಬರುತ್ತಿದೆ. ತಂತ್ರಜ್ಞಾನ ಯುಗದಲ್ಲಿ ಇಂತಹ ನಿಯಮಗಳು ಜನವಿರೋಧಿ ಎನ್ನುವ ಅಭಿಪ್ರಾಯವೂ ಒಂದು ಕಡೆ ವ್ಯಕ್ತವಾಗುತ್ತಿದೆ.

ಪರಿಹಾರ ಏನು?: ವಿಶೇಷ ಕಾನೂನು ತಜ್ಞರ ಅಭಿಪ್ರಾಯದಂತೆ, ದಾಖಲೆಗಳ ನಿಖರ ಪರಿಶೀಲನೆಯೊಂದಿಗೆ, ನಿಗದಿತ ಅವಧಿ ಹಾಗೂ ಶುಲ್ಕದ ಮೂಲಕ, ವಿಶೇಷ ಸಮಿತಿಯ ಅನುಮೋದನೆಯೊಂದಿಗೆ ಜನನ ದಿನಾಂಕ ಮತ್ತು ಪೋಷಕರ ಹೆಸರು ತಿದ್ದುಪಡಿ ಮಾಡಲು ಅವಕಾಶ ನೀಡಿದರೆ, ನಕಲಿ ತಿದ್ದುಪಡಿ ತಡೆದು ನಿಜವಾದ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎನ್ನುವುದು ಜನರ ವಾದ.

ಸಾರ್ವಜನಿಕರ ನಿರೀಕ್ಷೆ: ಹಲವು ವರ್ಷಗಳ ಹಿಂದೆ ಶಾಲಾ ದಾಖಲಾತಿ ಸಮಯದಲ್ಲಿ ಪೋಷಕರ ಎಡವಟ್ಟಿನಿಂದಾಗಿ ತತ್ಸಮಾನ(ಎಸ್ಎಸ್ಎಲ್‌ಸಿ) ಸರ್ಟಿಫಿಕೇಟ್‌ನಲ್ಲಿ ಆದ ತೊಂದರೆಗಳನ್ನು ಸಾರಿಗೆ ಇಲಾಖೆ ಹಾಗೂ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ, ಜನಪರ ಹಾಗೂ ಸೂಕ್ತ ತಿದ್ದುಪಡಿ ನೀತಿ ಜಾರಿಗೆ ತರಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಚಾಲನಾ ಪರವಾನಗಿಯಲ್ಲಿ ತಿದ್ದುಪಡಿ ಯಾಕೆ ಅಸಾಧ್ಯ?: ಚಾಲನಾ ಪರವಾನಗಿಯಲ್ಲಿ ಜನನ ದಿನಾಂಕ ಹಾಗೂ ತಂದೆಯ/ಪೋಷಕರ ಹೆಸರಿನ ತಿದ್ದುಪಡಿಗೆ ಅವಕಾಶ ಇಲ್ಲದಿರುವ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಓ) ವಿಶ್ವನಾಥ್ ಅವರು, ಈ ನಿಯಮದ ಹಿಂದಿನ ವಾಸ್ತವ ಹಾಗೂ ಕಾನೂನು ಸವಾಲುಗಳನ್ನು ಸ್ಪಷ್ಟಪಡಿಸಿದ್ದಾರೆ.

"ಸಾರಿಗೆ ನಿಯಮಗಳ ಪ್ರಕಾರ ಚಾಲನಾ ಪರವಾನಿಗೆಯಲ್ಲಿ ಪರವಾನಿಗೆದಾರನ ಪೋಷಕರ ಹೆಸರು ಹಾಗೂ ಜನನ ದಿನಾಂಕ ತಿದ್ದುಪಡಿಗೆ ಅವಕಾಶ ನೀಡಲಾಗಿಲ್ಲ. ಸಾಮಾನ್ಯವಾಗಿ ಶಾಲೆಯ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರದ ಆಧಾರದ ಮೇಲೆ ಈ ವಿವರಗಳನ್ನು ದಾಖಲಿಸಲಾಗುತ್ತದೆ, ಆದರೆ ಹಿಂದಿನ ಕಾಲಘಟ್ಟದದಲ್ಲಿ ಅಥವಾ ಹಳೆಯ ದಿನಗಳಲ್ಲಿ ಮಕ್ಕಳನ್ನು ಶಾಲೆಗೆ ದಾಖಲಿಸುವಾಗ, ಒಂದೆರಡು ತಿಂಗಳು ಅಥವಾ ಕೆಲವು ದಿನಗಳನ್ನು ಹೆಚ್ಚು-ಕಡಿಮೆ ಮಾಡಿ ದಾಖಲಾತಿ ಮಾಡುವ ಪದ್ಧತಿ ಇತ್ತು. ಆ ಕಾಲದ ಸಣ್ಣ ವ್ಯತ್ಯಾಸಗಳು ಈಗ ಚಾಲನಾ ಪರವಾನಗಿ ಮಾಡಿಸುವ ಸಂದರ್ಭದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿವೆ" ಎಂದು ವಿಶ್ವನಾಥ್ ಹೇಳಿದರು.

ತಿದ್ದುಪಡಿ ಅವಕಾಶ ನೀಡಿದರೆ ಏನಾಗಬಹುದು?: ಜನನ ದಿನಾಂಕ ಮತ್ತು ಪೋಷಕರ ಹೆಸರನ್ನು ತಿದ್ದುಪಡಿ ಮಾಡಲು ಅವಕಾಶ ನೀಡಿದರೆ, ಅದರ ಪರಿಣಾಮ ವೈಯಕ್ತಿಕ ದಾಖಲೆಗಳ ಮಿತಿಯನ್ನು ಮೀರಿ, ನ್ಯಾಯಾಂಗ ಹಾಗೂ ಆರ್ಥಿಕ ವ್ಯವಸ್ಥೆಯವರೆಗೂ ತಲುಪಬಹುದು ಎಂಬ ಆತಂಕವನ್ನು ಆರ್‌ಟಿಓ ವ್ಯಕ್ತಪಡಿಸಿದರು. "ಪ್ರಸ್ತುತ ನ್ಯಾಯಾಲಯಗಳಲ್ಲಿ ತನಿಖೆ ನಡೆಯುತ್ತಿರುವ ವಾಹನ ಅಪಘಾತ ಪ್ರಕರಣಗಳು, ಹಾಗೂ ಕೋಟಿ ಗಟ್ಟಲೆ ಮೊತ್ತದ ಇನ್ಶುರೆನ್ಸ್‌ ದಾವೆಗಳು ಜನನ ದಿನಾಂಕ ಹಾಗೂ ಗುರುತಿನ ವಿವರಗಳ ಮೇಲೆ ಅವಲಂಬಿತವಾಗಿವೆ. ಇಂತಹ ಸಂದರ್ಭದಲ್ಲಿ ಈ ಎರಡು ಅಂಶಗಳಿಗೆ ತಿದ್ದುಪಡಿ ಅವಕಾಶ ನೀಡಿದರೆ, ವ್ಯವಸ್ಥೆಯನ್ನೇ ಅಸ್ಥಿರಗೊಳಿಸುವ ಸಾಧ್ಯತೆ ಇದೆ" ಎಂದು ಅವರು ಎಚ್ಚರಿಸಿದರು.

ಪರಿಹಾರ ಏನು?: "ಈ ವಿಷಯವು ಕೇವಲ ಆಡಳಿತಾತ್ಮಕ ವಿಷಯವಲ್ಲ, ಕಾನೂನು ಸಂಬಂಧಿತ ಗಂಭೀರ ವಿಚಾರವಾಗಿರುವುದರಿಂದ, ಈ ಬಗ್ಗೆ
ಸಾಧಕ–ಭಾದಕಗಳನ್ನು ಆಳವಾಗಿ ಪರಿಶೀಲನೆ ಮಾಡಬೇಕಾಗುತ್ತದೆ. ನುರಿತ ಕಾನೂನು ತಜ್ಞರ ಸಲಹೆ ಪಡೆದು, ನಂತರ ಮಾತ್ರ ಸಾರಿಗೆ ಇಲಾಖೆ ಮೂಲಕ ಯಾವುದೇ ಬದಲಾವಣೆ ತರಬೇಕಾಗುತ್ತದೆ" ಎಂದು ಆರ್‌ಟಿಓ ವಿಶ್ವನಾಥ್ ಸ್ಪಷ್ಟಪಡಿಸಿದರು.

ಜನರ ಪರದಾಟ – ನೀತಿ ಮೌನ: ಒಂದೆಡೆ ಜನರ ನಿಜವಾದ ದಾಖಲೆ ಸಮಸ್ಯೆಗಳು, ಮತ್ತೊಂದೆಡೆ ಕಾನೂನು ಮತ್ತು ಇನ್ಶುರೆನ್ಸ್‌ ವ್ಯವಸ್ಥೆಯ ಸೂಕ್ಷ್ಮ ಸಮತೋಲನ — ಈ ಎರಡರ ನಡುವೆ ಸಾಮಾನ್ಯ ನಾಗರಿಕ ಸಿಲುಕಿಕೊಂಡಿದ್ದಾರೆ. ಸರ್ಕಾರ ಮತ್ತು ಸಾರಿಗೆ ಇಲಾಖೆ ಈ ಬಗ್ಗೆ ಪರ್ಯಾಯ ಪರಿಹಾರ ಅಥವಾ ವಿಶೇಷ ವ್ಯವಸ್ಥೆ ರೂಪಿಸಬೇಕೆಂಬುದು ಸಾರ್ವಜನಿಕರ ಒತ್ತಾಯ.

ಇದನ್ನೂ ಓದಿ: ರೂ. 500 ಟಾಫ್ರಿಕ್​ ಚಲನ್​ಗೆ 6 ಲಕ್ಷ ಕಳೆದುಕೊಂಡ ವ್ಯಕ್ತಿ! ಸಜ್ಜನರ್​ ಹೇಳಿದ್ದೇನು ಗೊತ್ತಾ?