ETV Bharat / state

ಬಳ್ಳಾರಿ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯತೆ ಇಲ್ಲ: ಗೃಹ ಸಚಿವ ಡಾ. ಜಿ. ಪರಮೇಶ್ವರ್

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಬಳ್ಳಾರಿ ಪ್ರಕರಣವನ್ನು ಸಿಬಿಐಗೆ ವಹಿಸುವ ಕುರಿತು ಪ್ರತಿಕ್ರಿಯಿಸಿದ್ದಾರೆ.

Home Minister G parameshwar
ಗೃಹ ಸಚಿವ ಡಾ. ಜಿ. ಪರಮೇಶ್ವರ್ (ETV Bharat)
author img

By ETV Bharat Karnataka Team

Published : January 8, 2026 at 4:29 PM IST

2 Min Read
Choose ETV Bharat

ಬೆಂಗಳೂರು: ಬಳ್ಳಾರಿ ಘಟನೆ ಪ್ರಕರಣದ‌ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಪ್ರಕರಣವನ್ನು ತನಿಖೆ ಮಾಡುವ ಸಾಮರ್ಥ್ಯ ನಮ್ಮ ಪೊಲೀಸರಿಗೆ ಇದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೊಲೀಸರಿಗೆ ತನಿಖೆ ಮಾಡಲು ಆಗುವುದಿಲ್ಲ ಎಂಬ ಸಂದರ್ಭ ಬಂದರೆ ಸಿಬಿಐಗೆ ನೀಡುವ ಬಗ್ಗೆ ಮಾತನಾಡಬಹುದು. ಈಗಾಗಲೇ ಯಾವುದೇ ಪ್ರಕರಣಗಳನ್ನು ಸಿಬಿಐಗೆ ನೀಡುವುದಿಲ್ಲ ಎಂದು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡಲಾಗಿದೆ‌. ಸಿಬಿಐಗೆ ಕೊಡುವ ಅಗತ್ಯತೆಯೂ ಇಲ್ಲ ಎಂದು ತಿಳಿಸಿದ್ದಾರೆ.

ಬಳ್ಳಾರಿ ಪ್ರಕರಣದ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದಾರೆ (ETV Bharat)

ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು. ಕೇಂದ್ರದಲ್ಲಿ ಬೃಹತ್ ಕೈಗಾರಿಕೆ ಸಚಿವರಾಗಿದ್ದಾರೆ. ನನ್ನ ಬಗ್ಗೆ ವೈಯಕ್ತಿಕವಾಗಿ ಹೇಳಿಕೆ ಕೊಟ್ಟಿದ್ದಾರೆ. ರಬ್ಬರ್ ಸ್ಟ್ಯಾಂಪ್ ಎಂದಿದ್ದಾರೆ. ನಾನು ಅವರ ಬಗ್ಗೆ ನಾನು ಏನು ಬೇಕಾದರೂ ಮಾತನಾಡಬಹುದು. ಅವರು ಬಹಳ ಜವಾಬ್ದಾರಿಯುತವಾಗಿ ಹೇಳಿಕೆ ಕೊಟ್ಟಿದ್ದಾರೆ ಎಂದು ಭಾವಿಸುತ್ತೇನೆ. ಅದನ್ನು ಸ್ವೀಕಾರ ಮಾಡುತ್ತೇನೆ ಎಂದಿದ್ದಾರೆ.

ರಾಜ್ಯದಲ್ಲಿ ಕಾನೂನು ವ್ಯವಸ್ಥೆಯನ್ನು ಯಾವ ರೀತಿ ಆಡಳಿತ ಮಾಡಬೇಕು ಎಂಬ ಅರಿವು ನನಗಿದೆ ಎಂದು ಅವರಿಗೆ ಹೇಳ ಬಯಸುತ್ತೇನೆ. 38 ವರ್ಷ ರಾಜಕಾರಣದಲ್ಲಿದ್ದೇನೆ. ಅನೇಕ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಕುಮಾರಸ್ವಾಮಿಯವರ ಜೊತೆಗೂ ಕೆಲಸ ಮಾಡಿದ್ದೇನೆ. ಹಾಗಾಗಿ ನನ್ನ ಸಾಮರ್ಥ್ಯ ಮತ್ತು ವ್ಯಕ್ತಿತ್ವವೂ ಅವರಿಗೆ ಗೊತ್ತಿದೆ. ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ‌ ಎಂದು ಹೇಳಿದ್ದಾರೆ.

ಹುಬ್ಬಳ್ಳಿ ಘಟನೆಯ ವೇಳೆ ಮಹಿಳೆಯನ್ನು ವಿವಸ್ತ್ರಗೊಳಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹುಬ್ಬಳ್ಳಿ ಘಟನೆಯ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ. ನಾವು ಮಹಿಳೆಯನ್ನು ವಿವಸ್ತ್ರಗೊಳಿಸಿಲ್ಲ. ಅರೆಸ್ಟ್ ಮಾಡುವ ಸಂದರ್ಭದಲ್ಲಿ ಮಹಿಳೆಯೇ ಆ ರೀತಿ ಮಾಡಿಕೊಂಡಿದ್ದಾರೆ ಎನ್ನುವ ಸ್ಪಷ್ಟನೆಯನ್ನು ಕಮಿಷನರ್ ನೀಡಿದ್ದಾರೆ. ಕಮಿಷನರ್ ಸ್ಪಷ್ಟಪಡಿಸಿದ ಮೇಲೆ ಅದಕ್ಕಿಂತ ಇನ್ನೇನು ಬೇಕಾಗಿದೆ ಎಂದಿದ್ದಾರೆ.

ಎಲ್ಲದರಲ್ಲೂ ರಾಜಕೀಯ ಮಾಡುವುದು ಒಳ್ಳೆಯದಲ್ಲ‌. ಹೆಣ್ಣುಮಗಳ ವಿಚಾರವನ್ನು ಕೈಗೆತ್ತಿಕೊಂಡು ರಾಜಕೀಯ ಮಾಡುವುದು ಸರಿ ಕಾಣುವುದಿಲ್ಲ ಎಂದು ಹೇಳಿದ್ದಾರೆ.

ಯಾವ ಪಕ್ಷದವರನ್ನು ಅವರ ರಾಜಕೀಯ ಪಕ್ಷದ ಹಿನ್ನೆಲೆಯಲ್ಲಿ ಟಾರ್ಗೆಟ್ ಮಾಡುವುದಿಲ್ಲ. ಪೊಲೀಸರು ಆ ರೀತಿ ಕೆಲಸ ಮಾಡಲು ಸಾಧ್ಯವಿಲ್ಲ, ಮಾಡಕೂಡದು. ಇದಕ್ಕೆ ಯಾವುದೇ ಅವಕಾಶಗಳನ್ನು ಕೊಡುವುದಿಲ್ಲ. ಯಾವುದೇ ರಾಜಕೀಯ ದುರುದ್ದೇಶದಿಂದ ಪೊಲೀಸರು ವರ್ತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಕ್ರಮ ಬಾಂಗ್ಲಾ ವಲಸಿಗರನ್ನು ಹಿಡಿದು, ಗಡಿಪಾರು ಮಾಡಲಾಗುತ್ತಿದೆ. ಈಗಾಗಲೇ ಸಾಕಷ್ಟು ಪ್ರಕರಣಗಳನ್ನು ಮಾಡಿದ್ದೇವೆ. ಬಾಂಗ್ಲಾ ದೇಶದವರು ರಾಜ್ಯದಲ್ಲಿ ಅನಧಿಕೃತವಾಗಿ ಎಲ್ಲಿಯೇ ಇದ್ದರೂ ಪತ್ತೆ ಹಚ್ಚಿ, ಗಡಿಪಾರು ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಪೊಲೀಸರ ಹಲ್ಲೆ ಆರೋಪ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?