ETV Bharat / state

ಉದ್ಯೋಗಿಯ ಗ್ರಾಚ್ಯುಟಿ ಹಣದಿಂದ ಬಾಕಿ ಮೊತ್ತವನ್ನು ಕಡಿತಗೊಳಿಸಲು ಅವಕಾಶವಿಲ್ಲ: ಹೈಕೋರ್ಟ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಮಂಡ್ಯ ವಿಭಾಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ ಹಗಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

No deduction of dues from employee's gratuity money: High Court
ಉದ್ಯೋಗಿಯ ಗ್ರಾಚ್ಯುಟಿ ಹಣದಿಂದ ಬಾಕಿ ಮೊತ್ತವನ್ನು ಕಡಿತಗೊಳಿಸಲು ಅವಕಾಶವಿಲ್ಲ: ಹೈಕೋರ್ಟ್ (ETV Bharat)
author img

By ETV Bharat Karnataka Team

Published : September 2, 2026 at 7:06 PM IST

2 Min Read
Choose ETV Bharat

ಬೆಂಗಳೂರು: ನೌಕರರಿಗೆ ಪಾವತಿಸಬೇಕಾದ ಗ್ರಾಚ್ಯುಟಿ ಮೊತ್ತದಿಂದ ಸಂಸ್ಥೆಗೆ ಬರಬೇಕಾದ ಬಾಕಿ, ಬಡ್ಡಿ ಸೇರಿದಂತೆ ಯಾವುದೇ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಂಸ್ಥೆಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಕಾರ್ಮಿಕ ಇಲಾಖೆಯ ಮೇಲ್ಮನವಿ ಪ್ರಾಧಿಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಮಂಡ್ಯ ವಿಭಾಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ ಹಗಡೆ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

1972ರ ಗ್ರಾಚ್ಯುಟಿ ಪಾವತಿ ಕಾಯ್ದೆಯ ಸೆಕ್ಷನ್ 4(6)ರ ಪ್ರಕಾರ, ಸಂಸ್ಥೆಗೆ ನೌಕರನಿಂದ ತೀವ್ರ ಆರ್ಥಿಕ ನಷ್ಟವಾಗಿದ್ದರೆ ಅಥವಾ ನೌಕರನು ಸಮಾಜಘಾತುಕ ನಡವಳಿಕೆಯಿಂದ ವಜಾಗೊಂಡಿದ್ದರೆ ಮಾತ್ರ ಗ್ರಾಚ್ಯುಟಿ ತಡೆಯಲು ಅವಕಾಶವಿದೆ. ಸಂಸ್ಥೆಯ ಹೊರಡಿಸುವ ಆಂತರಿಕ ಸುತ್ತೋಲೆಗಳು ಮೂಲ ಕಾಯ್ದೆಯ ಶಾಸನಬದ್ದ ನಿಯಮಗಳನ್ನು ಉಲ್ಲಂಘಿಸಲು ಅವಕಾಶವಿಲ್ಲ. ಮರು ಸೇರ್ಪಡೆಯಾದ ನೌಕರನಿಂದ ಬಡ್ಡಿ ವಸೂಲಿ ಮಾಡುವ ಸಂಸ್ಥೆಯ 2007ರ ಸುತ್ತೋಲೆ ಕಾನೂನು ಬದ್ಧವಾಗಿದ್ದರೂ, ಆ ಬಡ್ಡಿ ಬಾಕಿಯನ್ನು ಶಾಸನಬದ್ಧವಾಗಿ ರಕ್ಷಿಸಲ್ಪಟ್ಟಿರುವ ಗ್ರಾಚ್ಯುಟಿ ಹಣದಿಂದ ಕಡಿತಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೀಠ ಹೇಳಿದೆ.

ಸಂಸ್ಥೆಗೆ ನೌಕರನಿಂದ ಯಾವುದೇ ಬಡ್ಡಿ ಅಥವಾ ಬಾಕಿ ಬರಬೇಕಿದ್ದರೆ, ಅದನ್ನು ಗ್ರಾಚ್ಯುಟಿ ಹೊರತುಪಡಿಸಿ ನೌಕರನಿಗೆ ಸಿಗಬೇಕಾದ ಇತರ ಸೌಲಭ್ಯಗಳಿಂದ ಅಥವಾ ಕಾನೂನುಬದ್ಧವಾದ ಇತರ ಮಾರ್ಗಗಳ ಮೂಲಕ ವಸೂಲಿ ಮಾಡಬಹುದಾಗಿದೆ. ಆದರೆ, ಗ್ರಾಚ್ಯುಟಿ ಹಣವನ್ನು ಕಡಿತಗೊಳಿಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿರುವ ಪೀಠವು, ಕೆಎಸ್‌ಆರ್‌ಟಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೋಳಿಸಿದೆ. ಅಲ್ಲದೇ, ಕಾರ್ಮಿಕ ಇಲಾಖೆಯ ನಿಯಂತ್ರಣ ಪ್ರಾಧಿಕಾರ ನೀಡಿದ್ದ 1,00,248 ರೂ. ಗ್ರಾಚ್ಯುಟಿ ಬಾಕಿ ಮತ್ತು ಬಡ್ಡಿ ಪಾವತಿ ಆದೇಶವನ್ನು ಎತ್ತಿಹಿಡಿದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಮಂಡ್ಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರಾಚಾರಿ ಅವರನ್ನು 1997ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಸಂಸ್ಥೆಯು 46,910 ರೂ. ಗಳನ್ನು ಗ್ರಾಚ್ಯುಟಿ ಪಾವತಿಸಲಾಗಿತ್ತು.

ಬಳಿಕ ವಜಾ ಆದೇಶವನ್ನು ಚಂದ್ರಶೇಖರಾಚರಿ ಕಾರ್ಮಿಕ ಇಲಾಖೆಯ ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ್ದ ಪ್ರಾಧಿಕಾರ, ಮತ್ತೆ ಸೇವೆಗೆ ನಿಯೋಜಿಸಿಕೊಳ್ಳಲು ಸೂಚನೆ ನೀಡಿತ್ತು. ಪರಿಣಾಮ, 2000ನೇ ಇಸವಿಯಲ್ಲಿ ಅವರನ್ನು ಮರಳಿ ಸೇವೆಗೆ ಸೇರಿಕೊಂಡಿದ್ದರು. ಸಂಸ್ಥೆಯ ನಿಯಮಾವಳಿ ಮತ್ತು 2007ರ ಸುತ್ತೋಲೆಯಂತೆ, ಮರು ಸೇರ್ಪಡೆಯಾದಾಗ ಮೊದಲು ಪಡೆದ ಗ್ರಾಚ್ಯುಟಿ ಮೊತ್ತವನ್ನು ಶೇ. 11ರಷ್ಟು ಬಡ್ಡಿಯೊಂದಿಗೆ ಸಂಸ್ಥೆಗೆ ಮರು ಪಾವತಿಸಬೇಕಿತ್ತು. ಆದರೆ, ನೌಕರನು ಈ ಮೊತ್ತವನ್ನು ಪಾವತಿಸದೇ 2008ರಲ್ಲಿ ವಯೋನಿವೃತ್ತಿ ಹೊಂದಿದ್ದರು. ಸಂಸ್ಥೆಯು ನಿವೃತ್ತಿ ನಂತರ ಪಾವತಿಸಬೇಕಿದ್ದ ಒಟ್ಟು ಗ್ರಾಚ್ಯುಟಿ ಮೊತ್ತದಿಂದ ನೌಕರನು ಪಾವತಿಸಬೇಕಿದ್ದ 43,048 ರುಗಳ ಬಡ್ಡಿ ಹಣವನ್ನು ಕಡಿತಗೊಳಿಸಿತ್ತು.
ಇದನ್ನು ಪ್ರಶ್ನಿಸಿ ನೌಕರನು ಗ್ರಾಚ್ಯುಟಿ ಪಾವತಿ ಕಾಯ್ದೆಯ ನಿಯಂತ್ರಣ ಪ್ರಾಧಿಕಾರ ಮತ್ತು ಮೇಲ್ಮನವಿ ಪ್ರಾಧಿಕಾರವನ್ನು ಸಂಪರ್ಕಿಸಿದ್ದು, ಎರಡೂ ಪ್ರಾಧಿಕಾರಗಳು ಕಡಿತಗೊಳಿಸಿದ ಹಣವನ್ನು ಶೇ. 10ರಷ್ಟು ಬಡ್ಡಿಯೊಂದಿಗೆ ನೌಕರನಿಗೆ ಪಾವತಿಸುವಂತೆ ಕೆಎಸ್ಆರ್ಟಿಸಿಗೆ ಆದೇಶಿಸಿದ್ದವು. ಈ ಆದೇಶವನ್ನು ಪ್ರಶ್ನಿಸಿ ಕೆಎಸ್ಆರ್ಟಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ:

KPSC ಅಧ್ಯಕ್ಷರನ್ನು ಅಮಾನತುಗೊಳಿಸಿದ್ದ ಆದೇಶ ರದ್ದುಪಡಿಸಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯಪಾಲರ ವಿಶೇಷಾಧಿಕಾರಿಯಿಂದ ಮೇಲ್ಮನವಿ