ETV Bharat / state

ಬೆಳಗಾವಿಗೆ ಮಕ್ಕಳ ಕಳ್ಳರು ಬಂದಿಲ್ಲ, ವದಂತಿಗೆ ಕಿವಿಗೊಡಬೇಡಿ: ಪೊಲೀಸ್ ಕಮಿಷನರ್

ಬೆಳಗಾವಿಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿಯ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.

BELAGAVI  CHILD LIFTER RUMORS  BELAGAVI POLICE COMMISSIONER  ಬೆಳಗಾವಿಗೆ ಮಕ್ಕಳ ಕಳ್ಳರು CHILD LIFTER
ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ (ETV Bharat)
author img

By ETV Bharat Karnataka Team

Published : March 1, 2026 at 12:53 PM IST

2 Min Read
Choose ETV Bharat

ಬೆಳಗಾವಿ: ಬೆಳಗಾವಿ ನಗರಕ್ಕೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಕೇಳಿ ಬಂದಿದೆ. ಇದರಿಂದ ಇಲ್ಲಿನ ಗಾಂಧಿ ನಗರದಲ್ಲಿ ಮಕ್ಕಳ ಕಳ್ಳಿ ಅಂತಾ ತಿಳಿದುಕೊಂಡು ಓರ್ವ ಮಹಿಳೆಯನ್ನು ಸ್ಥಳೀಯರು ಥಳಿಸಿರುವ ಘಟನೆ ನಡೆದಿದೆ‌. ಈ ಸಂಬಂಧ ಸ್ಪಷ್ಟನೆ ನೀಡಿರುವ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು, ಆ ಮಹಿಳೆ ಮಕ್ಕಳ ಕಳ್ಳಿ ಅಲ್ಲ. ಈ ರೀತಿಯ ವದಂತಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ.

ಗಾಂಧಿ ನಗರದಲ್ಲಿ ಮಕ್ಕಳ ಅಪಹರಣ ಮಾಡಲು ಓರ್ವ‌ ಮಹಿಳೆ ಬಂದಿದ್ದಾಳೆ ಅಂತಾ ಸ್ಥಳೀಯರು ಶನಿವಾರ ಬೆಳಗ್ಗೆ ಮಾಹಿತಿ ನೀಡಿದರು. ತಕ್ಷಣ ನಮ್ಮ ಪೊಲೀಸರು ಸ್ಥಳಕ್ಕೆ ಹೋಗಿ ಆ ಮಹಿಳೆಯನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಿದ್ದಾರೆ. ಆ ಮಹಿಳೆ ಬೇರೆ ರಾಜ್ಯದವರಲ್ಲ‌. ನಮ್ಮ ಬೆಳಗಾವಿ ತಾಲೂಕಿನವರೇ ಇದ್ದಾರೆ. ಅವರ ಹಿನ್ನೆಲೆಯನ್ನು ವಿಚಾರಿಸಿದಾಗ, ಆ ಮಹಿಳೆ ಭಿಕ್ಷಾಟನೆ ಮಾಡಿ, ಜೀವನ ನಡೆಸುತ್ತಿರುವುದು ಸ್ಪಷ್ಟವಾಗಿದೆ‌. ಅಲ್ಲದೇ ಆ ಮಹಿಳೆ ಯಾವುದೇ ಅಪರಾಧಿಕ ಹಿನ್ನೆಲೆ ಹೊಂದಿಲ್ಲ ಎಂದು ಭೂಷಣ ಬೊರಸೆ ಸ್ಪಷ್ಟಪಡಿಸಿದರು.

ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ (ETV Bharat)

ಕಳೆದ ಎರಡು ವಾರಗಳಿಂದ ವಾಟ್ಸ್‌ಆ್ಯಪ್​​ನಲ್ಲಿ ಒಂದು ಆಡಿಯೋ ಕ್ಲಿಪ್ ಓಡಾಡುತ್ತಿದೆ. ಅದರಲ್ಲಿ ಓರ್ವ ಮಹಿಳೆ ಹಿಂದಿ ಭಾಷೆಯಲ್ಲಿ ಮಾತನಾಡಿದ್ದು, ತಮ್ಮ ಮಗಳ ಜೊತೆಗೆ ಸೈಕಲ್ ರಿಪೇರಿ ಮಾಡಿಸಲು ಅಂಗಡಿಗೆ ಹೋಗುವಾಗ, ನನ್ನ ಮಗಳನ್ನು ಕಿಡ್ನಾಪ್ ಮಾಡಲು ಪ್ರಯತ್ನಿಸಿದ್ದಾರೆ. ಈ ಘಟನೆ ನಡೆದಿರುವುದು ಕ್ಯಾಂಪ್ ಏರಿಯಾದ ಅಪೋಲೋ ಫಾರ್ಮಸಿ ಎದುರಿಗೆ ಅಂತಾ ಆ ಮಹಿಳೆ ಹೇಳಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ನಾನು ಕ್ಯಾಂಪ್ ಸಿಪಿಐ ಅವರಿಗೆ ಸೂಚಿಸಿದ್ದೆ. ಆ ಪ್ರಕಾರ ಅವರು ವಿಚಾರಣೆ ನಡೆಸಿದಾಗ, ಆ ಮಹಿಳೆ ಹೇಳಿದ ಯಾವುದೇ ಜಾಗ ಕಂಡು ಬಂದಿಲ್ಲ ಎಂದರು.

ಕಳೆದೆರಡು ತಿಂಗಳಲ್ಲಿ ಯಾವುದೇ ಗ್ಯಾಂಗ್​​ನಿಂದ ಮಕ್ಕಳ ಅಪಹರಣ ಸಂಬಂಧ ಬೆಳಗಾವಿಯಲ್ಲಿ ಒಂದೇ ಒಂದು ಪ್ರಕರಣ ಕೂಡ ದಾಖಲಾಗಿಲ್ಲ. ಬಹುಶಃ ಆ ಮಹಿಳೆ ಯಾವುದೋ ಬೇರೆ ಊರಿನ ಕ್ಯಾಂಪ್ ಏರಿಯಾ ಬಗ್ಗೆ ಮಾತಾಡಿರಬಹುದು. ಆ ಮಹಿಳೆ ಮಾತಾಡಿರುವ ಆಡಿಯೋ ಬೆಳಗಾವಿಯಲ್ಲಿ ಹೆಚ್ಚು ಜನರು ಶೇರ್ ಮಾಡಿದ್ದರಿಂದ, ಅದು ಹೆಚ್ಚು ಕಡೆ ಹರಿದಾಡಿದೆ. ಅದನ್ನು ಯಾರೂ ನಂಬಬಾರದು.

ಈ ರೀತಿಯ ಯಾವುದೇ ವಾಟ್ಸ್‌ಆ್ಯಪ್ ಆಡಿಯೋ, ಮೆಸೇಜ್​​​ಗಳನ್ನು ನಂಬಬೇಡಿ. ನಿಮಗೆ ಯಾರ ಬಗ್ಗೆ ಆದರೂ ಸಂಶಯ ಬಂದರೆ, ತಕ್ಷಣ 112 ನಂಬರಿಗೆ ಕರೆ ಮಾಡಿ, 7 ನಿಮಿಷಗಳಲ್ಲಿ ನಮ್ಮ ಸಿಬ್ಬಂದಿ ಮತ್ತು ಅಧಿಕಾರಿಗಳು ನೀವು ಇರುವಲ್ಲಿಗೆ ಬರುತ್ತಾರೆ. ಅನುಮಾನಾಸ್ಪದ ವ್ಯಕ್ತಿಯ ವಿಚಾರಣೆ ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದು ಭೂಷಣ ಬೊರಸೆ ಮನವಿ ಮಾಡಿದರು.

ಇದನ್ನೂ ಓದಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೋಘ ಸಾಧನೆ: ಬೆಳಗಾವಿ ಪೊಲೀಸ್ ಅಧಿಕಾರಿ‌ಗೆ ಐರನ್ ಮ್ಯಾನ್ ಕಿರೀಟ!