ETV Bharat / state

ಬೆಳಗಾವಿ: ಕಸದ ತೊಟ್ಟಿಯಲ್ಲಿ ನವಜಾತ ಗಂಡು ಶಿಶು ಪತ್ತೆ, ಕುರಿಗಾಹಿಯಿಂದ ರಕ್ಷಣೆ

ಕಸದ ತೊಟ್ಟಿಯಲ್ಲಿ ಪತ್ತೆಯಾದ ನವಜಾತ ಶಿಶುವನ್ನು ರಕ್ಷಣೆ ಮಾಡಲಾಗಿದ್ದು, ಸದ್ಯ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಆರೈಕೆ ಪಡೆಯುತ್ತಿದೆ.

BELAGAVI  ನವಜಾತ ಶಿಶು ಪತ್ತೆ  FOUND ABANDONED BABY  ಸುರೇಬಾನ ಪೊಲೀಸ್ ಠಾಣೆ
ಕುರಿಗಾಹಿಯಿಂದ ಕಸದ ತೊಟ್ಟಿಯಲ್ಲಿ ಸಿಕ್ಕ ಶಿಶುವಿನ ರಕ್ಷಣೆ. (ETV Bharat)
author img

By ETV Bharat Karnataka Team

Published : July 8, 2026 at 9:03 AM IST

2 Min Read
Choose ETV Bharat

ಬೆಳಗಾವಿ: ನವಜಾತ ಶಿಶುವನ್ನು ಕಸದ ತೊಟ್ಟಿಗೆ ಎಸೆದು ಹೋಗಿರುವ ಅಮಾನವೀಯ ಘಟನೆ ರಾಮದುರ್ಗ ತಾಲೂಕಿನ ಕಿತ್ತೂರು ಗ್ರಾಮದ ಬಳಿ ನಡೆದಿದೆ.

ಕಿತ್ತೂರಿನಿಂದ ನರಗುಂದಕ್ಕೆ ಹೋಗುವ ಮಾರ್ಗದ ಬಳಿ ಇರುವ ಬಸವಣಕಟ್ಟೆ ಸೇತುವೆ ಕೆಳಭಾಗದಲ್ಲಿ ಕಸದ ತೊಟ್ಟಿಯಲ್ಲಿ ಗಂಡು ಶಿಶು ಪತ್ತೆ ಆಗಿತ್ತು. ಮಗು ಅಳುತ್ತಿರುವ ಶಬ್ದ ಕೇಳಿದ ಕುರಿಗಾಹಿ ಒಬ್ಬರು, ಸ್ಥಳಕ್ಕೆ ಹೋಗಿ ಅದನ್ನು ರಕ್ಷಿಸಿದ್ದಾರೆ.

ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬಳಿಕ, ಮೊದಲು ಚಿಕಿತ್ಸೆಗಾಗಿ ಸವದತ್ತಿಯ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅಲ್ಲಿಯೇ ಮಗು ಆರೈಕೆ ಪಡೆಯುತ್ತಿದ್ದು, ಆರೋಗ್ಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಾಹಿತಿ ಗೊತ್ತಾಗುತ್ತಿದ್ದಂತೆ ಸುರೇಬಾನ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ತಾಯಿಯ ಪತ್ತೆ ಕಾರ್ಯ ಶುರು ಮಾಡಿದ್ದಾರೆ. ಪಕ್ಕದ ಕಿತ್ತೂರು, ಕುರಿಗೋವಿನಕೊಪ್ಪದಲ್ಲಿ ವಿಚಾರಣೆ ಕೈಗೊಂಡಿದ್ದಾರೆ.

ಅಲ್ಲದೇ ಸುರೇಬಾನದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಈ ಸಂಬಂಧ ಸುರೇಬಾನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೈಚೀಲವೊಂದರಲ್ಲಿ ಶಿಶು ಪತ್ತೆ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ ಬಿಟ್ಟು ಹೋದ ಘಟನೆ ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗವಟೂರು ಹೊಳೆ ಬಳಿ ನಡೆದಿತ್ತು. ​

ಸುಮಾರು 10 ರಿಂದ 15 ದಿನಗಳ ಹೆಣ್ಣು ಮಗುವನ್ನು ಕೈಚೀಲವೊಂದರಲ್ಲಿ ಬಿಳಿ ಬಟ್ಟೆಯಲ್ಲಿ ಸುತ್ತಿ ಬಸ್ ನಿಲ್ದಾಣದಲ್ಲಿ ನೇತು ಹಾಕಿ ಹೋಗಿದ್ದರು. ಗವಟೂರು ಗ್ರಾಮದ ರಸ್ತೆ ಪಕ್ಕದ ಸಣ್ಣದೂಂದು ಬಸ್ ನಿಲ್ದಾಣದಲ್ಲಿ ಯಾರು ಇಲ್ಲದ ವೇಳೆ ಚೀಲವನ್ನು ಬಿಟ್ಟು ಪರಾರಿಯಾಗಿದ್ದರು.

ರಾತ್ರಿ ಸುಮಾರು 9 ಗಂಟೆಯ ಸಮಯದಲ್ಲಿ ಬಸ್ ನಿಲ್ದಾಣದ ಹಿಂಭಾಗದ ನಿವಾಸಿಯೊಬ್ಬರಿಗೆ ಮಗುವಿನ ಅಳುವ ಶಬ್ದ ಕೇಳಿಸಿದ್ದು, ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿತ್ತು. ತಕ್ಷಣವೇ ಅವರು ರಿಪ್ಪನ್​ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ರಿಪ್ಪನ್‌ಪೇಟೆ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಹಾಗೂ ಸಿಬ್ಬಂದಿ, ಮಗುವನ್ನು ನೋಡಿ, ರಿಪ್ಪನ್​ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಯಲ್ಲಿ ಮಗುವಿನ ಆರೋಗ್ಯ ಪರೀಕ್ಷಿಸಿದ್ದು, ಮಗು 1.6 ಕೆ.ಜಿ ತೂಕವಿದ್ದು, ಆರೋಗ್ಯವಾಗಿದೆ. ಮಗುವಿನ ರಕ್ಷಣೆಗಾಗಿ ಮಗುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸದ್ಯ ಮಗು ಶಿಶು ಆರೈಕೆ ಕೇಂದ್ರದಲ್ಲಿದೆ.

ನಮಗೆ ಮಾಹಿತಿ ಬರುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಚೀಲದಲ್ಲಿ ಮಗು ಇರುವುದು ತಿಳಿದು ಬಂತು. ಸದ್ಯ ಮಗು ಆರೋಗ್ಯವಾಗಿದೆ‌. ಮಗುವಿನ ಪೋಷಕರ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಿಪ್ಪನ್​ಪೇಟೆ ಪೊಲೀಸ್ ಠಾಣೆಯ ಪಿಎಸ್​ಐ ರಾಜುರೆಡ್ಡಿ ಅವರು ಈಟಿವಿ ಭಾರತ್​ಗೆ ದೂರವಾಣಿಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಬೆಂಗಳೂರು: ಆಂಬ್ಯುಲೆನ್ಸ್​ಗೆ ದಾರಿ ಬಿಡದೇ ವ್ಹೀಲಿಂಗ್ ಮಾಡಿದ್ದ ಆರು ಮಂದಿ ಪೊಲೀಸರ ವಶಕ್ಕೆ, ದ್ವಿಚಕ್ರವಾಹನಗಳ ಜಪ್ತಿ