ಬಂಡೀಪುರದಲ್ಲಿ ಸಫಾರಿ ನೂತನ ದರ ಜಾರಿ: ಎಂದಿನಂತೆ ಮುಂದುವರಿದ ಪ್ರವಾಸಿಗರ ದಾಂಗುಡಿ
ಮೂರು ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಹಾಗೂ ಟಿಕೆಟ್ ಶುಲ್ಕದಿಂದ ವಿನಾಯಿತಿ ನೀಡಲಾಗಿದ್ದು, ಸಫಾರಿ ವೇಳೆ ಅವರು ಪೋಷಕರ ಆಸನವನ್ನೇ ಹಂಚಿಕೊಳ್ಳಬೇಕು.

Published : September 1, 2026 at 8:49 PM IST
ಚಾಮರಾಜನಗರ: ದೇಶದ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವನ್ಯಜೀವಿ ಸಫಾರಿ ದರ ಪರಿಷ್ಕರಿಸಿ ಅರಣ್ಯ ಇಲಾಖೆಯು ಕಳೆದ ತಿಂಗಳು ಆದೇಶ ಹೊರಡಿಸಿತ್ತು. ನೂತನ ದರ ಇಂದಿನಿಂದ ಜಾರಿಗೆ ಬಂದಿದೆ.
ಬಂಡೀಪುರ ಸಫಾರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರೇ ಬಂದು ಸಫಾರಿ ಮಾಡಿ ಇಲ್ಲಿನ ವನ್ಯಜೀವ ಸಂಕುಲವನ್ನ ನೋಡಿ ಆನಂದಿಸಿದ್ದಾರೆ. ಅದಾದ ಬಳಿಕ, ಶ್ರೀಸಾಮಾನ್ಯರು ಇಲ್ಲಿಗೆ ದಾಂಗುಡಿ ಇಟ್ಟಿದ್ದು, ವಾರಾಂತ್ಯದಲ್ಲಿ ಟಿಕೆಟ್ ಸಿಗುವುದೇ ಒಮ್ಮೊಮ್ಮೆ ಅಸಾಧ್ಯ ಎಂಬಷ್ಟರ ಮಟ್ಟಿಗೆ ಜನಸಂದಣಿ ಇರುತ್ತದೆ.

ಸದ್ಯ, ಬಂಡೀಪುರ ಸಫಾರಿಗೆ ದರ ಪರಿಷ್ಕರಣೆ ಮಾಡಲಾಗಿದ್ದು, ಹೊಸ ದರಪಟ್ಟಿಯ ಪ್ರಕಾರ, ಬಂಡೀಪುರ ಬಸ್ ಸಫಾರಿಗೆ ವಯಸ್ಕರ ಈ ಹಿಂದಿನ ಟಿಕೆಟ್ ದರ 650 ರೂ. ಇದ್ದದ್ದು ಈಗ 1,000 ರೂ.ಗೆ ಏರಿಕೆಯಾಗಿದೆ. ಮಕ್ಕಳ ಟಿಕೆಟ್ ದರ ಈ ಹಿಂದೆ 350 ರೂ. ಇದ್ದದ್ದು, 500 ರೂ.ಗೆ ಹೆಚ್ಚಳ ಮಾಡಲಾಗಿದೆ. ಜೀಪ್ ಸಫಾರಿಗೆ ವಯಸ್ಕರ ಟಿಕೆಟ್ ದರ ಈ ಹಿಂದೆ 1000 ರೂ. ಇದ್ದ ದರ 1,500 ರೂ. ಹಾಗೂ ಮಕ್ಕಳ ಟಿಕೆಟ್ ದರ 500 ಇದ್ದದ್ದು 750 ರೂ. ಗೆ ಹೆಚ್ಚಿಸಲಾಗಿದೆ. 200 ಎಂಎಂ ನಿಂದ ಮೇಲ್ಪಟ್ಟ ಕ್ಯಾಮರಾಗೆ 1500 ರೂ. ಜೊತೆಗೆ ಜಿಎಸ್ಟಿ, ಕಾರು ನಿಲುಗಡೆಗೆ 100 ರೂ., ಲಘು ವಾಹನಗಳಿಗೆ 200 ರೂ. ಮತ್ತು ಬಸ್ ಗಳಿಗೆ 300 ರೂ. ಪಾರ್ಕಿಂಗ್ ಶುಲ್ಕ ನಿಗದಿ ಪಡಿಸಲಾಗಿದೆ.
ಮೂರು ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಹಾಗೂ ಟಿಕೆಟ್ ಶುಲ್ಕದಿಂದ ವಿನಾಯಿತಿ ನೀಡಲಾಗಿದ್ದು, ಸಫಾರಿ ವೇಳೆ ಅವರು ಪೋಷಕರ ಆಸನವನ್ನೇ ಹಂಚಿಕೊಳ್ಳಬೇಕಿದ್ದು ಇಂದಿನಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ.
ಮೊದಲ ದಿನ ಸಫಾರಿಗೆ ಬಂದವರು ಎಷ್ಟು?: ಸಫಾರಿ ದರ ಹೆಚ್ಚಳವಾದ ಬಳಿಕ ಮೊದಲ ದಿನ ಬಂದಿದ್ದ ಪ್ರವಾಸಿಗರ ಮಾಹಿತಿಯನ್ನು ಜಿ.ಎಸ್.ಬೆಟ್ಟ ವಲಯ ಅರಣ್ಯಾಧಿಕಾರಿ ಸತೀಶ್ ಕುಮಾರ್ ಈಟಿವಿ ಭಾರತಕ್ಕೆ ನೀಡಿದ್ದಾರೆ. 191 ಮಂದಿ ಪ್ರವಾಸಿಗರು ಸಫಾರಿ ನಡೆಸಿದ್ದು, ಜಂಗಲ್ ಲಾಡ್ಜ್ಸ್ ಸೇರಿ 2,72,824 ಹಣ ಸಂಗ್ರಹವಾಗಿದೆ. ದರ ಪರಿಷ್ಕರಣೆ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. 4 ಬಸ್ಗಳು 7 ಟ್ರಿಪ್ ನಡೆಸಿದ್ದು, 4 ಕ್ಯಾಂಪರ್ಗಳು 5 ಟ್ರಿಪ್ ಮತ್ತು ಒಂದು ಜಿಪ್ಸಿ ಎರಡು ಟ್ರಿಪ್ ನಡೆಸಿದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಸಫಾರಿ ದರ ಕೊಂಚ ದುಬಾರಿಯಾದರೂ ಪ್ರವಾಸಿಗರು ಪ್ರಕೃತಿ ಸವಿಯಲು ದಾಂಗುಡಿ ಇಟ್ಟಿರುವುದು ಮೊದಲ ದಿನದ ಅಂಕಿ-ಸಂಖ್ಯೆಯಲ್ಲಿ ಕಾಣಲಿದೆ.
ಇದನ್ನೂ ಓದಿ: ಬಂಡೀಪುರ ಸಫಾರಿ ದರ ದುಬಾರಿ: ಸೆ.1 ರಿಂದ ನೂತನ ದರ ಜಾರಿ; ಪರಿಷ್ಕರಣೆಗೆ ತೀವ್ರ ಆಕ್ಷೇಪ

