ETV Bharat / state

ಡಿ.ಕೆ. ಶಿವಕುಮಾರ್​ ಸರ್ಕಾರದಲ್ಲಿ ಸಚಿವರಾದ ಯು. ಟಿ. ಖಾದರ್​: ರಾಜಕೀಯ ಪಯಣ, ಸಾಧನೆಗಳ ಹಿನ್ನೆಲೆ

ವಿಧಾನಸಭೆಯ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಯು.ಟಿ. ಖಾದರ್ ಮತ್ತೊಮ್ಮೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಹಿನ್ನೆಲೆ ಹೀಗಿದೆ.

DAKSHINA KANNADA  ಡಿಕೆ ಶಿವಕುಮಾರ್​ ಯುಟಿ ಖಾದರ್  DK SHIVAKUMAR CABINET
ಯು.ಟಿ. ಖಾದರ್ ಹಿನ್ನೆಲೆ. (ETV Bharat)
author img

By ETV Bharat Karnataka Team

Published : June 3, 2026 at 8:10 PM IST

2 Min Read
Choose ETV Bharat

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್​​ ನಾಯಕ, ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್​​​ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸುವ ಮೂಲಕ ಮತ್ತೊಮ್ಮೆ ರಾಜ್ಯ ಆಡಳಿತದ ಕೇಂದ್ರಬಿಂದುವಾಗಿದ್ದಾರೆ.

ಈವರೆಗೆ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಖಾದರ್​​, ಸಚಿವರಾಗಿ, ಪ್ರತಿಪಕ್ಷ ಉಪನಾಯಕರಾಗಿ ಹಾಗೂ ವಿಧಾನಸಭೆಯ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಅಪರೂಪದ ರಾಜಕೀಯ ಅನುಭವ ಹೊಂದಿದ್ದಾರೆ.

1969ರ ಅಕ್ಟೋಬರ್​​​ 12ರಂದು ಜನಿಸಿದ ಯು.ಟಿ. ಖಾದರ್​ ಫರೀದ್​ ಅವರು ಬಿಎ ಮತ್ತು ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿರುವ ಅವರು, 2007ರಲ್ಲಿ ಉಳ್ಳಾಲ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ್ದರು. ಬಳಿಕ 2008, 2013 ಮತ್ತು 2018ರಲ್ಲಿ ಉಳ್ಳಾಲ ಕ್ಷೇತ್ರದಿಂದಲೇ ಗೆಲುವು ಸಾಧಿಸಿದರು. ಕ್ಷೇತ್ರ ಮರುವಿಂಗಡಣೆಯ ಬಳಿಕ 2023ರಲ್ಲಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಐದನೇ ಬಾರಿ ವಿಧಾನಸಭೆ ಪ್ರವೇಶಿಸಿದರು.

ಸದನದಲ್ಲಿ ಸಕ್ರಿಯ ಭಾಗವಹಿಸುವಿಕೆಗಾಗಿ 2013ರಲ್ಲಿ ಅವರಿಗೆ "ಸದನ ವೀರ" ಪ್ರಶಸ್ತಿ ಲಭಿಸಿತ್ತು. ಜನಸಾಮಾನ್ಯರ ಸಮಸ್ಯೆಗಳನ್ನು ಸದನದಲ್ಲಿ ಪರಿಣಾಮಕಾರಿಯಾಗಿ ಪ್ರಸ್ತಾಪಿಸುವ ನಾಯಕರಾಗಿ ಅವರು ಗುರುತಿಸಿಕೊಂಡಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ ಖಾದರ್, ಆರೋಗ್ಯ ಕ್ಷೇತ್ರದಲ್ಲಿ ಹಲವು ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದರು. ತುರ್ತು ಚಿಕಿತ್ಸಾ ಸೇವೆಗಾಗಿ ಬೈಕ್ ಆಂಬ್ಯುಲೆನ್ಸ್ ವ್ಯವಸ್ಥೆ, ಅಪಘಾತ ಸಂತ್ರಸ್ತರಿಗಾಗಿ ಸಾಂತ್ವನ ಯೋಜನೆ, ಬಿಪಿಎಲ್ ಕುಟುಂಬಗಳಿಗೆ ಉಚಿತ ದಂತಭಾಗ್ಯ ಯೋಜನೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ ಹಾಗೂ ಅಪರೂಪದ ಕಾಯಿಲೆಗಳಿಗೆ ಉಚಿತ ಚಿಕಿತ್ಸೆಯಂತಹ ಕಾರ್ಯಕ್ರಮಗಳು ಅವರ ಅವಧಿಯಲ್ಲಿ ಗಮನ ಸೆಳೆದಿದ್ದವು.

ಬಳಿಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ ವೇಳೆ ಪಡಿತರ ಚೀಟಿ ವಿತರಣೆಯಲ್ಲಿ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಿ ಪಾರದರ್ಶಕತೆಗೆ ಒತ್ತು ನೀಡಿದರು. ಆಧಾರ್ ಆಧಾರಿತ ಸೇವೆಗಳು, ಬಯೋಮೆಟ್ರಿಕ್ ವ್ಯವಸ್ಥೆ ಹಾಗೂ ಪಡಿತರ ವಿತರಣೆಯ ಸುಧಾರಣೆಗೆ ಕ್ರಮ ಕೈಗೊಂಡರು.

ವಸತಿ ಮತ್ತು ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಕಡಿಮೆ ವೆಚ್ಚದ ಮನೆಗಳ ನಿರ್ಮಾಣ ಯೋಜನೆಗಳಿಗೆ ಉತ್ತೇಜನ ನೀಡಿದ ಅವರು, ನಗರಾಭಿವೃದ್ಧಿ ನೀತಿಗಳಲ್ಲಿಯೂ ಹಲವು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದ್ದರು. 2022-23ರ ಅವಧಿಯಲ್ಲಿ ವಿಧಾನಸಭೆಯ ಪ್ರತಿಪಕ್ಷ ಉಪನಾಯಕರಾಗಿಯೂ ಕಾರ್ಯನಿರ್ವಹಿಸಿದ್ದ ಖಾದರ್, ವಿರೋಧ ಪಕ್ಷದ ಧ್ವನಿಯಾಗಿ ಸರ್ಕಾರವನ್ನು ಸದನದಲ್ಲಿ ಪ್ರಶ್ನಿಸುವ ಕೆಲಸ ಮಾಡಿದ್ದರು.

2023ರಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಅವರು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ಸದನದ ಕಾರ್ಯನಿರ್ವಹಣೆಗೆ ಹೊಸ ಚೈತನ್ಯ ನೀಡಿದರು. ವಿದ್ಯಾರ್ಥಿಗಳು, ಯುವಕರು ಹಾಗೂ ವಿವಿಧ ಸಮುದಾಯದ ಜನರಿಗೆ ವಿಧಾನಮಂಡಲದ ಕಾರ್ಯವೈಖರಿಯನ್ನು ನೇರವಾಗಿ ವೀಕ್ಷಿಸುವ ಅವಕಾಶ ಕಲ್ಪಿಸುವಂತಹ ಹಲವು ಹೊಸ ಕ್ರಮಗಳನ್ನು ಆರಂಭಿಸಿದ್ದರು.

ಸರಳ ವ್ಯಕ್ತಿತ್ವ, ಆಡಳಿತಾತ್ಮಕ ಅನುಭವ ಮತ್ತು ಎಲ್ಲ ವರ್ಗದ ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಯು.ಟಿ. ಖಾದರ್, ಇದೀಗ ಮತ್ತೊಮ್ಮೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕರಾವಳಿ ಭಾಗಕ್ಕೆ ಸರ್ಕಾರದಲ್ಲಿ ಮತ್ತಷ್ಟು ಪ್ರಾತಿನಿಧ್ಯ ದೊರೆತಿರುವುದರ ಜೊತೆಗೆ, ಅವರ ಅನುಭವ ಆಡಳಿತಕ್ಕೆ ನೆರವಾಗಲಿದೆ ಎಂಬ ನಿರೀಕ್ಷೆ ಕಾಂಗ್ರೆಸ್ ವಲಯದಲ್ಲಿ ವ್ಯಕ್ತವಾಗುತ್ತಿದೆ. ಕರಾವಳಿಯ ರಾಜಕೀಯದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯವಾಗಿರುವ ಯು. ಟಿ. ಖಾದರ್ ಅವರ ಈ ಹೊಸ ರಾಜಕೀಯ ಅಧ್ಯಾಯದ ಮೇಲೆ ಇದೀಗ ರಾಜ್ಯದ ಗಮನ ನೆಟ್ಟಿದೆ.

ಇದನ್ನೂ ಓದಿ: ಸಿಎಂ ಡಿ.ಕೆ.ಶಿವಕುಮಾರ್ ಸಂಪುಟ ಸಚಿವರ ಸಂಕ್ಷಿಪ್ತ ಮಾಹಿತಿ: ಯಾವ ಸಮುದಾಯಕ್ಕೆ ಎಷ್ಟು ಪ್ರಾತಿನಿಧ್ಯ?