ಗದಗ ಜಿಲ್ಲೆಯ ಈ ಗ್ರಾಮದಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತ; ಜಿಲ್ಲಾಡಳಿತದ ಮಧ್ಯಸ್ಥಿಕೆಯಿಂದ ಹೊಸ ಕಟಿಂಗ್ ಶಾಪ್ ಆರಂಭ
ಗದಗ ಜಿಲ್ಲೆಯ ಶಿಂಗಾಟಾಲೂರು ಗ್ರಾಮದಲ್ಲಿ ಜಿಲ್ಲಾಡಳಿತದ ಮಧ್ಯಸ್ಥಿಕೆಯಿಂದಾಗಿ ಹೊಸ ಕಟಿಂಗ್ ಶಾಪ್ ಆರಂಭವಾಗಿದೆ.

Published : February 28, 2026 at 8:33 PM IST
|Updated : February 28, 2026 at 9:20 PM IST
ವರದಿ : ಮಂಜುನಾಥ್ ಶಿರಸಂಗಿ
ಗದಗ : ಜಿಲ್ಲೆಯ ಮುಂಡರಗಿ ತಾಲೂಕಿನ ಹೊಸ ಶಿಂಗಟಾಲೂರು ಗ್ರಾಮದಲ್ಲಿ ಇಂದಿಗೂ ಅಸ್ಪೃಶ್ಯತೆ ಪದ್ಧತಿ ಜೀವಂತವಾಗಿರುವುದು ಬೆಳಕಿಗೆ ಬಂದಿದೆ. ತಲೆತಲಾಂತರದಿಂದ ದಲಿತ ಸಮುದಾಯದವರಿಗೆ ಕ್ಷೌರ (ಕಟಿಂಗ್) ಮಾಡದ ಸಂಪ್ರದಾಯವನ್ನು ಕೆಲ ಕ್ಷೌರಿಕರು ಮುಂದುವರೆಸಿಕೊಂಡು ಬಂದಿದ್ದು, ಇದಕ್ಕೆ ದಲಿತ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಹೀಗಾಗಿ, ಗ್ರಾಮದಲ್ಲಿ ಹೊಸ ಕಟಿಂಗ್ ಶಾಪ್ ತೆರೆಯಲಾಗಿದೆ.
ಗ್ರಾಮದಲ್ಲಿ ಹಲವು ವರ್ಷಗಳಿಂದ ಹಡಪದ ಕುಟುಂಬಗಳು (ಕ್ಷೌರಿಕರು) ಹಿಂದಿನ ಧಾರ್ಮಿಕ ಸಂಪ್ರದಾಯದ ಪ್ರಕಾರ ದಲಿತರಿಗೆ ಕ್ಷೌರ ನಿರಾಕರಿಸಿದ್ದರು. ಹಡಪದ ಕುಟುಂಬಗಳು ಗ್ರಾಮ ದೇವರು ವೀರಭದ್ರೇಶ್ವರನ ಭಕ್ತರಾಗಿದ್ದಾರೆ. ಪ್ರತಿ ವರ್ಷ ನಿರ್ದಿಷ್ಟ ಹಡಪದ ಜನರು ಕುಟುಂಬದ ಮನೆಗಳಿಗೆ ದೇವರನ್ನು ಕರೆತರುತ್ತಿದ್ದರು. ಆ ಅವಧಿಯಲ್ಲಿ ದಲಿತರಿಗೆ ಸೇವೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಕ್ಷೌರಿಕರು ಹೇಳಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಚಾರ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆ ದಲಿತರು ಜಿಲ್ಲಾಡಳಿತದ ಮೊರೆ ಹೋಗಿದ್ದರು. ವಿಷಯದ ಗಂಭೀರತೆಯನ್ನು ಅರಿತ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ, ಗ್ರಾಮದಲ್ಲಿ ಶಾಂತಿ ಹಾಗೂ ಸಾಮಾಜಿಕ ಸಮಾನತೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಜಿಲ್ಲಾಡಳಿತದ ಸಹಕಾರದೊಂದಿಗೆ ಗ್ರಾಮದ ಬಸ್ ನಿಲ್ದಾಣದ ಸಮೀಪ ಹೊಸ ಕಟಿಂಗ್ ಶಾಪ್ ನಿರ್ಮಾಣ ಮಾಡಲಾಗಿದೆ.
ಸಾಮಾಜಿಕ ಬದಲಾವಣೆಯ ಹೆಜ್ಜೆ: ಹಡಪದ ಸಮಾಜದ ಸಂಘಟನೆಯ ವತಿಯಿಂದ ಈ ಕಟಿಂಗ್ ಶಾಪ್ ಉದ್ಘಾಟನೆಗೊಂಡಿದ್ದು, ಹಡಪದ ಸಮಾಜದ ಮುಖಂಡರಾದ ದೇವು ಹಡಪದ ಅವರ ನೇತೃತ್ವದಲ್ಲಿ ಈ ಸಾಮಾಜಿಕ ಬದಲಾವಣೆಯ ಹೆಜ್ಜೆ ಇಡಲಾಗಿದೆ. ಈ ಹೊಸ ಕಟಿಂಗ್ ಶಾಪ್‌ನಲ್ಲಿ ದಲಿತರು ಸೇರಿದಂತೆ ಎಲ್ಲಾ ಜಾತಿ–ಸಮುದಾಯದವರಿಗೆ ಯಾವುದೇ ಭೇದ ಭಾವವಿಲ್ಲದೆ ಕ್ಷೌರ ಸೇವೆ ಒದಗಿಸಲಾಗುತ್ತಿದೆ.
ಇದರಿಂದ ಗ್ರಾಮದಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಶಮನಗೊಂಡಿದೆ. ಕ್ಷೌರ ನಿರಾಕರಣೆ ವಿಚಾರವಾಗಿ ವಿವಾದ ತೀವ್ರಗೊಂಡಾಗ ತಾಲೂಕು ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಕ್ಷೌರ ಸೇವೆ ಪಡೆಯುತ್ತಿರುವ ಜನರು : ಗ್ರಾಮದ ಎಲ್ಲಾ ಜಾತಿ–ಸಮುದಾಯದ ಮುಖಂಡರನ್ನು ಒಳಗೊಂಡು ಸಭೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಸಮಸ್ಯೆ ಬಗೆಹರಿಸಲು ಯಶಸ್ವಿಯಾದರು. ಮೂಲ ಕ್ಷೌರಿಕರು ಸೇವೆ ನಿರಾಕರಿಸಿದ ಹಿನ್ನೆಲೆ ಜಿಲ್ಲಾಡಳಿತದಿಂದ ಸುಮಾರು 1.20 ಲಕ್ಷ ರೂ. ವೆಚ್ಚದಲ್ಲಿ ತಗಡಿನ ಶೆಡ್ ನಿರ್ಮಾಣ ಮಾಡಲಾಗಿದ್ದು, ಮುಂಡರಗಿಯ ಹಡಪದ ಸಮಾಜದ ಮುಖಂಡರಾದ ದೇವು ಹಡಪದ ಅವರ ಸಹೋದರರೊಬ್ಬರನ್ನು ಕ್ಷೌರ ಸೇವೆಗೆ ನೇಮಿಸಲಾಗಿದೆ. ಇದರಿಂದ ಸದ್ಯಕ್ಕೆ ಗ್ರಾಮದಲ್ಲಿ ಶಾಂತಿ ನೆಲೆಸಿದ್ದು, ಎಲ್ಲಾ ಜಾತಿ–ಸಮುದಾಯದ ಜನರು ನಿರ್ಭಯವಾಗಿ ಕ್ಷೌರ ಸೇವೆ ಪಡೆಯುತ್ತಿದ್ದಾರೆ.
ಅಸ್ಪೃಶ್ಯತೆ ಎಂಬ ಅನಿಷ್ಟವನ್ನು ಬೇರು ಸಮೇತ ನಿರ್ಮೂಲನೆ ಮಾಡಲು ಪ್ರಜ್ಞಾವಂತ ಗ್ರಾಮಸ್ಥರು ಕೈಜೋಡಿಸಿರುವುದು ಸಾಮಾಜಿಕ ಬದಲಾವಣೆಗೆ ಆಶಾಕಿರಣ ಮೂಡಿಸಿದೆ.
ಸರ್ಕಾರಕ್ಕೆ ಸಂಪೂರ್ಣ ಸಹಕಾರ: ಹಡಪದ ಸಮಾಜದ ರಾಜ್ಯಾಧ್ಯಕ್ಷ ದೇವು ಹಡಪದ ಅವರು ಮಾತನಾಡಿ, 'ಹಿಂದುಳಿದ ಜನರನ್ನು ಕೆಳಗಿನ ದೃಷ್ಟಿಯಿಂದ ನೋಡುವ ಕೆಟ್ಟ ಮನಸ್ಥಿತಿ ಇಂದಿಗೂ ಸಮಾಜದಲ್ಲಿದೆ. ಎಲ್ಲರನ್ನು ಸಮಾನವಾಗಿ ಕಾಣುವಂತೆ ಮಾಡುವ ನಮ್ಮ ವೃತ್ತಿಯನ್ನು ಅನಿಷ್ಟವೆಂದು ಕಾಣುವವರು, ದಲಿತರಿಗೆ ಕ್ಷೌರ ಮಾಡಲು ಬಿಡದಿರುವುದು ನೋವಿನ ಸಂಗತಿ. ಇಂತಹ ಅಸಮಾನತೆಗಳನ್ನು ಹೋಗಲಾಡಿಸಲು ನಾವು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಇಂದು ಎಲ್ಲ ಸಮಾಜದ ಜನರು ಒಂದೇ ಕಡೆ ಕ್ಷೌರ ಮಾಡಿಸಿಕೊಳ್ಳುತ್ತಿರುವುದು ಸಮಾನತೆಯ ಗೆಲುವು' ಎಂದಿದ್ದಾರೆ.
'ಈ ಬೆಳವಣಿಗೆಯಿಂದ ಗ್ರಾಮದಲ್ಲಿ ಅಸ್ಪೃಶ್ಯತೆಯ ವಿರುದ್ಧ ವಿರಾಮ ಸಿಗುವ ಭರವಸೆ ಮೂಡಿದೆ. ದಲಿತ ಸಮುದಾಯದ ಯುವಕರು ಸಂತಸ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಸಮಾನತೆ ಹಾಗೂ ಮಾನವೀಯತೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಮಾದರಿಯಾಗಲಿ' ಎಂದು ಗ್ರಾಮಸ್ಥ ಮರಿಯಜ್ಜ ತಿಳಿಸಿದ್ದಾರೆ.
ಸದ್ಯ ಪರಿಸ್ಥಿತಿ ಶಾಂತಗೊಂಡಿದೆ : 'ಸಿಂಗಟಾಲೂರು ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಕ್ಷೌರ ಸೇವೆಗೆ ಸಂಬಂಧಿಸಿದ ಸಮಸ್ಯೆ ಇತ್ತು. ಜಿಲ್ಲಾಡಳಿತ, ತಾಲೂಕಾಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳ ಸಹಯೋಗದಲ್ಲಿ ಎರಡು ಬಾರಿ ಸಭೆ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಪರಿಣಾಮವಾಗಿ ಸದ್ಯ ಪರಿಸ್ಥಿತಿ ಶಾಂತಗೊಂಡಿದೆ' ಎಂದು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ವಿಶ್ವನಾಥ್ ಹೊಸಮನಿ ತಿಳಿಸಿದ್ದಾರೆ.
ಇದನ್ನೂ ಓದಿ : ಚನ್ನಪಟ್ಟಣದ ಬೊಂಬೆ ಉದ್ಯಮಕ್ಕೆ ಹೊಡೆತ ಕೊಟ್ಟ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ; ಸಂಕಷ್ಟದಲ್ಲಿ ಬೊಂಬೆ ತಯಾರಕರು!

