ಅಂಜನಾದ್ರಿ ದೇಗುಲದ ಹುಂಡಿ ಹಣ ಎಣಿಕೆ: ನೇಪಾಳ, ಯುಎಸ್ಎ, ಥಾಯ್ಲೆಂಡ್ - ಹಾಂಕಾಂಗ್ ಕರೆನ್ಸಿ ಪತ್ತೆ
ಅಂಜನಾದ್ರಿ ಬೆಟ್ಟದ ದೇವಸ್ಥಾನದಲ್ಲಿ ಇರಿಸಲಾಗಿದ್ದ ಹುಂಡಿಯ ಎಣಿಕೆ ಮಾಡಲಾಗಿದ್ದು, ಈ ವೇಳೆ ನೇಪಾಳ, ಅಮೆರಿಕ, ಥಾಯ್ಲೆಂಡ್ ಹಾಗೂ ಹಾಂಕಾಂಗ್ ಕರೆನ್ಸಿ ಪತ್ತೆಯಾಗಿದೆ.

Published : July 7, 2026 at 8:30 PM IST
ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾದ ಚಿಕ್ಕರಾಂಪೂರದ ಅಂಜನಾದ್ರಿ ಬೆಟ್ಟದ ದೇವಸ್ಥಾನದಲ್ಲಿ ಇರಿಸಲಾಗಿದ್ದ ಹುಂಡಿಯ ಹಣ ಎಣಿಕೆಯ ಸಂದರ್ಭದಲ್ಲಿ ನೇಪಾಳ, ಯುನೈಟೆಡ್ ಸ್ಟೇಟ್ ಆಫ್ ಅಮೆರಿಕ (ಯುಎಸ್ಎ), ಥಾಯ್ಲೆಂಡ್ ಹಾಗೂ ಹಾಂಕಾಂಗ್ ದೇಶದ ಕರೆನ್ಸಿ ನೋಟುಗಳು ಪತ್ತೆಯಾಗಿವೆ.
ದೇವಸ್ಥಾನದ ಆಡಳಿತ ಮಂಡಳಿ, ಕಂದಾಯ ಇಲಾಖೆಯ ಸಿಬ್ಬಂದಿ ನಡೆಸಿದ ಹುಂಡಿ ಹಣ ಎಣಿಕೆಯ ಸಂದರ್ಭದಲ್ಲಿ ಹಲವು ದೇಶದ ನಾಣ್ಯ, ನೋಟುಗಳು ಪತ್ತೆಯಾಗಿವೆ. ಒಟ್ಟು 64 ದಿನದಲ್ಲಿ ಕಾಣಿಕೆ ರೂಪದಲ್ಲಿ ರೂ, 71,77,460 ರೂಪಾಯಿ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಅಂದರೆ 2026ರ ಮಾ. 26ರಂದು ಹುಂಡಿ ತೆರೆಯಲಾಗಿತ್ತು. ಆಗ 31,30 ಲಕ್ಷ ಮೊತ್ತದ ಹಣ ಸಂಗ್ರಹವಾಗಿತ್ತು. ದೇವಸ್ಥಾನದ ಕಾರ್ಯನಿರ್ವಾಕ ಅಧಿಕಾರಿ ತಹಶೀಲ್ದಾರ್ ಸೂಚನೆ ಮೆರೆಗೆ ಹುಂಡಿ ಹಣದ ಎಣಿಕೆ ಮಾಡಲಾಗಿದೆ.
ಕಂದಾಯ ಇಲಾಖೆಯ ಶಿರಸ್ತೇದಾರರಾದ ಪ್ರಕಾಶ್ ನಾಯಕ್, ಕೃಷ್ಣವೇಣಿ, ಪ್ರಥಮ ದರ್ಜೆ ಸಹಾಯಕರಾದ ಪ್ರಭುಸ್ವಾಮಿ, ಸುಪ್ರಿಯ, ಪರಿಚಾರಕರಾದ ನವಾಜ್, ಯಶ್ವಂತ, ಶರಣಪ್ಪ, ರಾಜೇಶ್ ದೇವಸ್ಥಾನದ ವ್ಯವಸ್ಥಾಪಕ ವೆಂಕಟೇಶ ಸೇರಿದಂತೆ ಹಲವು ಭಾಗಿಯಾಗಿದ್ದರು.

ಈ ಹಿಂದೆ ಬಾಂಗ್ಲಾ, ಪಾಕಿಸ್ತಾನ, ಆಸ್ಟ್ರೇಲಿಯಾ, ನೇಪಾಳ ಸೇರಿದಂತೆ ಹತ್ತು ಹಲವು ದೇಶಗಳ ಭಕ್ತರು ಇಲ್ಲಿನ ಹಂಪಿಯ ಪ್ರವಾಸಕ್ಕೆ ಆಗಮಿಸಿದ್ದಾಗ ಇಲ್ಲಿಗೆ ಆಗಮಿಸಿ ತಮ್ಮ ದೇಶದ ಕರೆನ್ಸಿಯನ್ನು ಕಾಣಿಕೆ ರೂಪದಲ್ಲಿ ಸಲ್ಲಿಸಿದ್ದರು. ಈಗ ಅಮೇರಿಕ, ಥೈಲ್ಯಾಂಡ್, ಹಾಂಕಾಂಗ್ ದೇಶಗಳ ಭಕ್ತರಿಂದ ವಿದೇಶಿ ನೋಟು ಸಂಗ್ರಹವಾಗಿವೆ.

ಇದನ್ನೂ ಓದಿ: 16 ಕೆಜಿ ಚಿನ್ನ, 197 ಕೆಜಿ ಬೆಳ್ಳಿ: 2025-26ರಲ್ಲಿ ಶಿರಡಿ ಸಾಯಿ ಸಂಸ್ಥಾನಕ್ಕೆ 660 ಕೋಟಿ ರೂ. ದೇಣಿಗೆ ನೀಡಿದ ಭಕ್ತರು!

