ನ್ಯಾಷನಲ್ ಹೆರಾಲ್ಡ್‍ಗೆ ರಾಜ್ಯ ಸರ್ಕಾರದಿಂದ ಕೋಟಿ ಕೋಟಿ ಜಾಹೀರಾತು ಹಣ ಮಂಜೂರು: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ರಾತ್ರಿ 3 ಗಂಟೆಗೆ ಈ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದಿದ್ದರು. ಆಗ ಅಲ್ಲಿ ಕಾರ್ಪೊರೇಟರ್ ಕೂಡ ಇದ್ದರು. ಏನು ಉದ್ಯೋಗ ನಿಮ್ಮದು ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದರು.

Published : January 8, 2026 at 8:52 PM IST
ಬೆಂಗಳೂರು: ನ್ಯಾಷನಲ್ ಹೆರಾಲ್ಡ್‍ಗೆ ರಾಜ್ಯ ಕಾಂಗ್ರೆಸ್ ಸರ್ಕಾರ 2023-24ರಲ್ಲಿ 1.9 ಕೋಟಿ, 2024-25ರಲ್ಲಿ ಸುಮಾರು 1 ಕೋಟಿ ರೂ. ಜಾಹೀರಾತಿಗಾಗಿ ಮಂಜೂರು ಮಾಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಮುಖ ರಾಷ್ಟ್ರೀಯ ಪತ್ರಿಕೆಗಳಿಗಿಂತ ಜಾಸ್ತಿ ದುಡ್ಡನ್ನು ಕಾಂಗ್ರೆಸ್ ಕೊಟ್ಟಿದೆ. ಇದು ಕಾಂಗ್ರೆಸ್ ಸರಕಾರದ ಸಿದ್ದರಾಮಯ್ಯ ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ನ್ಯಾಷನಲ್ ಹೆರಾಲ್ಡ್‍ಗೆ 2023-24ರಲ್ಲಿ 1.9 ಕೋಟಿ ಮೊತ್ತವನ್ನು ಕೊಡಲಾಗಿದೆ. 2024-25ರಲ್ಲಿ ಸುಮಾರು 1 ಕೋಟಿಯನ್ನು ಮಂಜೂರು ಮಾಡಿದ್ದಾರೆ. ಈ ಪತ್ರಿಕೆಯ ವಿಚಾರ ಹಗರಣವಾಗಿ, ಕೋರ್ಟಿನಲ್ಲಿದೆ ಎಂದರು.
ಇದರ ತಥಾಕಥಿತ ಟ್ರಸ್ಟಿಗಳು, ಎನ್‍ಜಿಒಗಳು, ಮಾಲೀಕರಲ್ಲಿ ತಾಯಿ - ಮಗ ಜಾಮೀನಿನಲ್ಲಿದ್ದಾರೆ. ಇದರ ಪ್ರಸಾರ ಸಂಖ್ಯೆ ಬಹುತೇಕ ಶೂನ್ಯವಾಗಿದೆ. ಅದಕ್ಕೆ ಇಷ್ಟು ದುಡ್ಡು ಕೊಟ್ಟಿದ್ದು, ಇದು ನೇರವಾಗಿ ಒಂದು ರೀತಿಯಲ್ಲಿ ಗಾಂಧಿ ಕುಟುಂಬಕ್ಕೆ ಕರ್ನಾಟಕ ಸರ್ಕಾರದಿಂದ ದಾನ ಕೊಟ್ಟು ಸಂಪ್ರೀತಗೊಳಿಸುವ ಪ್ರಕ್ರಿಯೆ ಎಂದು ಆರೋಪಿಸಿದರು.
ಎಸ್‍ಐಆರ್ ಅನ್ನು ಎಫ್‍ಐಆರ್ ಎಂದು ಭಾವಿಸಿದರೇ?: ಹುಬ್ಬಳ್ಳಿಯಲ್ಲಿ ಎಸ್‍ಐಆರ್ (ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ) ಬದಲಾಗಿ ಎಫ್‍ಐಆರ್ ಮಾಡಲು ಚುನಾವಣಾ ಆಯೋಗ ಹೇಳಿದೆ ಎಂದು ಇವರೆಲ್ಲ ಭಾವಿಸಿರಬೇಕು. ಕಮೀಷನರ್ಗೆ ಗೊಂದಲ ಆಗಿರಬೇಕು. ಇವರೆಲ್ಲರದು ಅತ್ಯಂತ ಬೇಜವಾಬ್ದಾರಿಯುತ ನಡವಳಿಕೆ. ರಾತ್ರಿ 3 ಗಂಟೆಗೆ ಈ ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದಿದ್ದರು. ಆಗ ಅಲ್ಲಿ ಕಾರ್ಪೊರೇಟರ್ ಕೂಡ ಇದ್ದರು. ಏನು ಉದ್ಯೋಗ ನಿಮ್ಮದು ಎಂದು ಪ್ರಶ್ನಿಸಿದರು.
ಬಿಎಲ್‌ಒ ಮ್ಯಾಪಿಂಗ್ ಮಾಡಲು ಹೋಗಿದ್ರು. ಅವರು ಬಿಎಲ್‌ಎ ಗಳನ್ನು ಕರೆದುಕೊಂಡು ಹೋಗಲು ಅವಕಾಶ ಇದೆ. ಆವತ್ತು ಕಾಂಗ್ರೆಸ್ ಬಿಎಲ್ಎ2 ಇರಲಿಲ್ಲ. ಕಾಂಗ್ರೆಸ್ ನವರು ಹೋಗಿ ಸುಜಾತಾ ಮೇಲೆ ಹಲ್ಲೆ ಮಾಡ್ತಾರೆ. ನಂತರ ಕಾರ್ಪೊರೇಟರ್ ಕಡೆಯವರ ದೂರಿನ ಮೇರೆಗೆ ಪೊಲೀಸರು ಸುಜಾತಾ ಅವರನ್ನು ಬಂಧಿಸ್ತಾರೆ. ಆಗ ಆಕೆಯೇ ಬಟ್ಟೆ ಬಿಚ್ಕೊಂಡ್ರು ಅಂತ ಪೊಲೀಸರು ಹೇಳಿದ್ದಾರೆ, ಪೊಲೀಸರು ಯಾಕೆ ಸುಮ್ನಿದ್ರು ಎಂದು ಪ್ರಶ್ನಿಸಿದರು.
ಉರುಳು ಹಾಕ್ಕೊಳ್ಳೋಕ್ಕೆ ಹೋಗಿದ್ರೂ ನೋಡಿಕೊಂಡು ಇರ್ತಿದ್ರಾ ಪೊಲೀಸರು?. ಸಿಎಂ, ಗೃಹ ಸಚಿವರು ಪೊಲೀಸರ ಪರ ಮಾತಾಡಿದ್ದಾರೆ. ತನಿಖೆ ಮಾಡ್ತೀವಿ ಅಂತ ಹೇಳಬಹುದಿತ್ತಲ್ಲ ಸಿಎಂ ಅವರು?. ನಾನು ಸಿಎಂ, ಪರಮೇಶ್ವರ್ಗೆ ಹೇಳ್ರೀನಿ, ಈ ಥರದ ದಾದಾಗಿರಿ ನಡೆಯಲ್ಲ. ಎಸ್ಐಆರ್ ಮಾಡ್ರೀ ಅಂದ್ರೆ ಎಫ್ಐಆರ್ ಮಾಡ್ತಾರೆ. ಕಾರ್ಪೊರೇಟರ್ ದೂರು ತಗೊಂಡ ಪೊಲೀಸರು ಸುಜಾತಾ ದೂರು ಯಾಕೆ ತಗೊಳ್ಳಲಿಲ್ಲ. ತುಷ್ಟೀಕರಣ, ಎಸ್ಐಆರ್ ಭಯ ಕಾಂಗ್ರೆಸ್ಗೆ ಇದೆ ಎಂದು ವಾಗ್ದಾಳಿ ನಡೆಸಿದರು.
ಇವುಗಳನ್ನು ಓದಿ: ಮನರೇಗಾ ರದ್ದು: ಕೇಂದ್ರದ ವಿರುದ್ಧ ಕಾನೂನು ಹೋರಾಟಕ್ಕೆ ರಾಜ್ಯ ಸರ್ಕಾರ ತೀರ್ಮಾನ
ನಕಲಿ ಮುಟೇಷನ್ ದಾಖಲೆ ಸೃಷ್ಟಿಸಿ ವಂಚನೆ ಆರೋಪ: ಡಿಸಿಸಿ ಬ್ಯಾಂಕ್ ನಿರ್ದೇಶಕ ಸೇರಿ ಮೂವರ ವಿರುದ್ಧ ದೂರು

