ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ದಾರಿ ತೋರುವ 'ನಂದಿ' ; ಶೇಗುಣಸಿ ಗ್ರಾಮದ ವಿಶಿಷ್ಟ ಸಂಪ್ರದಾಯ
ಅಥಣಿ ತಾಲೂಕಿನ ಶೇಗುಣಸಿಯಿಂದ ಶ್ರೀ ಶೈಲಕ್ಕೆ ಪಾದಯಾತ್ರೆಯ ಮೂಲಕ ತೆರಳುವುದು ಇಲ್ಲಿನ ಜನರ ದಶಕಗಳ ವಾಡಿಕೆ. ಹಿರಿಯರ ಸಂಪ್ರದಾಯವನ್ನೂ ಇಂದಿಗೂ ಇಲ್ಲಿನವರು ಆಚರಿಸಿಕೊಂಡು ಬರುತ್ತಿದ್ದಾರೆ.

Published : March 2, 2026 at 4:48 PM IST
ವರದಿ: ಶಿವರಾಜ್ ನೇಸರಗಿ
ಚಿಕ್ಕೋಡಿ (ಬೆಳಗಾವಿ) : ಯುಗಾದಿ ಹಬ್ಬ ಸಮೀಪಿಸುತ್ತಿದ್ದಂತೆ ಉತ್ತರ ಕರ್ನಾಟಕದ ಜನರಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನನ ದರ್ಶನದ ಕಾತರ ಶುರುವಾಗುತ್ತದೆ. ಅಥಣಿ ತಾಲೂಕಿನ ಶೇಗುಣಸಿಯಿಂದ ಶ್ರೀಶೈಲಕ್ಕೆ ಪಾದಯಾತ್ರೆಯ ಮೂಲಕ ತೆರಳುವುದು ಇಲ್ಲಿನ ಜನರ ದಶಕಗಳ ವಾಡಿಕೆ. ಗ್ರಾಮದ ಭಕ್ತರ ಪಾದಯಾತ್ರೆ ಅತ್ಯಂತ ವಿಶಿಷ್ಟ ಹಾಗೂ ರೋಮಾಂಚಕ ಹಿನ್ನೆಲೆಯನ್ನು ಹೊಂದಿದೆ. ಆಧುನಿಕತೆಯ ಭರಾಟೆಯಲ್ಲೂ ಈ ಗ್ರಾಮಸ್ಥರು ತಮ್ಮ ಹಿರಿಯರು ಹಾಕಿಕೊಟ್ಟ ಸಂಪ್ರದಾಯವನ್ನು ಚಾಚೂತಪ್ಪದೇ ಪಾಲಿಸಿಕೊಂಡು ಬರುತ್ತಿದ್ದಾರೆ.
ದಶಕಗಳ ಹಿಂದೆ ಶ್ರೀ ಶೈಲ ಕ್ಷೇತ್ರಕ್ಕೆ ತೆರಳಲು ಈಗಿನಂತೆ ಸುಸಜ್ಜಿತ ರಸ್ತೆಗಳಿರಲಿಲ್ಲ. ದಟ್ಟವಾದ ಕಾಡು ಹಾಗೂ ಬೆಟ್ಟ - ಗುಡ್ಡಗಳ ಮಧ್ಯೆ ದಾರಿ ಹುಡುಕುವುದು ದುಸ್ತರವಾಗಿತ್ತು. ಆ ಕಾಲದಲ್ಲಿ ಗ್ರಾಮದ ದೇವರಿಗೆಂದು ಮೀಸಲಿಟ್ಟ 'ಎತ್ತು' (ನಂದಿ) ತಾನೇ ಮುಂದೆ ನಿಂತು, ಭಕ್ತರಿಗೆ ಜ್ಯೋತಿರ್ಲಿಂಗ ಕ್ಷೇತ್ರದ ದಾರಿಯನ್ನು ತೋರಿಸುತ್ತಿತ್ತು. ಎತ್ತಿನ ಹೆಜ್ಜೆಗಳನ್ನು ಹಿಂಬಾಲಿಸುತ್ತಾ ಗ್ರಾಮಸ್ಥರು ಮಲ್ಲಿಕಾರ್ಜುನನ ದರ್ಶನ ಪಡೆದು ಪುನೀತರಾಗುತ್ತಿದ್ದರು ಎಂಬುದು ಇತಿಹಾಸ.
ಇಂದು ಆಧುನಿಕ ಯುಗದಲ್ಲಿ ರಸ್ತೆ, ಸಾರಿಗೆ ಸೌಲಭ್ಯಗಳು ಎಷ್ಟೇ ಅಭಿವೃದ್ಧಿಯಾಗಿದ್ದರೂ, ಶೇಗುಣಸಿ ಗ್ರಾಮದ ಜನರು ತಮ್ಮ ಮೂಲ ನಂಬಿಕೆಯನ್ನು ಬಿಟ್ಟಿಲ್ಲ. ಇವತ್ತಿಗೂ ದೇವರಿಗೆ ಮೀಸಲಾಗಿರುವ ಎತ್ತನ್ನು (ನಂದಿ) ಮುಂದಿಟ್ಟುಕೊಂಡೇ ಪಾದಯಾತ್ರೆಯ ಮೂಲಕ ಕಂಬಿ ಮಲ್ಲಯ್ಯ ಜೊತೆಗೆ ಮಲ್ಲಿಕಾರ್ಜುನನ ದರ್ಶನ ಪಡೆಯುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಗ್ರಾಮದಲ್ಲಿ ಒಂದು ತಿಂಗಳು ಶುಭ ಕಾರ್ಯಗಳಿಗೆ ಬ್ರೇಕ್: ಈ ಪಾದಯಾತ್ರೆಯ ಮತ್ತೊಂದು ಅಚ್ಚರಿಯ ಸಂಗತಿಯೆಂದರೆ ಗ್ರಾಮದಲ್ಲಿ ಕಟ್ಟುನಿಟ್ಟಾದ ನಿಯಮ ಜಾರಿಯಲ್ಲಿದೆ. ಪಾದಯಾತ್ರೆ ಆರಂಭವಾದ ಇಂದಿನಿಂದ ಮುಂದಿನ ಒಂದು ತಿಂಗಳ ಕಾಲ ಶೇಗುಣಸಿ ಗ್ರಾಮದಲ್ಲಿ ಯಾವುದೇ ನೂತನ ಕಾರ್ಯಗಳನ್ನು ಮಾಡುವಂತಿಲ್ಲ. ಪಾದಯಾತ್ರೆಗೆ ತೆರಳಿದ ನಂದಿಯು ಶ್ರೀಶೈಲದ ದರ್ಶನ ಮುಗಿಸಿ, ಮರಳಿ ಊರಿಗೆ ಬರುವವರೆಗೂ ಗ್ರಾಮದಲ್ಲಿ ಯಾವುದೇ ಶುಭಕಾರ್ಯಗಳಾದ ಮದುವೆ, ಗೃಹಪ್ರವೇಶ ಇತ್ಯಾದಿ ನೆರವೇರಿಸುವುದಿಲ್ಲ.
ಇದು ಈ ಗ್ರಾಮದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕಟ್ಟುನಿಟ್ಟಾದ ಪದ್ಧತಿಯಾಗಿದ್ದು, ಶ್ರೀ ಶೈಲ ಮಲ್ಲಿಕಾರ್ಜುನನ ಮೇಲಿನ ಅವರ ಅಪಾರ ಭಕ್ತಿ ಮತ್ತು ಶ್ರದ್ಧೆಗೆ ಸಾಕ್ಷಿಯಾಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ತಮ್ಮ ಸಂಸ್ಕೃತಿ ಮತ್ತು ನಂಬಿಕೆಯನ್ನು ಉಳಿಸಿಕೊಂಡು ಹೋಗುತ್ತಿರುವ ಶೇಗುಣಸಿ ಗ್ರಾಮಸ್ಥರ ಭಕ್ತಿ ನಿಜಕ್ಕೂ ಅನನ್ಯ.
ನಮ್ಮ ನಂದಿಗೆ ಅಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ : ಈ ಕುರಿತು ಗ್ರಾಮಸ್ಥರಾದ ಚೇತನ್ ಪಾಟೀಲ್ ಅವರು ಮಾತನಾಡಿ, 'ಹಬ್ಬಕ್ಕೆ ನಾಲ್ಕು ದಿನ ಇರುವಾಗಲೇ ಡಂಗೂರ ಬಾರಿಸುತ್ತಾರೆ. ಹಿಂದಿನ ದಿವಸ ಸ್ವಾಮಿಗಳು ಬಂದು ಕಂಬಿಗೆ, ಡಾಗಿನಗಳನ್ನು ಸಂಗ್ರಹಿಸುತ್ತಾರೆ. ಅವತ್ತು ಕಂಟ್ಲಿ ಹಾಗೂ ಕಂಬಿ ಪೂಜೆ ಮಾಡುತ್ತಾರೆ. ನಂತರ ಮಾರನೆ ದಿವಸ ಪಾದಯಾತ್ರೆ ಪ್ರಾರಂಭವಾಗುತ್ತದೆ. ಯುಗಾದಿಯ ವೇಳೆ ಶ್ರೀಶೈಲಕ್ಕೆ ಹೋಗಬೇಕು. ಪರಂಪರೆಯಂತೆ ನಾವು ನಡೆಸಿಕೊಂಡು ಬರುತ್ತಿದ್ದೇವೆ. ದಾರಿಯನ್ನು ತೋರಿಸುವುದಕ್ಕಾಗಿ ಎತ್ತನ್ನು ಬಳಸುತ್ತಿದ್ದೇವೆ. ನಮ್ಮ ನಂದಿಗೆ ಅಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ. ನಂದಿ ಶ್ರೀಶೈಲ ಪ್ರವೇಶಿಸಿದಂತೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕಮಿಟಿಯವರು ಮಂಗಳ ವಾದ್ಯಗಳ ಜೊತೆಗೆ ದೇವಸ್ಥಾನಕ್ಕೆ ಬರಮಾಡಿಕೊಳ್ಳುತ್ತಾರೆ. ಇದು ನಮ್ಮ ಗ್ರಾಮಕ್ಕೆ ಹೆಮ್ಮೆ ವಿಚಾರ' ಎಂದಿದ್ದಾರೆ.
'ಪೂರ್ವಜರಿಂದ ಈ ಪಾದಯಾತ್ರೆಯನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ನಮ್ಮ ನಂದಿ ಅಲ್ಲಿಗೆ ಹೋಗದೆಯೇ ಶ್ರೀ ಶೈಲದ ಬಾಗಿಲನ್ನು ತೆರೆಯುತ್ತಿರಲಿಲ್ಲ. ನಮ್ಮ ಕಂಬಿ (ಬಿದಿರಿನ ಸಾಧನ) ಕೂರಿಸುವುದಕ್ಕೆ ಆ ದೇವಸ್ಥಾನದಲ್ಲಿ ಜಾಗವಿದೆ. ಈ ಪಾದಯಾತ್ರೆಗೆ ಯಾವುದೇ ಜಾತಿ ಬೇದವಿಲ್ಲ. ಎಲ್ಲರೂ ಹೋಗುತ್ತಾರೆ' ಎಂದು ಗ್ರಾಮಸ್ಥ ತಮ್ಮಣ್ಣ ತೇಲಿ ಅವರು ತಿಳಿಸಿದ್ದಾರೆ.

ಇದಕ್ಕೆ 700 ವರ್ಷಗಳ ಇತಿಹಾಸವಿದೆ : ಈ ಕುರಿತು ಗ್ರಾಮಸ್ಥ ರಾಜೇಶ ಪಾಟೀಲ್ ಅವರು ಮಾತನಾಡಿ, 'ಈ ಪಾದಯಾತ್ರೆ ಗೌಡರ ಮಾರ್ಗದರ್ಶನದಲ್ಲಿ ಹೋಗುತ್ತದೆ. ಕಂಬಿ ತೆಗೆದುಕೊಂಡು ಹೋಗುವವರಿಗೆ 9 ಎಕರೆ ಜಾಗ ಕೊಟ್ಟಿದ್ದೇವೆ. ಪೂಜೆ ಮಾಡುವ ಸ್ವಾಮಿಗಳಿಗೆ 5 ಎಕರೆ ಹೊಲ ಕೊಟ್ಟಿದ್ದೇವೆ. ಪ್ರತಿವರ್ಷ ಇದನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಯಾವುದೇ ರೀತಿ ಇದರಲ್ಲಿ ಹೆಚ್ಚು ಕಡಿಮೆ ಆಗದಂತೆ ನಡೆಸಿಕೊಂಡು ಹೋಗುತ್ತಿದ್ದೇವೆ. ಇದಕ್ಕೆ 700 ವರ್ಷಗಳ ಇತಿಹಾಸವಿದೆ. ಇದರಲ್ಲಿ ಹೆಚ್ಚಿನ ಬದಲಾವಣೆ ಏನೂ ಆಗಿಲ್ಲ' ಎಂದು ಹೇಳಿದ್ದಾರೆ.
ಇದನ್ನೂ ಓದಿ : ಶ್ರೀ ರೇಣುಕಾ ಯಲ್ಲಮ್ಮನ ದೇಗುಲ ನಿರ್ಮಾಣಕ್ಕೆ ಗೃಹಲಕ್ಷ್ಮಿ ಹಣ ದೇಣಿಗೆ; ಇದು ತಿಮ್ಮಾಪುರದ ಸೇವಾ ಕಥೆ

