ETV Bharat / state

'ಪ್ರಾಣಿ ದತ್ತು ಯೋಜನೆ'ಯಿಂದ ಮೈಸೂರು ಮೃಗಾಲಯಕ್ಕೆ ವಾರ್ಷಿಕ ₹1 ಕೋಟಿ ಆದಾಯ: ಹಣ ಬಳಕೆ ಹೇಗೆ?

ಪ್ರಾಣಿಗಳ ದತ್ತು ಯೋಜನೆಯಿಂದ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಪ್ರತಿ ವರ್ಷ ಅಂದಾಜು ಒಂದು ಕೋಟಿ ರೂಪಾಯಿ ಆದಾಯ ಬರುತ್ತಿದೆ.

MYSURU ZOO  CHAMARAJENDRA ZOOLOGICAL GARDENS  MYSURU  ಪ್ರಾಣಿಗಳ ದತ್ತು ಯೋಜನೆ
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ (ETV Bharat)
author img

By ETV Bharat Karnataka Team

Published : January 4, 2026 at 5:27 PM IST

2 Min Read
Choose ETV Bharat

ವರದಿ: ಎಂ.ಮಹೇಶ್

ಮೈಸೂರು: ಶತಮಾನ ಕಂಡ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಪ್ರಾಣಿ, ಪಕ್ಷಿಗಳ ದತ್ತು ಯೋಜನೆಯಿಂದ ಪ್ರತೀ ವರ್ಷ ಸುಮಾರು ಒಂದು ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ.

ದೇಶದ ಅತ್ಯಂತ ಹಳೆಯ ಮೃಗಾಲಯಗಳಲ್ಲಿ ಒಂದಾದ, ನಗರದೊಳಗೇ ಇರುವ ಈ ಮೃಗಾಲಯಕ್ಕೆ ಪ್ರತಿ ವರ್ಷ 35 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಮೃಗಾಲಯದಲ್ಲಿ 1,500ಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳಿವೆ.

ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ (ETV Bharat)

ಏನಿದು ಪ್ರಾಣಿಗಳ ದತ್ತು ಯೋಜನೆ?:

  • ಮೃಗಾಲಯದಲ್ಲಿರುವ ಕೆಲವು ಪ್ರಾಣಿ-ಪಕ್ಷಿಗಳನ್ನು ಒಂದು ದಿನದಿಂದ ಒಂದು ವರ್ಷದವರೆಗೆ, ಒಂದು ಸಾವಿರದಿಂದ 3 ಲಕ್ಷ ರೂ.ವರೆಗೂ ಹಣ ನೀಡಿ ದತ್ತು ಪಡೆಯಬಹುದು.
  • ಮೃಗಾಲಯದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಅಂದಾಜು ಒಂದು ವರ್ಷಕ್ಕೆ 80 ಲಕ್ಷದಿಂದ 1 ಕೋಟಿವರೆಗೆ ದತ್ತು ಯೋಜನೆಯಿಂದ ಆದಾಯ ಬರುತ್ತಿದೆ.
  • ಸಾಮಾನ್ಯವಾಗಿ, ಪ್ರಾಣಿಪ್ರಿಯರು ತಮ್ಮ ಹುಟ್ಟುಹಬ್ಬದ ದಿನ ಸೇರಿದಂತೆ ಹಲವು ಸಂದರ್ಭಗಳಲ್ಲಿ ಪ್ರಾಣಿ ಹಾಗೂ ಪಕ್ಷಿಗಳನ್ನು ದತ್ತು ಪಡೆಯುತ್ತಾರೆ. ಹಾಗೆಯೇ ಕ್ರಿಕೆಟ್ ಆಟಗಾರರು, ಇತರ ಕ್ರೀಡಾಪಟುಗಳು, ರಾಜಕಾರಣಿಗಳು, ಸಿನಿಮಾ ನಟರು, ಸಮಾಜ ಸೇವಕರು, ಕೆಲವು ಸಂಘ-ಸಂಸ್ಥೆಗಳು, ಸರ್ಕಾರಿ ಬ್ಯಾಂಕ್‌ಗಳು​ ಸೇರಿದಂತೆ ಸರ್ಕಾರಿ ಸಂಸ್ಥೆಗಳೂ ಸಹ ದತ್ತು ಯೋಜನೆಯಲ್ಲಿ ಪಾಲ್ಗೊಂಡಿವೆ.

ಕೋವಿಡ್​ ಸಂದರ್ಭದಲ್ಲಿ ಪ್ರಾಣಿಗಳಿಗೆ ಆಸರೆಯಾದ ಯೋಜನೆ: ಕೋವಿಡ್​​ ಸಂದರ್ಭದಲ್ಲಿ ಮೃಗಾಲಯಕ್ಕೆ ಪ್ರವಾಸಿಗರು ಆಗಮಿಸದ ಹಿನ್ನೆಲೆಯಲ್ಲಿ ಆದಾಯ ಕುಸಿದಿತ್ತು. ಆದರೆ, ದತ್ತು ಯೋಜನೆಯಿಂದ ಕೋಟ್ಯಂತರ ರೂಪಾಯಿ ಹಣ ಬಂದಿದ್ದು, ಪ್ರಾಣಿಗಳಿಗೆ ಆಸೆರೆಯಾಗಿತ್ತು.

ಮೃಗಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುಷಾ ಮಾಹಿತಿ. (ETV Bharat)

ದತ್ತು ಯೋಜನೆಯ ಹಣ ಬಳಕೆ ಹೇಗೆ?: ಮೃಗಾಲಯದ ಪ್ರಾಣಿ-ಪಕ್ಷಿಗಳ ನಿರ್ವಹಣೆಗೆ ಮುಖ್ಯವಾಗಿ ಪ್ರವಾಸಿಗರ ಟಿಕೆಟ್​ ಶುಲ್ಕದ ಹಣ ಬಳಸುತ್ತಾರೆ. ಆದರೆ ಪ್ರಾಣಿಗಳ ಆಹಾರ, ವೈದ್ಯಕೀಯ ವೆಚ್ಚ ಹಾಗೂ ಆರೈಕೆಗಳಿಗೆ ದತ್ತು ಯೋಜನೆಯಿಂದ ಬಂದ ಹಣ ಬಳಸಲಾಗುತ್ತದೆ.

MYSURU ZOO  CHAMARAJENDRA ZOOLOGICAL GARDENS  MYSURU  ಪ್ರಾಣಿಗಳ ದತ್ತು ಯೋಜನೆ
ಪ್ರಾಣಿಗಳ ದತ್ತು ಯೋಜನೆ ಕಾರ್ಯಕ್ರಮ (ETV Bharat)

"ಮೃಗಾಲಯದಲ್ಲಿ ದತ್ತು ಯೋಜನೆ ಹಲವು ವರ್ಷಗಳಿಗೆ ಜಾರಿಯಲ್ಲಿದೆ. ಇಲ್ಲಿ 1,000 ದಿಂದ 3 ಲಕ್ಷ ರೂ.ವರೆಗೆ ಹಣ ನೀಡಿ ದತ್ತು ಪಡೆದುಕೊಳ್ಳುವ ಅವಕಾಶವಿದೆ. ಒಂದು ತಿಂಗಳಿಗೆ, ಆರು ತಿಂಗಳಿಗೆ ಹಾಗೂ ಒಂದು ವರ್ಷಕ್ಕೆ ದತ್ತು ಯೋಜನೆ ಇದೆ. 5,000ಕ್ಕೂ ಹೆಚ್ಚು ಹಣ ನೀಡಿ ದತ್ತು ಪಡೆದರೆ ಕುಟುಂಬದವರಿಗೆ ಉಚಿತವಾಗಿ ಮೃಗಾಲಯವನ್ನು ನೋಡಬಹುದು ಹಾಗೂ ಪ್ರಮಾಣ ಪತ್ರ ನೀಡುತ್ತೇವೆ. 20,000 ಸಾವಿರಕ್ಕೂ ಹೆಚ್ಚು ಹಣ ನೀಡಿ ದತ್ತು ಪಡೆದರೆ ಅವರ ಹೆಸರನ್ನು ಪ್ರಾಣಿಗಳ ಮುಂದೆ ಬೋರ್ಡ್‌ನಲ್ಲಿ​ ಹಾಕುತ್ತೇವೆ" ಎಂದು ಮೃಗಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುಷಾ ತಿಳಿಸಿದರು.

"ಕೋವಿಡ್​ ವೇಳೆ ದತ್ತು ಯೋಜನೆಯಿಂದ ಬಹಳ ಉಪಯೋಗವಾಯಿತು. ಆನ್​ಲೈನ್​ ಮೂಲಕ ಅಥವಾ ಕಚೇರಿಗೆ ಬಂದು ದತ್ತು ಪಡೆಯಬಹುದು. ದತ್ತು ಯೋಜನೆಗೆ ತೆರಿಗೆ ವಿನಾಯಿತಿ ಇದೆ. ಪ್ರತಿವರ್ಷ 1 ಕೋಟಿ ರೂ ದತ್ತು ಯೋಜನೆಯಿಂದ ಬರುತ್ತದೆ. ಈ ಹಣವನ್ನು ಮೃಗಾಲಯದಲ್ಲಿರುವ 1,500ಕ್ಕೂ ಹೆಚ್ಚು ಪ್ರಾಣಿಗಳು ಹಾಗೂ 120ಕ್ಕೂ ಹೆಚ್ಚು ಪಕ್ಷಿಗಳ ಆಹಾರ, ವೈದ್ಯಕೀಯ ವೆಚ್ಚ ಹಾಗೂ ವಂಶಾಭಿವೃದ್ಧಿಗೆ ಬಳಸುತ್ತೇವೆ" ಎಂದು ಅವರು ವಿವರ ನೀಡಿದರು.

ಇದನ್ನೂ ಓದಿ: ಬೆಂಗಳೂರಲ್ಲಿ 23ನೇ ಚಿತ್ರಸಂತೆ ಉದ್ಘಾಟನೆ: ಸಿಎಂ ಚಿತ್ರ ಬಿಡಿಸಿ ಗಿಫ್ಟ್ ಕೊಟ್ಟ ಕಲಾವಿದರು