ETV Bharat / state

ಮೈಸೂರು: ಅರಮನೆ ಪ್ರವೇಶ ಮಾಡಿದ ದಸರಾ ಗಜಪಡೆಗೆ ಸಾಂಪ್ರದಾಯಿಕ ಪೂಜೆ

ನವಗಜಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಇಂದು ಬೆಳಗ್ಗೆ ಅರಮನೆಗೆ ಬರಮಾಡಿಕೊಳ್ಳಲಾಗಿದೆ.

MYSURU  ದಸರಾ ಗಜಪಡೆ  MYSURU DASARA 2026  ಅರಮನೆ
ದಸರಾ ಗಜಪಡೆ. (ETV Bharat)
author img

By ETV Bharat Karnataka Team

Published : August 28, 2026 at 12:18 PM IST

2 Min Read
Choose ETV Bharat

ಮೈಸೂರು: ನಾಡಹಬ್ಬ ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಆಗಮಿಸಿದ ದಸರಾ ಗಜಪಡೆಯನ್ನು ಇಂದು ಜಯಮಾರ್ತಾಂಡ ದ್ವಾರದ ಬಳಿ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಅರಮನೆಗೆ ಬರಮಾಡಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

ಆಗಸ್ಟ್ 26 ರಂದು ಗಜಪಯಣದ ಮೂಲಕ ಆಗಮಿಸಿದ ದಸರಾ ಗಜಪಡೆ ಎರಡು ದಿನಗಳ ಕಾಲ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿದ್ದು, ಈ ಗಜಪಡೆಗೆ ಇಂದು ಬೆಳಗ್ಗೆ ಅರಣ್ಯ ಇಲಾಖೆಯ ವತಿಯಿಂದ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಬಳಿಕ 9 ಗಜಪಡೆಯನ್ನು ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಭದ್ರತೆಯಲ್ಲಿ ಅರಮನೆಗೆ ಕರೆತರಲಾಯಿತು.

ಜಯಮಾರ್ತಾಂಡ ದ್ವಾರದ ಬಳಿ ಗಜಪಡೆಗೆ ಸ್ವಾಗತ. (ETV Bharat)

ಗಜಪಡೆಗೆ ಅರಮನೆಯ ಆಡಳಿತ ಮಂಡಳಿಯ ವತಿಯಿಂದ ಸಾಂಪ್ರದಾಯಿಕ ಪುಷ್ಪಾರ್ಚನೆ ಮಾಡಲಾಯಿತು. ಈ ವೇಳೆ ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಯತೀಂದ್ರ ಸಿದ್ದರಾಮಯ್ಯ ಸಹ ಹಾಜರಿದ್ದರು. ವಿವಿಧ ಕಾಲ ತಂಡಗಳು ಗಜಪಡೆಯನ್ನು ಸ್ವಾಗತ ಮಾಡಿದವು.

"ಅಂಬಾರಿ ಹೊರುವ ಆನೆಯ ಆಯ್ಕೆಯನ್ನು ತೀರ್ಮಾನವನ್ನು ಅರಣ್ಯ ಇಲಾಖೆಗೆ ಬಿಟ್ಟಿದ್ದೇವೆ. ನಿತ್ಯ ತಾಲೀಮು ನಡೆಸುತ್ತಾರೆ. ತಾಲೀಮಿನ ನಂತರ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುವುದು" ಎಂದು ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.

"ಹನೂರು ಶೂಟೌಟ್ ವಿಚಾರ ತನಿಖೆ ಶುರುವಾಗಿದೆ. AC ವರದಿಗೂ ತನಿಖಾ ವರದಿಗೂ ಸಂಬಂಧ ಇಲ್ಲ. ಇಲಾಖೆಯ ಆಸ್ತಿಯನ್ನು ನಾಶ ಮಾಡಿದವರ ಮೇಲೆ ಕ್ರಮ ಆಗುತ್ತದೆ. ಅಧಿಕಾರಿಗಳು ಹೆದರುವ ಅವಶ್ಯಕತೆ ಇಲ್ಲ. ಅಧಿಕಾರಿಗಳು ಧೈರ್ಯವಾಗಿ ಅರಣ್ಯಕ್ಕೆ ಹೋಗಿ ಕೆಲಸ ಮಾಡಿ, ಅಧಿಕಾರಿಗಳ ರಕ್ಷಣೆಗೆ ಇಲಾಖೆ ಬದ್ಧವಿದೆ" ಎಂದು ಇದೇ ವೇಳೆ ಸಚಿವರು ಹೇಳಿಕೆ ನೀಡಿದರು.

ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿ, "ಮುಡಾ ವಿಚಾರದಲ್ಲಿ ಅಕ್ರಮವಾಗಿ ಸೈಟ್ ಪಡೆದ ಎಲ್ಲಾ ಸೈಟ್​ಗಳನ್ನು ರದ್ದು ಮಾಡಿದ್ದೇವೆ. ಮುಂದೆ ಕಾನೂನು ರೀತಿ ಇಲ್ಲದ ಸೈಟ್​ಗಳನ್ನು ರದ್ದು ಮಾಡುತ್ತೇವೆ. ಇನ್ನು ಸಚಿವ ನಾಗೇಂದ್ರ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದರೆ ಬಿಜೆಪಿಯವರು ಚರ್ಚೆಗೆ ಬರಬೇಕಿತ್ತು. ಸದನದಲ್ಲಿ ಗದ್ದಲ ಮಾಡಿ ಅಧಿವೇಶನ ಹಾಳು ಮಾಡುತ್ತಿದ್ದಾರೆ. ಈಗ ಸಚಿವ ನಾಗೇಂದ್ರ ವಿಚಾರದಲ್ಲಿ ಪಿಎಂ ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ" ಎಂದರು.

"ಆಗಸ್ಟ್ 28 ರಂದು 9 ಗಜಪಡೆಗಳಾದ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಹಾಗೂ ಹೆಣ್ಣು ಆನೆಗಳಾದ ಲಕ್ಷ್ಮೀ ಮತ್ತು ಕಾವೇರಿ ಅರಮನೆಗೆ ಪ್ರವೇಶ ಮಾಡಿದ ಆನೆಗಳಾಗಿದ್ದು, ಈ ಆನೆಗಳ ತೂಕದ ನಂತರ ಜಂಬೂಸವಾರಿಗೆ ಸಿದ್ಧ ಮಾಡುವ ತಾಲೀಮು ಆರಂಭವಾಗುತ್ತದೆ" ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದರು.

ಇದನ್ನೂ ಓದಿ: ಮೈಸೂರು: ದಸರಾ ಜಂಬೂ ಸವಾರಿಯಲ್ಲಿ ಈವರೆಗೆ ಚಿನ್ನದ ಅಂಬಾರಿ ಹೊತ್ತ ಪ್ರಸಿದ್ಧ ಆನೆಗಳು ಯಾವುವು? ಅವುಗಳ ವಿಶೇಷತೆ ಹೀಗಿದೆ