ಸರಗೂರು: ಹುಲಿ ದಾಳಿ, ಮರವೇರಿ ಪ್ರಾಣ ಉಳಿಸಿಕೊಂಡ ರೈತ
ಸರಗೂರು ತಾಲೂಕಿನಲ್ಲಿ ಹುಲಿ ಹಾವಳಿ ಮುಂದುವರಿದಿದೆ. ರೈತನೊಬ್ಬ ಮರವೇರಿ ಹುಲಿಯಲ್ಲಿ ತಪ್ಪಿಸಿಕೊಂಡಿದ್ದಾರೆ.

Published : July 7, 2026 at 10:26 AM IST
ಮೈಸೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರೈತನ ಮೇಲೆ ಹುಲಿ ದಾಳಿಗೆ ಯತ್ನಿಸಿದ್ದು, ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸರಗೂರು ತಾಲೂಕು ಸಮೀಪದ ಕೋಹಳ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.
ದೆಗ್ಗಲ್‌ಹುಂಡಿ ಗ್ರಾಮದ ರಾಜು, ಹುಲಿ ದಾಳಿದಿಂದ ಪಾರಾದ ರೈತ. ಕೋಹಳ ಗ್ರಾಮದ ವ್ಯಾಪ್ತಿಗೆ ಬರುವ ತಮ್ಮ ಜಮೀನಿನಲ್ಲಿ ರಾಜು ಕೆಲಸ ಮಾಡುತ್ತಿದ್ದಾಗ ತನ್ನ ಎರಡು ಮರಿಗಳೊಂದಿಗೆ ಜಮೀನಿನ ಪೊದೆಯಲ್ಲಿದ್ದ ಹುಲಿ ದಾಳಿಗೆ ಯತ್ನಿಸಿದೆ.
ಪೊದೆಯಲ್ಲಿ ಶಬ್ಬ ಬಂದ ಹಿನ್ನೆಲೆಯಲ್ಲಿ ರೈತ ರಾಜು, ಹಂದಿ ಇರಬಹುದೆಂದು ಜೋರಾಗಿ ಶಬ್ಧ ಮಾಡಿದ್ದಾರೆ. ಆಗ ಹುಲಿ ಕೂಡ ಶಬ್ಧ ಮಾಡಿದ್ದು, ಪೊದೆಯಿಂದ ಹೊರ ಬಂದು ದಾಳಿಗೆ ಯತ್ನಿಸಿದೆ. ಇದರಿಂದ ಭಯಭೀತರಾದ ರಾಜು ಜೋರಾಗಿ ಕಿರುಚಿಕೊಂಡು ಪಕ್ಕದಲ್ಲೇ ಇದ್ದ ಮರವನ್ನು ಏರಿ, ಒಂದೂವರೆ ತಾಸು ಮೇಲೆಯೇ ಕುಳಿತುಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.
ಬಳಿಕ ಹುಲಿ ಕಾಣದಿದ್ದಾಗ ರಾಜು ಮರದಿಂದ ಕೆಳಗಿಳಿದಿದ್ದಾರೆ. ನಂತರ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಂದಿಗೆ ರಾಜು ಮಾತುಕತೆ ನಡೆಸುವಾಗ ಮರಿಹುಲಿಯೊಂದು ಮತ್ತೆ ದಾಳಿಗೆ ಯತ್ನಿಸಿದೆ.
ಕೈಯಲ್ಲಿ ಮಚ್ಚು ಹಿಡಿದು, ಜೋರಾಗಿ ಕಿರುಚಿಕೊಂಡೆ. ದಾಳಿಗೆ ಯತ್ನಿಸಿದ ಹುಲಿ ಮರಿಗೆ ಮಚ್ಚಿನಿಂದ ಹೊಡೆಯಲು ಯತ್ನಿಸಿದೆ. ಆಗ ಗಾಬರಿಗೊಂಡ ಮರಿಹುಲಿ ಕಾಡಿನತ್ತ ಓಡಿ ಹೋಗಿದೆ ಎಂದು ರಾಜು ತಿಳಿಸಿದ್ದಾರೆ.
ಈ ವಿಷಯವನ್ನು ಡಿಸಿಎಫ್ ಕೆ.ಪರಮೇಶ್ ಅವರ ಗಮನಕ್ಕೆ ತರಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಸ್ಥಳದಲ್ಲಿ ಬೋನ್ ಇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ರೈತರು ಹಾಗೂ ಗ್ರಾಮಸ್ಥರು, ಬೆಳಗ್ಗೆ ಹಾಗೂ ರಾತ್ರಿ ವೇಳೆಯಲ್ಲಿ ಜಮೀನುಗಳ ಕಡೆ ಹೋಗದಂತೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಈ ಕುರಿತು 'ಈಟಿವಿ ಭಾರತ' ಜೊತೆ ದೂರವಾಣಿಯಲ್ಲಿ ಮಾತನಾಡಿದ ಡಿಸಿಎಫ್ ಪರಮೇಶ್ ಅವರು, ರೈತನ ಮೇಲೆ ಹುಲಿ ದಾಳಿ ಮಾಡಿರುವ ಘಟನೆಯ ಬಗ್ಗೆ ಮಾಹಿತಿ ಬಂದಿದೆ. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಸೆರೆಗಾಗಿ ಬೋನ್ ಇಡಲಾಗಿದೆ. ಗ್ರಾಮಸ್ಥರು ಜಮೀನುಗಳತ್ತ ಹೋಗದಂತೆ ಎಚ್ಚರಿಕೆ ಹೋಗುವಂತೆ ಸೂಚಿಸಲಾಗಿದೆ ಎಂದರು.
ಎರಡು ದಿನಗಳ ಹಿಂದೆ ಹುಲಿ, 5 ಮರಿ ಹುಲಿ ಸೆರೆ: ಸರಗೂರು ತಾಲೂಕಿನ ಮುಳ್ಳೂರು ಗ್ರಾಮದ ಸಮೀಪ ಕೆಲ ದಿನಗಳ ಹಿಂದೆ ರೈತ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ 12 ವರ್ಷದ ತಾಯಿ ಹುಲಿ, ಮತ್ತದರ 25 ದಿನಗಳ ಐದು ಮರಿಗಳನ್ನು ಅರಣ್ಯ ಇಲಾಖೆಯು ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಎರಡು ದಿನಗಳ ಹಿಂದೆಯಷ್ಟೇ ಸೆರೆ ಹಿಡಿದಿತ್ತು.
ಇದನ್ನೂ ಓದಿ:
ಕಾರ್ಬೆಟ್ ಅಭಯಾರಣ್ಯದಲ್ಲಿ ಹೆಬ್ಬಾವು ಬೇಟೆಯಾಡಿದ ಹುಲಿ: ಅಪರೂಪದ ವಿಡಿಯೋ ನೋಡಿ!

