ETV Bharat / state

ನನ್ನ ನಕಲಿ ಆಡಿಯೋ ವೈರಲ್, ಇದೊಂದು ರಾಜಕೀಯ ಷಡ್ಯಂತ್ರ: ಜಮೀರ್ ಅಹ್ಮದ್ ಖಾನ್: ಯಾವುದೇ ತನಿಖೆಗೂ ಸಿದ್ದ ಎಂದು ಸವಾಲು

ನನ್ನ ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ZAMEER AHMED KHAN
ಜಮೀರ್ ಅಹ್ಮದ್ ಖಾನ್ (ETV Bharat)
author img

By ETV Bharat Karnataka Team

Published : June 1, 2026 at 2:34 PM IST

2 Min Read
Choose ETV Bharat

ಬೆಂಗಳೂರು : ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕುರಿತ ಆಡಿಯೋ ನಕಲಿ, ಎಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಆಡಿಯೋ ಬಗ್ಗೆ ಯಾವುದೇ ತನಿಖೆ ನಡೆಸಲಿ- ಸವಾಲು: ಆಡಿಯೋ ಬಗ್ಗೆ ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ ಎಂದು ಸವಾಲು ಹಾಕಿದ್ದಾರೆ. ನಾನು ಆ ರೀತಿ ಮಾತನಾಡಿಲ್ಲ. ಗೊಂದಲ ಉಂಟು ಮಾಡಲು ಇದೆಲ್ಲವೂ ಸೃಷ್ಟಿ ಮಾಡಲಾಗಿದೆ. ಇದು ಕಿಡಿಗೇಡಿಗಳ ಕೃತ್ಯ. ಇದನ್ನು ಯಾರೂ ನಂಬಬಾರದು ಎಂದು ತಿಳಿಸಿದ್ದಾರೆ.

ಡಿಕೆ ಶಿವಕುಮಾರ್ ಬುಧವಾರ ಪ್ರಮಾಣ ವಚನ ಸ್ಬೀಕಾರ ಮಾಡಲಿದ್ದು, ಸುಮಾರು 10 - 12 ಜನರಿಗೆ ಸಂಪುಟ ಸದಸ್ಯರನ್ನೂ ಸೇರ್ಪಡೆಗೊಳಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇತ್ತ ಜಮೀರ್ ಅಹ್ಮದ್ ಖಾನ್ ಕೂಡ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಜಮೀರ್ ಅವರದ್ದು ಎನ್ನಲಾಗಿರುವ ಆಡಿಯೋ ವೈರಲ್ ಆಗುತ್ತಿದೆ.

ಆಡಿಯೋದಲ್ಲೇನಿದೆ?: ದಾವಣಗೆರೆ ಉಪಸಮರದದಲ್ಲಿ ಟಿಕೆಟ್ ನೀಡದ್ದಕ್ಕೆ ಮುಸ್ಲಿಂ ಸಮುದಾಯ ಅಸಾಮಾಧಾನಗೊಂಡಿತ್ತು . ಇತ್ತ ಜಮೀರ್ ಅಹ್ಮದ್ ಖಾನ್​ ಸೇರಿ ಮುಸ್ಲಿಂ ನಾಯಕರು ಪ್ರಚಾರದಿಂದ ದೂರ ಉಳಿದಿದ್ದರು. ಇದೀಗ ಜಮೀರ್ ಅಹಮ್ಮದ್​ ಅವರದ್ದು ಎನ್ನಲಾದ ಆಡಿಯೋ ಸಂಭಾಷಣೆ ದೊಡ್ಡ ಸದ್ದು ಮಾಡುತ್ತಿದೆ.

ಸ್ಥಳೀಯ ಕಾಂಗ್ರೆಸ್ ನಾಯಕ ಮುಹಮ್ಮದ್ ಸಿರಾಜ್ ಎಂಬುವವರ ಜೊತೆಗೆ ಮಾತನಾಡಿದ ಫೋನ್ ಆಡಿಯೋ ಸಂಬಾಷಣೆ ಇದಾಗಿದೆ ಎನ್ನಲಾಗುತ್ತಿದೆ. ಸದ್ಯ ಈ ಆಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ದಾವಣಗೆರೆ ಚುನಾವಣೆ ವಿಚಾರವಾಗಿ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ಇದು ಪೂರಕ ಎಂಬಂತಿದೆ‌ ಎಂದು ವಿಶ್ಲೇಷಿಸಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎನ್ನಲಾಗಿರುವ ಈ ಆಡಿಯೋ ಸಂಭಾಷಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಮರ್ಥ್ ಅವರಿಗೆ ಹೆಚ್ಚು ವೋಟು ಹಾಕಬೇಡಿ. ಬಂಡಾಯ ನಿಂತು ಕಣದಿಂದ ಹಿಂದೆ ಸರಿದಿದ್ದ ಸಾದಿಕ್ ಪೈಲ್ವಾನ್ ವಾರ್ಡ್​ನಲ್ಲಿ ಕಾಂಗ್ರೆಸ್​ಗೆ ವೋಟು ಕಡಿಮೆ ಬರುವಂತೆ ನೋಡಿಕೊಳ್ಳಿ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರಿಗೆ ಮತ ಹಾಕಿಸಿ. ಬಲವಂತವಾಗಿ ಮನೆಯಿಂದ ಕರೆದು ಬಂದು ವೋಟು ಹಾಕಿಸಬೇಡಿ ಎಂದು ಮಾತನಾಡಿರುವುದು ಈ ಆಡಿಯೋದಲ್ಲಿದೆಯಂತೆ.

ಇದನ್ನೂ ಓದಿ: ಪಕ್ಷ ವಿರೋಧಿ ಚಟುವಟಿಕೆ ಆರೋಪ: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ಬಿಡುಗಡೆ