ETV Bharat / state

ದಾವಣಗೆರೆ ದಕ್ಷಿಣ ಉಪಚುನಾವಣೆ: ಮೇ 04ಕ್ಕೆ ಫಲಿತಾಂಶ, ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರದಲ್ಲಿ ಯಾರಿಗೆ ವಿಜಯಮಾಲೆ?

ವಿಶೇಷ ವರದಿ: ನೂರುಲ್ಲಾ ಡಿ - ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಫಲಿತಾಂಶದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಬಾರಿ ಮುಸ್ಲಿಂ ಮತದಾರರು ಯಾರಿಗೆ ಮಣೆ ಹಾಕಿದ್ದಾರೆ ಎಂಬುದು ಫಲಿತಾಂಶದ ಬಳಿಕ ತಿಳಿಯಲಿದೆ.

DVANAGERE  BY ELECTION RESULT 2026  BJP AND CONGRESS COMPETITION  ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ DAVANAGERE SOUTH CONSTITUENCY
ಸಮರ್ಥ್ ಶಾಮನೂರು, ಶ್ರೀನಿವಾಸ್ ದಾಸಕರಿಯಪ್ಪ (Etv Bharat)
author img

By ETV Bharat Karnataka Team

Published : May 2, 2026 at 9:07 PM IST

7 Min Read
Choose ETV Bharat

ದಾವಣಗೆರೆ: ಬೆಣ್ಣೆನಗರಿಯ ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್​ನ ಭದ್ರಕೋಟೆ. ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಇತಿಹಾಸವೇ ಇಲ್ಲ. ಈ ಮತ ಕ್ಷೇತ್ರದಲ್ಲಿ ಮುಸ್ಲಿಂ ಧರ್ಮಿಯರೇ ಕಿಂಗ್​ ಮೇಕರ್ಸ್​. ಆದ್ರೆ ಈ ಬಾರಿಯ ರಾಜಕೀಯ ಚಿತ್ರಣ ಕಾಂಗ್ರೆಸ್​ ಪಾಲಿಗೆ ಕಗ್ಗಂಟಾಗಿರುವುದು, ಚುನಾವಣೆ ಸಂದರ್ಭ ಮತ್ತು ನಂತರದ ಬೆಳವಣಿಗೆಗಳಿಂದ ಗೋಚರವಾಗಿದೆ.

ಶೇ. 68 ರಷ್ಟು ಮತದಾನ: ಎಪ್ರಿಲ್ 09 ರಂದು ನಡೆದಿದ್ದ ಮತದಾನದಲ್ಲಿ ಶೇ. 68.43 ರಷ್ಟು ವೋಟಿಂಗ್​ ಆಗಿತ್ತು. ಸೋಮವಾರ ಮತ ಎಣಿಕೆ ನಡೆಯಲಿದ್ದು, ಎಲ್ಲರ ಚಿತ್ತ ಸ್ಟ್ರಾಂಗ್​ ರೂಮ್​ ಇರುವ ನಗರದ ಡಿಆರ್ ಆರ್ ಶಾಲೆಯತ್ತ ನೆಟ್ಟಿದೆ.

Congress Candidate Samartha Shamanur with Father S S Mallikarjun
ಮಗ ಸಮರ್ಥ ಜೊತೆ ಸಚಿವ ಎಸ್​ಎಸ್​ ಮಲ್ಲಿಕಾರ್ಜುನ್ (ETV Bharat)

ಒಂದೇ ದಿನ ಬಾಕಿ‌ ಇದೆ. ನಗರದ ಡಿಆರ್ ಆರ್ ಶಾಲೆಯಲ್ಲಿ ಸೋಮವಾರ ಫಲಿತಾಂಶ ನೀಡಲು ಸಕಲ ಸಿದ್ಧತೆ ಆಗಿದ್ದು, 14 ಟೇಬಲ್​ಗಳಲ್ಲಿ ಹಾವು-ಏಣಿ ಆಟ ನಡೆಯೋದು ಪಕ್ಕಾ ಎನ್ನಲಾಗ್ತಿದೆ. ಅಲ್ಲದೆ ಗೆಲುವು ಯಾರದು ಎಂಬುದರ ಬಗ್ಗೆ ಕ್ಷೇತ್ರದಲ್ಲಿ ಬೆಟ್ಟಿಂಗ್ ಕೂಡ​ ನಡೆಯುತ್ತಿದೆ. ಸಮರ್ಥ್ ಶಾಮನೂರು ಗೆದ್ದರೆ ಅಜ್ಜನ ಕ್ಷೇತ್ರ ಉಳಿಸಿಕೊಂಡರು ಎಂಬ ಹಿರಿಮೆ ಇರಲಿದೆ.‌ ಇತ್ತ‌ ಬಿಜೆಪಿ ಗೆಲುವಿನ ನಗೆ ಬೀರಿದ್ರೆ ಹೊಸ ಇತಿಹಾಸ ಸೃಷ್ಟಿಸಲಿದೆ. ಸೋಮವಾರ ಫಲಿತಾಂಶ ಹೊರಬೀಳಲಿದ್ದು ಎಲ್ಲಾ ಪ್ರಶ್ನೆಗಳಿಗೆ ಅಂದೇ ಉತ್ತರ ಸಿಗಲಿದೆ.‌

DVANAGERE  BY ELECTION RESULT 2026  BJP AND CONGRESS COMPETITION  ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ DAVANAGERE SOUTH CONSTITUENCY
ಕಾಂಗ್ರೆಸ್​ ಅಭ್ಯರ್ಥಿ ಸಮರ್ಥ ಶಾಮನೂರು (ETV Bharat)

ಸಿಎಂ, ಡಿಸಿಎಂ ಟಿಕಾಣಿ, ಸಚಿವರಿಂದಲೂ ನಡೆದಿತ್ತು ಅಬ್ಬರದ ಪ್ರಚಾರ: ಈ ಉಪಚುನಾವಣೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಎಐಸಿಸಿ ಕಾರ್ಯದರ್ಶಿ ಅಭಿಶೇಕ್ ದತ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ತೆಲಂಗಾಣ ಸಚಿವ ಮೊಹಮ್ಮದ್ ಅಜರುದ್ದೀನ್ ಅವರು ಈ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದರು.‌ ಶತಾಯಗತಾಯವಾಗಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಹರಸಾಹಸ ಪಟ್ಟರು. ಅಲ್ಲದೆ ಚುನಾವಣಾ ಪ್ರಚಾರಕ್ಕೆ ದಾವಣಗೆರೆಗೆ ಇಡೀ ಸಚಿವ ಸಂಪುಟ ಎಂಟ್ರಿಕೊಟ್ಟಿತ್ತು. ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಎಂ ಬಿ ಪಾಟೀಲ್, ಜಿ. ಪರಮೇಶ್ವರ್, ಹೆಚ್ ಸಿ ಮಹದೇವಪ್ಪ, ಸಂತೋಷ್ ಲಾಡ್ ಅವರು ಮತಬೇಟೆ ನಡೆಸಿದ್ದರು.

ಅಚ್ಚರಿ ಅಂದ್ರೆ ಅಲ್ಪಸಂಖ್ಯಾತ ಮತಗಳ ಬೇಟೆಗಾಗಿ ವಸತಿ ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಪ್ರಚಾರಕ್ಕೆ ಬಾರದೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರ ಮನೆಗೆ ಬಂದು ಹೋಗಿದ್ದು ಕಾಂಗ್ರೆಸ್ ಗೆ ಪೆಟ್ಟು ಬಿದ್ದಂತೆ ಆಯಿತು. ಮುಸ್ಲಿಂ ಬಾಹುಳ್ಯ ಇರುವ ಈ ಕ್ಷೇತ್ರದಲ್ಲಿ ಜಮೀರ್ ರೋಡ್ ಶೋ ಮಾಡಿದ್ರೆ ಕಾಂಗ್ರೆಸ್​ಗೆ ಇನ್ನಷ್ಟು ಶಕ್ತಿ ಬರುತ್ತಿತ್ತು.

BJP Candidate Srinivas Daskariyappa
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್​ ದಾಸಕರಿಯಪ್ಪ (ETV Bharat)

ಬಿಜೆಪಿಯಿಂದ ನಾಯಕರ ಸರಣಿ ಪ್ರಚಾರ: ಬಿಜೆಪಿಯಿಂದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಆಶೋಕ್, ಸಂಸದ ಬಸವರಾಜ ಬೊಮ್ಮಾಯಿ, ಸದಾನಂದ ಗೌಡ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಚುನಾವಣೆಯ ಪ್ರಚಾರಕ್ಕೆ ಆಗಮಿಸಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಪರ ಭರ್ಜರಿ ಮತಬೇಟೆ ನಡೆಸಿದ್ರು.

BJP Candidate Srinivas DasKariyappa
ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್​ ದಾಸಕರಿಯಪ್ಪ (ETV Bharat)

ನಾಲ್ಕು ಚುನಾವಣೆಗಳ ಇತಿಹಾಸ - ಕ್ಷೇತ್ರದಲ್ಲಿ ಮುಸ್ಲಿಂರೇ ಕಿಂಗ್ ಮೇಕರ್ಸ್​: ದಕ್ಷಿಣ ವಿಧಾನಸಭಾ ಕ್ಷೇತ್ರ ರಚನೆಯಾದಾಗಿನಿಂದ ಇಲ್ಲಿ ಕಾಂಗ್ರೆಸ್ ಪಕ್ಷ ತನ್ನ ಹಿಡಿತ ಸಾಧಿಸುತ್ತಲೇ ಬಂದಿದೆ, ಈ ಕ್ಷೇತ್ರದಲ್ಲಿ ಮುಸ್ಲಿಂರೇ ಕಿಂಗ್ ಮೇಕರ್ ಆಗಿದ್ದಾರೆ. 2008 ರ ಚುನಾವಣೆಯಲ್ಲಿ ಈ ಕ್ಷೇತ್ರ ಕಾಂಗ್ರೆಸ್​ ವಶವಾಗಿತ್ತು. ಆಗ ಶಾಮನೂರು ಶಿವಶಂಕರಪ್ಪ 41,675 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಯಶವಂತರಾವ್ ಜಾಧವ್ ವಿರುದ್ಧ ಜಯ ಗಳಿಸಿದ್ದರು. ಇನ್ನು ಬಿಜೆಪಿ ಯಶವಂತ್ ರಾವ್ ಜಾಧವ್ 35,317 ಮತಗಳನ್ನು ಪಡೆದು ಪರಭವಗೊಂಡಿದ್ದರು.

ಇನ್ನು, 2013 ಚುನಾವಣೆ ಫಲಿತಾಂಶ ನೋಡುವುದಾದ್ರೇ ಈ ಕ್ಷೇತ್ರ ಕಾಂಗ್ರೆಸ್ ವಶವಾಗಿತ್ತು. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಂಕರಪ್ಪ ಅವರು 66,320 ಮತಗಳನ್ನು ಪಡೆದು ಗೆಲುವು ಸಾಧಿಸಿದ್ರೆ, ಇತ್ತ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕರೆಕಟ್ಟೆ ಸೈಯದ್ ಸೈಫುಲ್ಲಾ ಅವರು 26,162 ಮತಗಳನ್ನು ಪಡೆದು ಸೋಲುಂಡಿದ್ದರು. ಬಿಜೆಪಿಯ ಯಶವಂತ್ ರಾವ್ ಜಾಧವ್ ಅವರು ಕಡಿಮೆ ಮತಗಳನ್ನು ಪಡೆದು ಸೋತಿದ್ದರು.

Congress Candidate Samartha Shamanur
ಕಾಂಗ್ರೆಸ್​ ಅಭ್ಯರ್ಥಿ ಸಮರ್ಥ ಶಾಮನೂರು (ETV Bharat)

ಮತ್ತೆ 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ -71,369 ಮತಗಳನ್ನು ಮತಗಳನ್ನು ಪಡೆದು ಮೂರನೇ ಬಾರಿ ಆಯ್ಕೆಯಾದ್ರು, ಬಿಜೆಪಿ ಅಭ್ಯರ್ಥಿ ಯಶವಂತ್ ರಾವ್ ಜಾಧವ್- 55,485 ಮತಗಳಿಂದ ಮೂರನೇ ಬಾರಿ ಸೋತಿದ್ದರು. ಇನ್ನು, 2018 ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಮಾನುಲ್ಲಾ ಖಾನ್ ಠೇವಣಿ ಕಳೆದುಕೊಂಡಿದ್ದರು.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ದಿ. ಶಾಮನೂರು ಶಿವಶಂಕರಪ್ಪ-84298 ಮತಗಳನ್ನು ಪಡೆದು ತಮ್ಮ 92ನೇ ವಯಸ್ಸಿನಲ್ಲಿ ಗೆದ್ದು ಬೀಗಿದ್ರು. ಇತ್ತ ಬಿಜೆಪಿಯ ಬಿ ಜಿ ಅಜಯ್ ಕುಮಾರ್ ಅವರು 56,410 ಮತಗಳನ್ನು ಪಡೆದು ಸೋಲು ಕಂಡಿದ್ದರು. ಮೇ 04 ರಂದು ನಡೆಯಲಿರುವ ಮತ ಎಣಿಕೆಯ ಬಳಿಕ ಫಲಿತಾಂಶ ಹೊರಬೀಳಲಿದೆ.‌

Sadik Pailwan BY ELECTION RESULT 2026  BJP AND CONGRESS COMPETITION  ದಾವಣಗೆರೆ ದಕ್ಷಿಣ ಉಪಚುನಾವಣೆ ಫಲಿತಾಂಶ DAVANAGERE SOUTH CONSTITUENCY
ಟಿಕೆಟ್​ ಕೈ ತಪ್ಪಿದಾಗ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್​ ಪೈಲ್ವಾನ್​ (ETV Bharat)
ಈ ಬಾರಿ ಮುಸ್ಲಿಂ ಮತಗಳು ಛಿದ್ರ? ವೀರಶೈವ ಲಿಂಗಾಯತ ಪ್ರಬಲ ನಾಯಕ ಶಾಮನೂರು ಶಿವಶಂಕರಪ್ಪ ಅವರು ಇಲ್ಲಿ ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಅವರು ಮುಸ್ಲಿಂ- ವೀರಶೈವ ಲಿಂಗಾಯತ ಮತಗಳನ್ನು ಕ್ರೂಢೀಕರಣ ಮಾಡುವಲ್ಲಿ ಸಫಲರಾಗುತ್ತಿದ್ದರು. ಈ ಕ್ಷೇತ್ರದಲ್ಲಿ 75-80 ಸಾವಿರ ಮುಸ್ಲಿಂ ಮತದಾರರಿದ್ದು, ಕಾಂಗ್ರೆಸ್ ಪಾಲಿಗೆ ಅವರೇ ನಿರ್ಣಾಕರಾಗಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರನ್ನು ಬೆಂಬಲಿಸುತ್ತ ಬಂದಿದ್ದ ಮುಸ್ಲಿಂರು ಈ ಬಾರಿ ಅದೇ ಮುಸ್ಲಿಂ ಸಮುದಾಯ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರಿಗೆ ಕಂಠಕವಾಗಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಿಂದ ಮುಸ್ಲಿಂ ಯುವ ಮತಗಳು ಕೈ ಕೊಡುವ ಸಾಧ್ಯತೆ ಇದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ಮುಸ್ಲಿಂರ ಕೆಂಗಣ್ಣಿಗೆ ಗುರಿಯಾದ ಕಾಂಗ್ರೆಸ್​: ಹೈಕಮಾಂಡ್ ಸಮರ್ಥ್ ಶಾಮನೂರಿಗೆ ಟಿಕೆಟ್ ನೀಡಿದ್ದರಿಂದ ಮುಸ್ಲಿಂರ ಕೆಂಗಣ್ಣಿಗೆ ಗುರಿಯಾಯಿತು. ಇದರಿಂದ ಕೆರಳಿದ ಅಲ್ಪಸಂಖ್ಯಾತರು ಪಕ್ಷಕ್ಕೆ ತಕ್ಕ ಪಾಠ ಕಲಿಸ್ತಿವಿ ಎಂದು ಶಾಮನೂರು ಮನೆತನದ ವಿರುದ್ಧ ತಿರುಗಿಬಿದ್ದರು. ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಸೈಯದ್ ಖಾಲಿದ್ ಅಹ್ಮದ್, ಸಾದಿಕ್​ ಪೈಲ್ವಾನ್​, ಸಮರ್ಥ್ ಶಾಮನೂರು ಈ ನಾಲ್ವರು ಟಿಕೆಟ್ ಕೇಳಿದ್ದರು. ಈ ಪೈಕಿ ಕಾಂಗ್ರೆಸ್ ಹೈ ಕಮಾಂಡ್ ಶಾಮನೂರು ಮನೆತನದ ಮೂರನೇ ತಲೆಮಾರಿನ ಕುಡಿಗೆ ಟಿಕೆಟ್ ನೀಡಿತು. ಇದರಿಂದ ಅಲ್ಪಸಂಖ್ಯಾತರು ಪಕ್ಷಕ್ಕೆ ಸಡ್ಡು ಹೊಡೆದರು. ಅಲ್ಲದೆ ಪಕ್ಷೇತರಾಗಿ ನಿಂತು ಮತಗಳನ್ನು ಛಿದ್ರ ಮಾಡಿರುವುದಾಗಿ ಹೇಳಲಾಗುತ್ತಿದೆ. ಎಸ್​ಡಿಪಿಐನಿಂದ ಕಣಕ್ಕಿಳಿದ ಅಪ್ಸರ್ ಕೊಡ್ಲಿಪೇಟೆ ಕೂಡ ಕೈಗೆ ಶಾಕ್ ಕೊಟ್ಟಿದ್ದಾರೆ ಎಂಬ ಮಾತುಗಳು ರಾಜಕೀಯದಲ್ಲಿ ಕೇಳಿಬರುತ್ತಿವೆ.

ಈ ಕ್ಷೇತ್ರದಲ್ಲಿ ಶಿವಶಂಕರಪ್ಪ ಅವರ ಬಳಿಕ ಮುಸ್ಲಿಂ ಸಮುದಾಯದ ಅಭ್ಯರ್ಥಿಗೇ ಕಾಂಗ್ರೆಸ್​ ಟಿಕೆಟ್ ಕೊಡಬೇಕೆಂಬ ಒತ್ತಾಯ ಬಲವಾಗಿ ಕೇಳಿಬಂದಿತ್ತು. ಕೊನೆಕ್ಷಣದವರೆಗೂ ಸಾದಿಕ್​ ಪೈಲ್ವಾನ್​ ಕೈ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನಾಮಪತ್ರ ಹಿಂಪಡೆಯಲು ಶಾಸಕ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್ ಅವರು ಮನವೊಲಿಸಿದ್ರು ಪ್ರಯೋಜನ ಆಗಿರಲಿಲ್ಲ. ಆದ್ರೆ ಕಾಂಗ್ರೆಸ್ ಅಭ್ಯರ್ಥಿಗೆ ಕಂಠಕವಾಗಿದ್ದ ಸಾದಿಕ್ ಪೈಲ್ವಾನ್ ಗೆ ಸಿಎಂ ನಿವಾಸದಲ್ಲಿ ಮನವೊಲಿಸಲಾಗಿತ್ತು. ಬಳಿಕ ಅವರು ಚುನಾವಣಾ ಸ್ಪರ್ಧೆಗೆ ನಿವೃತ್ತಿ ಘೋಷಿಸುವ ಮೂಲಕ ಕಣದಿಂದ ಹಿಂದೆ ಸರಿದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರಿಗೆ ಬೆಂಬಲು ಸೂಚಿಸಲು ಒಪ್ಪಿಕೊಂಡರು.

14 ಜನ ಮುಸ್ಲಿಂ ಪಕ್ಷೇತರರು ಸ್ಪರ್ಧೆ: ಒಬ್ಬೊಬ್ಬರು ಒಂದೊಂದು‌ ಸಾವಿರ ಮತಗಳು ಪಡೆದ್ರು 14 ಸಾವಿರ ಮತಗಳು ವ್ಯತ್ಯಾಸ ಆಗಲಿವೆ. ಇನ್ನು ಎಸ್​ಡಿಪಿಐ ಪಕ್ಷದ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ 10-12 ಸಾವಿರ ಮತಗಳನ್ನು ಪಡೆಯಬಹುದು ಎಂಬ ಲೆಕ್ಕಾಚಾರ ಕ್ಷೇತ್ರದ ಜನರದ್ದಾಗಿದೆ.

BJP Candidate Srinivas DasKariyappa
ವಾಲ್ಮಿಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಆಶೀರ್ವಾದ ಪಡೆದಿದ್ದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ (ETV Bharat)

ಒಟ್ಟು ಮತದಾರರು ಮತ್ತು ಜಾತಿಗಳ ಬಲಾಬಲ ಹೀಗಿದೆ:

ಈ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲುವು ಸಾಧಿಸಲು ಮುಸ್ಲಿಂ ಹಾಗೂ ಲಿಂಗಾಯತ ಮತಗಳೇ ನಿರ್ಣಾಯಕ ಆಗಲಿವೆ. ಕೆಲ ಮುಸ್ಲಿಂರು ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ. ಇಲ್ಲಿ ಜಾತಿ ಲೆಕ್ಕಾಚಾರ ನೋಡುವುದಾದ್ರೇ ಈ ಕ್ಷೇತ್ರದಲ್ಲಿ 1,13,654 ಪುರುಷರು, 1,17,986 ಮಹಿಳೆಯರು, 43 ತೃತೀಯ ಲಿಂಗಿಗಳು ಸೇರಿ ಒಟ್ಟು 2,31,683 – ಮತದಾರರಿದ್ದಾರೆ. ಒಟ್ಟು 284 – ಒಟ್ಟು ಮತಗಟ್ಟೆಗಳಿವೆ.

  • ಲಿಂಗಾಯತ -54,000
  • ಮುಸ್ಲಿಂ-75,700
  • ಎಸ್ಸಿ-24,520
  • ಕುರುಬ -25,000
  • ಮರಾಠ-20,000
  • ಎಸ್ಟಿ-18,463
  • ಇತರೆ-14,000 ಮತಗಳಿದ್ದು, ಗೆಲುವು ಯಾರದ್ದು ಎಂಬುದು ಫಲಿತಾಂಶದ ಬಳಿಕ ತಿಳಿಯಲಿದೆ.

ಚುನಾವಣಾ ಕಣದಲ್ಲಿದ್ದಾರೆ 25 ಜನ ಅಭ್ಯರ್ಥಿಗಳು: ಪ್ರಸ್ತುತ ಒಟ್ಟು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಒಟ್ಟು​ 25 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 14 ಜನ ಮುಸ್ಲಿಂರು ಸ್ಪರ್ಧೆಯಲಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಇಲ್ಲಿ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿನ ನಗೆ ಬೀರಿದ್ದು, ಬಿಜೆಪಿ ಒಮ್ಮೆಯೂ ಗೆಲುವಿನ ದಡ ಸೇರಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕೈ ಹಿಡಿಯುತ್ತಿದ್ದ ಅಲ್ಪಸಂಖ್ಯಾತರು ಅದೇ ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರು. 14 ಜನ ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಕಾಂಗ್ರೆಸ್ಗೆ ಇದು ಬಿಸಿ ತುಪ್ಪವಾಗಿದೆ. ಬಿಜೆಪಿ, ಕಾಂಗ್ರೆಸ್, ಬಂಡಾಯ ಅಭ್ಯರ್ಥಿ, ಇತರ ಸಣ್ಣಪುಟ್ಟ ಪಕ್ಷಗಳು ಮತ್ತು ಪಕ್ಷೇತರರು ಸೇರಿ ಒಟ್ಟು 39 ಅಭ್ಯರ್ಥಿಗಳು 45 ನಾಮಪತ್ರ ಸಲ್ಲಿಸಿದ್ದರು. ಈ 39 ಅಭ್ಯರ್ಥಿಗಳ ಪೈಕಿ 23 ಮುಸ್ಲಿಂ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದರು. ಒಂದಷ್ಟು ಮುಸ್ಲಿಂ ಮತಗಳನ್ನು ಸೆಳೆಯಬಲ್ಲ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಪ್ರಮುಖರಾಗಿದ್ದರು. ಎಸ್​ಡಿಪಿಐನಿಂದ ಅಪ್ಸರ್ ಕೊಡ್ಲಿಪೇಟೆ ಕಣದಲ್ಲಿದ್ದು ಕಾಂಗ್ರೆಸ್ ಗೆ ಕಂಠಕವಾಗಿದ್ದಾರೆ. 23 ಮುಸ್ಲಿಮರ ಪೈಕಿ ಓರ್ವನ ನಾಮಪತ್ರ ತಿರಸ್ಕರಿಸಲಾಗಿದ್ದು, 8 ಜನ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, 14 ಜನ ಮುಸ್ಲಿಂರು ಚುನಾವಣಾ ಕಣದಲ್ಲಿದ್ದರು. ಇವರೆಲ್ಲರೂ ಹೊಡೆತ ಕೊಡುವ ಸಾಧ್ಯತೆಯಿದೆ.

ಚುನಾವಣಾ ಕಣದಲ್ಲಿರುವ 25 ಜನ ಅಭ್ಯರ್ಥಿಗಳಿವರು:

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ನಾಮಪತ್ರ ವಾಪಸ್ ಪಡೆದ ನಂತರ 25 ಜನ ಅಭ್ಯರ್ಥಿಗಳು ಉಳಿದಿದ್ದಾರೆ. ಅವರು ಯಾರಾರು ಅನ್ನೋದರ ಮಾಹಿತಿ ಇಲ್ಲಿದೆ..

  • ಸಮರ್ಥ್ ಶಾಮನೂರು (ಕಾಂಗ್ರೆಸ್)
  • ಟಿ. ಶ್ರೀನಿವಾಸ ದಾಸಕರಿಯಪ್ಪ, (ಬಿಜೆಪಿ)
  • ಅಪ್ಸರ್ ಕೆ.ಬಿ. (ಎಸ್​ಡಿಪಿಐ)
  • ಈರಣ್ಣ (ಇಂಡಿಯನ್ ಪೊಲಿಟಿಕಲ್ ಪಾರ್ಟಿ)
  • ಎ.ಟಿ. ದಾದಕಲಂದರ್ (ಕಂಟ್ರಿ ಸಿಟಿಜನ್ ಪಾರ್ಟಿ)
  • ಎಂ. ಜಿ. ಶ್ರೀಕಾಂತ್ (ನವಭಾರತ ಸೇನಾ)
  • ಜಿ.ಎನ್. ಪ್ರಶಾಂತಕುಮಾರ್ (ಜನತಾ ಚಳವಳಿ ಭಾರತ)
  • ಈಶ್ವರ (ಉತ್ತಮ ಪ್ರಜಾಕೀಯ ಪಕ್ಷ)
  • ಸೈಯದ್ ಇಮ್ತಿಯಾಜ್ (ಜನಹಿತ ಪಕ್ಷ)
  • ಎಂ.ಸಿ. ಶ್ರೀನಿವಾಸ (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ)
  • ಕೆ.ಎಸ್. ಶಿವಕುಮಾರಪ್ಪ (ಎಎಪಿ)
  • ಖಾಜಾ ಮೋಹಿದ್ದೀನ್ ಜಿ. (ಬ್ಲೂ ಇಂಡಿಯಾ ಪಕ್ಷ)
  • ಶಬಾಜುಲ್ಲಾ ಖಾನ್ (ಯಂಗ್ ಸ್ಟಾರ್ ಎಂಪ್ಲಾಯ್ಮೆಂಟ್ ಪಾರ್ಟಿ)
  • ಬಿ. ರಾಜಶೇಖರ್​
  • ಸಾದಿಕ್​ ಪೈಲ್ವಾನ್​
  • ಖಾದರ್ ಆದಿಲ್ ಬಾಷಾ
  • ಡಿ.ಸೈಯದ್ ರಿಯಾಜ್
  • ಯು.ಎಂ. ಮನ್ಸೂರ್ ಅಲಿ
  • ಸೈಯದ್ ಚಾಂದ್​ಪೀರ್
  • ಸಿ.ಎಂ. ಮಂಜುನಾಥಯ್ಯ ಸ್ವಾಮಿ
  • ಹೆಚ್. ಸುಬಾನ್ ಸಾಬ್
  • ಸಾಜಿದ್
  • ಗೌತಮ್​ಕುಮಾರ್ ಜೈನ್
  • ಟಿ. ಜಬೀನಾ ತಾಜ್
  • ಕೆೆ.ಹೆಚ್. ಮೆಹಬೂಬ್ ಕಣದಲ್ಲಿದ್ದಾರೆ

ಪಕ್ಷ ವಿರೋಧಿ ಕೆಲಸ ಆರೋಪ, ಉಚ್ಚಾಟನೆಯ ಪರ್ವ: ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಕೆಲಸ ಮಾಡಿದ್ರು ಎಂಬ ಆರೋಪದಡಿ ಅಬ್ದುಲ್ ಜಬ್ಬಾರ್ ಸೇರಿ ದಾವಣಗೆರೆಯ ಒಟ್ಟು ಏಳು ಜನ ಕಾಂಗ್ರೆಸ್ ಮುಖಂಡರನ್ನು ಉಚ್ಚಾಟನೆ ಮಾಡಲಾಯಿತು. ಇದು ರಾಜ್ಯ ಕಾಂಗ್ರೆಸ್ ಮುಸ್ಲಿಂ ವಿರೋಧಿ ಎಂದು ಬಿಂಬಿಸಲಾಯಿತು. ಕೆಲ ಮುಸ್ಲಿಂ ಮೌಲ್ವಿಗಳು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.‌ ಅದ್ರು ಸಾಕಷ್ಟು ಜನರಿಗೆ ಪಕ್ಷದಿಂದ ಗೇಟ್ ಪಾಸ್ ನೀಡಲಾಯಿತು. ಪಕ್ಷ ವಿರೋಧಿ ಚಟುವಟಿಕೆ ಮಾಡಲಾಗಿದೆ ಎಂದು ಹೈಕಮಾಂಡ್ ಗೆ ವರದಿ ಸಲ್ಲಿಸಲಾಯಿತು. ಈ ಹಿನ್ನೆಲೆಯಲ್ಲಿ ಪರಿಷತ್ ಶಾಸಕ ಅಬ್ದುಲ್ ಜಬ್ಬಾರ್ ಅವರನ್ನು ರಾಜ್ಯ ಅಲ್ಪಸಂಖ್ಯಾತ ಘಟಕದಿಂದ ಹಾಗೂ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಯಿತು.

ಇನ್ನು ಉಚ್ಚಾಟನೆಯಾದ ಜಬ್ಬಾರ್ ಅವರನ್ನು ವಾಪಸ್ ಪಕ್ಷಕ್ಕೆ ಕರೆತರಲು ತೆರೆಮರೆಯಲ್ಲಿ ಪ್ರಯತ್ನ ನಡೆಯುತ್ತಿದೆ. ವಾಪಸ್ ಕರೆತಂದ್ರೇ ಪ್ರತಿಭಟನೆ ಮಾಡಲಾಗುತ್ತದೆ ಎಂದು ದಾವಣಗೆರೆ ಕಾಂಗ್ರೆಸ್ ಘಟಕ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:

ಉಪಸಮರ ಪಕ್ಷ ವಿರೋಧಿ ಚಟುವಟಿಕೆ; ಕಾಂಗ್ರೆಸ್​​ನಿಂದ ಎಂಎಲ್​ಸಿ ಅಬ್ದುಲ್ ಜಬ್ಬಾರ್ ಅಮಾನತು

ಬಾಗಲಕೋಟೆ ಉಪ ಚುನಾವಣೆ: ಮತದಾನದ ಬಳಿಕ ರಿಲ್ಯಾಕ್ಸ್​ ಮೂಡ್​ನಲ್ಲಿ ಅಭ್ಯರ್ಥಿಗಳು