ದಾವಣಗೆರೆ ಪಾಲಿಕೆ ಜಾಗದಲ್ಲಿದ್ದ ಖಾಸಗಿ ಶಾಲೆ ತೆರವು; ಉದ್ಯಾನವನದಲ್ಲಿ ಶಾಮಿಯಾನ ಹಾಕಿ ಮಕ್ಕಳಿಗೆ ಪಾಠ
ಪಾಲಿಕೆ ಜಾಗದಲ್ಲಿದ್ದ ಶಾಲೆಯ ಕಟ್ಟಡವನ್ನು ನೆಲಸಮಗೊಳಿಸಿದ ಪಾಲಿಕೆ ಅಧಿಕಾರಿಗಳಿಗೆ ಕಾರಣ ಕೇಳಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನೋಟಿಸ್ ನೀಡಿದೆ.

Published : January 4, 2026 at 5:08 PM IST
ದಾವಣಗೆರೆ: ನಗರದ ಎಸ್ಓಜಿ ಕಾಲೊನಿಯಲ್ಲಿ ಸುಮಾರು 20 ವರ್ಷಗಳಿಂದ ಖಾಸಗಿ ಶಾಲೆ ನಡೆಯುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಆದರೆ, ಪಾಲಿಕೆ ಅಧಿಕಾರಿಗಳು ಶಾಲೆಯನ್ನು ಪಾಲಿಕೆ ಜಾಗದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿ, ಕಟ್ಟಡ ನೆಲಸಮ ಮಾಡಿದ್ದಾರೆ.
ಹೀಗಾಗಿ, ಉದ್ಯಾನವನದಲ್ಲಿಯೇ ಶಾಮಿಯಾನ ಹಾಕಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಶೈಕ್ಷಣಿಕ ವರ್ಷ ಮುಗಿಯುವ ತನಕ ಶಾಲೆ ಒಡೆಯಬೇಡಿ ಎಂದರೂ ಕೇಳದ ಅಧಿಕಾರಿಗಳು ಮಕ್ಕಳನ್ನು ಹೊರ ಕಳಿಸಿ ಕಟ್ಟಡ ನೆಲಸಮ ಮಾಡಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಮಕ್ಕಳ ರಕ್ಷಣಾ ಆಯೋಗ ಗರಂ ಆಗಿದ್ದು, ಅಧಿಕಾರಿಗಳಿಗೆ ವರದಿ ಕೇಳಿ ನೋಟಿಸ್ ಜಾರಿ ಮಾಡಿದೆ. ಇನ್ನೊಂದೆಡೆ, ಪಾಲಿಕೆ ಅಧಿಕಾರಿಗಳು, ಶಾಲೆಯನ್ನು ಪಾಲಿಕೆ ಜಾಗದಲ್ಲಿ ನಿರ್ಮಾಣ ಮಾಡಲಾಗಿತ್ತು. ಸಾಕಷ್ಟು ಬಾರಿ ಹೇಳಿದರೂ ತೆರವು ಮಾಡಿರಲಿಲ್ಲ. ಹೀಗಾಗಿ ನೆಲಸಮಗೊಳಿಸಿದ್ದೇವೆ ಎಂದಿದ್ದಾರೆ.
ಈ ಕುರಿತು ಶಾಲೆಯ ಅಧ್ಯಕ್ಷ ಗುರುರಾಜ್ ಅವರು ಮಾತನಾಡಿ, "2001ರಿಂದ ಶಾಲೆ ನಡೆಯುತ್ತಿದೆ. ಮಹಾನಗರ ಪಾಲಿಕೆಯಾಗುವ ಮುನ್ನ ಈ ಜಾಗ ಬಿಟ್ ಆಫ್ ಲ್ಯಾಂಡ್ ಆಗಿತ್ತು. ಇಲ್ಲಿನ ಎಂಟು ಅಡಿ ಮಾತ್ರ ಪಾಲಿಕೆಗೆ ಸೇರಿದೆ. ಅದಕ್ಕೊಸ್ಕರ ಇಡೀ ಶಾಲೆಯನ್ನೇ ನೆಲಸಮ ಮಾಡಿದ್ರು. ಕಾಲಾವಕಾಶ ಹಾಗೂ ನೋಟಿಸ್ ನೀಡದೆ ಏಕಾಏಕಿ ಬಂದು ನೆಲಸಮ ಮಾಡಿದ್ದಾರೆ. ಪರೀಕ್ಷೆ ಇದೆ. ಏಪ್ರಿಲ್ ಇಲ್ಲವೇ ಮಾರ್ಚ್ ತನಕ ಸಮಯ ಕೊಡಿ ಎಂದು ಹೇಳಿದ್ರೂ ಕೇಳಲಿಲ್ಲ. ತಹಶೀಲ್ದಾರ್ ಹಾಗೂ ಆಯುಕ್ತರು ಮುಂದೆ ನಿಂತು ಶಾಲೆಯನ್ನು ಡೆಮಾಲಿಶ್ ಮಾಡಿದ್ರು. ಇದೀಗ ತಾತ್ಕಾಲಿಕವಾಗಿ ಪಾರ್ಕ್‌ನಲ್ಲಿ ಶಾಮಿಯಾನ ಹಾಕಿ ಅದರ ಕೆಳಗೆ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದೆ" ಎಂದು ಹೇಳಿದರು.
ಮಾಹಿತಿ ಕೇಳಿದ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗ: ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಮಕ್ಕಳ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿದೆ. ಜತೆಗೆ, ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
ಆಯೋಗದ ಅಧ್ಯಕ್ಷ ಶಶಿಕಾಂತ ಕೋಸಂಬೆ ಅವರು ಮಾತನಾಡಿ, "ಈ ವರದಿ ಬಂದಿರುವುದನ್ನು ಗಮನಿಸಿ ಸೂಕ್ತ ಕ್ರಮಕ್ಕೆ ಮುಂದಾಗಿದ್ದೇವೆ. ಈಗ ದೂರು ದಾಖಲಿಸಿಕೊಂಡು ನೋಟಿಸ್ ನೀಡಲಾಗಿದೆ. ಪಾಲಿಕೆ ಆಯುಕ್ತರಿಂದ ಬರುವ ಉತ್ತರ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇದೊಂದು ರೀತಿಯಲ್ಲಿ ಮಕ್ಕಳ ಶಿಕ್ಷಣದ ಹಕ್ಕು ಕಸಿದುಕೊಂಡಂತೆ" ಎಂದು ತಿಳಿಸಿದರು.
ಪಾಲಿಕೆ ಆಯುಕ್ತರಾದ ರೇಣುಕಾ ಅವರು ಪ್ರತಿಕ್ರಿಯಿಸಿದ್ದು, "ಹೌದು, ಶಾಲೆಯನ್ನು ಪಾಲಿಕೆ ಜಾಗದಲ್ಲಿ ನಿರ್ಮಾಣ ಮಾಡಲಾಗಿತ್ತು. ಸಾಕಷ್ಟು ಬಾರಿ ಹೇಳಿದರೂ ತೆರವು ಮಾಡಿರಲಿಲ್ಲ. ಹೀಗಾಗಿ ನೆಲಸಮ ಮಾಡಿದ್ದೇವೆ. ಅದೇ ಜಾಗದಲ್ಲಿ ಕೆಲ ನಿರಾಶ್ರಿತರಿಗೆ ನಿವೇಶನ ಕೊಡುವ ಉದ್ದೇಶವಿದೆ" ಹೇಳಿದರು.
ಇದನ್ನೂ ಓದಿ: ಕೊನೆಗೂ ತಪ್ಪಿತು 36 ನಿರಾಶ್ರಿತ ಕುಟುಂಬಗಳ ಅಲೆದಾಟ; ಶೀಘ್ರದಲ್ಲೇ ನಿವೇಶನ ನೀಡಲು ದಾವಣಗೆರೆ ಪಾಲಿಕೆ ತೀರ್ಮಾನ

