
MSIL ವತಿಯಿಂದ ಸೂಪರ್ ಮಾರ್ಕೆಟ್ ಮಳಿಗೆ ತೆರೆಯಲು ಚಿಂತನೆ; ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲ
ಪೊಲೀಸ್ ಹಾಗೂ ಸೇನಾ ಕ್ಯಾಂಟಿನ್ ಮಾದರಿಯಲ್ಲಿ ಸೂಪರ್ ಮಾರ್ಕೆಟ್ ಮಳಿಗೆ ತೆರೆಯಲು ಎಂಎಸ್ಐಎಲ್ ಚಿಂತಿಸಿದೆ.

Published : October 15, 2025 at 7:29 PM IST
ಬೆಂಗಳೂರು: ಪೊಲೀಸ್ ಹಾಗೂ ಸೇನಾ ಕ್ಯಾಂಟಿನ್ ಮಾದರಿಯಲ್ಲಿ ಸರ್ಕಾರಿ ನೌಕರರ ಬದುಕಿಗೆ ಅಗತ್ಯ ವಸ್ತುಗಳು ರಿಯಾಯಿತಿ ದರದಲ್ಲಿ ಸಿಗಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ವತಿಯಿಂದ ಸೂಪರ್ ಮಾರ್ಕೆಟ್ ಮಳಿಗೆ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ಧಾರೆ.
ನಗರದ ಖನಿಜ ಭವನದಲ್ಲಿ ಇಂದು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
"ರಾಜ್ಯದ ಪೊಲೀಸ್, ಅರೆ ಸೇನಾ ಪಡೆಗಳ ನೌಕರರಿಗೆ ಈ ರೀತಿಯ ಕ್ಯಾಂಟೀನ್ ಸೌಲಭ್ಯವಿದೆ. ರಾಜ್ಯದಲ್ಲಿ 6 ಲಕ್ಷ ಸರ್ಕಾರಿ ನೌಕರರಿದ್ದಾರೆ. ಅವರ ಕುಟುಂಬಗಳ ಹಿತದೃಷ್ಟಿಯಿಂದ ಇಂಥದ್ದೊಂದು ಉಪಕ್ರಮ ಆರಂಭಿಸುವುದು ನಮ್ಮ ಚಿಂತನೆ. ಇದಕ್ಕೆ ಸಬ್ಸಿಡಿ ಅಥವಾ ತೆರಿಗೆ ವಿನಾಯಿತಿ ಪಡೆದುಕೊಳ್ಳುವುದು ಹೇಗೆಂದು ಆರ್ಥಿಕ ಇಲಾಖೆಯ ಜೊತೆ ಚರ್ಚಿಸಲಾಗುವುದು. ಸೂಪರ್ ಮಾರ್ಕೆಟ್ ಮಳಿಗೆ ಆರಂಭಿಸುವ ಸಾಧ್ಯಾಸಾಧ್ಯತೆಯ ಕುರಿತು ಒಂದು ತಿಂಗಳಲ್ಲಿ ವಿಸ್ತೃತ ವರದಿ ಸಲ್ಲಿಸುವಂತೆ ಎಂಎಸ್‌ಐಎಲ್‌ಗೆ ಸೂಚಿಸಲಾಗಿದೆ" ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
"ಉದ್ದೇಶಿತ ಎಂಎಸ್‌ಐಎಲ್ ಸೂಪರ್ ಮಾರ್ಕೆಟ್‌ನಲ್ಲಿ ಸರ್ಕಾರಿ ನೌಕರರ ದಿನನಿತ್ಯದ ಬದುಕಿಗೆ ಬೇಕಾದ ದವಸ-ಧಾನ್ಯಗಳಿಂದ ಹಿಡಿದು ಎಫ್‌ಎಂಸಿಜಿ ವಲಯದಲ್ಲಿ ಬರುವ ಪ್ರತಿಯೊಂದು ಪದಾರ್ಥವೂ ರಿಯಾಯಿತಿ ದರದಲ್ಲಿ ಸಿಗುವಂತಾದರೆ ಅನುಕೂಲವಾಗುತ್ತದೆ. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 4-5 ಮಳಿಗೆಗಳನ್ನು ತೆರೆಯುವ ಆಲೋಚನೆ ಇದೆ. ನಂತರ ಜಿಲ್ಲಾ ಕೇಂದ್ರಗಳಲ್ಲೂ ಇದೇ ರೀತಿಯ ಸೌಲಭ್ಯ ವಿಸ್ತರಣೆಗೆ ಮುಂದಾಗಬಹುದು. ಅಧ್ಯಯನ ವರದಿ ಬಂದ ನಂತರ ತೀರ್ಮಾನಿಸಲಾಗುವುದು" ಎಂದು ಅವರು ತಿಳಿಸಿದರು.
"ಸೂಪರ್ ಮಾರ್ಕೆಟ್ ಮಳಿಗೆ ಆರಂಭವಾದರೆ ಎಂಎಸ್‌ಐಎಲ್ ಚಟುವಟಿಕೆ ವಿಸ್ತರಿಸುವ ಜೊತೆಗೆ, ಆದಾಯವನ್ನೂ ಕಂಡುಕೊಳ್ಳಬಹುದು. ಅಲ್ಲದೆ, ಲಕ್ಷಾಂತರ ಸರ್ಕಾರಿ ನೌಕರರ ಕುಟುಂಬಗಳಿಗೂ ಇದರಿಂದ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳ ಜೊತೆ ಮಾತುಕತೆ ನಡೆಸುವಂತೆಯೂ ಸೂಚಿಸಲಾಗಿದೆ. ಎಂಎಸ್‌ಐಎಲ್‌ನ ಚಟುವಟಿಕೆಗಳು ಈಗ ಸೀಮಿತ ಪ್ರಮಾಣದಲ್ಲಿವೆ. ಇದಕ್ಕೆ ಮತ್ತಷ್ಟು ಕಸುವು ತುಂಬಿ, ಆರ್ಥಿಕವಾಗಿ ಸದೃಢಗೊಳಿಸಬೇಕೆಂಬ ಆಲೋಚನೆ ನಮ್ಮದು. ಇದರಿಂದ ಅಪಾರ ಸಂಖ್ಯೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳೂ ಸೃಷ್ಟಿಯಾಗಲಿವೆ" ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮೈಸೂರಲ್ಲಿ ಅ.17 ರಂದು ಬೃಹತ್ ಉದ್ಯೋಗ ಮೇಳ, 221 ಕಂಪನಿಗಳ ನೋಂದಣಿ: ಸಚಿವ ಶರಣಪ್ರಕಾಶ್ ಪಾಟೀಲ್

