ETV Bharat / state

ಮೈಸೂರು: ರೈತನ ಮೇಲೆ ದಾಳಿ ಮಾಡಿದ್ದ ತಾಯಿ ಹುಲಿ, 5 ಮರಿಗಳು ಸೆರೆ

ಮೈಸೂರು ಜಿಲ್ಲೆಯಲ್ಲಿ ತಾಯಿ ಹುಲಿ ಹಾಗೂ 5 ಮರಿಗಳನ್ನು ಯಶಸ್ವಿಯಾಗಿ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.

mother-tiger-and-5-cubs-captured-in-mysuru
ಸೆರೆ ಹಿಡಿಯಲಾದ ಹುಲಿ (ETV Bharat)
author img

By ETV Bharat Karnataka Team

Published : July 5, 2026 at 8:55 PM IST

1 Min Read
Choose ETV Bharat

ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಮುಳ್ಳೂರು ಗ್ರಾಮದ ಸಮೀಪ ಕೆಲ ದಿನಗಳ ಹಿಂದೆ ರೈತ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ 12 ವರ್ಷದ ತಾಯಿ ಹುಲಿ, ಮತ್ತದರ 25 ದಿನಗಳ ಐದು ಮರಿಗಳನ್ನು ಅರಣ್ಯ ಇಲಾಖೆಯು ಕೂಂಬಿಂಗ್ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದೆ.

ಮುಳ್ಳೂರು ಗ್ರಾಮದ ಸಮೀಪ ಇತ್ತೀಚೆಗೆ ರೈತ ಕಿರಣ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ಹುಲಿ ದಾಳಿ ನಡೆಸಿತ್ತು. ಅಲ್ಲದೆ, ಕಾರ್ಯಾಚರಣೆಯಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕುಮಾರ್ ಎಂಬವರ ಮೇಲೆಯೂ ಹುಲಿ ಎರಗಿತ್ತು. ಬಳಿಕ ಅರಣ್ಯ ಇಲಾಖೆಯವರು ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದು, ಈ ವೇಳೆ ಆರಂಭದಲ್ಲಿ ಹುಲಿಯ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.

mother-tiger-and-5-cubs-captured-in-mysuru
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳು, ಸಿಬ್ಬಂದಿ (ETV Bharat)

ನಂತರ ಶನಿವಾರ ಸಂಜೆ 7 ಗಂಟೆ ಸಮಯದಲ್ಲಿ, ಹೆಣ್ಣು ಹುಲಿಯನ್ನು ಸೆರೆ ಹಿಡಿಯಲಾಗಿದೆ. ಹೆಣ್ಣು ಹುಲಿ ತನ್ನ ಮರಿಗಳ ಜೊತೆ ಇದೆ ಎಂದು ತಿಳಿದು ಬರುತ್ತಿದ್ದಂತೆ, ಕಾರ್ಯಾಚರಣೆಯನ್ನು ಮುಂದುವರೆಸಿ ಭಾನುವಾರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ 3 ಗಂಡು ಮರಿಗಳು, 2 ಹೆಣ್ಣು ಹುಲಿ ಮರಿಗಳನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ. ನಂತರ ತಾಯಿ ಹಾಗೂ ಅದರ ಮರಿಗಳನ್ನು ಜೊತೆಗೂಡಿಸಿ, ಸುರಕ್ಷಿತವಾಗಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭಾನುವಾರ ಬೆಳಗ್ಗೆ ಸ್ಥಳಾಂತರಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಯಿ ಹುಲಿ ಹಾಗೂ ಐದು ಮರಿಗಳು ಸೆರೆಸಿಕ್ಕ ಹಿನ್ನೆಲೆಯಲ್ಲಿ ಸರಗೂರು ತಾಲೂಕಿನ ಮುಳ್ಳೂರು, ಸುತ್ತಮುತ್ತಲಿನ ಭಾಗದ ರೈತರು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಯಶಸ್ವಿ ಕಾರ್ಯಾಚರಣೆಯಲ್ಲಿ ಡಿಸಿಎಫ್ ನಂದಿನಿ, ಎಸಿಎಫ್ ಪರಮೇಶ್, ಎಸ್​​ಟಿಪಿಎಫ್​ನ ಎಸಿಎಫ್ ಮಂಜುನಾಥ್, ನುಗು ಆರ್​​ಎಫ್​ಓ ಅನಿತಾ, ರಾಜು, ಕಲ್ಕೆರೆ ಆರ್​ಎಫ್​ಓ ರಾಜೇಶ್ ಮೊಳೆಯೂರು ಆರ್​ಎಫ್​ಓ ನಾರಾಯಣ್, ವೈದ್ಯರುಗಳಾದ ವಾಸಿಮ್ ಮಿರ್ಜಾ, ಆದರ್ಶ, ಮೈಸೂರು ಚಿರತೆ ಕಾರ್ಯಪಡೆ ತಂಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

ಇದನ್ನೂ ಓದಿ: ಹಾಡಹಗಲೇ ಹುಲಿ ಪ್ರತ್ಯಕ್ಷ: ಸೆರೆ ಹಿಡಿಯುವಂತೆ ಜೀಪ್ ಮುಂದೆ ಕುಳಿತ ರೈತ