ETV Bharat / state

ಉಡುಪಿಯ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ; ಮಹಿಳೆಯ ಗರ್ಭಕೋಶದಿಂದ 8 ಕೆ.ಜಿ ಗಡ್ಡೆ ಯಶಸ್ವಿಯಾಗಿ ತೆಗೆದ ವೈದ್ಯರು!

ಉಡುಜಿ ಜಿಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಮಹಿಳೆಯ ಗರ್ಭಕೋಶದಿಂದ ಬರೋಬ್ಬರಿ 8 ಕೆಜಿ ತೂಕದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

UDUPI MOTHER AND CHILDREN HOSPITAL
ಮಹಿಳೆಯ ಗರ್ಭಕೋಶದಿಂದ 8 ಕೆ.ಜಿ ಗಡ್ಡೆ ಹೊರತೆಗೆದ ವೈದ್ಯರ ತಂಡ ಮತ್ತು ಸಿಬ್ಬಂದಿ (ETV Bharat)
author img

By ETV Bharat Karnataka Team

Published : June 2, 2026 at 5:52 PM IST

1 Min Read
Choose ETV Bharat

ಉಡುಪಿ: ಉಡುಪಿ ಜಿಲ್ಲಾ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 44 ವರ್ಷದ ಮಹಿಳೆಯ ಗರ್ಭಕೋಶದಲ್ಲಿದ್ದ ಸುಮಾರು 8 ಕೆ.ಜಿ. ತೂಕದ ಫೈಬ್ರಾಯ್ಡ್ ಗಡ್ಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರ ತಂಡ ತೆಗೆದುಹಾಕಿದೆ.

ಒಂದು ವರ್ಷದಿಂದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಕಾಣದ ಸುಧಾರಣೆ: ಕಳೆದ ಒಂದು ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ ಆರೋಗ್ಯದಲ್ಲಿ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬಂದಿದ್ದರು. ವೈದ್ಯಕೀಯ ತಪಾಸಣೆ ವೇಳೆ ಮಹಿಳೆಯ ಹೊಟ್ಟೆಯು ಗರ್ಭಿಣಿಯರ ಹೊಟ್ಟೆಯಂತೆ ಉಬ್ಬಿಕೊಂಡಿರುವುದು ಕಂಡುಬಂದಿದ್ದು, ಬಳಿಕ ಅಲ್ಟ್ರಾಸೌಂಡ್ ಹಾಗೂ ಸಿಟಿ ಸ್ಕ್ಯಾನ್ ಪರೀಕ್ಷೆ ನಡೆಸಿದಾಗ ಗರ್ಭಕೋಶದಲ್ಲಿ ದೊಡ್ಡ ಗಾತ್ರದ ಗಡ್ಡೆ ಇರುವುದು ದೃಢಪಟ್ಟಿತ್ತು.

ಜಿಲ್ಲಾ ಆಸ್ಪತ್ರೆ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಹೆಚ್. ಅಶೋಕ್ ಅವರ ಸಲಹೆಯಂತೆ ಕಳೆದ ಮೇ 25ರಂದು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸುಮಾರು 8 ಕೆ.ಜಿ. ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

UDUPI MOTHER AND CHILDREN HOSPITAL
ಮಹಿಳೆಯ ಗರ್ಭಕೋಶದಿಂದ ತೆಗೆದಿರುವ ಫೈಬ್ರಾಯ್ಡ್​ ಗಡ್ಡೆ (ETV Bharat)

ಈ ಶಸ್ತ್ರಚಿಕಿತ್ಸೆಯನ್ನು ಸ್ತ್ರೀರೋಗ ತಜ್ಞರಾದ ಡಾ. ಶಶಾಂಕ್ ಕಿಣಿ, ಡಾ. ಜಾಸ್ಮಿನ್, ಡಾ. ಕವಿತಾ ಹಾಗೂ ಡಾ. ಅಮೃತಾಂಶ್ ಅವರ ತಂಡ ನಡೆಸಿದ್ದು, ಅರವಳಿಕೆ ತಜ್ಞರಾದ ಡಾ. ಸೂರ್ಯನಾರಾಯಣ ಮತ್ತು ಡಾ. ರಾಜಗೋಪಾಲ್ ಭಂಡಾರಿ ಸಹಕರಿಸಿದ್ದಾರೆ. ಶುಶ್ರೂಷಾಧಿಕಾರಿ ರಕ್ಷಿತಾ ಹಾಗೂ ಓಟಿ ಸಹಾಯಕಿ ಸಂಗೀತ ಕೂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವೈದ್ಯರ ತಂಡಕ್ಕೆ ಮಹಿಳೆಯಿಂದ ಕೃತಜ್ಞತೆ: ಚೇತರಿಸಿಕೊಂಡಿರುವ ಮಹಿಳೆ ವೈದ್ಯರು ಮತ್ತು ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ವೇಳೆ ಜಿಲ್ಲಾ ಸರ್ಜನ್ ಡಾ. ಹೆಚ್. ಅಶೋಕ್ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಉಡುಪಿ: ಅರಬ್ಬೀ ಸಮುದ್ರದಲ್ಲಿ ಅಸ್ಥಿರ ವಾತಾವರಣ, ಮೀನುಗಾರರಿಗೆ ಎಚ್ಚರಿಕೆ ಸಂದೇಶ ರವಾನೆ