ETV Bharat / state

ಏತ ನೀರಾವರಿ ಯೋಜನೆ ಮೂಲಕ ಬಾರದ ನೀರು: ಹಾವೇರಿ ಜಿಲ್ಲೆಯ ಬಹುತೇಕ ಕೆರೆಗಳು ಖಾಲಿ ಖಾಲಿ

ಹಾವೇರಿ ಜಿಲ್ಲೆಯ ಬೆರಳೆಣಿಕೆಯಷ್ಟು ಕೆರೆಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ತುಂಬಿದ್ದು, ಉಳಿದ ಕೆರೆಗಳು ಖಾಲಿಯಾಗಿವೆ.

LAKES ARE EMPTY
ಬತ್ತಿರುವ ಕೆರೆ (ETV Bharat)
author img

By ETV Bharat Karnataka Team

Published : August 29, 2026 at 1:10 PM IST

3 Min Read
Choose ETV Bharat

ಹಾವೇರಿ: ಜಿಲ್ಲೆಯ ಅನ್ನದಾತರು ಇದೀಗ ಆತಂಕದಲ್ಲಿದ್ದಾರೆ. ಇವರ ಆತಂಕಕ್ಕೆ ಕಾರಣ ಮಳೆರಾಯನ ಮುನಿಸು. ಈ ವರ್ಷ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಇನ್ನು ಧರ್ಮಾ , ವರದಾ, ತುಂಗಭದ್ರಾ ಮತ್ತು ಕುಮದ್ವತಿ ನದಿಗಳ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಪರಿಣಾಮ ಈ ನದಿಗಳು ತುಂಬಿ ಹರಿದಿವೆ. ಆದರೆ ನದಿಗಳಿಂದ ಏತ ನೀರಾವರಿ ಯೋಜನೆ ಮೂಲಕ ಕೆರೆಗೆ ತುಂಬಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಪರಿಣಾಮ ಹಾವೇರಿ ಜಿಲ್ಲೆಯ ಬಹುತೇಕ ಕೆರೆಗಳು ಖಾಲಿ ಖಾಲಿಯಾಗಿವೆ.

ಬೆರಳೆಣಿಕೆಯಷ್ಟು ಕೆರೆಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ತುಂಬಿದ್ದು, ಉಳಿದ ಕೆರೆಗಳು ಖಾಲಿಯಾಗಿವೆ. ಇದರಿಂದ ಅಂತರ್ಜಲಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕೊಳವೆಬಾವಿಗಳ ಬತ್ತುತ್ತಿವೆ. ಮಳೆಗಾಲದಲ್ಲಿ ಈ ರೀತಿಯಾದರೆ ಮುಂದಿನ ದಿನಗಳಲ್ಲಿ ಹೇಗೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬರುವ ದಿನಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಿದ್ದಾರೆ ಹಾವೇರಿ ಜಿಲ್ಲೆಯ ರೈತರು.

ಹಾವೇರಿ ಜಿಲ್ಲೆಯ ಬಹುತೇಕ ಕೆರೆಗಳು ಖಾಲಿ ಖಾಲಿ (ETV Bharat)

2,058 ಕೆರೆಗಳಲ್ಲಿ ತುಂಬಿದ್ದು ಕೇವಲ 14 ಮಾತ್ರ: ಹಾವೇರಿ ಜಿಲ್ಲೆಯಲ್ಲಿ ಸುಮಾರು 2,058 ಕೆರೆಗಳಿವೆ. ಆದರೆ, ಈ ಕೆರೆಗಳಲ್ಲಿ ಭರಪೂರ ನೀರು ನಿಂತಿರುವ ಕೆರೆಗಳ ಸಂಖ್ಯೆ ಕೇವಲ 14. ಉಳಿದಂತೆ ಹಲವು ಕೆರೆಗಳು ಅರ್ಧದಷ್ಟು ತುಂಬಿವೆ. ಇನ್ನೂ ಕೆಲವು ಸ್ವಲ್ಪ ಸ್ವಲ್ಪ ತುಂಬುತ್ತಿವೆ. 198 ಕೆರೆಗಳಂತೂ ಖಾಲಿ ಖಾಲಿಯಾಗಿವೆ. 1,138 ಕೆರೆಗಳಲ್ಲಿ ಪ್ರತಿಶತ ಒಂದರಿಂದ 30 ರಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ. ಉಳಿದಂತೆ 440 ಕೆರೆಗಳಲ್ಲಿ ಪ್ರತಿಶತ 31 ರಿಂದ 50 ರಷ್ಟು ನೀರು ನಿಂತಿದೆ.

268 ಕೆರೆಗಳಲ್ಲಿ ಪ್ರತಿಶತ 55 ರಿಂದ 99 ರಷ್ಟು ನೀರು ನಿಂತಿದೆ. ಉಳಿದ ಕೆರೆಗಳು ಖಾಲಿ ಖಾಲಿಯಾಗಿವೆ. ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದೆ. ಪ್ರತಿಶತ 36.69 ಸೆಂಟಿಮೀಟರ್ ಮಳೆಯಾಗಬೇಕಿತ್ತು. ಆದರೆ ಆಗಿರುವ ಮಳೆ ಪ್ರಮಾಣ 20.86 ಸೆಂಟಿಮೀಟರ್. ಹಾವೇರಿ ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಪ್ರತಿಶತ 43 ರಷ್ಟು ಮಳೆ ಕೊರೆತೆಯಾಗಿದೆ. ಸಣ್ಣ ನೀರಾವರಿ, ಜಿಲ್ಲಾ ಪಂಚಾಯತ್, ನಗರ ಸ್ಥಳೀಯ ಸಂಸ್ಥೆ, ಬೃಹತ್ ನೀರಾವರಿ ಮತ್ತು ಅರಣ್ಯ ಇಲಾಖೆ ಸುಪರ್ದಿಯಲ್ಲಿ ಈ ಕೆರೆಗಳಿವೆ.

ಈ ಕುರಿತಂತೆ ಮಾತನಾಡಿದ ಕೆರಿಮತ್ತಿಹಳ್ಳಿ ಗ್ರಾಮದ ರೈತ ಕಾಂತೇಶ್ ಪಾಟೀಲ್, ಈ ವರ್ಷ ಮಳೆ ಕಡಿಮೆಯಾಗಿದೆ. ಪ್ರತಿ ವರ್ಷ ವರದಾ ನದಿಯಿಂದ ಬಿದರಗಡ್ಡಿ ಬಳಿಯ ಪಂಪಹೌಸ್‌ನಿಂದ 26 ಕೆರೆಗಳನ್ನು ತುಂಬಿಸುತ್ತಿದ್ದರು. ಆದರೆ 26 ಕೆರೆಗಳಲ್ಲಿ 25 ಕೆರೆಗಳಿಗೆ ಸ್ವಲ್ಪ ನೀರು ತುಂಬಿಸಿದ್ದಾರೆ. ಆದರೆ ಕೆರಿಮತ್ತಿಹಳ್ಳಿ ಕೆರೆಗೆ ಮಾತ್ರ ನೀರು ಬಿಟ್ಟಿಲ್ಲ. ಈ ಕೆರೆ ತುಂಬಿದರೆ ಹಿರೇನಿಂಗದಹಳ್ಳಿ, ಕಬ್ಬೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಕೊಳವೆ ಬಾವಿಗಳು ರಿಚಾರ್ಜ್ ಆಗುತ್ತವೆ. ದನಕರುಗಳಿಗೆ ಕುಡಿಯುವ ನೀರು ದೊರೆಯುತ್ತಿತ್ತು. ಅಧಿಕಾರಿಗಳು ಈ ಕೆರೆಗಳಿಗೆ ನೀರು ತುಂಬಿಸಲು ವಿಫಲರಾಗಿದ್ದರಿಂದ ಈಗ ನಮಗೆ ಬೇಸಿಗೆ ಕಾಲ ಹೇಗೆ ಕಳಿಯಬೇಕು ಎನ್ನುವುದು ಚಿಂತೆಯಾಗಿದೆ. ನದಿಯಲ್ಲಿ ನೀರು ಕಡಿಮೆಯಾದರೆ ಕೆರೆಗೆ ನೀರು ತುಂಬಿಸಲು ಬರುವುದಿಲ್ಲ. ಈ ಸಂದರ್ಭದಲ್ಲಿ ಕೆರೆಗೆ ನೀರು ತುಂಬಿಸಲಿಲ್ಲ, ಅಧಿಕಾರಿಗಳು ಯಾವಾಗ ಕೆರೆ ತುಂಬಿಸುತ್ತಾರೆ ಎಂದು ಪ್ರಶ್ನಿಸಿದರು. ಈ ಕೆರೆಗಳು ತುಂಬಿದರೆ ಜನ ಜಾನುವಾರುಗಳಿಗೆ ನೀರು ಸಿಗುತ್ತಿತ್ತು. ಈಗ ನೀರು ಸಿಗುವುದೇ ದುಸ್ಥರವಾಗಿದೆ, ಇನ್ನು ಬೆಳೆ ಬೆಳೆಯುವುದು ದೂರದ ಮಾತು ಎಂದು ಅಳಲು ತೋಡಿಕೊಂಡರು.

ಈ ಕುರಿತಂತೆ ಮಾತನಾಡಿದ ಹಾವೇರಿ ತಾಲೂಕು ಕೆರಿಮತ್ತಿಹಳ್ಳಿ ಗ್ರಾಮದ ರೈತ ಅಶೋಕ ಗೌಳಿ, ಕೆರಿಮತ್ತಿಹಳ್ಳಿ ಗ್ರಾಮದ ಕೆರೆ ತುಂಬಿದರೆ ಸುತ್ತಮುತ್ತ ನಾಲ್ಕು ಗ್ರಾಮಗಳ ಕೆರೆಗಳಲ್ಲಿ ನೀರು ತುಂಬುತ್ತದೆ. ಮೊದಲು ಮಳೆಯಾದಾಗ ಕೆರೆ ತುಂಬುತ್ತಿತ್ತು. ಆದರೆ, ಈ ವರ್ಷ ಕೆರೆಗೆ ನೀರು ಬಂದಿಲ್ಲ. ಕಾಗಿನೆಲೆ ಕೆರೆ ತುಂಬಿದರೆ ಅದು ಕೋಡಿಬಿದ್ದು ನಮ್ಮ ಕೆರೆಗೆ ಬರುತ್ತಿತ್ತು, ಆವಾಗ ನಮ್ಮ ಕೆರೆ ಸಹ ತುಂಬುತ್ತಿತ್ತು. ಈ ವರ್ಷ ಮಳೆ ಕಡಿಮೆ ಇದೆ. ಮಳೆ ಕಡಿಮೆಯಾದ ಕಾರಣ ನಮಗೆ ನೀರಿನ ಬರ ಎದುರಾಗಿದೆ. ಪೂರ್ತಿ ಕೆರೆಯಲ್ಲಿ ನೀರು ಇಲ್ಲ, ಮಳೆಗಾಲದಲ್ಲಿ ಈ ಪರಿಸ್ಥಿತಿಯಾದರೆ ಬೇಸಿಗೆ ಕಾಲದಲ್ಲಿ ಜೀವನ ಮಾಡುವುದು ಕಷ್ಟವಾಗುತ್ತದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿ ಕೊರತೆ ಕಾಣಿಸಲಿದೆ ಎಂದರು.

ಈ ಕುರಿತಂತೆ ಮಾತನಾಡಿದ ಸಣ್ಣ ನೀರಾವರಿ ಇಲಾಖೆಯ ಎಇಇ ರವೀಶ್, ಹಾವೇರಿ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಬರುವ ಏಕೈಕ ಏತ ನೀರಾವರಿ ಯೋಜನೆ ಅಂದರೆ ಅದು ಸಮ್ಮಸಗಿ ಏತ ನೀರಾವರಿ ಯೋಜನೆ. ಈ ಯೋಜನೆಯಲ್ಲಿ 43 ಕೆರೆಗಳನ್ನು ತುಂಬಿಸಬಹುದು. ಸದ್ಯ ನಾವು 35 ಕೆರೆಗಳನ್ನು ತುಂಬಿಸಿದ್ದೇವೆ. ಉಳಿದ ಕೆರೆಗಳು ತುಂಬಿಸುತ್ತೇವೆ ಎಂದು ಹೇಳಿದರು.

ರಾಣೆಬೆನ್ನೂರು ನೀರಾವರಿ ವಿಭಾಗದಿಂದ 51 ಕೆರೆಗಳನ್ನು ತುಂಬಿಸುವ ಯೋಜನೆ ಇದೆ. ಅದರಲ್ಲಿ 25 ಕೆರಗಳು ಶೇ.50ರಷ್ಟು ತುಂಬಿವೆ. ಒಂದು ಕೆರೆ ಮಾತ್ರ ಸಂಪೂರ್ಣ ತುಂಬಿದೆ ಎಂದು ರಾಣೆಬೆನ್ನೂರು ನೀರಾವರಿ ವಿಭಾಗದ ಎಇ ರೇವಣೆಪ್ಪ ತಿಳಿಸಿದರು.

ಇವುಗಳನ್ನೂ ಓದಿ: