ETV Bharat / state

ಕಾಫಿ ತೋಟಕ್ಕೆ ಲಗ್ಗೆ ಇಟ್ಟ 75ಕ್ಕೂ ಹೆಚ್ಚು ಕಾಡು ಕೋಣಗಳು: ಗ್ರಾಮದಲ್ಲಿ ಆತಂಕದ ವಾತಾವರಣ

ಬಸರಿಕಟ್ಟೆ ಗ್ರಾಮಕ್ಕೆ ಹೋಗುವ ರಸ್ತೆಯ ಕಾಫಿ ತೋಟದಲ್ಲಿ 75ಕ್ಕೂ ಹೆಚ್ಚು ಕಾಡು ಕೋಣಗಳ ಹಿಂಡು ಬೀಡು ಬಿಟ್ಟಿದ್ದು, ಸ್ಥಳೀಯರು ಕಂಗಾಲಾಗಿದ್ದಾರೆ.

GAURS ENTER COFFEE PLANTATION
ಕಾಫಿ ತೋಟಕ್ಕೆ ಲಗ್ಗೆ ಇಟ್ಟ 75ಕ್ಕೂ ಹೆಚ್ಚು ಕಾಡುಕೋಣಗಳು (ETV Bharat)
author img

By ETV Bharat Karnataka Team

Published : February 26, 2026 at 5:07 PM IST

2 Min Read
Choose ETV Bharat

ಚಿಕ್ಕಮಗಳೂರು: ಎನ್​ಆರ್ ಪುರ ತಾಲೂಕು ಹಾಗೂ ಚಿಕ್ಕಮಗಳೂರು ತಾಲೂಕಿನ ಜನ ಕಾಡಾನೆಗಳ ದಾಳಿ ಹಾಗೂ ದಾಂಧಲೆಗೆ ತತ್ತರಿಸಿ ಹೋಗಿರುವ ಬೆನ್ನಲ್ಲೇ, ಈಗ 75ಕ್ಕೂ ಹೆಚ್ಚು ಕಾಡು ಕೋಣಗಳ ಹಿಂಡು ಕಾಫಿ ತೋಟಕ್ಕೆ ಲಗ್ಗೆ ಇಟ್ಟು ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತಿವೆ.

ಕೊಪ್ಪ ತಾಲೂಕಿನ ಬಸರಿಕಟ್ಟೆ ಗ್ರಾಮಕ್ಕೆ ಹೋಗುವ ರಸ್ತೆಯ ಕಾಫಿ ತೋಟದಲ್ಲಿ 75ಕ್ಕೂ ಹೆಚ್ಚು ಕಾಡು ಕೋಣಗಳ ಹಿಂಡು ಬೀಡುಬಿಟ್ಟಿದ್ದು, ಸ್ಥಳೀಯರು ಕಂಗಾಲಾಗಿದ್ದಾರೆ. ಕಾಫಿ ತೋಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಡು ಕೋಣಗಳು ಸಂಚರಿಸುತ್ತಿರುವ ದೃಶ್ಯ ಕಂಡು ಕಾರ್ಮಿಕರು ಕೆಲಸಕ್ಕೆ ತೆರಳಲು ಭಯ ಪಡುತ್ತಿದ್ದಾರೆ. ಸಾರ್ವಜನಿಕರು ಈ ರಸ್ತೆಯಲ್ಲಿ ಸಂಚಾರ ಮಾಡಲು ಜೀವ ಕೈಯಲ್ಲಿ ಹಿಡಿದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚೆಗೆ ಕೊಪ್ಪ ತಾಲೂಕಿನ ಮುಂಡೋಳು ಗ್ರಾಮದಲ್ಲಿ 55 ವರ್ಷದ ರೈತ ಶಿವಪ್ಪ ಮೇಲೆ ಕಾಡುಕೋಣ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡ ಶಿವಪ್ಪ ಅವರನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಕಾಡು ಕೋಣಗಳ ಹಿಂಡು ಗ್ರಾಮಾಂತರ ಪ್ರದೇಶಗಳಲ್ಲಿ, ಹಾಗೂ ಗ್ರಾಮಗಳಿಗೆ ತೆರಳುವ ಪ್ರಮುಖ ರಸ್ತೆಗಳಲ್ಲಿ ನಿರಂತರ ಸಂಚರಿಸುತ್ತಿದೆ. ಇದರಿಂದ ಕಾಫಿ ತೋಟದ ಕಾರ್ಮಿಕರು ಹಾಗೂ ಗ್ರಾಮಸ್ಥರು, ಯಾವ ಸಮಯದಲ್ಲಿ ಯಾರ ಮೇಲೆ ದಾಳಿ ಮಾಡುತ್ತವೋ ಎಂಬ ಜೀವ ಭಯದಲ್ಲೇ ಬದುಕುತ್ತಿದ್ದಾರೆ.

ಸಾಕಾನೆ ನೋಡಲು ಮುಗಿಬೀಳುತ್ತಿರುವ ಜನ: ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆ ಸಮೀಪದ ಹುಣಸೆ ಹಳ್ಳಿಯ, ಪುರ ಗ್ರಾಮದಲ್ಲಿ ಒಂದು ವಾರದಲ್ಲಿ ಕಾಡಾನೆ ದಾಳಿಗೆ ಇಬ್ಬರು ಕೂಲಿ ಕಾರ್ಮಿಕರು ಬಲಿಯಾಗಿದ್ದು, ಈ ಕಾಡಾನೆಗಳನ್ನು ಸೆರೆ ಹಿಡಿಯಲು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಹಾಗೂ ದುಬಾರೆಯಿಂದ ಏಳು ಸಾಕಾನೆಗಳನ್ನು ಕರೆತರಲಾಗಿದೆ. ಈ ಸಾಕಾನೆಗಳನ್ನು ನೋಡಲು ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ.

ಬಾಳೆಹೊನ್ನೂರಿನ ಹ್ಯಾರಂಬಿ ಗ್ರಾಮದಲ್ಲಿ ಏಳು ಕಾಡಾನೆಗಳ ಕ್ಯಾಂಪ್ ಮಾಡಲಾಗಿದ್ದು, ಈಗ ಸ್ಥಳೀಯರ ಆಕರ್ಷಣೆಯ ಕೇಂದ್ರವಾಗಿದೆ. ಪುಂಡ ಕಾಡಾನೆ ಸೆರೆ ಹಿಡಿಯಲು ಭೀಮ, ಶ್ರೀಕಂಠ, ಮಹಿಂದ್ರಾ, ಧನಂಜಯ, ಸಾಗರ್, ಜೂ. ಅರ್ಜುನ ಸೇರಿ ಒಟ್ಟು ಏಳು ಆನೆಗಳು ಆಗಮಿಸಿವೆ. ಕ್ಯಾಂಪ್ ಬಳಿ ಆನೆಗಳನ್ನು ನೋಡಲು ಜನವೋ ಜನ. ಭೀಮನ ಕ್ರೇಜ್ ಹೆಚ್ಚಾಗಿದ್ದು, ಮಲೆನಾಡಿನ ಜನರು ಮೈಸೂರು ಅಂಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಆನೆಗಳನ್ನು ಹತ್ತಿರದಿಂದ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ.

ತನ್ನ ಮಾವುತರು ಹಾಗೂ ಸಹಾಯಕರ ಜೊತೆ ಆನೆಗಳು ಮಲೆನಾಡು ಭಾಗದಲ್ಲಿ ಸಂತೋಷದ ಕ್ಷಣಗಳನ್ನು ಕಳೆಯುತ್ತಿವೆ. ಮೇವು ತರುವುದು, ಸ್ನಾನ ಮಾಡುವುದು, ಆಟವಾಡುವುದು, ಈ ರೀತಿಯ ಕೆಲಸಗಳನ್ನು ಮಾಡಿಕೊಂಡಿವೆ. ಬೆಳಗ್ಗೆನಿಂದ ಸಂಜೆವರೆಗೂ ಪುಂಡಾನೆಗಳ ಕಾರ್ಯಾಚರಣೆಯಲ್ಲಿ ಭಾಗವಹಿಸಿ, ಸಂಜೆ ನಂತರ ಕ್ಯಾಂಪ್​ಗೆ ಬಂದು ಮಲೆನಾಡಿನಲ್ಲಿ ಅದ್ಭುತ ಕ್ಷಣಗಳನ್ನು ಕಳೆಯುತ್ತಿವೆ.

ಜನರು ಯಾವುದೇ ಭಯವಿಲ್ಲದೆ ಹತ್ತಿರ ಹೋಗಿ ಆನೆಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಆದರೆ ಇನ್ನೊಂದು ಭಾಗದಲ್ಲಿ ಪುಂಡಾನೆಗಳು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿವೆ.

ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಕ್ಷರಶಃ ಮಲೆನಾಡಿಗರ ನೆಮ್ಮದಿ ಕೆಡಿಸಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗಜಪಡೆಗಳ ಸಂಚಾರ ಮಿತಿ ಮೀರಿದ್ದು, ಕಾಫಿ ತೋಟದ ಕಾರ್ಮಿಕರು ಹಾಗೂ ಸ್ಥಳೀಯ ನಿವಾಸಿಗಳು ಪ್ರತಿ ಕ್ಷಣವೂ ಆತಂಕದಲ್ಲೇ ಬದುಕುವಂತಾಗಿದೆ.

ಎನ್.ಆರ್ ಪುರ, ಬಾಳೆಹೊನ್ನೂರು, ಆಲ್ದೂರು, ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಈಗ ಚಿಕ್ಕಮಗಳೂರು ನಗರಕ್ಕೆ ಸಮೀಪದಲ್ಲಿಯೇ ಸಂಚಾರ ಮಾಡಲು ಪ್ರಾರಂಭಿಸಿವೆ. ಚಿಕ್ಕಮಗಳೂರು ನಗರದಿಂದ ಕೇವಲ 5 ಕಿಲೋಮೀಟರ್​ ದೂರದ ಮತ್ತಾವರ ಗ್ರಾಮದ ಆಸುಪಾಸಿನಲ್ಲಿ ಬೀಡು ಬಿಟ್ಟಿರುವುದು ಚಿಕ್ಕಮಗಳೂರು ನಗರ ನಿವಾಸಿಗಳ ನಿದ್ದೆಗೆಡಿಸಿದೆ.

ಮತ್ತಾವರ ಮತ್ತು ನಲ್ಲೂರು ಗ್ರಾಮಗಳ ಸುತ್ತಮುತ್ತ 2 ಪುಂಡಾನೆಗಳು ಬೀಡುಬಿಟ್ಟಿವೆ. ಚಿಕ್ಕಮಗಳೂರು ಮತ್ತು ಬೇಲೂರು ಗಡಿ ಭಾಗದ ಗ್ರಾಮವಾದ ಚೀಕನಹಳ್ಳಿಯ ಸುತ್ತಮುತ್ತ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದೆ.​ ನರಸಿಂಹರಾಜಪುರ ತಾಲೂಕಿನ ಮಡಬೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಆನೆಗಳ ಹಿಂಡೇ ಬೀಡುಬಿಟ್ಟಿದೆ. ಒಂಟಿ ಆನೆಗಳಷ್ಟೇ ಅಲ್ಲದೇ ಹಿಂಡು ಹಿಂಡಾಗಿ ಆನೆಗಳು ಕಾಣಿಸಿಕೊಳ್ಳುತ್ತಿರುವುದು ಕೃಷಿಕರ ನಿದ್ದೆಗೆಡಿಸಿದೆ.

ಈ ಸಂಬಂಧ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಜಾಗರೂಕತೆಯಿಂದ ಇರಲು ಸೂಚಿಸಲಾಗಿದೆ.

ಇದನ್ನೂ ಓದಿ: ದಾಂಡೇಲಿಯಲ್ಲಿ ಬಸ್​ ತಡೆದು ನಿಲ್ಲಿಸಿದ ಗಜರಾಜ: ವಿಡಿಯೋ ವೈರಲ್!