ETV Bharat / state

ಸಚಿವ ಮಧು ಬಂಗಾರಪ್ಪ ಬರ್ತಡೇ: 30ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ವಿಮಾನಯಾನ ಭಾಗ್ಯ

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಜನ್ಮದಿನದ ಪ್ರಯುಕ್ತ ಸೊರಬ ಹಾಗೂ ಆನವಟ್ಟಿಯ ಪೌರ ಕಾರ್ಮಿಕರಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನಯಾನ ಮಾಡಿಸಲಾಗುತ್ತಿದೆ.

more-than-30-civic-workers-get-lucky-with-flights-due-to-minister-madhu-bangarappas-birthday
ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣ (ಎಡಬದಿ) ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಪೌರ ಕಾರ್ಮಿಕರು ಇದ್ದಾರೆ (ETV Bharat)
author img

By ETV Bharat Karnataka Team

Published : March 1, 2026 at 7:27 PM IST

2 Min Read
Choose ETV Bharat

ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಜನ್ಮದಿನದ ಪ್ರಯುಕ್ತ ಸೊರಬ ತಾಲೂಕಿನ 30ಕ್ಕೂ ಅಧಿಕ ಪೌರ ಕಾರ್ಮಿಕರಿಗೆ ವಿಮಾನಯಾನ ಭಾಗ್ಯ ಲಭಿಸಿದೆ. ಸೊರಬ ಹಾಗೂ ಆನವಟ್ಟಿಯ ಪೌರ ಕಾರ್ಮಿಕರಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನಯಾನ ಮಾಡಿಸಲಾಗುತ್ತಿದೆ. ಇಂದು‌ ಪೌರ ಕಾರ್ಮಿಕರು ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ನಾಳೆ(ಸೋಮವಾರ) ಬೆಂಗಳೂರಿನಲ್ಲಿ ಸಚಿವ ಮಧು ಬಂಗಾರಪ್ಪನವರ ಜನ್ಮ ದಿನಾಚರಣೆ ನಡೆಯಲಿದೆ. ಇಲ್ಲಿನ ಪೌರ ಕಾರ್ಮಿಕರು ಭಾಗಿಯಾಗಲಿದ್ದಾರೆ. ಇದಕ್ಕಾಗಿ ಒಂದು ತಂಡವನ್ನು ರಚಿಸಿಕೊಂಡು ವಿಮಾನದಲ್ಲಿ‌ ಕರೆದುಕೊಂಡು ಹೋಗಲಾಗಿದೆ.‌ ಕಳೆದ ವರ್ಷ ಮಧು ಬಂಗಾರಪ್ಪನವರ ಜನ್ಮ ದಿನಾಚರಣೆಯ ಅಂಗವಾಗಿ ಮಾಜಿ ಸಿಎಂ ದಿ. ಎಸ್​ ಬಂಗಾರಪ್ಪ ಅವರ ಒಡನಾಡಿಗಳಿಗೆ ವಿಮಾನಯಾನ ಮಾಡಿಸಲಾಗಿತ್ತು. ಈ ಬಾರಿ ಪೌರ ಕಾರ್ಮಿಕರಿಗೆ ವಿಮಾನಯಾನ ಮಾಡಿಸಲಾಗುತ್ತಿದೆ. ಬೆಂಗಳೂರಿಗೆ ಹೊರಟಿದ್ದ ಪೌರ ಕಾರ್ಮಿಕರಿಗೆ ಬೆಂಗಳೂರಿನಿಂದ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಮಧು ಬಂಗಾರಪ್ಪ ಭೇಟಿ ಮಾಡಿಸಿದರು.

ವಿಮಾನದಲ್ಲಿ ಕರೆದೊಯ್ಯುತ್ತಿರುವ ಬಗ್ಗೆ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ, ಸಂತಸ ವ್ಯಕ್ತಪಡಿಸಿದ ಪೌರ ಕಾರ್ಮಿಕರು (ETV Bharat)

ಈ ಕುರಿತು ಮಾತನಾಡಿದ ಸಚಿವ ಮಧು ಬಂಗಾರಪ್ಪ, 'ನಾನು ನಿಮ್ಮಂತೆಯೇ ಜನ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದ್ದೇನೆ ಅಷ್ಟೇ. ನಾನೇನು ವಿಶೇಷವಾಗಿ ಏನೂ ಮಾಡುತ್ತಿಲ್ಲ. ನಾನು ಭೂಲೋಕದಲ್ಲಿ ಮನುಷ್ಯನಾಗಿ ಹುಟ್ಟಿ ಪುಣ್ಯ ಮಾಡಿದ್ದೇನೆ. ಮಕ್ಕಳ ಸೇವೆ ಮಾಡುವ ಭಾಗ್ಯ ಸಿಕ್ಕಿದೆ. ಮಕ್ಕಳನ್ನು ದೇವರ ಸ್ಥಾನದಲ್ಲಿ ಇಟ್ಟಿದ್ದೇನೆ. ಇಂದು ಪೌರ ಕಾರ್ಮಿಕರು ವಿಮಾನದಲ್ಲಿ ಹೋಗುತ್ತಿದ್ದಾರೆ. ಅವರೆಲ್ಲಾ ಸ್ವಚ್ಛತೆಯನ್ನು ಕಾಪಾಡುತ್ತಿದ್ದಾರೆ. ಅಲ್ಲದೇ, ರಾಜ್ಯದ ಟಾಪ್ 50 ಮಕ್ಕಳು ತಮ್ಮ ಪೋಷಕರೊಡನೆ ಬೆಂಗಳೂರಿಗೆ ವಿಮಾನದಲ್ಲಿ ಬರುತ್ತಾರೆ. ಕಳೆದ ಬಾರಿ ನಮ್ಮ ತಂದೆ ಹಾಗೂ ನಮ್ಮನ್ನು ವಿಮಾನ ಹತ್ತಿಸಿದವರಿಗೆ ವಿಮಾನ ಪ್ರಯಾಣ ಮಾಡಿಸಲಾಗಿತ್ತು. ಸುಮ್ಮನೆ ಕೂರಿಸಿ ಹಾಡು ಹೇಳಿಸಿ ಮಾಡುವುದಲ್ಲ. ಇದೆಲ್ಲಾ ಅವರಿಗೆ ನೆನಪಿರುತ್ತದೆ. ಇದರಲ್ಲಿ ಸಮಾನತೆ ತರಬೇಕು. ನಾವು ಅವರೆಲ್ಲಾ ಮನುಷ್ಯರು. ಇದೆಲ್ಲಾ ನಮ್ಮ ಮುಖಂಡರ ಆಸಕ್ತಿಯಿಂದ ಮಾಡಿದ್ದು. ಈ ಬಾರಿ ಪೌರ ಕಾರ್ಮಿಕರಿಗೆ ವಿಮಾನ ಹತ್ತಿಸಲಾಗುತ್ತಿದೆ' ಎಂದರು.

ಇದೇ ವೇಳೆ ಮಾತನಾಡಿದ ಆನವಟ್ಟಿ ಪುರಸಭೆ ಪೌರ ಕಾರ್ಮಿಕರಾದ ಶಶಿ ಅವರು, 'ನಮಗೆ ಫ್ಲೈಟ್ ನೋಡುತ್ತಿರುವುದೇ ತುಂಬ ಖುಷಿ ಆಗುತ್ತಿದೆ.‌ ನಮ್ಮ ಸಾಹೇಬ್ರ ಹುಟ್ಟು ಹಬ್ಬದ ಪ್ರಯುಕ್ತ ನಮ್ಮನ್ನು ವಿಮಾನ ನಿಲ್ದಾಣಕ್ಕೆ ಕರೆತಂದು ವಿಮಾನ ಹತ್ತಿಸುತ್ತಿರುವುದು ತುಂಬಾ ಖುಷಿ ಆಗಿದೆ.‌ ನಾವು ವಿಮಾನವನ್ನು ಟಿವಿಯಲ್ಲಿ ನೋಡಿದ್ವಿ. ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿಸಿದ್ದಾರೆ.‌ ಬೇಡವಾದ ಕಲ್ಲನ್ನು ಮೂಲೆಗೆ ಬಿಸಾಡುತ್ತಾರೆ. ಆದರೆ, ಸ್ವಚ್ಛ ಮಾಡುವ ಕೆಲಸದವರನ್ನು ಗುರುತಿಸಿ ನಮ್ಮನ್ನು ವಿಮಾನಯಾನ ಮಾಡಿಸುತ್ತಿರುವುದು ತುಂಬ ಖುಷಿ ಆಗುತ್ತದೆ' ಎಂದು ಸಂತಸ ಹಂಚಿಕೊಂಡರು.

'ಮಧು ಬಂಗಾರಪ್ಪನವರು 2000ನೇ ಇಸವಿಯಲ್ಲಿ ಆರೈಕೆ ಕಾರ್ಯಕ್ರಮದಡಿ ನಮ್ಮನ್ನು ಗುರುತಿಸಿ ಪ್ರಶಸ್ತಿ ನೀಡಿದ್ದರು. ಹಿಂದೆ ನಮ್ಮ ತಂದೆ ಅವರಿಗೆ ಬಂಗಾರಪ್ಪನವರು ಬೆಂಗಳೂರು ತೋರಿಸಿದ್ರು. ಈಗ ಮಧು ಬಂಗಾರಪ್ಪನವರು ನಮಗೆ ವಿಮಾನದಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದಾರೆ.‌ ನಮ್ಮಂತಹ ಮಧ್ಯಮ ವರ್ಗದವರಿಗೆ ವಿಮಾನಯಾನ ಎಂಬುದು ಕನಸು. ಅದನ್ನು ಮಧು ಬಂಗಾರಪ್ಪನವರು ನನಸು ಮಾಡಿದ್ದಾರೆ.‌ ಇದು ತುಂಬ ಖುಷಿ ಆಗುತ್ತದೆ' ಎಂದು ಪೌರ ಕಾರ್ಮಿಕ ಸಂತೋಷ್ ಹೇಳಿದರು.

ಇನ್ನೋರ್ವ ಪೌರ ಕಾರ್ಮಿಕ ಪ್ರಶಾಂತ್ ಅವರು ಮಾತನಾಡಿ, 'ನಾನು ಪೌರ ಕಾರ್ಮಿಕ, ಕಸ ಲೋಡು ಮಾಡುವವನು. ನಾನು ಮಧು ಬಂಗಾರಪ್ಪನವರನ್ನು ಬಂಗಾರ ಧಾಮದ ಬಳಿ ನೋಡುತ್ತಿದ್ದೆ. ಇವರನ್ನು ಮಾತನಾಡಿಸಲು ಆಗುತ್ತದೆಯೋ ಇಲ್ಲವೋ ಎಂದು ನೋಡುತ್ತಿದ್ದೆ. ಈಗ ಇವರು ನಮ್ಮನ್ನು ಗುರುತಿಸಿ ವಿಮಾನಯಾನ ಮಾಡಿಸುತ್ತಿರುವುದು ತುಂಬ ಖುಷಿಯಾಗಿದೆ' ಎಂದರು.

ಇದನ್ನೂ ಓದಿ : ಸ್ವತಂತ್ರ ಮಹಿಳಾ ಸೈನ್ಯ ಸ್ಥಾಪಿಸಿದ್ದ ಧೀರ ಕನ್ನಡತಿ : ರಾಜ್ಯ, ರಾಷ್ಟ್ರಮಟ್ಟದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮಗೆ ಸಿಗಬೇಕಿದೆ ಗೌರವ