ರೈಲ್ವೆ ಟ್ರ್ಯಾಕ್ನಲ್ಲಿ ಕುಳಿತಿದ್ದ ವಿದ್ಯಾರ್ಥಿ- ವಿದ್ಯಾರ್ಥಿನಿ ಮೇಲೆ ನೈತಿಕ ಪೊಲೀಸ್ ಗಿರಿ ಆರೋಪ: ಇಬ್ಬರು ಪೊಲೀಸ್ ವಶಕ್ಕೆ
ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಆರೋಪದಡಿ ತಂದೆ-ಮಗನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Published : February 26, 2026 at 4:15 PM IST
ಮಂಗಳೂರು (ದಕ್ಷಿಣ ಕನ್ನಡ) : ನಗರದ ರೈಲ್ವೆ ಟ್ರ್ಯಾಕ್ನಲ್ಲಿ ಕುಳಿತು ಮಾತನಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ತಂದೆ-ಮಗನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಟೀವನ್ ಮೊಂತೆರೊ ಮತ್ತು ಆತನ ಮಗ ಅವಿಲ್ ಪೊಲೀಸ್ ವಶದಲ್ಲಿರುವ ಆರೋಪಿಗಳು. ಈ ಬಗ್ಗೆ ವಿದ್ಯಾರ್ಥಿಯ ತಂದೆ ದೂರು ನೀಡಿದ್ದಾರೆ. ಫೆ. 23 ರಂದು ಸಂಜೆ 4 ಗಂಟೆಯ ಸುಮಾರಿಗೆ ತನ್ನ ಮಗ ಮತ್ತು ಆತನ ಸ್ನೇಹಿತೆ ಮಂಗಳೂರು ನಗರದ ಬಾಬುಗೆಡ್ಡೆಯ ಗ್ರಾಮ ಸಂಘದ ಬಳಿಯ ರೈಲ್ವೆ ಹಳಿಯಲ್ಲಿ ಕುಳಿತು ಮಾತನಾಡುತ್ತಿರುವ ಸಮಯದಲ್ಲಿ ಈ ದಾಳಿ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿ ಸ್ಟೀವನ್ ಮೊಂತೆರೋ ಅವರು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ವಿಡಿಯೋ ಮಾಡುತ್ತಾ ಅವರ ಮಗ ಅವಿಲ್ ಅವರೊಂದಿಗೆ ವಿದ್ಯಾರ್ಥಿಗಳಿದ್ದಲ್ಲಿಗೆ ಬಂದಿದ್ದಾರೆ. ನೀವಿಲ್ಲಿ ಕಿಸ್ ಮಾಡುತ್ತಿದ್ದಿರಿ. ನಾನು ರೆಕಾರ್ಡಿಂಗ್ ಮಾಡುತ್ತಿದ್ದೇನೆ. ಫೇಸ್ ಬುಕ್ನಲ್ಲಿ ಹಾಕುತ್ತೇನೆಂದು ಬೆದರಿಸಿದ್ದರು.
ಅಷ್ಟರಲ್ಲಿ ವಿದ್ಯಾರ್ಥಿನಿ ಅಲ್ಲಿಂದ ಹೋಗಿದ್ದು, ವಿದ್ಯಾರ್ಥಿ ಸ್ಥಳದಿಂದ ಹೋಗುತ್ತಿದ್ದಾಗ ಆರೋಪಿ ಅವಿಲ್ ತಡೆದು ನಿಲ್ಲಿಸಿ, ರೈಲ್ವೆ ಟ್ರ್ಯಾಕ್ನಿಂದ ಪಕ್ಕದ ರಸ್ತೆಗೆ ಕರೆದುಕೊಂಡು ಹೋಗಿದ್ದಾನೆ ಎಂದು ವಿದ್ಯಾರ್ಥಿಯ ತಂದೆ ದೂರಿದ್ದಾರೆ. ಆ ಹುಡುಗಿಯ ಮನೆ ಎಲ್ಲಿ? ನಾನು ರೆಕಾರ್ಡ್ ಮಾಡಿದ್ದೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಆರೋಪಿಗಳಿಬ್ಬರು ಕೈಯಿಂದ ಹಲ್ಲೆ ನಡೆಸಿದ್ದಾರೆ ಆರೋಪಿಸಿದ್ದಾರೆ. ಅಲ್ಲದೇ, ಆರೋಪಿ ಸ್ಟೀವನ್ ಮೊಂತೆರೋ ವಿದ್ಯಾರ್ಥಿಗೆ ಇನ್ನೊಮ್ಮೆ ಈ ಕಡೆಗೆ ಬಂದರೆ ನಿನ್ನ ಕೈಕಾಲು ಮುರಿಯುತ್ತೇನೆಂದು ಬೆದರಿಕೆ ಹಾಕಿದ್ದಾರೆ. ಆ ಬಳಿಕ ವಿದ್ಯಾರ್ಥಿ ಸ್ಥಳದಿಂದ ವಾಪಸ್ ಬರುತ್ತಿರುವ ಸಮಯದಲ್ಲಿ ಆರೋಪಿ ಸ್ಟೀವನ್ ಮೊಂತೆರೋ ಜಾತಿ ವಿಚಾರ ತೆಗೆದು ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೇ, ಈ ವಿಡಿಯೋವನ್ನು ವಾಟ್ಸ್ ಆಪ್ನಲ್ಲಿ ವೈರಲ್ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು, ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ತಾಯಿಯ ಮುಂದೆಯೇ ರೌಡಿಶೀಟರ್ ಬರ್ಬರ ಹತ್ಯೆ (ಪ್ರತ್ಯೇಕ ಸುದ್ದಿ) : ಕೆಲ ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾದ ರೌಡಿಶೀಟರ್ನನ್ನು ತಾಯಿಯ ಕಣ್ಣೆದುರೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಥಣಿಸಂದ್ರದ ಅಮರಜ್ಯೋತಿ ಲೇಔಟ್‌ನಲ್ಲಿ ನಡೆದಿತ್ತು. ಮೂರು ವರ್ಷಗಳ ಹಿಂದಿನ ಕೃತ್ಯಕ್ಕೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.
ಡಿ. ಜೆ. ಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಪವನ್ ಕುಮಾರ್ (28) ಕೊಲೆಯಾದವರು. ಹೆಲ್ಮೆಟ್ ಧರಿಸಿ ಮೂರು ದ್ವಿಚಕ್ರ ವಾಹನಗಳಲ್ಲಿ ಆರು ಮಂದಿ ದುಷ್ಕರ್ಮಿಗಳು ಪವನ್‌ನ ಮನೆ ಬಳಿ ಬಂದು ಆತನ ತಾಯಿಯ ಕಣ್ಣೆದುರೇ ಕೃತ್ಯ ಎಸಗಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ತಾಯಿಯ ಮುಂದೆಯೇ ರೌಡಿಶೀಟರ್ ಬರ್ಬರ ಹತ್ಯೆ; ಹೆಲ್ಮೆಟ್ ಧರಿಸಿದ ದುಷ್ಕರ್ಮಿಗಳಿಂದ ಕೃತ್ಯ

