ETV Bharat / state

150 ವರ್ಷಗಳ‌ ಇತಿಹಾಸದಲ್ಲಿ ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ‌ ದುರ್ಬಲ: ಸಚಿವ ರಾಮಲಿಂಗಾ ರೆಡ್ಡಿ

ಜಲ ಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಅವರು ಭದ್ರಾ ಅಣೆಕಟ್ಟೆಗೆ ಭೇಟಿ ನೀಡಿ, ಜಲಾಶಯದಲ್ಲಿ ಸಂಗ್ರಹವಾದ ನೀರಿನ‌ ಲಭ್ಯತೆಯ ಕುರಿತು ಚರ್ಚಿಸಿದರು.

Minister-Ramalinga-Reddy
ಜಲ ಸಂಪನ್ಮೂಲ ಸಚಿವ ರಾಮಲಿಂಗ ರೆಡ್ಡಿ (ETV Bharat)
author img

By ETV Bharat Karnataka Team

Published : July 6, 2026 at 8:07 AM IST

2 Min Read
Choose ETV Bharat

ಶಿವಮೊಗ್ಗ: 150 ವರ್ಷಗಳ‌ ಇತಿಹಾಸದಲ್ಲಿ ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ‌ ದುರ್ಬಲವಾಗಿದೆ ಎಂದು ಜಲ ಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ‌ಜಿಲ್ಲೆಯ ಭದ್ರಾ ಅಣೆಕಟ್ಟೆಗೆ ಭೇಟಿ ನೀಡಿ, ಜಲಾಶಯದಲ್ಲಿ ಸಂಗ್ರಹವಾದ ನೀರಿನ‌ ಲಭ್ಯತೆಯ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬಳಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಭದ್ರಾ ಮತ್ತು ಮೇಲ್ದಂಡೆ ಯೋಜನೆಗೆ ಭೇಟಿ ನೀಡಿದ್ದೇನೆ. 150 ವರ್ಷದ ಇತಿಹಾಸದಲ್ಲಿ ಮಳೆ ದುರ್ಬಲವಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬರುವ ನಿರೀಕ್ಷೆ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುತ್ತದೆ. ಇದರಿಂದಾಗಿ ಸಿಎಂ ಅವರು ರೈತರಿಗೆ ಈ ಬಾರಿ ಬಿತ್ತನೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ ಎಂದರು.

ಸಚಿವ ರಾಮಲಿಂಗಾ ರೆಡ್ಡಿ ಅವರ ಪ್ರತಿಕ್ರಿಯೆ (ETV Bharat)

ಮಧ್ಯ ಕರ್ನಾಟಕದ ಬಹುತೇಕ ಜಿಲ್ಲೆಗಳ ಕುಡಿಯುವ ನೀರಿಗೆ ಈ ಡ್ಯಾಂ ಆಸರೆ ಆಗಿದೆ. ಹಾಗಾಗಿ, ಈಗಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮೀಸಲಿಡಲಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಬಾರಿಯ ಪರಿಸ್ಥಿತಿಯಲ್ಲಿ ರೈತರು ನಮ್ಮೊಂದಿಗೆ ಸಹಕರಿಸಬೇಕು ಎಂದು ವಿನಂತಿಸಿಕೊಂಡರು.

ಡ್ಯಾಂ ನೀರನ್ನು ನಂಬಿ ಬಿತ್ತನೆ ಮಾಡಲು ಹೋಗಬಾರದು. ಪರಿಸ್ಥಿತಿ ಸುಧಾರಿಸಿ ನೀರು ಸಂಗ್ರಹವಾದರೆ ಬೆಳೆಗಳಿಗೆ ನೀರು ಕೊಡಲಾಗುತ್ತದೆ. ರಾಜ್ಯದ ಇತರೆ ಡ್ಯಾಂಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದ ಹಣಕಾಸು ನೆರವಿನ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರದ ಹಣಕಾಸು ಸಚಿವರೇ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.‌ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದ್ದು, ಕೇಂದ್ರದವರೆ. ಕೇಂದ್ರದಿಂದ 5200 ಕೋಟಿ ಕೊಡುವುದಾಗಿ ಹೇಳಿದ್ದಾರೆ. ನಾನು ಮತ್ತು ಸಿಎಂ ಕೇಂದ್ರದ ಜಲ ಸಂಪನ್ಮೂಲ ಸಚಿವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದ್ದೆವು. ಆ ಸಂದರ್ಭದಲ್ಲಿ ಹಣಕಾಸಿನ ನೆರವನ್ನು ನೀಡುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

Minister-Ramalinga-reddy
ಸಚಿವ ರಾಮಲಿಂಗರೆಡ್ಡಿ ಅವರು ಭದ್ರಾ ಅಣೆಕಟ್ಟೆಗೆ ಭೇಟಿ ನೀಡಿ ನೀರಿನ ಸಂಗ್ರಹವನ್ನು ವೀಕ್ಷಿಸಿದರು (ETV Bharat)

ಕೇಂದ್ರದ ನೆರವು ಸಿಗದಿದ್ದರೂ ನಾವು ಯೋಜನೆಯನ್ನು ಕೈಗೆತ್ತಿಕೊಂಡಿದ್ದೇವೆ. ಈವರೆಗೆ 12 ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದೇವೆ. ಇದೇ ರೀತಿ ಹೊಗೆನಕಲ್, ಮಹದಾಯಿ, ಕೃಷ್ಣ ಯೋಜನೆಯ ಬಗ್ಗೆಯೂ ಕೇಂದ್ರದ ಗಮನ ಸೆಳೆದಿದ್ದೇವೆ. ನೆರೆಯ ಆಂಧ್ರ ಮತ್ತು ತೆಲಂಗಾಣದವರು ಈ ವಿಚಾರವಾಗಿ ಕೋರ್ಟ್​ನ ಮೊರೆ ಹೋಗಿದ್ದಾರೆ. ಆದರೆ ನಾವು ಕುಡಿಯುವ ನೀರಿನ ಉದ್ದೇಶಕ್ಕೆ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದ್ದೇವೆ ಎಂದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆ ವಿಚಾರವಾಗಿ ಮಾತನಾಡಿ, ನನ್ನ ಖಾತೆ ಬದಲಾವಣೆ ಬಗ್ಗೆ ದಯವಿಟ್ಟು ಏನೂ ಕೇಳಬೇಡಿ ಎಂದು ವಿನಂತಿಸಿಕೊಂಡ ಅವರು, ಮುಂದಿನ ವಾರ ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಅವರು ದೆಹಲಿಗೆ ಹೋಗಲಿದ್ದಾರೆ ಎಂದು ತಿಳಿಸಿದರು.

Bhadra Dam
ಭದ್ರಾ ಅಣೆಕಟ್ಟೆ (ETV Bharat)

ಎಸ್ಐಆರ್ ಪ್ರಕ್ರಿಯೆ ಕುರಿತು ವಿರೋಧ ಪಕ್ಷಗಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಸ್​ಐಆರ್​​ನ್ನು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಕೈಗೊಂಡಿವೆ. ಇದರ ಸಂಪೂರ್ಣ ಹೊಣೆಗಾರಿಕೆ ಅವರದ್ದೇ ಆಗಿದೆ. ಹೀಗಿರುವಾಗ ಇದರಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ.‌ ಕೆಲವೊಂದು ಕಡೆ ಸಣ್ಣಪುಟ್ಟ ತಪ್ಪು ಹಾಗೂ ಲೋಪದೋಷ ಆಗಿರಬಹುದು. ಹಾಗೆಂದ ಮಾತ್ರಕ್ಕೆ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದರು.

ಭದ್ರಾವತಿ ಶಾಸಕ ಬಿ. ಕೆ. ಸಂಗಮೇಶ್, ತರಿಕೇರಿ‌‌ ಶಾಸಕ ಶ್ರೀನಿವಾಸ್ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಈ ವೇಳೆ ಹಾಜರಿದ್ದರು.

ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಭಾರಿ ಮಳೆ: ರಾಜ್ಯದಲ್ಲಿ ಉಕ್ಕಿ ಹರಿಯುತ್ತಿರುವ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳು; ಸೇತುವೆಗಳು ಜಲಾವೃತ