ETV Bharat / state

ಅಕ್ರಮ ಹಣ ವರ್ಗಾವಣೆ ಪ್ರಕರಣ: ಶ್ರೀಕಿ, ರಾಬಿನ್ ಖಂಡೇವಾಲಾ ಜಾಮೀನು ಅರ್ಜಿ ವಜಾ

ವಿಚಾರಣೆ ನಡೆಸಿದ ಪಿಎಂಎಲ್ಎ ವಿಶೇಷ ನ್ಯಾಯಾಲಯ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶಿಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : August 28, 2026 at 9:12 PM IST

1 Min Read
Choose ETV Bharat

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ (ಪಿಎಂಎಲ್ಎ) ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಮತ್ತು ರಾಬಿಲ್ ಖಂಡೇವಾಲಾ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.

ಇಬ್ಬರು ಆರೋಪಿಗಳನ್ನು ಇ.ಡಿ.ಅಧಿಕಾರಿಗಳು ಕಳೆದ ಮೇ ನಲ್ಲಿ ಬಂಧಿಸಿದ್ದರು. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪಿಎಂಎಲ್ಎ ವಿಶೇಷ ನ್ಯಾಯಾಲಯ ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶಿಸಿದೆ.

ಪ್ರಮುಖ ಆರೋಪಿ ಶ್ರೀಕೃಷ್ಣ ಸರ್ಕಾರಿ ಹಾಗೂ ಖಾಸಗಿ ಜಾಲತಾಣಗಳು ಹಾಗೂ ವಿವಿಧ ಆನ್​ಲೈನ್ ಗೇಮಿಂಗ್ ವೆಬ್​ಸೈಟ್​ಗಳನ್ನ ಹ್ಯಾಕ್ ಮಾಡಿ ಸೂಚಿತ ವ್ಯಕ್ತಿಗಳಿಗೆ ಕೋಟ್ಯಂತರ ಮೌಲ್ಯದ ಬಿಟ್ ಕಾಯಿನ್ ವರ್ಗಾವಣೆ ಮಾಡಿ ಅಕ್ರಮವೆಸಗುತ್ತಿದ್ದ ಆರೋಪವಿದೆ. ಮತ್ತೋರ್ವ ಆರೋಪಿ ರಾಬಿನ್ ಖಂಡೇವಾಲಾ, ಕ್ರಿಪ್ಟೊ ಕರೆನ್ಸಿ ಟ್ರೇಡರ್ ಆಗಿದ್ದು, ಶ್ರೀಕಿ ಹ್ಯಾಕ್ ಮಾಡಿದ್ದ ಬಿಟ್ ಕಾಯಿನ್ ಸೇರಿದಂತೆ ಇನ್ನಿತರ ಡಿಜಿಟಲ್ ಆಸ್ತಿಯನ್ನ ನಗದಾಗಿ ಪರಿವರ್ತಿಸಿ ಮತ್ತು ಪೂರ್ವಸಂಚಿನಂತೆ ಸೂಚಿಸಿದ ವ್ಯಕ್ತಿಗಳಿಗೆ ವ್ಯವಸ್ಥಿತವಾಗಿ ಕಳವು ಮಾಡಿದ್ದ ಹಣವನ್ನ ವರ್ಗಾಯಿಸುತ್ತಿದ್ದ ಆರೋಪವಿದೆ. ಪಿಎಂಎಲ್​ಎ ಕಾಯ್ದೆಯಡಿ ಇಬ್ಬರನ್ನು ಕಳೆದ ಮೇನಲ್ಲಿ ಇಡಿ ಅಧಿಕಾರಿಗಳ ಬಂಧಿಸಿದ್ದರು.

ಇಬ್ಬರು ಆರೋಪಿಗಳು ಎಸಗಿದ ಅಕ್ರಮಗಳ ಕುರಿತಂತೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿತ್ತು. ಈ ಸಂಬಂಧ ಇಂದು ಇಡಿ ಪರ ಸರ್ಕಾರಿ ವಿಶೇಷ ಅಭಿಯೋಜಕ (ಎಸ್ಪಿಪಿ) ಮಧು ಎನ್. ರಾವ್ ಆರೋಪಿಗಳಿಗೆ ಜಾಮೀನು ನೀಡದಂತೆ ವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಇಬ್ಬರಿಗೆ ಜಾಮೀನು ನೀಡಲು ನಿರಾಕರಿಸಿದೆ.

ಅಕ್ರಮ ಹಣ ವರ್ಗಾವಣೆ ಸಂಬಂಧ ಶ್ರೀಕಿ, ರಾಬಿನ್ ಖಂಡೇವಾಲಾ ಹಾಗೂ ಉದ್ಯಮಿ ಸುನೀಶ್ ಹೆಗ್ಡೆ ಸೇರಿ ಐವರ ವಿರುದ್ದ ಕಳೆದ ಜುಲೈನಲ್ಲಿ 3,500 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿತ್ತು.

ರಾಜ್ಯ ಸರ್ಕಾರದ ಇ - ಪ್ರೊಕ್ಯೂರ್ ಮೆಂಟ್ ಜಾಲತಾಣವನ್ನು ಹ್ಯಾಕ್ ಮಾಡಿ 11.5 ಕೋಟಿ ಲಪಾಟಿಯಿಸಿದ್ದರು ಎಂದು ಚಾರ್ಜ್​ಶೀಟ್​ನಲ್ಲಿ ಇಡಿ ಉಲ್ಲೇಖಿಸಿತ್ತು.

ಇದನ್ನೂ ಓದಿ: ಬಿಟ್​ಕಾಯಿನ್ ಬಹುಕೋಟಿ ಹಗರಣ: 3,500 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ ಇಡಿ