ದುಬೈನಲ್ಲಿ ಕುಟುಂಬ ಸಮೇತ ಸಿಲುಕಿದ ಭೋಜೇಗೌಡ: ಅಲ್ಲಿನ ಪರಿಸ್ಥಿತಿಯನ್ನು ವಿಡಿಯೋ ಸಂದೇಶದಲ್ಲಿ ವಿವರಿಸಿದ MLC
ಕುಟುಂಬ ಸಮೇತ ದುಬೈನಲ್ಲಿ ಸಿಲುಕಿರುವ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಅಲ್ಲಿನ ಪರಿಸ್ಥಿತಿಯನ್ನು ವಿಡಿಯೋ ಸಂದೇಶದಲ್ಲಿ ವಿವರಿಸಿದ್ದಾರೆ.

Published : March 2, 2026 at 6:16 PM IST
|Updated : March 2, 2026 at 8:02 PM IST
ಚಿಕ್ಕಮಗಳೂರು: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿಯಾಗಿ ಅತಿದೊಡ್ಡ ಕಾರ್ಯಾಚರಣೆಯನ್ನೇ ಆರಂಭಿಸಿವೆ. ಅಮೆರಿಕ - ಇಸ್ರೇಲ್ ಸೇನೆ ಹಾರಿಸಿದ ಕ್ಷಿಪಣಿ, ಇರಾನ್ ರಾಜಧಾನಿ ಟೆಹರಾನ್ಗೆ ಅಪ್ಪಳಿಸುತ್ತಲೇ ಮಧ್ಯಪ್ರಾಚ್ಯ ತಲ್ಲಣಗೊಂಡಿದೆ. ಸದ್ಯ ಈ ಯುದ್ಧದ ಪರಿಣಾಮ ಕನ್ನಡಿಗರಿಗೂ ತಟ್ಟಿದೆ. ಯುದ್ಧ ಹಿನ್ನೆಲೆ ದುಬೈ ಏರ್ಪೋರ್ಟ್ನಲ್ಲಿ ವಿಮಾನ ಪ್ರಯಾಣ ಸ್ಥಗಿತವಾಗಿದೆ. ಹೀಗಾಗಿ ಕುಟುಂಬ ಸಮೇತರಾಗಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ದುಬೈ ಏರ್ಪೋರ್ಟ್ನಲ್ಲಿ ಸಿಲುಕಿದ್ದಾರೆ.
ಭೋಜೇಗೌಡ ಮತ್ತು ಕುಟುಂಬ ದುಬೈನಿಂದ ಬೆಂಗಳೂರಿಗೆ ಹೊರಟ್ಟಿತ್ತು. ಈ ವೇಳೆ, ವಿಮಾನ ಪ್ರಯಾಣ ಸ್ಥಗಿತವಾಗಿವೆ. ಸದ್ಯ ಭೋಜೇಗೌಡ ಅವರು ಸ್ನೇಹಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದು, ಈಟಿವಿ ಭಾರತ ಜೊತೆ ಅಲ್ಲಿನ ಪರಿಸ್ಥಿತಿಯನ್ನು ವಿವರವಾಗಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಮೂರು ಭಾಗದಲ್ಲಿ ಬಾಂಬ್ ಹಾಕಿರುವ ದೊಡ್ಡ ಶಬ್ದ ಬಂತು: ದುಬೈನಲ್ಲಿ ಎಲ್ಲವೂ ಸಹಜ ಸ್ಥಿತಿಯಲ್ಲಿ ಇಲ್ಲ. ಇಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೆಳಗ್ಗೆ ಬ್ರೇಕ್ ಫಾಸ್ಟ್ ಮಾಡುವ ಸಂದರ್ಭದಲ್ಲಿ ಮೂರು ಭಾಗದಲ್ಲಿ ಬಾಂಬ್ ಹಾಕಿರುವ ದೊಡ್ಡ ಶಬ್ದ ಬಂತು. ಇಂದು ಬೆಳಗ್ಗೆ ಸಚಿವ ಕೃಷ್ಣ ಬೈರೇಗೌಡ ಹಾಗೂ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಜೊತೆ ಮಾತನಾಡಿದ್ದೇನೆ ಎಂದು ಎಂಎಲ್ಸಿ ಭೋಜೇಗೌಡ ತಿಳಿಸಿದ್ದಾರೆ.
ಕನ್ನಡಿಗರನ್ನು ವೀಸಾ ಮೂಲಕ ಆಚೆ ತನ್ನಿ ಎಂದು ಸಲಹೆ: ಏಪೋರ್ಟ್ನಲ್ಲಿ ಸಿಲುಕಿ ಕೊಂಡಿರುವ ಕನ್ನಡಿಗರನ್ನು ವೀಸಾ ಮೂಲಕ ಆಚೆ ತನ್ನಿ ಎಂದು ಸಲಹೆ ನೀಡಿದ್ದು, ಅವರ ಕಷ್ಟಗಳಿಗೆ ಧಾವಿಸುವ ಕೆಲಸವನ್ನು ಮಾಡಿ ಎಂದು ಮನವಿ ಮಾಡಲಾಗಿದೆ. ದುಬೈಗೆ ಬಂದಿರುವ ಕೆಲವರು ವಾಪಸ್ ಹೋಗುವ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ಇಲ್ಲಿರುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಅವರ ಯೋಗಕ್ಷೇಮಕ್ಕಾಗಿ ಸಹಾಯವಾಣಿ ಮಾಡಬೇಕು. ಅವರಲ್ಲಿರುವ ಆತಂಕ ದೂರ ಮಾಡಿ, ಭಯದ ವಾತಾವರಣದಿಂದ ಆಚೆ ತನ್ನಿ ಎಂದು ಹೇಳಿದ್ದಾರೆ.
ಸರ್ಕಾರ ಜನರನ್ನು ಸುರಕ್ಷಿತವಾಗಿ ಕರೆಸಿಕೊಳ್ಳಬೇಕು: ನನಗೆ ಇಲ್ಲಿ ತುಂಬಾ ಜನ ಸ್ನೇಹಿತರಿದ್ದಾರೆ. ಅವರು ನನ್ನ ಯೋಗಕ್ಷೇಮ ನೋಡಿ ಕೊಳ್ಳುತ್ತಿದ್ದಾರೆ. ನಾನು ಆರಾಮವಾಗಿದ್ದೇನೆ. ಗೊತ್ತಿಲ್ಲದೇ ಇರುವ ಜನರಿಗೆ ಸರ್ಕಾರ ನೆರವಿಗೆ ಬಂದು ಅವರ ಯೋಗಕ್ಷೇಮ ನೋಡಬೇಕು. ಇಲ್ಲಿನ ಕೆಲ ಕನ್ನಡ ಸಂಘಟನೆಗಳು ಸಹಾಯ ಮಾಡುವ ಕೆಲಸ ಮಾಡುತ್ತಿವೆ. ನಾನು ಕೂಡ ಗೂಗಲ್ ಮೀಟ್ನಲ್ಲಿ ಅವರ ಜೊತೆ ಮಾತನಾಡಿದ್ದೇನೆ. ಇಲ್ಲಿನ ಪರಿಸ್ಥಿತಿ ಸುಧಾರಿಸುವವರೆಗೂ ಜನರ ಯೋಗಕ್ಷೇಮ ಸರ್ಕಾರ ನೋಡಿಕೊಳ್ಳಬೇಕು, ನಂತರ ಅವರನ್ನು ಸುರಕ್ಷಿತವಾಗಿ ಕರೆಸಿಕೊಳ್ಳಬೇಕು ಎಂದು ದುಬೈನಿಂದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇವುಗಳನ್ನೂ ಓದಿ:

