ETV Bharat / state

ರೈತರ ಸಾಲ ಮನ್ನಾ ಕುರಿತು ಸಿಎಂ ಪರಿಶೀಲನೆ ಮಾಡ್ತಾರೆ; ಶೀಘ್ರದಲ್ಲೇ ಬೆಳೆ ಹಾನಿ ವೀಕ್ಷಣೆ: ಶಾಸಕ ಲಕ್ಷ್ಮಣ್ ಸವದಿ ಮಹತ್ವದ ಹೇಳಿಕೆ

ಈ ಬಾರಿ ಮಳೆಯ ಕೊರತೆಯಿಂದ ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಸಿಎಂ ಅವರು ರೈತರ ಸಾಲ ಮನ್ನಾ ಕುರಿತು ಚಿಂತನೆ ನಡೆಸಿರುವ ಬಗ್ಗೆ ಶಾಸಕ ಲಕ್ಷ್ಮಣ್ ಸವದಿ ಹೇಳಿದರು.

MLA LAXMAN SAVADI
ಅಥಣಿಯಲ್ಲಿ ಮಾತನಾಡಿದ ಶಾಸಕ ಸವದಿ (ETV Bharat)
author img

By ETV Bharat Karnataka Team

Published : July 8, 2026 at 3:27 PM IST

2 Min Read
Choose ETV Bharat

​ಚಿಕ್ಕೋಡಿ: ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಕಂಗಾಲಾಗಿರುವ ರೈತರು ಸಾಲ ಮನ್ನಾಗೆ ಆಗ್ರಹಿಸುತ್ತಿದ್ದು, ಈ ಕುರಿತು ಮುಖ್ಯಮಂತ್ರಿಗಳು ಕೂಲಂಕಷ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗಾವಿ ವಿಭಾಗದ ಪರಿಶೀಲನಾ ಸಭೆಯಲ್ಲಿ ಬೆಳೆ ಹಾನಿ ಕುರಿತು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಶಾಸಕ ಲಕ್ಷ್ಮಣ್ ಸವದಿ ಮಹತ್ವದ ಹೇಳಿಕೆ ನೀಡಿದ್ದಾರೆ.

ಅವರು ಬುಧವಾರ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ​ಮಳೆ ಕೊರತೆಯಿಂದಾಗಿ ಮುಂಗಾರು ಬೆಳೆಗಳಿಗೆ ಹೊಡೆತ ಬೀಳುವ ಆತಂಕ ಎದುರಾಗಿದೆ. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸಾಲ ಮನ್ನಾ ಮಾಡುವಂತೆ ಸರ್ಕಾರದ ಮೇಲೆ ಒತ್ತಾಯ ಕೇಳಿಬರುತ್ತಿದೆ ಎಂದರು. ಈಗಾಗಲೇ ಈ ಕುರಿತಂತೆ ಮಂಗಳವಾರ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಅವರು, ಸಾಲ ಮನ್ನಾ ಕುರಿತು ಪರಿಶೀಲಿಸುವುದಾಗಿ ಮಾಧ್ಯಮದವರ ಮುಂದೆ ತಿಳಿಸಿದ್ದಾರೆ. ನಾಳೆ ಬೆಳಗ್ಗೆ 10:30ಕ್ಕೆ ಬೆಳಗಾವಿ ವಿಭಾಗ ಮಟ್ಟದ ಪರಿಶೀಲನಾ ಸಭೆ ನಡೆಯಲಿದ್ದು, ಯಾವ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಪಡೆದು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಶಾಸಕ ಸವದಿ ತಿಳಿಸಿದರು.

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯಾಗದ ಕಾರಣ ನದಿಗೆ ನೀರು ಹರಿದು ಬರುವುದು ತಡವಾಗಿದೆ. ಇದರಿಂದಾಗಿ ಹಲ್ಯಾಳ ಏತ ನೀರಾವರಿ ಯೋಜನೆಯನ್ನು ಸುಮಾರು 38 ದಿನಗಳ ವಿಳಂಬವಾಗಿ ಆರಂಭಿಸಲಾಗಿದೆ. ಸದ್ಯ ಮುಂಗಾರು ಮಳೆ ಕ್ಷೀಣಿಸಿರುವುದರಿಂದ, ಕೆರೆ ಮತ್ತು ಬಾಂದಾರಗಳನ್ನು ತುಂಬಿಸುವ ಬದಲು, ರೈತರು ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳಿಗೆ ಹಲ್ಯಾಳ ಮತ್ತು ಕರಿಮಸೂತಿ ಏತ ನೀರಾವರಿ ಯೋಜನೆಗಳ ಮೂಲಕ ನೀರು ಒದಗಿಸಲು ಮೊದಲ ಆದ್ಯತೆ ನೀಡಲಾಗಿದೆ. ಎರಡನೇ ಹಂತದಲ್ಲಿ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುವುದು, ಇದಕ್ಕೆ ರೈತರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಸಾಲ ಮನ್ನಾ ವಿಚಾರವಾಗಿ ಸಿಎಂ ಹೇಳಿಕೆ ಬಗ್ಗೆ ಶಾಸಕ ಸವದಿ ಪ್ರತಿಕ್ರಿಯಿಸಿದರು (ETV Bharat)

ಸಾಲಮನ್ನಾ ವಿಚಾರವಾಗಿ ಸಿಎಂ ಹೀಗೆ​ ಹೇಳಿದ್ದರು: ಕಲಬುರಗಿಯಲ್ಲಿ ಮಂಗಳವಾರ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ರೈತರ ಸಾಲ ಮನ್ನಾ ಕುರಿತ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಸಿಎಂ, ಸಾಲ ಮನ್ನಾ ಅಷ್ಟು ಸುಲಭದ ಕೆಲಸವಲ್ಲ. ಬೇರೆ ರಾಜ್ಯಗಳು ಮಾಡದೇ ಇದ್ದಾಗಲೂ ನಾವು ಸಾಲಮನ್ನಾ ಮಾಡಿದ್ದೇವೆ. ಈಗಲೂ ರೈತರ ಬೇಡಿಕೆಯನ್ನು ಸರ್ಕಾರ ಪರಿಶೀಲನೆ ಮಾಡಲಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಸಾಲ ಮನ್ನಾ ಸುಲಭದ ಕೆಲಸವಲ್ಲ, ರೈತರ ಬೇಡಿಕೆ ಕುರಿತು ಸರ್ಕಾರ ಪರಿಶೀಲನೆ: ಸಿಎಂ ಡಿಕೆಶಿ